ಶಿವಮೊಗ್ಗ: ನಮ್ಮ ಸನಾತನ ಸಂಸ್ಕೃತಿಯ ಪ್ರತಿಯೊಂದು ಘಟನೆಗಳ ಬಗ್ಗೆ ನಮ್ಮಲ್ಲಿ ಅರಿವು ಮತ್ತು ಸಾಕಷ್ಟು ಪ್ರೀತಿ ಅಭಿಮಾನ ಪಡುವಂತೆ ಪ್ರೆರೇಪಿಸುವ ಸಾಮರ್ಥ್ಯ ನಮ್ಮ ನಾಡಿನ ಯಕ್ಷಗಾನ ಕಲೆಗಿದೆ. ಅಂತಹ ಶಕ್ತ ಕಲೆಯನ್ನು ಯಕ್ಷಗಾನ ಕಲಾವಿದರು ಪೋಷಿಸಿ ಬೆಳೆಸಿಕೊಂಡು ಬರುತ್ತಿದ್ದಾರೆ. ಅಕಾಡೆಮಿ ಅಂತಹ ತೆರೆಮರೆಯ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ನಮ್ಮನ್ನು ನಾವೇ ಗೌರವಿಕೊಂಡಂತೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಕರ್ನಾಟಕ ಯಕ್ಷಗಾನ ಅಕಾಡೆಮಿಯ 2017 ರ ವಾರ್ಷಿಕ ಪ್ರಶಸ್ತಿಗಳನ್ನು ಕುವೆಂಪು ರಂಗಮಂದಿರದ ನಡೆದ ಸಮಾರಂಭದಲ್ಲಿ ವಿತರಣೆ ಮಾಡಿ ಅವರು ಮಾತನಾಡುತ್ತಿದ್ದರು.
ಸಾಕಷ್ಟು ಹಿರಿಯ ಕಲಾವಿದರ ಸಮೂಹವೇ ಶಿವಮೊಗ್ಗೆಗೆ ಬಂದಿದೆ. ಅವರೆಲ್ಲರನ್ನೂ ಒಂದೆಡೆ ಕಾಣುವ ಸೌಭಾಗ್ಯ ನಮಗೆ ಲಭಿಸುವಂತೆ ಮಾಡಿದ ಅಕಾಡೆಮಿಯನ್ನು ಮತ್ತು ಪ್ರಶಸ್ತಿ ಪುರಸ್ಕೃತರಿಗೆ ಮನಸಾರೆ ಅಭಿನಂದಿಸುತ್ತೆನೆ ಎಂದರು.
ಹಿರಿಯ ಯಕ್ಷಗಾನ ಕಲಾವಿದ ನಾರಾಯಣ ಭಾಗವತರನ್ನು ನೋಡುತ್ತಲೇ ಯಕ್ಷಗಾನ ಕೇವಲ ಸಂಸ್ಕೃತಿಯನ್ನು ಮಾತ್ರ ಉಳಿಸಿಲ್ಲ ಕಲಾವಿದರ ಆರೋಗ್ಯವನ್ನೂ ವೃದ್ಧಿಸುವಲ್ಲಿ ಸಹಕಾರಿಯಾಗಿದೆ ಎಂದು ಅಭಿಮಾನದಿಂದ ಹೇಳಿದರು. ಅಕಾಡೆಮಿಗೆ ಎಷ್ಟು ಅನುದಾನ ಅಗತ್ಯವಿದೆ ಹೇಳಿ. ನಿಮ್ಮ ಜೊತೆಗೆ ನಾನೂ ಮುಖ್ಯಮಂತ್ರಿಯವರನ್ನ ಭೇಟಿ ಮಾಡುತ್ತೇನೆ. ಹೆಚ್ಚಿನ ಅನುದಾನಕ್ಕೆ ಒತ್ತಾಯಿಸುತ್ತೇನೆ ಎಂದು ಪ್ರೊತ್ಸಾಹಕ ನುಡಿಯಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ಇಂಗ್ಲಿಷ್’ನಂತಹ ಏಕೈಕ ಭಾಷೆಯ ದಾಳಿಯಿಂದ ಆಯಾ ನೆಲದ ಭಾಷೆಗಳು ನಲುಗುತ್ತಿವೆ. ಜಾಗತೀಕರಣವೇ ಇದಕ್ಕೆ ಪ್ರಮುಖ ಕಾರಣ. ಇಂತಹ ಇಕ್ಕಟ್ಟಿನ ಸನ್ನಿವೇಶದಲ್ಲಿ ಅಕಾಡೆಮಿಗಳು ತಮ್ಮ ಪಾತ್ರವರಿತುಕೊಂಡು ಭಾಷೆಯನ್ನು ಪೋಷಿಸಿ ಬೆಳೆಸುವ ಕೆಲಸ ಮಾಡಲಿ. ಅಕಾಡೆಮಿಗಳು ಕೈಕಟ್ಟಿ ಕುಳಿತರೆ ಸಮಸ್ಯೆ ಬಗೆಹರಿಯುವುದಿಲ್ಲ ಸಂಸ್ಕೃತಿ ಮತ್ತು ಪರಂಪರೆಯನ್ನು ಸೃಜನಶೀಲಗೊಳಿಸಬೇಕು ಈ ನಿಟ್ಟಿನಲ್ಲಿ ಅಕಾಡೆಮಿಗಳ ಜವಾಬ್ದಾರಿ ದೊಡ್ಡದಿದೆ ಎಂದು ಆಶಿಸಿದರು.
ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಯಕ್ಷಗಾನದ ಭಾಷೆ ನಮ್ಮ ಕನ್ನಡದ ಅಪ್ಪಟತೆ ಸಂರಕ್ಷಿಸಿಕೊಂಡು ಬಂದಿದೆ. ಕನ್ನಡದ ಬೇರೆ ಸಂದರ್ಭಗಳಲ್ಲಿ ಅನ್ಯಭಾಷೆಗಳು ಮಿಶ್ರಗೊಳ್ಳುವ ಸಾಧ್ಯತೆಗಳಿವೆ. ಆದರೆ ಯಕ್ಷಗಾನ ಆ ರೀತಿ ಮಾಲಿನ್ಯಗೊಳ್ಳದೇ ಕನ್ನಡದ ಸ್ವಂತಿಕೆಯನ್ನು ಕಾಪಾಡಿಕೊಂಡು ಬಂದಿದೆ ಎಂದರು.
ಅಕಾಡೆಮಿಯ ಅಧ್ಯಕ್ಷ ಎಂ.ಎ. ಹೆಗ್ಗಡೆ ಅವರು ಪ್ರಸ್ತಾವನೆಯಲ್ಲಿ ಯಕ್ಷಗಾನ ಅಕಾಡೆಮಿಗೆ ಪೂರ್ಣ ಸ್ಥಾನಮಾನ ನೀಡಿದ ನಂತರ ವಾರ್ಷಿಕ ಘೋಷಿಸುವ ಪ್ರಶಸ್ತಿಗಳಲ್ಲಿ ಸಂಖ್ಯಾ ಪ್ರಮಾಣ ಕಡಿಮೆಯಿತ್ತು. ಆದರೆ ವಾರ್ಷಿಕ ಪಾರ್ತಿಸುಬ್ಬ ನಾಮಾಂಕಿತ ಪುರಸ್ಕಾರ. ವಾರ್ಷಿಕ ಐದು ಗೌರವ ಪ್ರಶಸ್ತಿ ಮತ್ತು ಹತ್ತು ಯಕ್ಷಸಿರಿ ಪ್ರಶಸ್ತಿ ಘೋಷಿಸಬೇಕೆಂಬ ಅಕಾಡೆಮಿಯ ಪ್ರಸ್ತಾವಕ್ಕೆ ಘನಸರ್ಕಾರ ಅನುಮತಿ ನೀಡಿದೆ. ಅದಕ್ಕಾಗಿ ಸರ್ಕಾರಕ್ಕೆ ಕೃತಜ್ಞತೆ ಅರ್ಪಿಸುತ್ತೇವೆ ಎಂದರು.
