ಬಾಳ ಬದುಕಿನ ಯಾತ್ರೆಯಲಿ ಪ್ರತಿಯೊಬ್ಬರಿಗೂ ಭುವಿಯಲಿ ಅವತರಿಸಲು ಕಾರಣಲಾದವಳು ತಾಯಿ. ಬದುಕಿನ ಅದೆಷ್ಟೋ ನೋವ ಸಹಿಸಿಕೊಂಡು, ತನ್ನ ಕರುಳಕುಡಿಯ ಸುಖಕ್ಕಾಗಿ ಹಪಹಪಿಸಲು ತಾಯಿ ಒಂದಿಷ್ಟು ತನಗಾಗಿ ನೋಡಿಕೊಳ್ಳದೇ ಕರುಳಕುಡಿಗಾಗಿ ತನ್ನ ಇಹ-ಪರ ಲೆಕ್ಕಿಸದೇ ಪ್ರೀತಿಯಿಂದ ಸಲಹುವಳು.
ತಾಯಿ, ಅವ್ವ, ಅಜ್ಜಿ, ಅಮ್ಮ, ಜನನಿ ಎಂದೆಲ್ಲಾ ಹೆತ್ತವಳನ್ನು ಕರೆಯುತ್ತೇವೆ. ಇವು ಬರೀ ನುಡಿಯಲ್ಲ, ಅದೊಂದು ದಿವ್ಯ ಮಂತ್ರ. ಮಂತ್ರಕ್ಕೆ ಎಷ್ಟು ಪೂಜನೀಯ ಭಾವನೆಯಿಂದ ಕಾಣುತ್ತೇವೆಯೋ ಅಷ್ಟೇ ಪೂಜ್ಯತೆ ಆ ಶಬ್ದಕ್ಕಿದೆ ಅಲ್ಲವೇ? ಆದ್ದರಿಂದ ಇದನ್ನು ಶಬ್ದ ಎನ್ನುವುದಕ್ಕಿಂತಲೂ ಮಂತ್ರ ಎಂದೇ ಕರೆಯುವುದು ಸೂಕ್ತ. ಒಬ್ಬ ವ್ಯಕ್ತಿ ಎಷ್ಟೇ ಎತ್ತರದ ಪದವಿ, ಗೌರವ, ಪ್ರಶಸ್ತಿಗೆ ಪಾತ್ರನಾದರೂ ಅವನು ತಾಯಿಗೆ ಮಗನೇ. ತಾಯಿಗಿಂತ ಶ್ರೇಷ್ಠ ಭುವಿಯಲಿ ಯಾರೂ ಇಲ್ಲ.
‘ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ’ ