ಪುರಾತನ ಶಾಸನಗಳ ಆಧಾರದಲ್ಲೇ ಈಗಿರುವ ಶಾಸನಗಳು ಅನುಷ್ಠಾನದಲ್ಲಿರುವುದು ಒಂದು ಮಾನವತಾ ಧರ್ಮದ ಸತ್ಯವಾಗಿರುತ್ತದೆ. ಜಗತ್ತಿನಲ್ಲಿ ಅನೇಕ ಧರ್ಮ ಶಾಸನಗಳನ್ನು ಆಯಾಯ ಧರ್ಮದ ಪ್ರಾಜ್ಞ ವಿದ್ವಾಂಸರುಗಳು ಅನುಭವದ ಮೂಲಕ ರಚಿಸಿದುದಾಗಿರುತ್ತದೆ.
ಸನಾತನ ವೇದೋಕ್ತ ವಿಧಾನಗಳು (ಹಿಂದೂ ಪದ್ಧತಿ) ಅನೇಕ ಸಂಸ್ಕಾರಗಳನ್ನೂ, ಅದನ್ನು ಮೀರಿ ನಡೆದರೆ ಉಂಟಾಗುವ ದೋಷಗಳನ್ನೂ ತಿಳಿಸಿದೆ. ಆದರೆ ಕಾಲಕ್ಕೆ ತಕ್ಕಂತೆ ಈ ಶಾಸನಗಳಲ್ಲಿ ಪರಿವರ್ತನೆಗಳನ್ನೂ ತರಬೇಕು ಎಂಬುದಾಗಿಯೂ ತಿಳಿಸಿದೆ.
ಪ್ರಕೃತಿ ಸತ್ಯಕ್ಕೆ ವಿರುದ್ಧ ಹೋಗಬಾರದು
ನಮ್ಮ ಮನುಸ್ಮೃತಿಯನ್ನು ಅನೇಕರು ವಿರೋಧಿಸಿದ್ದೂ ಇದೆ. ಆದರೆ ಅದರ ಕೆಲವೊಂದು ಶಾಸನಗಳಲ್ಲಿ ಪರಿವರ್ತನೆಗಳೂ ಆಗಿವೆ, ಕೆಲವೊಂದು ಶಾಸನಗಳ ಪಾಲನೆಯೂ ಅಗತ್ಯವಿರುವುದಿಲ್ಲ. ಯಾಕೆಂದರೆ ನಾಗರೀಕತೆ ಬೆಳೆದಂತೆ ಪರಿವರ್ತನೆಗಳೂ ಬೇಕಾಗಿವೆ. ಉದಾ: ಶೂದ್ರರ ಹೆಸರಿನ ಕೊನೆಗೆ ‘ದಾಸ’ ಎಂಬುದನ್ನು ಸೇರಿಸಬೇಕಿದೆ. ಆದರೆ ಈಗ ಇದು ಸಮಂಜಸವಲ್ಲ. ಯಾಕೆಂದರೆ ಶೂದ್ರಜರು ಅನೇಕಾನೇಕ ಜನರು ಉತ್ತಮ ಸಂಸ್ಕಾರ ಹೊಂದಿ ದ್ವಿಜ ಸಮಾನರಾಗಿದ್ದಾರೆ. ಹೀಗಿದ್ದಾಗ ಅಂದಿನ ನಿಯಮವು ಇಂದಿಗೆ ಸೂಕ್ತವಾಗದು. ಆದರೆ ಕೆಲವೊಂದು ಪ್ರಕೃತಿ ಸತ್ಯಕ್ಕೆ ವಿರುದ್ಧವಾಗಿ ನಡೆದು ಕೊಳ್ಳಬಾರದು ಎಂಬ ವಿಚಾರ ಎಂದೆಂದಿಗೂ ಸತ್ಯ.
ಮುಸ್ಲಿಮರ ಶೆರಿಯತ್ ಕಾನೂನನ್ನು ಗೌರವಿಸಲೇಬೇಕು. ಆದರೆ ಇಂದಿಗೆ ಅದೆಲ್ಲವೂ ಅನುಷ್ಟಾನದಲ್ಲಿ ಇರಬೇಕೆಂಬುದನ್ನು ಒಪ್ಪಲು ಸಾಧ್ಯವಿಲ್ಲ. ಉದಾ: ಸಂತಾನ ನಿಯಂತ್ರಣ ವಿರೋಧ, ತ್ರಿತಲಾಕ್ ಅಂದಿನ ಕಾಲಕ್ಕೆ ಬೇಕಾಗಿತ್ತು. ಕಾಲ ಬದಲಾದಂತೆ ಪರಿವರ್ತನೆ ಮಾಡಬೇಕಿತ್ತು.
