1989
ಮಧ್ಯಾಹ್ನ 1 ಗಂಟೆ ಸುಮಾರಿಗೆ ತುರ್ತು ವೈರ್‌ಲೆಸ್ ಸಂದೇಶ ಬಂತು. ತಕ್ಷಣ ಪೊಲೀಸ್ ಕಮೀಷನರ್ ಕಚೇರಿಗೆ ಬರಬೇಕೆನ್ನುವುದು ಅದರ ಸಾರ. ನನ್ನ ಜತೆ ಇತರ 8 ಮಂದಿ ಪೊಲೀಸ್ ಅಧಿಕಾರಿಗಳಿಗೂ ಇದೇ ವೆುಸೇಜ್ ಹೋಗಿತ್ತು. ಎಲ್ಲೋ ರೇಡ್ ಮಾಡಲು ಹಿರಿಯ ಪೊಲೀಸ್ ಅಧಿಕಾರಿಗಳು ನಮ್ಮನ್ನು ಕರೆಸುತ್ತಿರಬೇಕು ಎಂದು ನಾವೆಲ್ಲ ಹನಿ ನೀರನ್ನು ಕುಡಿಯದೆ ತಡಬಡಾಯಿಸಿ ಧಾವಿಸಿ ಬಂದೆವು. ನಗರದಲ್ಲಿ ಎಲ್ಲೇ ಅಹಿತಕರ ಘಟನೆ, ಕೊಲೆ, ದರೋಡೆ, ವಂಚನೆ ಇತ್ಯಾದಿ ಘಟನೆಗಳು ನಡೆದು ಸಾರ್ವಜನಿಕರಿಂದ, ಸರಕಾರದಿಂದ ಭಾರಿ ಒತ್ತಡ ಬಂದಾಗ ಹಿರಿಯ ಪೊಲೀಸ್ ಅಧಿಕಾರಿಗಳು ಆಯ್ದ ಕೆಲವು ಪೊಲೀಸ್ ಅಧಿಕಾರಿಗಳ ತಂಡ ರಚಿಸಿ ಕಾರ್ಯಾಚರಣೆಗಿಳಿಸುತ್ತಾರೆ. ತುರ್ತು ವೈರ್‌ಲೆಸ್ ಸಂದೇಶ ಬಂದಾಗಲೆಲ್ಲ ತಾವು, ನಮ್ಮ ವೈಯಕ್ತಿಕ ಕಷ್ಟ-ಸುಖ ಏನೇ ಇದ್ದರೂ ಮರೆತು ಸಮರ ಸನ್ನದ್ಧರಾಗಿ ಫೀಲ್ಡಿಗಿಳಿಯಬೇಕಾಗುತ್ತದೆ. ಅವತ್ತು ಹಾಗೆಯೇ, ನಾವೆಲ್ಲ ಕಮೀಷನರ್ ಆಫೀಸ್ ತಲುಪಿ ಮುಂದಿನ ಆದೇಶಕ್ಕಾಗಿ ಕಾತುರದಿಂದಿದ್ದೆವು.
