ಶಿವಮೊಗ್ಗ: ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತ ಜೊತೆಗೆ, ಕಣ್ಣೀರು ಮುಕ್ತ ಕರ್ನಾಟಕವಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಕಟಕಿಯಾಡಿದರು.
ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತ ಆಗಬೇಕು, ಅದೇ ರೀತಿ ಕಣ್ಣೀರು ಮುಕ್ತ ಕರ್ನಾಟಕವಾಗಬೇಕು ಎಂದರು.
ಮಗನ ಮೊಮ್ಮಕ್ಕಳ ಭವಿಷ್ಯದ ಬಗ್ಗೆ ಕಣ್ಣೀರು ಸುರಿಸುವ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಜೆಡಿಎಸ್ ವರಿಷ್ಠರು, ರಾಜ್ಯದ ಅಭಿವೃದ್ಧಿಯನ್ನು ಮರೆತು ಬಿಟ್ಟಿದ್ದಾರೆ. ತಮ್ಮ ಸ್ವಾರ್ಥಕ್ಕೋಸ್ಕರ ಕಣ್ಣೀರನ್ನು ಜನರ ಮುಂದೆ ಸುರಿಸುತ್ತಾ ಜನರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದ್ದಾರೆ. ಇವರಿಗೆ ಕುಟುಂಬದ ಶ್ರೇಯಸ್ಸು ಮುಖ್ಯ ಹೊರತು. ರಾಜ್ಯದ ಜನರ ಶ್ರೇಯಸ್ಸು, ರಾಜ್ಯದ ಅಭಿವೃದ್ಧಿ ಮುಖ್ಯವಲ್ಲ. ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಅಪವಿತ್ರ ಮೈತ್ರಿಯಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದರು.
ಈ ಲೋಕಸಭಾ ಚುನಾವಣೆಯಲ್ಲಿ ಜನರು ಜೆಡಿಎಸ್ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಬೇಕು. ದೇಶದ ಅಭಿವೃದ್ಧಿಗೆ ದೇಶದ ಭದ್ರತೆಗೆ ಹಗಲು ಇರಳು ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಬೆಂಬಲಿಸಲು ಯುವಕರು ದೇಶದ ಜನರು ಮುಂದೆ ಬರಬೇಕು ಎಂದು ಕರೆ ನೀಡಿದರು.
ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್. ದತ್ತಾತ್ರಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿಳಿಕಿ ಕೃಷ್ಣಮೂರ್ತಿ, ಪ್ರಮುಖರಾದ ರಾಜಶೇಖರ್, ಪಾಲಿಕೆ ಸದಸ್ಯೆ ಅನಿತಾ ಶಂಕರ್, ಜಿಲ್ಲಾ ಕಾರ್ಯದರ್ಶಿ ಬಿ.ಆರ್. ಮಧುಸೂದನ್, ಮಾಧ್ಯಮ ಪ್ರಮುಖರಾದ ಪಿ. ರತ್ನಾಕರ ಶೆಣೈ, ಅಣ್ಣಪ್ಪ, ಹಿರಣ್ಣಯ್ಯ, ಬಿಜೆಪಿ ಪದಾಧಿಕಾರಿಗಳು ಪಕ್ಷದ ಪ್ರಮುಖರು ಸೇರಿದಂತೆ ಇನ್ನಿತರರು ಹಾಜರಿದ್ದರು.
Discussion about this post