ಆದರೆ ಅವರ ಜನಾಂಗವು ಹಳೆಯ ಕಾನೂನನ್ನೆ ಮತ್ತೆ ಮುಂದುವರಿಸುತ್ತಾ ಹೋಗಬೇಕು ಎನ್ನುವುದಕ್ಕೆ ಅರ್ಥವಿಲ್ಲ. ನಾವೂ ಮನುಸ್ಮೃತಿಯ ಪ್ರಕಾರ ಇಂದಿಗೂ ಅಸ್ಪೃಷ್ಯತೆ, ಶೂದ್ರಾದಿ ಭೇದ ಭಾವ ಮಾಡಿ ಮಡಿವಂತಿಕೆಯೇ ಬೇಕು ಎನ್ನುವುದನ್ನೂ ಈಗಿನ ಕಾಲಕ್ಕೆ ಅದೇಶಾಸನದ ಪಾಲೆನೆಯಾಗಬೇಕು ಎಂದರೆ ಅದು ಅರ್ಥಹೀನವಾಗುತ್ತದೆ.
ಸಲಿಂಗ ಕಾಮ ವಿಚಾರದಲ್ಲಿ ಸವೋಚ್ಛ ನ್ಯಾಯಾಲಯವು ನಿನ್ನೆಯಷ್ಟೇ ಒಂದು ಮಹತ್ತರ ತೀರ್ಪು ನೀಡಿದೆ. ಸಲಿಂಗ ಕಾಮವು ಅಪರಾಧವಲ್ಲ ಎಂಬ ತೀರ್ಪು ಅದು.
ಮನದಲ್ಲೇ ನೊಂದುಕೊಳ್ಳಬಹುದು
ಜಾತ್ಯತೀತ ಭಾರತದಲ್ಲಿ ಇರುವ ಶಾಸನವನ್ನು, ಅದನ್ನು ಎತ್ತಿಹಿಡಿದು ನೀಡುವ ತೀರ್ಪನ್ನು ಸಕಲ ಭಾರತೀಯ ಪ್ರಜೆಗಳು ಗೌರವಿಸಲೇ ಬೇಕಾಗಿರುತ್ತದೆ. ಆದರೆ ಅವರವರ ಧರ್ಮ ಶಾಸನಗಳ ಅನುಷ್ಠಾನದಲ್ಲಿ ಇರುವವರಿಗೆ ಗೊಂದಲವೂ ಆಗುತ್ತದೆ. ಹೇಗೆ ಏಕರೂಪ ಶಾಸನಕ್ಕೆ ಬೇರೆ ಧರ್ಮಗಳ ಜನರು ವಿರೋಧ ಮಾಡುತ್ತಾರೋ ಹಾಗೆಯೇ ಈ ಸಲಿಂಗ ಕಾಮ ಅಪರಾಧವಲ್ಲ ಎಂಬುದನ್ನು ಮನದೊಳಗಾದರೂ ವಿರೋಧಿಸಬಹುದು ಮತ್ತು ನ್ಯಾಯಾಲಯದ ತೀರ್ಪಿನ ಬಗ್ಗೆ ನೊಂದುಕೊಳ್ಳಬಹುದು.
ಯಾವಾಗಲೂ ನ್ಯಾಯಾಲಯ ನೀಡಿದ ತೀರ್ಪಿಗೆ ನಾವು ತಲೆಬಾಗಿ ಗೌರವಿಸುವವರು ಪ್ರಜೆಗಳು. ಹಾಗೆಯೇ ನ್ಯಾಯಾಲಯವೂ ಪ್ರಜೆಗಳಿಗೆ ನೋವಾಗುವಂತಹ ತೀರ್ಪು ನೀಡುವುದೂ ಒಂದು ರೀತಿಯ ಗೊಂದಲಕ್ಕೆ ಕಾರಣವಾಗಬಹುದು ಮತ್ತು ಗೌರವಕ್ಕೂ ಚ್ಯುತಿ ಬರಬಾರದೆಂದೇನಿಲ್ಲ.
ಮನುಸ್ಮೃತಿಯಲ್ಲಿ ಏನು ಹೇಳಿದೆ?
