ಬೆಂಗಳೂರು: ವರ್ಷದಿಂದ ವರ್ಷಕ್ಕೆ ಮತದಾನ ಪ್ರಮಾಣವನ್ನು ಹೆಚ್ಚಳ ಮಾಡಲು ಆಯೋಗ ಹಾಗೂ ಕೆಲವು ಖಾಸಗಿ ಸಂಸ್ಥೆಗಳು ಒಂದಿಲ್ಲೊಂದು ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತವೆ.
ಇಂತಹುದ್ದೇ ಪ್ರಯತ್ನವೊಂದಕ್ಕೆ ಕೈ ಹಾಕಿರುವ ಖಾಸಗಿ ಶಾಲೆಗಳ ಒಕ್ಕೂಟ, ಷೋಷಕರು ತಪ್ಪದೇ ಮತದಾನ ಮಾಡಿದರೆ ಅವರ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಈ ಬಾರಿಯ ಪರೀಕ್ಷೆಯಲ್ಲಿ ಹೆಚ್ಚುವರಿಯಾಗಿ ಅಂಕ ನೀಡುವುದಾಗಿ ಪ್ರಕಟಿಸಿದೆ.
ಈ ಕುರಿತಂತೆ ಎಂದು ಖಾಸಗಿ ಶಾಲೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮಾತನಾಡಿದ್ದು, ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಳ ಮಾಡುವುದಕ್ಕಾಗಿ ತಂದೆ, ತಾಯಿ ಇಬ್ಬರೂ ಮತದಾನ ಮಾಡಿದರೆ ವಿದ್ಯಾರ್ಥಿಗೆ 4 ಅಂಕಗಳನ್ನು ನೀಡಲು ಖಾಸಗಿ ಶಾಲೆಗಳು ನಿರ್ಧರಿಸಿದೆ ಎಂದಿದ್ದಾರೆ.
ಚುನಾವಣೆ ನಡೆವ ಮೊದಲೇ ಪರೀಕ್ಷಾ ಫಲಿತಾಂಶಗಳು ಪ್ರಕಟವಾಗುವ ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಅಂಕಗಳು ಅನ್ವಯವಾಗಲಿವೆ ಎಂದಿದ್ದಾರೆ.
ಚುನಾವಣೆ ನಡೆಯುವ ಸಂದರ್ಭದಲ್ಲಿ ಬೇಸಿಗೆ ರಜೆ ಇರುವುದರಿಂದ ಪ್ರವಾಸ, ಊರಿಗೆ ಹೋಗುವುದು ಅಥವಾ ಇನ್ನಿತರ ಕೆಲಸಗಳ ನಿಮಿತ್ತ ಹೊರ ಊರುಗಳಿಗೆ ಹೋಗುವುದು ಸಾಮಾನ್ಯವಾಗಿರುತ್ತದೆ.
ಇದರಿಂದ ಮತದಾನ ಪ್ರಮಾಣ ಕುಸಿಯುತ್ತದೆ. ಇಂತಹ ಸಮಯದಲ್ಲಿಯೇ ಪೋಷಕರಲ್ಲಿ ಮತದಾನ ಜಾಗೃತಿ ಮೂಡಿಸಬೇಕು ಎಂಬ ಉದ್ದೇಶದಿಂದ ಅಂಕ ನೀಡುವ ನಿರ್ಣಯ ಕೈಗೊಳ್ಳಲಾಗಿದೆ ಎಂದವರು ತಿಳಿಸಿದ್ದಾರೆ.
ತಂದೆ ಮತ್ತು ತಾಯಿಗೆ ತಲಾ ಎರಡು ಅಂಕಗಳಂತೆ ವಿದ್ಯಾರ್ಥಿ ಪಡೆದಿರುವ ಒಟ್ಟಾರೆ ಅಂಕಗಳಿಗೆ 4 ಅಂಕಗಳನ್ನು ಸೇರ್ಪಡೆ ಮಾಡಲಾಗುತ್ತದೆ. ಪೋಷಕರು ಮತದಾನ ಮಾಡಿರುವುದನ್ನು ಖುದ್ದಾಗಿ ಸಂಬಂಧಪಟ್ಟ ಶಾಲೆಗಳಿಗೆ ತೆರಳಿ ತಿಳಿಸಬಹುದು. ಅಂದು ಖಾಸಗಿ ಶಾಲೆಗಳು ಕೂಡ ತೆರೆದಿರುತ್ತವೆ ಅಥವಾ ಈಗಾಗಲೇ ತಮ್ಮ ಮಕ್ಕಳು ವಿವಿಧ ತರಗತಿಗಳ ಪರೀಕ್ಷೆ ಬರೆದಿದ್ದರೂ, ಫಲಿತಾಂಶ ಪ್ರಕಟವಾಗದಿದ್ದರೆ ಫಲಿತಾಂಶಕ್ಕೂ ಮುನ್ನ ಅಥವಾ ಪ್ರಕಟವಾಗಿದ್ದರೆ ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಅಂಕ ಪಡೆಯಬಹುದಾಗಿದೆ ಎಂದಿದ್ದಾರೆ.
ಅಲ್ಲದೇ, ಅಂಕಗಳನ್ನು ನೀಡುವುದು ಮಾತ್ರವಲ್ಲ, ಮತದಾನದ ಬಳಿಕ ಶಾಲೆಗೆ ಬಂದು ತಿಳಿಸಿದರೆ ಅವರ ಹೆಸರನ್ನು ಲಕ್ಕಿ ಡ್ರಾ ಬಹುಮಾನಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದವರು ಮಾಹಿತಿ ನೀಡಿದ್ದಾರೆ.
Discussion about this post