ಜಿಲ್ಲಾಧಿಕಾರಿ ಕೆ.ಎ. ದಯಾನಂದ ಅವರು ಪ್ರಶಸ್ತಿ ಪುರಸ್ಕೃತರ ಪರಿಚಯವಿರುವ ಪುಸ್ತಕ ಲೋಕಾರ್ಪಣೆ ಮಾಡಿದರು. ತಾವು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಸಂದರ್ಭದಲ್ಲಿ ಅಕಾಡೆಮಿಗಳ ಮಹತ್ವವನ್ನು ಸರ್ಕಾರದ ಗಮನಕ್ಕೆ ತಂದು ಒಂದು ಕೋಟಿ ರೂಪಾಯಿಗಳವರೆಗೂ ಹೆಚ್ಚಿಸಲು ಶಿಫಾರಸು ಮಾಡಲಾಗಿದೆ. ಶಿವಮೊಗ್ಗದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸುವ ಪ್ರಸ್ತಾಪ ಬಂದಾಗ ಬಹಳ ಹೆಮ್ಮೆ ಹಾಗೂ ಅಭಿಮಾನದಿಂದ ಒಪ್ಪಿಕೊಂಡೆವು ಎಂದರು.
ವೇದಿಕೆಯಲ್ಲಿ ಪಾರ್ತಿಸುಬ್ಬ ಗೌರವ ಪ್ರಶಸ್ತಿ ಪುಸ್ತಕ ಬಹುಮಾನಕ್ಕೆ ಭಾಜನರಾದ ಬಲಿಪ ನಾರಾಯಣ ಭಾಗವತರಿಗೆ ಒಂದು ಲಕ್ಷ ರೂಪಾಯಿ ನಗದು ಮತ್ತು ಶಾಲು, ಫಲ ಪುಷ್ಪ ಕರಂಡಿಕೆ ಹಾಗೂ ಪ್ರಶಸ್ತಿ ಲೇಖನವನ್ನು ನೀಡಿ ಗೌರವಿಸಲಾಯಿತು.
ಪ್ರಸ್ತುತ ಯಕ್ಷಗಾನವು ಬಯಲಾಟ ಅಕಾಡೆಮಿಯಿಂದ ಬೇರ್ಪಟ್ಟ ನಂತರ ಯಕ್ಷಗಾನ ಅಕಾಡೆಮಿ ಸ್ವತಂತ್ರ ಕಾರ್ಯಾರಂಭ ಮಾಡಿದೆ. ಮೊಟ್ಟಮೊದಲ ಬಾರಿಗೆ ಶಿವಮೊಗ್ಗದಲ್ಲಿ ಏರ್ಪಡಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವು ಗುರುಗುಹ ಸಂಗೀತ ವಿದ್ಯಾಲಯದ ಕಲಾವಿದೆಯರ ನಾಡಗೀತೆಯ ಗಾಯನದಿಂದ ಚಾಲನೆಗೊಂಡಿತು. ಅಕಾಡೆಮಿಯ ರಿಜಿಸ್ಟಾರ್ ಎಸ್.ಎಚ್. ಶಿವರುದ್ರಪ್ಪ ಸ್ವಾಗತ ಕೋರಿದರು.
ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ ಸ್ವಿಕರಿದ ಬಲಿಪ ನಾರಾಯಣ ಭಾಗವತರು “ಈಗ ಒಂದು ವೇಷ ಹಾಕಿದರೆ ದೊಡ್ಡ ಕಲಾವಿದ. ನಾಕು ಪದ ಹೇಳಿದ್ರೆ ಭಾಗವತ. ಅಂದು ಕಲಾವಿದರಿಗೆ ಒಂದು ಹೆದರಿಕೆ ಇತ್ತು. ಭಾಗವತರು ಏನಾದರೂ ಹೇಳಿಬಿಡ್ತಾರೋ ಅಂತ. ಭಾಗವತರ ಮಾತು ಮೀರುತ್ತಿರಲಿಲ್ಲ. ಮೀರಿದರೆ ಅವನಿಗೆ ವೇಷ ಇಲ್ಲ. ಮನೆಗೆ ಕಳುಹಿಸಲಾಗುತ್ತಿತ್ತು. ಇವತ್ತು ಹಾಗೆ ನಡೆಯುವುದಿಲ್ಲ. ಹೆದರಿಕೆ ಇಲ್ಲ.ನಾವೇ ಎದ್ದು ನಮ್ಮಷ್ಟಕ್ಕೆ ಹೋಗಬೇಕಾಗುತ್ತದೆ” ಎಂದು ಇಂದಿನ ದಿನಮಾನಗಳಲ್ಲಿ ಯುವಪೀಳಿಗೆ ಗಂಭೀರವಾಗಿ ಈ ಕಲೆಯನ್ನು ಪರಿಗಣಿಸಿಲ್ಲ ಎಂದು ವಿಷಾದಿಸಿದರು. ಪ್ರಶಸ್ತಿ ಸ್ವಿಕರಿಸಿದ ಬರೆ ಕೇಶವ ಭಟ್, ನೀವಣೆ ಗಣೇಶ ಭಟ್ ಮತ್ತು ಪುಸ್ತಕ ಬಹುಮಾನ ಪಡೆದ ಡಾ.ಜಿ.ಎಸ್. ಭಟ್ಟರು ಮಾತನಾಡಿದರು.
ಸರ್ವಶ್ರೀ ಶಂಕರ ಭಾಗವತರು, ಬರೆ ಕೇಶವ ಭಟ್, ಎಂ. ಶ್ರೀಧರ ಹಂದೆ ಕೋಟೆ, ಎ.ಎಂ. ಶಿವಶಂಕರಯ್ಯ, ಕರಿಯಣ್ಣ ಗೌರವ ಪ್ರಶಸ್ತಿ ಸ್ವಿಕರಿಸದರು. ಯಕ್ಷಸಿರಿ ಪ್ರಶಸ್ತಿಯನ್ನು ಸರ್ವಶ್ರೀ ಗಜಾನನ ಗಣಪತಿಭಟ್ಟ ಹೊಸ್ತೊಟ, ಮೋಹನ ಶೆಟ್ಟಿಗಾರ್, ಹೂಕಳ ಲಕ್ಷಿ ನಾರಾಯಣ ಭಟ್, ಜಮದಗ್ನಿ ಶಿನ ನಾಯ್ಕ, ಜಂಬೂರು ರಾಮಚಂದ್ರ ಶಾನುಭಾಗ್, ಮಹದೇವ ಈಶ್ವರ ಹೆಗಡೆ, ಎ.ಎಸ್. ಲಕ್ಷಯ್ಯ, ವಿದ್ವಾನ್ ಹರಿದಾಸ ನೀವಣೆ ಗಣೇಶ ಭಟ್ಟ, ಎಲ್. ಶಂಕರಪ್ಪ, ಮತ್ತು ಟಿ.ಎಸ್. ರವೀಂದ್ರ ಸ್ವಿಕರಿಸಿದರು.
ಪುಸ್ತಕ ಬಹುಮಾನವನ್ನು ಬಲಿಪ ನಾರಾಯಣ ಭಾಗವತ್ ಹಾಗೂ ಡಾ.ಜಿ.ಎಸ್. ಭಟ್ಟ ಸ್ವಿಕರಿಸಿದರು. ಅಕಾಡೆಮಿ ಸದಸ್ಯ ಲಕ್ಷ್ಮೀನಾರಾಯಣ ಕಾಶಿ ಸಮಾರಂಭಕ್ಕೆ ಸಹಕರಿಸಿದರಲ್ಲರಿಗೂ ವಂದಿಸಿರು.
