‘ಕಟ್ಟಡ ಕುಸಿದು ನೂರಕ್ಕೂ ಹೆಚ್ಚು ಜನರ ಸಾವು’ ಎಂದು ಸಂಜೆ ಪತ್ರಿಕೆಯೊಂದು ಮೊದಲ ದಿನವೇ ದಪ್ಪ ಹೆಡ್ಡಿಂಗ್‌ನಲ್ಲಿ ಸುದ್ದಿ ಪ್ರಕಟಿಸಿತ್ತು. ‘ಮಾಧ್ಯಮಗಳು ಬಾಯಿಗೆ ಬಂದಂತೆ ಹೆಡ್ಡಿಂಗ್ ಹಾಕುತ್ತಿವೆ. ದುರಂತವನ್ನು ವೈಭವೀಕರಿಸುತ್ತಿವೆ. ಇಷ್ಟೊಂದು ಜನ ಸಾಯಲು ಸಾಧ್ಯವೇ ಇಲ್ಲ’ ಎಂದು ನಾವೆಲ್ಲ ಅಂದು ಗೇಲಿ ಮಾಡಿದ್ದೆವು. ಆದರೆ, 34 ದಿನಗಳ ರಕ್ಷಣಾ ಕಾರ್ಯಾಚರಣೆ ಮುಗಿದ ಬಳಿಕ ಸತ್ತವರ ಒಟ್ಟು ಸಂಖ್ಯೆ 123 ತಲುಪಿತ್ತು! ಸುಮಾರು 120 ಮಂದಿ ಗಾಯಗೊಂಡಿದ್ದರು.
ಕಟ್ಟಡ ಕುಸಿತಕ್ಕೆ ಹಲವಾರು ಕಾರಣಗಳು ಕೇಳಿ ಬಂದವು. ದೇವಸ್ಥಾನದ ಮುಂದಿನ ಕಲ್ಯಾಣಿಯಲ್ಲಿ ಮಣ್ಣು ತುಂಬಿ ಪಿಲ್ಲರ್ ಎಬ್ಬಿಸಿದ್ದರಿಂದ ಕಟ್ಟಡ ದುರ್ಬಲವಾಗಿತ್ತು. ಜತೆಗೆ ಪಾಲಿಕೆಯ ನಕ್ಷೆಗೆ ವಿರುದ್ಧವಾಗಿ ಏಳು ಮಹಡಿಗಳನ್ನು ಕಟ್ಟಲಾಗಿತ್ತು. ಕಟ್ಟಡ ನಿರ್ಮಾಣ ಸಂಪೂರ್ಣ ಕಳಪೆಯಾಗಿತ್ತು. ಸಾಲದೆಂಬಂತೆ ಮಹಡಿಯ ಮೇಲ್ಭಾಗ ಪೂರ್ತಾ ಟ್ಯಾಂಕ್ ಕಟ್ಟಿ ನೀರು ತುಂಬಿಸಲಾಗಿತ್ತು. ಹಾಗಾಗಿ ಕಟ್ಟಡ ಕುಸಿದು ಬಿತ್ತು ಎಂಬ ಆರೋಪ ಕೇಳಿ ಬಂದವು. ಕಾರಣ ಏನೇ ಇದ್ದರೂ ನೂರಾರು ಅಮಾಯಕರು ಪ್ರಾಣ ಕಳೆದುಕೊಂಡಿದ್ದು ಬೆಂಗಳೂರು ಕಂಡ ಮಹಾ ದುರಂತ.
ಗಂಗಾರಾಮ್ ಬಿಲ್ಡಿಂಗ್ ಹೊಂದಿಕೊಂಡಂತಿದ್ದ ಕಪಾಲಿ ಥಿಯೇಟರ್‌ನಲ್ಲಿ ಆಗ ಡಾ. ರಾಜ್‌ಕುಮಾರ್ ಅಭಿನಯದ ‘ಭಕ್ತ ಪ್ರಹ್ಲಾದ’ ಸಿನಿಮಾ ಪ್ರದರ್ಶನಗೊಳ್ಳುತ್ತಿತ್ತು. ಕಾಕತಾಳೀಯವೆಂದರೆ, ಪ್ರಹ್ಲಾದ ತೋರಿಸಿದ ಕಂಬವನ್ನು ಹಿರಣ್ಯಕಶ್ಯಪ ಗದೆಯಿಂದ ಹೊಡೆದು ಬೀಳಿಸುತ್ತಿದ್ದಂತೆ ಇತ್ತ ಇಡೀ ಕಟ್ಟಡ ಧರೆಗುರುಳಿತ್ತು! ಹೊರಗೆ ಹಾಹಾಕಾರ ನಡೆಯುತ್ತಿದ್ದರೂ ಒಳಗೆ ಸಿನಿಮಾ ನೋಡುತ್ತಿದ್ದವರು ಪೌರಾಣಿಕ ಕತೆಯ ಗುಂಗಿನಲ್ಲಿ ಮುಳುಗಿದ್ದರು. ಕಟ್ಟಡ ಕುಸಿತದಿಂದಾಗಿ ಕಪಾಲಿ ಚಿತ್ರಮಂದಿರದ ಗೋಡೆಗೂ ಹಾನಿಯಾಗಿತ್ತು. ಸಂಭವನೀಯ ಅಪಾಯ ತಡೆಯಲು ನಾವು ಸಿನಿಮಾ ನೋಡುತ್ತಿದ್ದವರನ್ನು ಹೊರಗೆ ಕಳಿಸಬೇಕಿತ್ತು. ಒಮ್ಮೆಲೇ ಕುಸಿತದ ಸುದ್ದಿ ತಿಳಿಸಿದರೆ ಥಿಯೇಟರ್‌ನೊಳಗೆ ಕಾಲ್ತುಳಿತ ಉಂಟಾಗುವ ಸಂಭವ ಇತ್ತು. ಹಾಗಾಗಿ ನಾವು ಉಪಾಯವಾಗಿ ಸಿನಿಮಾ ಪ್ರೇಕ್ಷಕರನ್ನು ಹೊರಗೆ ಕಳಿಸಿದೆವು.
ಪರಿಹಾರ ಕಾರ್ಯದ ಆ 34 ದಿನಗಳು ಭಯಾನಕವಾಗಿದ್ದವು. ನಮಗೆಲ್ಲ ಆ ಕಟ್ಟಡ ಬಳಿಯ ಲಾಡ್‌ಜ್ವೊಂದರಲ್ಲಿ ರೂಮ್ ಮಾಡಿಕೊಡಲಾಗಿತ್ತು. ಅವಶೇಷಗಳೊಳಗಿದ್ದ ಶವಗಳು ಕೊಳೆತು ವಾಸನೆ ಬರಲಾರಂಭಿಸಿತ್ತು. ದುರ್ವಾಸನೆ ತಡೆಯಲಾರದೆ ನಾವು ನೀಲಗಿರಿ ಎಣ್ಣೆ ಅದ್ದಿದ ಬಟ್ಟೆಯನ್ನು ಮೂಗಿಗೆ ಕಟ್ಟಿಕೊಂಡು ಡ್ಯೂಟಿ ಮಾಡುತ್ತಿದ್ದೆವು. ಏಳು ಮಹಡಿಯ ಬಿಲ್ಡಿಂಗ್ ಬಿದ್ದ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಸಾವಿರಾರು ಜನ ಕುತೂಹಲದಿಂದ ಸ್ಥಳಕ್ಕೆ ಓಡಿ ಬಂದಿದ್ದರು.
ರಾಮನಗರ, ಚನ್ನಪಟ್ಟಣ ಮುಂತಾದ ದೂರದ ಊರುಗಳಿಂದಲೂ ನೂರಾರು ಜನ ವಿಶೇಷ ವಾಹನ ಮಾಡಿಕೊಂಡು ಆ ಸ್ಥಳಕ್ಕೆ ಬರತೊಡಗಿದರು. ಅದೊಂದು ಪ್ರೇಕ್ಷಣೀಯ ಸ್ಥಳವೆಂಬಂತೆ ತಿಂಗಳುಗಟ್ಟಲೆ ಜನಸಾಗರ ಹರಿದು ಬಂತು. ಹೀಗೆ ಬಂದವರನ್ನು ನಿಯಂತ್ರಿಸುವುದೇ ನಮಗೆ ಸಾಹಸದ ಕೆಲಸವಾಗಿತ್ತು. ಜನರನ್ನು ಸಾಲಾಗಿನಿಲ್ಲಿಸಿ ಗರ್ಭಗುಡಿಯಲ್ಲಿನ ದೇವರ ದರ್ಶನದಂತೆ ಕಟ್ಟಡ ತೋರಿಸಿ ಮುಂದಕ್ಕೆ ಕಳಿಸುತ್ತಿದ್ದೆವು! ಗಂಡನ ಫೋಟೊ ಹಿಡಿದು, ಆತ ಜೀವಂತವಾಗಿ ಮರುಳುತ್ತಾನೋ ಶವವಾಗಿ ಸಿಗುತ್ತಾನೋ ಎಂಬ ಆತಂಕದಲ್ಲಿ ಪುಟ್ಟ ಮಕ್ಕಳ ಜತೆ ರಸ್ತೆ ಪಕ್ಕ ಅಳುಮೋರೆ ಹಾಕಿಕೊಂಡು ಕೂತ ಮಹಿಳೆಯರ ದೃಶ್ಯ ಕರುಳು ಹಿಂಡುತ್ತಿತ್ತು.
