ಆರ್ಟಿಕಲ್ 11: ಎಲ್ಲಾ ವ್ಯಾಜ್ಯಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವುದು ಮತ್ತು ಅದನ್ನು ಮೀರಿದ ವ್ಯಾಜ್ಯಗಳನ್ನು ಅಂತರ್ರಾಷ್ಟ್ರೀಯ ನ್ಯಾಯಾಲಯದಲ್ಲಿ (International court of justice) ಬಗೆಹರಿಸಿಕೊಳ್ಳುವುದು.
ಆರ್ಟಿಕಲ್ 12, 13, 14: ಈ ಟ್ರೀಟಿಯ ನಿಬಂಧನೆಗೊಳಪಟ್ಟ ರಾಷ್ಟ್ರಗಳೆಲ್ಲಾ ಸಭೆ ಸೇರಿ ನಿರ್ಣಯಿಸಿ ಕಾಯ್ದೆಯ ನಿಯಮಗಳನ್ನು ಎತ್ತಿಹಿಡಿಯುವುದು, ಅರ್ಥೈಸುವುದು ಮತ್ತು ಯಾವುದೇ ರೀತಿಯ ತಿದ್ದುಪಡಿಯನ್ನು ತರುವುದು.
ಇಷ್ಟೆಲ್ಲಾ ನಿಬಂಧನೆಗಳನ್ನೊಪ್ಪಿಕೊಂಡ ಭಾರತ 1983ರಲ್ಲಿ ದಕ್ಷಿಣ ಗಂಗೋತ್ರಿ ಎಂಬ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿತು. ದಕ್ಷಿಣ ಗಂಗೋತ್ರಿಯು ಅಂಟಾರ್ಟಿಕಾದಲ್ಲಿ ಭಾರತದ ಪ್ರಥಮ ಸಂಶೋಧನಾ ಕೇಂದ್ರವಾಗಿದೆ. ಭೌಗೋಳಿಕವಾಗಿ ಇದು ದಕ್ಷಿಣ ಧೃವದಿಂದ 2500 ಕಿಲೋಮೀಟರ್ ದೂರದಲ್ಲಿದೆ.
ನಿಮ್ಮ ಅಂದಾಜಿಗೆ ಹೇಳೋದಾದರೆ ಬೆಂಗಳೂರಿನಿಂದ ಪಂಜಾಬಿನ ಅಮೃತಸರದಷ್ಟು ದೂರದಲ್ಲಿದೆ. ಈ ಮುಂಚೆ ಭಾರತೀಯರು ಅಂಟಾರ್ಟಿಕಾ ಯಾತ್ರೆ ಕೈಗೊಂಡಿದ್ದರೂ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿರಲಿಲ್ಲ. 1983-84 ಭಾರತೀಯರ ಪಾಲಿಗೆ ಅಂಟಾರ್ಟಿಕಾದಲ್ಲಿ ಮೊದಲ ಚಳಿಗಾಲ. ಭಾರತೀಯ ಸೈನ್ಯದ ನೆರವಿನೊಂದಿಗೆ 81 ಜನರ ತಂಡ ಈ ದಕ್ಷಿಣ ಗಂಗೋತ್ರಿ ಸಂಶೋಧನಾ ಕೇಂದ್ರವನ್ನು ಕೇವಲ 2 ತಿಂಗಳ ಅವಧಿಯಲ್ಲಿ ನಿರ್ಮಿಸಿತು. 1984ರ ಗಣರಾಜ್ಯೋತ್ಸವವನ್ನು ಭಾರತೀಯರು ಸೋವಿಯತ್ ಮತ್ತು ಈಸ್‌ಟ್ ಜರ್ಮನ್‌ರನ್ನು ಕೂಡಿ ಆಚರಿಸಿದರು.
ಈ ಕೇಂದ್ರವನ್ನು ಭಾರತೀಯ ಉಪಕರಣಗಳಿಂದಲೇ ನಿರ್ಮಿಸಲಾಗಿತ್ತು. ಸೋಲಾರ್ ಎನ ರ್ಜಿಯ ಮೇಲೆ ಕಾರ್ಯನಿರ್ವ ಹಿಸುವಂತೆ ಈ ಕೇಂದ್ರ ಸಜ್ಜು ಗೊಂಡಿತ್ತು. ಖಾಯಂ ಸಂಶೋಧನಾ ಕೇಂದ್ರವೆಂದೇ ಭಾವಿಸಿ ಮರದ ದಿಮ್ಮಿಗಳಿಂದ ನಿರ್ಮಿಸಿದ ಈ ಕೇಂದ್ರ ಒಂದು ದಶಕವೂ ಬಾಳಲಿಲ್ಲ. ಬ್ರಿಟಿಷ್ ಸ್ಯಾಟಲೈಟ್ ಟೆಲಿಕಮ್ಯೂನಿಕೇಷನ್ ಸಂಸ್ಥೆ Inmarsatನ ಸಂವಹನ ಕೇಂದ್ರ (Communication terminal) ಮತ್ತು ಸಣ್ಣ ಮಟ್ಟದ ರೇಡಿಯೋ ತರಂಗಾಂತರ ಸಂವಹನ ಕೇಂದ್ರವನ್ನು ದಕ್ಷಿಣ ಗಂಗೋತ್ರಿ ಒಳಗೊಂಡಿತ್ತು.
(ಮುಂದುವರೆಯುವುದು)
Discussion about this post