ಸಮಾರಂಭಕ್ಕೆ ಮುನ್ನ ನಗರದ ಗೋಪಿ ವೃತ್ತದಿಂದ ಕುವೆಂಪು ರಂಗಮಂದಿರದವರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿತ ಕೀಲುಕುದುರೆ ನೃತ್ಯ, ಚಿಲಿಪಿಲಿ ಗೊಂಬೆಮೇಳ ಕುಣಿತ, ಜನಪದ ವೇಷ ಮತ್ತು ಡೊಳ್ಳು, ಪಟಕುಣಿತ, ವೀರಗಾಸೆ, ತಮಟೆ ಮೇಳದಿಂದ ಕೂಡಿದ ಆಕರ್ಷಕ ಮೆರವಣಿಗೆ ನಡೆಯಿತು. ಅಕಾಡೆಮಿ ಸದಸ್ಯ ಲಕ್ಷ್ಮೀನಾರಾಯಣ ಕಾಶಿ ಎಲ್ಲರಿಗೂ ಸ್ವಾಗತಿಸಿದರು. ಜನಪದ ಅಕಾಡೆಮಿ ಅಧ್ಯಕ್ಷ ಟಾಕಪ್ಪ ಕಣ್ಣೂರು ಅವರು ಡೊಳ್ಳು ಬಾರಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಅಕಾಡೆಮಿಯ ಅಧ್ಯಕ್ಷರು, ಸದಸ್ಯರು, ಪ್ರಶಸ್ತಿ ಪುರಸ್ಕೃತರು, ನಗರದ ಪ್ರಮುಖರು, ಕಲಾಭಿಮಾನಿಗಳು ಸೇರಿದ್ದ ಮೆರವಣಿಗೆ ನಯನ ಮನೋಹರವೇನಿಸಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕುವೆಂಪು ರಂಗಮಂದಿರದಲ್ಲಿ ದುರ್ಗಾ ಪರಮೇಶ್ವರಿ ಮಕ್ಕಳ ಮೇಳದಿಂದ ಇಂದ್ರಜಿತು ಕಾಳಗ ಯಕ್ಷಗಾನ ಮತ್ತು ನೀಲಕೋಡು ಶಂಕರ ಹೆಗಡೆ ಮತ್ತು ತಂಡದವರಿಂದ “ಕೃಷ್ಣಾರ್ಜುನ” ಪ್ರಸಂಗ ಪ್ರದರ್ಶಿತವಾಯಿತು. ಪ್ರಪ್ರಥಮ ಬಾರಿಗೆ ಸಿಹಿಮೊಗೆಯಲ್ಲಿ ಅದ್ಧೂರಿ ಹಾಗೂ ವರ್ಣರಂಜಿತವಾಗಿ ನಡೆದ ಈ ಸಮಾರಂಭ ಕಲಾಭಿಮಾನಿಗಳ ಹೃದಯ ಪೂರ್ವಕ ಮೆಚ್ಚಿಗೆಗೆ ಪಾತ್ರವಾಯಿತು.
ಅಕಾಡೆಮಿಯ ಸದಸ್ಯ ಲಕ್ಷ್ಮೀನಾರಾಯಣ ಕಾಶಿ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಟಾಕಪ್ಪ, ಕನ್ನಡ ಮತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾ ವೆಂ. ನಾಯಕ್ ಉಪಸ್ಥಿತರಿದ್ದರು.
ಲವಲವಿಕೆ ತುಂಬಿದ ಲಕ್ಷ್ಮೀ ನಾರಾಯಣ ಕಾಶಿ
ಶಿವಮೊಗ್ಗದ ಕುವೆಂಪು ರಂಗಮಂದಿರವು ಕಲೆ ಸಂಸ್ಕೃತಿಗಳ ಕೇಂದ್ರ.. ಎಲ್ಲರೂ ಗಮನಿಸಿದ ಹಾಗೆ ಕಾರ್ಯಕ್ರಮಗಳು ವಿಭಿನ್ನ. ಒಂದೊಂದೂ ಮನದಣಿಯೆ ಸವಿಯುವಂಥವು. ಇಲ್ಲಿಯ ಪ್ರೋಗ್ರಾಮ್ ಕಂಟೆಂಟ್ ಗಿಂತ ಮತ್ತೊಂದು ಸಹ ಆಕರ್ಷಣೆಯೆಂದರೆ ರಂಗಮಂದಿರದ ಹೇಮಾಂಗಣ ವೇದಿಕೆಯ ಒಳಾಂಗಣದ ಸಿಂಗಾರ ವೈಭವ.