ಕುಟುಕು ಜೀವನ ಹಿಡಿದುಕೊಂಡು ಅವಶೇಷಗಳಡಿ ಸಿಲುಕಿದ್ದವರು ದಿನ ಕಳೆದಂತೆ ಒಬ್ಬೊಬ್ಬರೇ ಹೆಣವಾದರು. ಹೀಗೆ ಸಿಲುಕಿಕೊಂಡವರಲ್ಲಿ ಗಂಗಾರಾಮ್ ಬಿಲ್ಡಿಂಗ್ ಮಾಲೀಕರ ಮಗನೂ ಇದ್ದ. ಆತ ಬೇಸ್ಮೆಂಟ್‌ನಲ್ಲಿದ್ದ ತನ್ನ ಕಚೇರಿಯಲ್ಲಿ ಕೂತಾಗ ಈ ದುರ್ಘಟನೆ ನಡೆದಿತ್ತು. ಕಟ್ಟಡ ಧರೆಗುರುಳಿದರೂ ಆತನ ಕಚೇರಿಯ ಲ್ಯಾಂಡ್‌ಲೈನ್ ಚಾಲನೆಯಲ್ಲಿತ್ತು. ಅದರ ಮೂಲಕ ಆತ ತನ್ನ ಕುಟುಂಬ ಮತ್ತು ಪೊಲೀಸ್ ಅಧಿಕಾರಿಗಳ ಜತೆ ಐದಾರು ದಿನ ಧೈರ್ಯವಾಗಿ ಮಾತನಾಡಿದ್ದ. ತನ್ನನ್ನು ಆದಷ್ಟು ಬೇಗ ಹೊರಗೆ ತೆಗೆಯುತ್ತಾರೆ ಎಂಬ ನಂಬಿಕೆ ಆತನಿಗಿತ್ತು. ಕಚೇರಿಯಲ್ಲಿದ್ದ ಚೂರುಪಾರು ಆಹಾರ ತಿಂದು ದಿನ ಕಳೆಯುತ್ತಿದ್ದ. ಆದರೆ ಹತ್ತು-ಹದಿನೈದು ದಿನ ಕಳೆದರೂ ಆತನನ್ನು ರಕ್ಷಿಸಲು ಸಾಧ್ಯವಾಗದೇ ಹೋಯಿತು. ಹಾಗಾಗಿ ಆತ ಉಪವಾಸ ಬಿದ್ದು ಕರುಣಾಜನಕವಾಗಿ ಪ್ರಾಣಬಿಟ್ಟ.
ಭಾರದ ತೊಲೆಗಳನ್ನು ಮೈಲಕ್ಕೆತ್ತಲು ಸಾಧ್ಯವಾಗದೇ ಹೋಗಿದ್ದರಿಂದ ಅನಿವಾರ್ಯವಾಗಿ ಕೆಲವರ ಕೈ, ಕಾಲುಗಳನ್ನು ಕತ್ತರಿಸಿ ಜೀವಂತವಾಗಿ ಹೊರ ತೆಗೆಯಲಾಯಿತು. ವೈಯಾಲಿಕಾವಲ್ ಕಾರ್ಮಿಕರಿಬ್ಬರು ಅನ್ನ, ನೀರಿಲ್ಲದೆ ಸುಮಾರು 15 ದಿನಗಳ ಕಾಲ ಅವಶೇಷಗಳಡಿಯಲ್ಲಿ ಜೀವಂತವಾಗಿದ್ದ ಪವಾಡವೂ ನಡೆಯಿತು. ಪ್ರಜ್ಞೆ ಕಳೆದುಕೊಂಡಿದ್ದ ಅವರಿಬ್ಬರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿ ಬದುಕಿಸಲಾಯಿತು. ಬಾಯಾರಿಕೆ ತಡೆಯಲಾರದೆ ಒಬ್ಬರ ಮೂತ್ರವನ್ನು ಮತ್ತೊಬ್ಬರು ಕುಡಿಯುವ ಮೂಲಕ ಅವರಿಬ್ಬರು ಜೀವ ಉಳಿಸಿಕೊಂಡಿದ್ದರು! ಗಂಗಾರಾಮ್ ಕಟ್ಟಡ ಕುಸಿತವು ಬೆಂಗಳೂರಿನ ಇತಿಹಾಸದಲ್ಲೊಂದು ಕರಾಳ ಅಧ್ಯಾಯ.
ಗಂಗಾರಾಮ್ ಕಟ್ಟಡ ಕುಸಿತವನ್ನು ನೆನಪಿಸಿದರೆ ಈಗಲೂ ಬೆಂಗಳೂರಿಗರ ಮುಖದಲ್ಲಿ ದುಃಖದ ಛಾಯೆ ಆವರಿಸುತ್ತದೆ. 123 ಜನರನ್ನು ಬಲಿ ತೆಗೆದುಕೊಂಡ ಆ ಕಟ್ಟಡದ ಅವಶೇಷಗಳನ್ನು ಪೂರ್ತಾ ತೆರವುಗೊಳಿಸಲು 34 ದಿನಗಳು ಬೇಕಾದವು. ಎಲ್ಲರಿಗಿಂತ ಮೊದಲು ಆ ಘಟನಾ ಸ್ಥಳ ತಲುಪಿದ್ದ ನಾನು ರಕ್ಷಣಾ ಕಾರ್ಯಾಚರಣೆಯಲ್ಲಿ ಕೈ ಜೋಡಿಸಿದ್ದೆ.
Discussion about this post