ಆದರೆ, ವಿಷಯ ಏನೆಂದು ಯಾರೂ ಬಾಯಿ ಬಿಡಲಿಲ್ಲ. ಸ್ವಲ್ಪ ಹೊತ್ತಿನ ಬಳಿಕ ನಮ್ಮನ್ನೆಲ್ಲ ಆತರಾತುರವಾಗಿ ಪೆಟ್ರೊಲಿಂಗ್ ವಾಹನದಲ್ಲಿ ಕೂರಿಸಿದರು. ಎಸಿಪಿ ನೇತೃತ್ವದ ಗಸ್ತುವಾಹನವೊಂದು ಜತೆ ಮಾಡಿ ರೈಟ್ ಹೇಳಿದರು. ಆ ವಾಹನದಲ್ಲಿ ನನ್ನ ಜತೆ ಕೆಂಗೇರಿ ಸರ್ಕಲ್ ಇನ್‌ಸ್ಪೆಕ್ಟರ್ ಹಾಲಪ್ಪ, ಕೆ.ವಿ.ಕೆ. ರೆಡ್ಡಿ, ಶ್ರೀರಾಂಪುರ ಠಾಣೆಯ ರವೀಂದ್ರ ಕಲಾಸಿಪಾಳ್ಯದ ಚಂದ್ರೇಗೌಡ ಮೊದಲಾದವರಿದ್ದರು. ಇವರೇನು ಮಾಡುತ್ತಿದ್ದಾರೆ, ಎಲ್ಲಿಗೆ ಕರೆದೊಯ್ಯುತ್ತಿದ್ದಾರೆ, ಏನು ಕತೆ ಎಂಬ ತಲೆಬುಡ ಅರ್ಥವಾಗಲಿಲ್ಲ. ನಮ್ಮ ವಾಹನ ಸೆಷನ್ ಕೊರ್ಟ್ ಆವರಣದಲ್ಲಿ ಹೋಗಿ ನಿಂತಿತು. ತಿಂಡಿ ತಿಂದು ಬರುತ್ತೇವೆ ಎಂದರೂ ನಮಗ್ಯಾರಿಗೂ ವಾಹನದಿಂದ ಕೆಳಗಿಳಿಯಲು ಬಿಡಲಿಲ್ಲ. ಮಧ್ಯಾಹ್ನ 3 ಗಂಟೆ ಸುಮಾರಿಗೆ ನಮ್ಮನ್ನು ಸೀದಾ ಕೋರ್ಟ್ ಕಟ್ಟಡದ ಒಳಗೇ ಕಳಿಸಿ ಬಿಟ್ಟರು. ಅಲ್ಲಿ ನಮಗೆ ಗೊತ್ತಾಗಿದ್ದೇನೆಂದರೆ, ನಗರದ ಒಂದಿಷ್ಟು ರೌಡಿಗಳು ನಮ್ಮ ವಿರುದ್ಧ ಹೈಕೋರ್ಟ್‌ಗೆ ದೂರು ಸಲ್ಲಿಸಿದ್ದಾರೆ. ಇದರ ವಿಚಾರಣೆ ನಡೆಸುವಂತೆ ಹೈಕೋರ್ಟ್, ಸೆಷನ್‌ಸ್ ಕೋರ್ಟ್‌ಗೆ ಸೂಚಿಸಿದೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನೋಟೀಸ್ ಬಂದಿದೆ. ಅವರು ಕನಿಷ್ಠ ಯಾರು, ಏನು, ಯಾಕೆ ಎಂದೂ ವಿಚಾರಿಸದೆ ನಮ್ಮನ್ನೆಲ್ಲ ಹೀಗೆ ವ್ಯಾನ್‌ನೊಳಗೆ ತೂರಿ ಕಳ್ಳ ಖದೀಮರ ರೀತಿಯಲ್ಲಿ ಸೀದಾ ಕೋರ್ಟ್‌ಗೆ ಅಟ್ಟಿದ್ದರು!
ಈ ಸಂಗತಿ ಗೊತ್ತಾಗುತ್ತಿದ್ದಂತೆ ಅವಮಾನ, ಹತಾಶೆಯಿಂದ ನಾವೆಲ್ಲ ಕುದ್ದು ಹೋದೆವು. ಸಂದಿಗ್ಧ ಪರಿಸ್ಥಿತಿ ಎದುರಾದಾಗಲೆಲ್ಲ ಹಿರಿಯ ಪೊಲೀಸ್ ಅಧಿಕಾರಿಗಳು ನಮ್ಮನ್ನು ಬಳಸಿಕೊಳ್ಳುತ್ತಾರೆ. ಹಗಲು-ರಾತ್ರಿ ದುಡಿಸಿಕೊಳ್ಳುತ್ತಾರೆ. ಅಪಾಯದ ಪರಿಸ್ಥಿತಿಗೆ ನಮ್ಮನ್ನು ತಳ್ಳುತ್ತಾರೆ. ಕರ್ತವ್ಯದ ಹೆಸರಿನಲ್ಲಿ ನಾವೆಲ್ಲ ಜೀವದ ಹಂಗು ತೊರೆದು ಪರಿಶ್ರಮ ಪಡುತ್ತೇವೆ. ಹಿರಿಯ ಅಧಿಕಾರಿಗಳು ಮುಖ ಉಳಿಸಿಕೊಳ್ಳವುದು ಕೆಳ ಹಂತದ ಅಧಿಕಾರಿಗಳ ವರ್ಕ್‌ನಿಂದ. ಆದರೆ ಇಂಥ ಕೋರ್ಟ್ ಪ್ರಕರಣ ಬಂದಾಗ ನಮಗೆ ನೈತಿಕ ಸ್ಥೈರ್ಯ ತುಂಬುವುದು ಬಿಟ್ಟು ಬಲಿಪಶು ಮಾಡುತ್ತಿದ್ದಾರಲ್ಲ ಎಂದು ಬೇಸರ ಮಾಡಿಕೊಂಡೆವು. ಬೆಳಗ್ಗಿನಿಂದ ಬೇರೆ ಬೇರೆ ಡ್ಯೂಟಿಯಲ್ಲಿದ್ದರಿಂದ ಸರಿಯಾಗಿ ತಿಂಡಿ ತಿನ್ನಲೂ ಸಿಗದೆ, ಮಧ್ಯಾಹ್ನ ಊಟ ಮಾಡಲೂ ಅವಕಾಶ ಕೊಡದೆ ಹಸಿವಿನಿಂದ ಬಳಲಿದ್ದೆವು.
ಇಷ್ಟಕ್ಕೂ ಆಗಿದ್ದೇನೆಂದರೆ, ಕೆಲವು ತಿಂಗಳ ಹಿಂದೆ ಬೆಂಗಳೂರಿನಲ್ಲಿ ರೌಡಿಗಳ ಉಪಟಳ ಮಿತಿ ಮೀರಿ ಹೋಗಿತ್ತು. ಶಾಂತಿ ಸುವ್ಯವಸ್ಥೆ ವಿಚಾರವಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಪಾತಕಿಗಳನ್ನೆಲ್ಲ ಮಟ್ಟ ಹಾಕಿ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಆದೇಶ ಹೊರಡಿಸಿದ್ದರು. ತಕ್ಷಣ ನಾವು 9 ಮಂದಿ ಪೊಲೀಸ್ ಅಧಿಕಾರಿಗಳು ಸಂದಿಗೊಂದಿಗಳಲ್ಲಿ ನುಗ್ಗಿ ಹಲವಾರು ರೌಡಿಗಳಿಗೆ ಬಿಸಿ ಮುಟ್ಟಿಸಿ ಜೈಲಿಗೆ ಕಳಿಸಿದ್ದೆವು. ಅವರಲ್ಲಿ ನಟೋರಿಯಸ್ ಕ್ರಿಮಿನಲ್‌ಗಳಾದ ಅಲೈಮಣಿ, ಹಕ್ಕಿ ರಾಮ, ಸಾಜನ್ ಗ್ರೋವರ್, ವರದರಾಜ ಎಂಬ 16 ಮಂದಿ ಪ್ರಮುಖರಾಗಿದ್ದರು. ಕೊಲೆ, ಕೊಲೆಯತ್ನ, ಸಾರ್ವಜನಿಕರ ಮೇಲೆ ಹಲ್ಲೆ, ಬೆದರಿಕೆ, ಹಣ ವಸೂಲು ಮುಂತಾದ ಹಲವಾರು ಗುರುತರ ಪ್ರಕರಣಗಳಲ್ಲಿ ಅವರೆಲ್ಲ ಭಾಗಿಯಾಗಿದ್ದರು. ಅವರೆಲ್ಲ ಜೈಲುಪಾಲಾಗುತ್ತಿದ್ದಂತೆ ಇತ್ತ ನಗರದಲ್ಲಿ ಶಾಂತ ವಾತಾವರಣ ನಿರ್ಮಾಣವಾಗಿತ್ತು.
ಅದೇ ಹೊತ್ತಿಗೆ ಕುಖ್ಯಾತ ಪಾತಕಿ ಎಂ.ಪಿ. ಜಯರಾಜ್ ಅದೇ ಜೈಲಿನಲ್ಲಿದ್ದ. ಪೊಲೀಸ್ ಅಧಿಕಾರಿಗಳ ವಿರುದ್ಧ ನ್ಯಾಯಾಲಯಕ್ಕೆ ದೂರು ಸಲ್ಲಿಸುವದರಲ್ಲಿ ಆತ ಪಳಗಿದ್ದ. ಇದಕ್ಕಾಗಿ ಒಂದಿಷ್ಟು ವಕೀಲರನ್ನು ಇರಿಸಿಕೊಂಡಿದ್ದ. ಈ ಮೂಲಕ ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವುದು ಆತನ ಕುತಂತ್ರವಾಗಿತ್ತು. ಆತ, ನಾವು ಜೈಲಿಗಟ್ಟಿದ್ದ ರೌಡಿಗಳ ಹೆಸರಿನಲ್ಲಿ ಒಂದು ರಿಟ್ ಪಿಟಿಷನ್ ಬರೆದು ಹೈಕೋರ್ಟ್‌ಗೆ ಹಾಕಿಸಿದ. ಪೊಲೀಸರು ತಮ್ಮನ್ನು ಹಲವಾರು ದಿನಗಳ ಕಾಲ ಅಕ್ರಮವಾಗಿ ಲಾಕಪ್‌ನಲ್ಲಿರಿಸಿ ಹಿಂಸಿಸಿ, ಕೈಕಾಲಿನ ಮೂಳೆ ಮುರಿದು ಜೈಲಿಗೆ ಕಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವುದು ದೂರಿನ ಸಾರ. ಈ ಬಗ್ಗೆ ನೋಟೀಸ್ ಜಾರಿಯಾಗುತ್ತಲೇ, ಹಿರಿಯ ಅಧಿಕಾರಿಗಳು ನಮ್ಮನ್ನೆಲ್ಲ ಕೋರ್ಟ್‌ಗೆ ಸಾಗ ಹಾಕಿ ಕೈತೊಳೆದು ಕೊಂಡಿದ್ದರು.
ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಡೆಪ್ಯುಟಿ ಡೈರೆಕ್ಟರ್ ಆಫ್ ಪ್ರಾಸಿಕ್ಯೂಟರ್ ನೇತೃತ್ವದ ಒಂದು ವಕೀಲರ ತಂಡವೇ ಇರುತ್ತದೆ. ಪೊಲೀಸ್ ಇಲಾಖೆಗೆ ಸಂಬಂಧಿಸಿದ ಪ್ರಕರಣಗಳನ್ನು ಈ ತಂಡ ಹ್ಯಾಂಡಲ್ ಮಾಡುತ್ತದೆ. ಇಂಥ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಯಾವ ರೀತಿ ಎದುರಿಸಬೇಕು ಎಂಬ ಬಗ್ಗೆ ಸೂಕ್ತ ಸಲಹೆ, ಸೂಚನೆ, ಮಾರ್ಗದರ್ಶನ ನೀಡುತ್ತದೆ. ನಮ್ಮ ಈ ಪ್ರಕರಣದಲ್ಲಿ ಜಾರಿಯಾಗಿದ್ದು ಸಮನ್‌ಸ್ ಮಾತ್ರವೇ ಹೊರತು ವಾರೆಂಟ್ ಆಗಿರಲಿಲ್ಲ. ಹಾಗಾಗಿ ಇಷ್ಟೊಂದು ತರಾತುರಿಯಲ್ಲಿ ನಮ್ಮನ್ನೆಲ್ಲ ಈ ಪರಿಯಾಗಿ ಕೋರ್ಟ್‌ಗೆ ಹಾಜರು ಪಡಿಸಬೇಕಾದ ಅಗತ್ಯ ಇರಲಿಲ್ಲ. ಸರಕಾರಿ ವಕೀಲರ ಮೂಲಕ ಅರ್ಜಿ ಸಲ್ಲಿಸಿ, ಹಾಜರಾತಿಗೆ ಸೂಕ್ತ ಕಾಲಾವಕಾಶ ಪಡೆಯಬಹುದಿತ್ತು. ಆದರೆ ನಮ್ಮ ಹಿರಿಯ ಅಧಿಕಾರಿಗಳು ಇದ್ಯಾವುದನ್ನೂ ಮಾಡಿರಲಿಲ್ಲ. ತಕ್ಷಣ ನಾವು ಖ್ಯಾತ ವಕೀಲರಾದ ಎಂ.ಟಿ. ನಾಣಯ್ಯ ಅವರನ್ನು ಸಂಪರ್ಕಿಸಿ ನಮ್ಮ ಪರಿಸ್ಥಿತಿ ಹೇಳಿಕೊಂಡೆವು. ಅವರು ನಮ್ಮ ಪರ ವಾದ ಮಂಡಿಸಲು ಮುಂದಾದರು.
ಈ ನಡುವೆ ಕೋರ್ಟ್ ಮೊಗಸಾಲೆಯಲ್ಲಿ ನಾಟಕೀಯ ಬೆಳವಣಿಗೆ ನಡೆಯಿತು. ನಮ್ಮ ವಿರುದ್ಧ ದೂರು ನೀಡಿದ 16 ರೌಡಿಗಳನ್ನು ಸಿಎಆರ್ ಪೊಲೀಸರು ಬೇಡಿ ಹಾಕಿಕೊಂಡು ಕರೆದುಕೊಂಡು ಬಂದರು. ಅವರೆಲ್ಲ ನಗೆ ಯಾಡುತ್ತ, ಎದೆ ಉಬ್ಬಿಸಿಕೊಂಡು ಉಢಾಪೆಯಿಂದ ಹೆಜ್ಜೆ ಹಾಕುತ್ತಿರುವುದನ್ನು ಕಂಡು ನನಗೆ ರೇಗಿ ಹೋಯಿತು. ಪೊಲೀಸರಿಗೆ ತಾವು ಸರಿಯಾಗಿ ಬುದ್ಧಿ ಕಲಿಸುತ್ತಿದ್ದೇವೆ ಎಂಬ ದರ್ಪ ಅವರಲ್ಲಿ ಎದ್ದು ಕಾಣುತ್ತಿತ್ತು. ನಾನೇ ಸೆರೆ ಹಿಡಿದು ಜೈಲಿಗಟ್ಟಿದ ಹಕ್ಕಿ ರಾಮನ ಬಳಿ ಸೀದಾ ಹೋದವನೇ ಸಣ್ಣದೊಂದು ಅವಾಜ್ ಹಾಕಿದೆ. ಸುಳ್ಳು ಸುಳ್ಳೇ ದೂರು ಕೊಡಲು ಪ್ರೇರೇಪಿಸಿದ್ದು ಯಾರು ಹೇಳು ಎಂದು ದಬಾಯಿಸಿದೆ. ನಾನು ಎದುರು ಬಂದು ನಿಂತ ತಕ್ಷಣ ಮೆತ್ತಗಾಗಿ ಹೋದ ಆ ರೌಡಿ ‘ಸಾರ್ ನಂದೇನೂ ತಪ್ಪಿಲ್ಲ ಸಾರ್, ಎಂ.ಪಿ. ಜಯರಾಜ್ ನಮಗೆಲ್ಲ ಜಾಮೀನು ಕೊಡಿಸುತ್ತೇನೆ ಎಂದು ಖಾಲಿ ಪೇಪರ್‌ನಲ್ಲಿ ಸಹಿ ಹಾಕಿಸಿಕೊಂಡು, ನಿಮ್ಮ ವಿರುದ್ಧ ದೂರು ಬರೆಸಿ ಹಾಕಿದ್ದಾನೆ,’ ಎಂದ. ಇದನ್ನೇ ಜಡ್‌ಜ್ ಮುಂದೆ ಹೇಳು ಎಂದೆ.
ಸ್ವಲ್ಪ ಹೊತ್ತಿನಲ್ಲೇ ನಮ್ಮ ಹೆಸರನ್ನು ಕೂಗಿ ಕರೆಯಲಾಯಿತು. ನಾವು ಪೊಲೀಸ್ ಅಧಿಕಾರಿಗಳೆಲ್ಲ ಸಾಲಾಗಿ ನ್ಯಾಯಾಧೀಶರ ಎದುರು ನಿಂತೆವು. ನಮ್ಮ ಸುದೈವಕ್ಕೆ ಮೊದಲು ಹಕ್ಕಿ ರಾಮನನ್ನೇ ವಿಟ್ನೆಸ್ ಬಾಕ್‌ಸ್ಗೆ ಕರೆದರು. ನಗರದ ಹಲವು ಪೊಲೀಸ್ ಅಧಿಕಾರಿಗಳನ್ನೆಲ್ಲ ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ನೂರಾರು ವಕೀಲರು, ಕಕ್ಷಿದಾರರು ಕುತೂಹಲದಿಂದ ಮುತ್ತಿಕೊಂಡಿದ್ದರು. ಅವರೆಲ್ಲ ರೌಡಿಯ ಹೇಳಿಕೆ ಕೇಳಲು ತುದಿಗಾಗಲ ಮೇಲೆ ನಿಂತಿದ್ದರು. ನಮ್ಮ ವಿರುದ್ಧ ನೀಡಲಾಗಿದ್ದ ದೂರನ್ನು ಜೋರಾಗಿ ಓದಿ ಹೇಳಿದ ನ್ಯಾಯಾಧೀಶರು ‘ನಿನಗೆ ಇವರಲ್ಲಿ ಮೂಳೆ ಮುರಿಯುವಂತೆ ಹೊಡೆದವರು ಯಾರು ಹೇಳು,’ ಎಂದರು. ‘ಇವರ್ಯಾರೂ ನನಗೆ ಒಂದೇಟು ಹೊಡೆಯಲಿಲ್ಲ. ಲಾಕಪ್‌ನಲ್ಲಿ ಚೆನ್ನಾಗಿ ನೋಡಿಕೊಂಡರು ಸಾರ್,’ ಎಂದ ಹಕ್ಕಿ ರಾಮ! ‘ನನಗೆ ಓದಲು ಬರೆಯಲು ಬರುವುದಿಲ್ಲ ಸ್ವಾಮಿ. ಜೈಲಿನಲ್ಲಿ ರೌಡಿ ಜಯರಾಜ್ ನಮ್ಮ ಹೆಸರಿನಲ್ಲಿ ಈ ದೂರನ್ನು ಬರೆಸಿ ಹಾಕಿಸಿದ್ದಾನೆ,’ ಎಂದು ಸ್ಪಷ್ಟವಾಗಿ ಹೇಳಿದ.
ನಮ್ಮ ಪರವಾಗಿ ವಾದ ಮಂಡಿಸಿದ ಎಂ.ಟಿ. ನಾಣಯ್ಯ ಅವರು ‘ಇವರನ್ನೆಲ್ಲ ಬಂಧಿಸಿ ಜೈಲಿಗೆ ಕಳಿಸಿ ಕೆಲವು ತಿಂಗಳೇ ಆಗಿ ಹೋಗಿವೆ. ಕೊಲೆ ಪ್ರಕರಣವೊಂದರಲ್ಲಿ ಆಗ ಇವರನ್ನೆಲ್ಲ ಓಪನ್ ಕೋರ್ಟ್‌ಗೆ ಹಾಜರುಪಡಿಸಿದ್ದಾಗ, ಲಾಕಪ್‌ನಲ್ಲಿ ಹಿಂಸಿಸಿದ ಬಗ್ಗೆ ಯಾರೊಬ್ಬರೂ ದೂರಿಕೊಂಡಿರಲಿಲ್ಲ. ಈಗ ಇದ್ದಕ್ಕಿದ್ದಂತೆ ದುರುದ್ದೇಶದಿಂದ ರಿಟ್ ಪಿಟಿಷನ್ ಸಲ್ಲಿಸಲಾಗಿದೆ. ಇವರೆಲ್ಲ ಬೆಂಗಳೂರಿನ ದಕ್ಷ ಪೊಲೀಸ್ ಅಧಿಕಾರಿಗಳು, ಹುಸಿ ಆರೋಪ ಹೊರಿಸಿ ಇವರ ನೈತಿಕ ಸ್ಥೈರ್ಯ ಕುಗ್ಗಿಸುವುದು ಸರಿಯಲ್ಲ,’ ಎಂದು ವಾದಿಸಿದರು. ತಕ್ಷಣ ನ್ಯಾಯಾಧೀಶರು ಈ ಪ್ರಕರಣವನ್ನು ವಜಾಗೊಳಿಸಿದರು. ಅಂದು ನಾವು ನಂಬಿದ್ದ ಅಧಿಕಾರಿಗಳೇ ನಮ್ಮ ಕೈಬಿಟ್ಟಿದ್ದರು.
ವಿಪರ್ಯಾಸವೆಂದರೆ ದೂರು ಕೊಟ್ಟ ರೌಡಿಯೇ ನಮ್ಮ ಪರ ಹೇಳಿಕೆ ಕೊಟ್ಟಿದ್ದ. ಪೊಲೀಸ್ ಇಲಾಖೆಯ ಸರಕಾರಿ ವಕೀಲರು ನಮ್ಮ ನೆರವಿಗೆ ಬರಲಿಲ್ಲ. ಆದರೆ ಖಾಸಗಿ ವಕೀಲರು ಆಪತ್ಬಾಂಧವರಾಗಿದ್ದರು. ಎಂ.ಟಿ. ನಾಣಯ್ಯ ಅವರು ಉಚಿತವಾಗಿವಾದ ಮಂಡಿಸಿ ನಮ್ಮನ್ನೆಲ್ಲ ಪಾರು ಮಾಡಿದ್ದರು. ಈ ಘಟನೆಯ ನಂತರ, ವಕೀಲರು ಮತ್ತು ಪೊಲೀಸರು ಆರೋಗ್ಯಕರ ಸಮಾಜಕ್ಕಾಗಿ ಒಬ್ಬರಿಗೊಬ್ಬರು ಕೈಜೋಡಿಸುವ ಒಂದೇ ನಾಣ್ಯದ ಎರಡು ಮುಖಗಳು ಎನ್ನುವುದನ್ನು ಮನಗಂಡೆ, ಪೊಲೀಸರು ಮತ್ತು ವಕೀಲರ ನಡುವೆ ಬೆಂಗಳೂರಿನಲ್ಲಿ ನಡೆದಂಥ ಘರ್ಷಣೆ ಯಾವತ್ತೂ ನಡೆಯಲೇಬಾರದು. ಇದು ಸ್ವಸ್ಥ ಸಮಾಜಕ್ಕೆ ಮಾರಕ.
Discussion about this post