ಕಾರ್ಯಕ್ರಮದಿಂದ ಕಾರ್ಯಕ್ರಮಕ್ಕೆ ಚಿತ್ತಾಕರ್ಷಕ ಮತ್ತು ಹೊಸ ಮೆರುಗು ಒಂದು ಸೋದಾಹರಣೆ, ಈ ವರ್ಷದ ಯಕ್ಷಗಾನ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ. ಪ್ರೇಕ್ಷಕರ ಮನಸೂರೆಗೊಂಡ ಸಿಂಗಾರದ ವೇದಿಕೆ. ಸರಳವಾಗಬಹುದಿತ್ತು ಅಂತ ಅನಿಸಬಹುದು. ಆದರೆ ರಾಜ್ಯಮಟ್ಟದ ಕಾರ್ಯಕ್ರಮ ಕಲಾವಿದ ಅತಿಥಿಗಳ ಮನಸ್ಸಿನಲ್ಲಿ ಸವಿನೆನಪಾಗಿ ಉಳಿಯಬೇಕಲ್ಲವೆ?
ಈ ತರ್ಕ ತಲೆಯೊಳಗೆ ಹೊಕ್ಕಿದ್ದೆ ತಡ ಕಾಶಿ ಸುಮ್ಮನೆ ಕೂರಲಿಲ್ಲ. 4-5 ದಿನ ಮುಂಚಿತ ಸ್ಕೆಚ್ ಹಾಕಲಾರಂಭಿಸಿದರು. ಏನಿಲ್ಲವೆಂದರೂ ಸುಮಾರು ಮೂವತ್ತಕ್ಕೂ ಮೀರಿ ಅತಿಥಿಗಳು!. ಅಷ್ಟು ಆಸನಗಳು. ಹಿನ್ನೆಲೆಯಲ್ಲಿ ಪರದೆಗಳು. ಅವು ಖಾಲಿ ಖಾಲಿಯಾಗಿ ಪ್ರೇಕ್ಷಕರ ಕಣ್ಣಿಗೆ ಗೋಚರಿಸಬಾರದು.
ಅಕಾಡೆಮಿ ಸದಸ್ಯ ಲಕ್ಷ್ಮೀನಾರಾಯಣ ಕಾಶಿಯವರಿಗೆ ವೇದಿಕೆ ಸಜ್ಜು ಹೊಸದಲ್ಲ. ಕುಟುಂಬ ಯೀಜನಾಸಂಘ, ಕೌಶಲ್ಯ ತರಬೇತಿ ಕೇಂದ್ರಗಳಲ್ಲಿ ನಿರ್ದೇಶಕರಾಗಿದ್ದರು. ಅಭ್ಯುದಯ ಸಂಸ್ಥೆ ಮೂಲಕ ಮೂವತ್ತು ವರ್ಷಗಳಿಂದ ಯಕ್ಷಗಾನ ಪ್ರಸಂಗಗಳನ್ನ, ವಿಚಾರ ಸಂಕಿರಣಗಳನ್ನು ಸಂಘಟಿಸಿದ ಅನುಭವಿ. ಈ ಬಾರಿಯ ಕಾರ್ಯಕ್ರಮ ಭಿನ್ನ ಹಾಗೂ ಮನಸೆಳೆಯುವಂತಿರಬೇಕೆಂಬ ಹಂಬಲ ಹೊತ್ತಿದ್ದರು.
ವೇದಿಕೆಯನ್ನು ಮೂರು ಭಾಗ ಮಾಡಿದರು. ಪ್ರೇಕ್ಷಕರ ಎಡಕ್ಕೆ ಮತ್ತು ಬಲಕ್ಕೆ ಹನ್ನೆರಡು ಆಸನಗಳು. ನಡುವೆ ಗಣ್ಯಾತಿಗಣ್ಯರಿಗೆ ಎಂಟು ಆಸನಗಳು. ಪರದೆಗಳ ಭಾಗವನ್ನೂ ಹೀಗೆ ಮೂರು ಭಾಗ ವಿಂಗಡಿಸಿದರು. ಪ್ರೇಕ್ಷಕರ ಎಡಕ್ಕೆ ಮತ್ತು ಬಲಕ್ಕೆ ಯಕ್ಷಗಾನದ ಎರಡು ಪ್ರಬೇಧ ತೆಂಕು ತಿಟ್ಟು ಮತ್ತು ಬಡಗು ತಿಟ್ಟು ಸಂಕೇತಿಸುವ ಕಿರೀಟಗಳು. ಈ ಕಲ್ಪನೆಯನ್ನು ವೇದಿಕೆ ಸಜ್ಜುಗಾರ ಮಹೇಶ್ ಅವರ ತಲೆಗೆತುಂಬುವಲ್ಲಿ ಕಾಶಿಯವರ ಪಟ್ಟ ಪ್ರಯತ್ನ ಅಷ್ಟಿಷ್ಟಲ್ಲ. ಎರಡೂ ಕಿರೀಟಗಳ ದೊಡ್ಡ ಫೋಟೊ ತರಿಸಿ, ರೇಖೆಯಲ್ಲಿ ತೋರಿಸಿದರು. ಮತ್ತೆ ಅಕ್ಷರಗಳ ಅಕಾರ, ದಪ್ಪ, ಶೈಲಿ ಇವುಗಳೂ ಸಿದ್ದವಾದವು. ಅವಕ್ಕೆ ಬೀರಬೇಕಾದ ಎಲ್‌ಇಡಿ ಬೆಳಕಿನ ವ್ಯವಸ್ಥೆ, ಎಲ್ಲವೂ ಪಕ್ಕಾ ಪ್ಲಾನ್.
ನಂತರ ಮಹೇಶ್ ಅವರ ಮನಸ್ಸಿನಲ್ಲಿ ಇದ್ದದ್ದು ರಂಗದ ನಡುವಿನ ಪರದೆಯಲ್ಲಿ ಎಲ್‌ಇಡಿ ಪರದೆಯನ್ನು ಇರಿಸುವುದಾಗಿತ್ತು. ಪ್ರೇಕ್ಷಕರ ಗಮನವೆಲ್ಲ ಪರದೆಯತ್ತ ಸಿಲುಕುತ್ತದೆ. ಹಾಗಾಗುವುದು ಬೇಡ. ರಂಗದ ಸೈಡ್ ವಿಂಗ್’ಗಳಲ್ಲಿ ಬೆಳಕಿನ ಪರದೆ ಹಾಕಲು ಸೂಚಿಸಿದರು.
ಸರಿ ಇಷ್ಟು ವೇದಿಕೆಯ ಬಗ್ಗೆಯಾದರೆ ಲಕ್ಷ್ಮೀನಾರಾಯಣ ಕಾಶಿ ಅವರ ಮನಸ್ಸಿನಲ್ಲಿದ್ದ ಮತ್ತೊಂದು ಚಿಂತೆ ಕಾರ್ಯಕ್ರಮದ ಬಗ್ಗೆ. ಪೂರ್ವಭಾವಿಯಾಗಿ ಒಂದು ತಿಂಗಳ ಮುಂಚೆ ಸ್ಥಳೀಯ ಯಕ್ಷಗಾನ ಸಂಘಟನೆ ಮತ್ತು ಕಲಾಭಿಮಾನಿಗಳ ಸಭೆ ಆಯೋಜಿಸಿದರು. ಇಡೀ ಕಾರ್ಯಕ್ರಮ ರೂಪುರೇಖೆಗಳ ಕುರಿತು ಎಲ್ಲರ ಅಭಿಪ್ರಾಯ ಕ್ರೋಢೀಕರಿಸಿದರು. ನವನವೀನ ಆಲೋಚನೆಗಳನ್ನು ನೀಡಿದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡರು. ಸಾಮಾಜಿಕ ಜಾಲತಾಣವನ್ನು ಸಮರ್ಥ ಉಪಯೋಗಿಸಿದರು. ಶಿವಮೊಗ್ಗವೇ ಅಲ್ಲದೆ ಜಿಲ್ಲೆಯ ನಾನಾಕಡೆಗಳ ಆಸಕ್ತರೊಂದಿಗೆ ಸಂಪಕಿಸಿ ಪ್ರಶಸ್ತಿ ಪ್ರದಾನ ಸಮಾರಂಭದ ಬಗ್ಗೆ ಸೂಕ್ತ ಮಾಹಿತಿ ಹರಡಿದರು. ಕಾರ್ಯಕ್ರಮಕ್ಕೆ ಕ್ಷಣಗಣನೆಯಾಗುತ್ತಿತ್ತು.
ಜಿಲ್ಲಾಧಿಕಾರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರೊಂದಿಗೆ ಸಮಾಲೋಚಿಸಿದರು. ಜಿಲ್ಲಾಧಿಕಾರಿಗಳಾದ ಕೆ.ಎ. ದಯಾನಂದ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾ ವೆಂ. ನಾಯಕ್ ಹಾಗೂ ಅಕಾಡೆಮಿ ಅಧ್ಯಕ್ಷ ಎಂ.ಎ. ಹೆಗ್ಡೆ ಅವರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು. ಮಾದ್ಯಮದವರು ವ್ಯಾಪಕ ಪ್ರಚಾರ ನೀಡಿದರು. ಕಾರ್ಯಕ್ರಮದ ದಿನ ಕಲಾವಿದರ ಮೆರವಣಿಗೆ ಆಯೋಜನೆ ಮುಂದಿನ ಕೆಲಸ.
ಮತ್ತೆ ನಗರದ ಹಾಗೂ ಜಿಲ್ಲೆಯ ನಾನಾಭಾಗಗಳ ಗೆಳೆಯರು. ಸಂಘಟಕರು, ಕಲಾಭಿಮಾನಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಸಹಕಾರ ಕೋರಿದರು. ಅವರ ಒಕ್ಕಣಿಕೆಯಲ್ಲಿ ಕಾಳಜಿ ತುಂಬಿ ಓದಿದವರ ಮನಮಿಡಿಯುವಂತಿತ್ತು. ಅಷ್ಟು ಆಪ್ತವಾದ ಶೈಲಿ ಅವರದಾಗಿತ್ತು. ಮೆರವಣಿಗೆಯ ದಿನ ಬೆಳಿಗ್ಗೆಯೇ ಕಲಾಸಂಘಟನೆಗಳಿಗೆ, ಯಕ್ಷಗಾನ ಕಲಾಪ್ರಿಯರಿಗೆ ಅವರು ಮಾಡಿದ ಫೋನುಕರೆಗಳಿಗೆ ಲೆಕ್ಕವಿಲ್ಲ. ಫೆಬ್ರವರಿ ಇಪ್ಪತ್ಮೂರರ ಅಪರಾಹ್ನ ನಾಲ್ಕುಘಂಟೆಗೆ ಮಂದಿ ಘೇರಾಯಿಸಿದರು. ನೋಡು ನೋಡುತ್ತಿದಂತೆ ಗೋಪಿ ವೃತ್ತ ತುಂಬಿಕೊಂಡಿತು. ಅದಕ್ಕೆ ಸರಿಯಾಗಿ ಸಂಸ್ಕೃತಿ ಇಲಾಖೆಯ ಪ್ರಾಯೋಜಿತ ಕಲಾಮೇಳವರೂ ಬಂದರು. ಮೆರವಣಿಗೆ ವರ್ಣರಂಜಿತವಾಗಿ ಮಾರ್ಪಟ್ಟಿತು.
ಸಂಘಟಕ ಲಕ್ಷ್ಮೀನಾರಾಯಣ ಕಾಶಿ ಅವರ ಗೆಳೆಯರ ಆಪ್ತರ ವಲಯಕ್ಕೆ ಗಡಿಯಿಲ್ಲ. ಅವರು ಕೇವಲ ಕರೆ ಮಾಡಿರೆ ಸಾಕು ಮಿತ್ರವೃಂದ ನಿಗದಿತ ಕಾರ್ಯವನ್ನು ಸಂಪೂರ್ಣ ಸಫಲಗೊಳಿಸುತ್ತದೆ ಎನ್ನುವುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ.
ಇನ್ನು ಕಾರ್ಯಕ್ರಮದ ಬಗ್ಗೆ ಹೆಚ್ಚು ಬರೆಯಲೇಬೇಕಿಲ್ಲ….. ಯಶಸ್ವಿಯಾಗಿ ಕೊನೆಗೊಂಡಿತು. ಸಿಹಿಮೊಗೆಯ ಕಲಾಪ್ರಿಯg ಮನದಲ್ಲಿ ಬಹುಕಾಲ ನಿಲ್ಲಬಲ್ಲ ನೆನಪಾಯಿತು.
(ವರದಿ: ಡಾ.ಸುಧೀಂದ್ರ)
Discussion about this post