ಶಿವಮೊಗ್ಗ: ಲೋಕಸಭೆ ಚುನಾವಣೆ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಇಂದಿನಿಂದಲೇ ಜಾರಿಯಾಗಿದ್ದು, ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಎಚ್ಚರಿಕೆ ನೀಡಿದ್ದಾರೆ.
ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನೀತಿ ಸಂಹಿತೆ ಅನ್ವಯ ಹೊಸದಾಗಿ ಯಾವುದೇ ಕಾಮಗಾರಿಗಳ ಉದ್ಘಾಟನೆ ಅಥವಾ ಶಂಕುಸ್ಥಾಪನೆ ಮಾಡುವಂತಿಲ್ಲ. ಯಾವುದೇ ಯೋಜನೆಗಳ ಫಲಾನುಭವಿಗಳ ಆಯ್ಕೆ ಅಥವಾ ಸೌಲಭ್ಯಗಳ ವಿತರಣೆ ಮಾಡುವಂತಿಲ್ಲ. ಎಲ್ಲಾ ರಾಜಕೀಯ ಜಾಹೀರಾತು ಫಲಕಗಳನ್ನು 24ಗಂಟೆಗಳ ಒಳಗಾಗಿ ತೆರವುಗೊಳಿಸಬೇಕು. ನೀತಿ ಸಂಹಿತೆಯನ್ನು ಉಲ್ಲಂಘಿಸುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಸಹ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಮತದಾರರು: ಜಿಲ್ಲೆಯಲ್ಲಿ ಈ ವರ್ಷದ ಜನವರಿ 1ಕ್ಕೆ ಅನ್ವಯಿಸಿ ಒಟ್ಟು 16,47,527 ಮತದಾರರು ಇದ್ದಾರೆ. ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದ 10ದಿನಗಳ ಒಳಗಾಗಿ ಹೊಸದಾಗಿ ಮತದಾರರು ತಮ್ಮ ಹೆಸರು ನೋಂದಣಿಗೆ ಅವಕಾಶವಿದೆ. ಜಿಲ್ಲೆಯಲ್ಲಿ 2593 ಬ್ಯಾಲೆಟ್ ಯುನಿಟ್‍ಗಳು ಹಾಗೂ 2059 ಕಂಟ್ರೋಲ್ ಯುನಿಟ್ ಹಾಗೂ 2369 ವಿವಿಪ್ಯಾಟ್ ಲಭ್ಯವಿದೆ ಎಂದು ಹೇಳಿದರು.
ಚುನಾವಣೆಗೆ ಸಿದ್ಧತೆ: ಚುನಾವಣೆಯನ್ನು ಪಾರದರ್ಶಕವಾಗಿ ಹಾಗೂ ಶಾಂತಿಯುತವಾಗಿ ನಡೆಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಚುನಾವಣಾ ಅಕ್ರಮಗಳ ಮೇಲೆ ನಿಗಾ ಇರಿಸಲು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 3 ಫ್ಲೈಯಿಂಗ್ ಸ್ಕ್ವಾಡ್, ಜಿಲ್ಲೆಯ ಗಡಿ ಭಾಗಗಳಲ್ಲಿ ಒಟ್ಟು 27 ಸ್ಟಾಟಿಕ್ ಸರ್ವೇಲೆನ್ಸ್ ತಂಡ (ಎಸ್‍ಎಸ್‍ಟಿ)ಗಳನ್ನು ರಚಿಸಲಾಗಿದೆ. ಚೆಕ್‍ಪೋಸ್ಟ್‍ಗಳಲ್ಲಿ ನೆರಳಿನ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸೂಚನೆ ನೀಡಲಾಗಿದೆ. ಚುನಾವಣಾ ಅಕ್ರಮ ಎಸಗುವವರ ವಿರುದ್ಧ ನಿಷ್ಪಕ್ಷಪಾತವಾಗಿ ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದರು.
ಸಿ ವಿಜಿಲ್: ಈ ಬಾರಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ, ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ನೇರವಾಗಿ ದೂರನ್ನು ದಾಖಲಿಸಲು ಸಿ ವಿಜಿಲ್ ಎಂಬ ಆಪ್ ಸಿದ್ಧಪಡಿಸಲಾಗಿದೆ. ಗೂಗಲ್ ಪ್ಲೇಸ್ಟೋರ್‍ನಲ್ಲಿ ಇದನ್ನು ಡೌನ್‍ಲೋಡ್ ಮಾಡಿ, ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಛಾಯಾಚಿತ್ರ, ವಿಡಿಯೊ ಅಪ್‍ಲೊಡ್ ಮಾಡಬಹುದಾಗಿದೆ. ಇದರಲ್ಲಿ ದಾಖಲಾಗುವ ದೂರುಗಳನ್ನು 100ನಿಮಿಷಗಳ ಒಳಗಾಗಿ ಬಗೆಹರಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಇದೇ ರೀತಿ ಚುನಾವಣೆಗೆ ಸಂಬಂಧಿಸಿದ ಯಾವುದೆ ಅಹವಾಲು, ದೂರುಗಳನ್ನು ಸಲ್ಲಿಸಲು 24×7 ಕಂಟ್ರೋಲ್ ರೂಮ್ ತೆರೆಯಲಾಗಿದ್ದು, 1950 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಸಾರ್ವಜನಿಕರು ಅಹವಾಲು ದಾಖಲಿಸಬಹುದಾಗಿದೆ ಎಂದು ಹೇಳಿದರು.
ಪೊಲೀಸ್ ವರಿಷ್ಟಾಧಿಕಾರಿ ಅಶ್ವಿನಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವರಾಮೇಗೌಡ ಅವರು ಉಪಸ್ಥಿತರಿದ್ದರು.
Discussion about this post