ಮನು ಸ್ಮೃತಿಯಲ್ಲಿ ಒಂದೆಡೆ ರೇತಸ್ಸಿನ ಬಗ್ಗೆ ಒಂದು ವಿಚಾರ ಹೇಳಿದೆ. ಪುರುಷ ವೀರ್ಯವು ಭೂಮಿಗೆ ಬಿದ್ದು ವ್ಯರ್ಥವಾಗಬಾರದು ಎಂದಿದೆ. ಅಂದರೆ ಪುರುಷ ವೀರ್ಯವು ಇರುವುದು ಸಂತಾನ ಪಡೆಯಲಿಕ್ಕಾಗಿಯೇ ವಿನಾ ಭೋಗಕ್ಕಾಗಿ ಇರುವುದಲ್ಲ ಎಂಬ ಅರ್ಥವಿರುತ್ತದೆ. ಅನಧಿಕೃತವಾಗಿ ಅದೆಷ್ಟೋ ಮನುಷ್ಯರ ವೀರ್ಯ ಭೂಮಿಗೆ ಬಿದ್ದು ವ್ಯರ್ಥವಾಗುತ್ತಿರುತ್ತದೆ. ಆದರೆ ಧರ್ಮಶಾಸನವು ಇದು ದೋಷಪ್ರದ ಎಂದು ಹೇಳಿದೆ.
ಕಾಮತೋ ರೇತಸಃಸೇಕಂ ವೃತಸ್ಥಸ್ಯ ದ್ವಿಜನ್ಮನಃ
ಅತಿಕ್ರಮಂ ವೃತಸ್ಯಾಹುರ್ಧರ್ಮಜ್ಞಾ ಬ್ರಹ್ಮವಾಧೀನಃ
(ಮನು: 11-120 ನೇ ಶ್ಲೋಕ)
ಒಮ್ಮೆ ಪ್ರಾಣಿಗಳನ್ನು ನೋಡಿ
ಕಾಮನೆಯಿಂದ ವೀರ್ಯವನ್ನು ಸಂಭೋಗದಲ್ಲಿಯೋ, ಮೈಥುನ ಕೃತ್ಯಗಳಿಂದಲೋ ಚೆಲ್ಲಿದರೆ ಅವಕೀರ್ಣ ದೋಷವಿದೆ ಎಂದು ಹೇಳಿದೆ. ಅವಕೀರ್ಣೆಂದರೆ ನಾಶ ಮಾಡಿದ, ಹಾಳುಮಾಡಿದ ದುರುಪಯೋಗ ಮಾಡಿದ ದೋಷವಾಗುತ್ತದೆ. ಇದರಿಂದ ವ್ಯಕ್ತಿಯು ತೇಜಸ್ಸನ್ನು ಕಳೆದುಕೊಳ್ಳುತ್ತಾನೆ. ದೇಹಕ್ಕೆ ಬೇಗನೆ ಮುಪ್ಪು ಆವರಿಸಿ ಆಯುಕ್ಷೀಣವಾಗುತ್ತದೆ ಎಂಬುದು ಇದರ ಫಲಶ್ರುತಿ.
ಇದು ಕೇವಲ ಹಿಂದೂ ಧರ್ಮಕ್ಕೇ ಮಾತ್ರವಲ್ಲ. ಜಗತ್ತಿನ ಸಕಲ ಮನುಷ್ಯರಿಗೂ ಅನ್ವಯ ಆಗುವಂತ ಅನುಭವದ ಕಟು ಸತ್ಯ. ನೀವು ಯಾವುದೇ ಸರಿಸೃಪ, ಪ್ರಾಣಿ ಪಕ್ಷಿಗಳ ಚರಿತ್ರೆ ನೋಡಿ. ಅನಾವಶ್ಯವಾಗಿ ಅಕಾಲದಲ್ಲಿ ಗಂಡು ಹೆಣ್ಣುಗಳು ಒಟ್ಟು ಸೇರುವುದೇ ಇಲ್ಲ. ಅವುಗಳೊಳಗೆ ಅಂತಹ ಪ್ರಜ್ಞೆ ಇರುತ್ತದೆ. ಆದರೆ ಕೆಲ ಮನುಷ್ಯರಿಗೆ ಕಾಮ ತಡೆದುಕೊಳ್ಳಲು ಆಗದೆ ಸಲಿಂಗ, ಅತ್ಯಾಚಾರ, ಕೊನೆಗೆ ಪಶುಗಳ ಸಂಗಕ್ಕೂ ಮುಂದಾಗಿಬಿಡುತ್ತಾನೆ.
ಇಂತಹ ವಿಪರೀತವಾದ ಕಾಮೋದ್ರೇಕವನ್ನು divert ಮಾಡಲು ಅನೇಕ ವಿಚಾರಗಳಿದ್ದರೂ ಈ ಮನುಷ್ಯರು ಇದರಲ್ಲೇ ತಲ್ಲೀನರಾಗುತ್ತಾರೆ.
ಕಾಮಾತುರಾಣಾಂ ಲಜ್ಜಾ ಹೀನಂ ಎಂಬ ಪದಕ್ಕೆ ಇವರು ಹೋಲಿಕೆಯಾಗುತ್ತಾರೆ. ಇದೂ ಅಲ್ಲದೆ ಅನೇಕ ಪುರಾಣ ಕಥೆಗಳಲ್ಲಿ ಭೂಮಿಗೆ ಬಿದ್ದ ರೇತಸ್ಸಿನಿಂದ ಉತ್ಪತ್ತಿಯಾದ ಅನೇಕ ದಾನವರ ಉದಾಹರಣೆಗಳೂ ಇವೆ.
ಅದೆಲ್ಲ ಬಿಡಿ, ಪುರಾಣ ಸುಳ್ಳು ಎನ್ನುವವರಲ್ಲಿ ವಾದ ಮಾಡಲಾಗದು. ಆದರೂ ಪ್ರಕೃತಿ ವಿಚಾರದಲ್ಲಿ ಸರ್ವ ಪ್ರಜೆಗಳೂ ಒಪ್ಪುವಂತಹ ವಿಚಾರವೆಂದರೆ ಸ್ಖಲನವಾದ ವೀರ್ಯವು ಸಂತಾನೋದ್ದೇಶವಾಗಿಯೇ ಇರಬೇಕಲ್ಲದೆ ಭೂಮಿಗೆ ಬಿದ್ದು ವ್ಯರ್ಥವಾಗದೆ ಇನ್ನೊಂದು ಅವಾಂತರಕ್ಕೆ ಕಾರಣವಾಗಬಾರದು ಎಂಬುದಂತೂ ಸತ್ಯವೇ.
ಹಾಗಾಗಿ ಶ್ರೇಷ್ಟ ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತಾ ಮುಂದೆ ಇಂತಹ ಕೃತ್ಯಗಳಿಂದ ನ್ಯಾಯಾಲಯಕ್ಕೆ ಗೊಂದಲ ತರುವಂತೆಯೂ ಆಗಬಾರದು. ಹಾಗಾಗಿ ಇಂತಹ ಸಲಿಂಗ ಕಾಮಕೃತ್ಯಗಳಿಗೆ ಹೋಗದೆ, ನ್ಯಾಯಾಲಯದ ಮೆಟ್ಟಿಲು ಹತ್ತುವಂತಾಗದೆ ಧರ್ಮನಿಷ್ಟರಾಗಿರಬೇಕು. ಆವಾಗ ಆಯಾಯ ಧರ್ಮ ಶಾಸನಗಳನ್ನೂ ಉಲ್ಲಂಘಿಸಿದಂತಾಗದು.
ಸುಪ್ರೀಂ ಕೋರ್ಟ್ ನೀಡುವ ತೀರ್ಪನ್ನು ದೇಶದ ಪ್ರತಿ ನಾಗರಿಕನೂ ಪಾಲಿಸಬೇಕಾದ್ದು ಕರ್ತವ್ಯ. ಆದರೆ, ನ್ಯಾಯಾಂಗದ ತೀರ್ಪನ್ನು ಹೇಗೆ ಗೌರವಿಸಬೇಕೋ ಹಾಗೆಯೇ ನಾವು ನಂಬಿಕೊಂಡ ಧರ್ಮಕ್ಕೆ ಎಂದಿಗೂ ಚ್ಯುತಿ ಬಾರದಂತೆ ನಡೆದುಕೊಳ್ಳುವುದೂ ಸಹ ಪ್ರತಿಯೊಬ್ಬರ ಕರ್ತವ್ಯ. ನ್ಯಾಯಾಲಯದ ತೀರ್ಪು ನೀಡಿದೆ ಎಂದ ಮಾತ್ರಕ್ಕೆ ಅದು ಸ್ವೇಚ್ಛಾಚಾರಕ್ಕೆ ಅವಕಾಶ ಎಂದರ್ಥವಲ್ಲ. ಹೀಗಾಗಿ, ನ್ಯಾಯಾಲಯದ ತೀರ್ಪನ್ನೂ ಉಲ್ಲಂಘಿಸಬಾರದು, ಧರ್ಮಕ್ಕೂ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು ಎಂದರೆ, ಪ್ರಕೃತಿ ಧರ್ಮ ವಿರೋಧಿಸುವ ಸಲಿಂಗ ಕಾಮಕ್ಕೆ ಅವಕಾಶ ನೀಡದೇ ಇದ್ದರೆ ಸಾಕು. ಆಗ, ನ್ಯಾಯಾಲಯದ ವಿರುದ್ಧವೂ ಹೋದಂತಾಗುವುದಿಲ್ಲ, ಧರ್ಮದ ಅನುಸಾರ ನಡೆದಂತೂ ಆಗುತ್ತದೆ.
-ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
ನಿಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ಇಲ್ಲಿಗೆ ಕಳುಹಿಸಿ:
ಕರೆ: 9008761663
ವಾಟ್ಸಪ್: 9481252093
ಇ-ಮೇಲ್: kalpanews.kannada@gmail.com
aniruddha.vasista@gmail.com
Discussion about this post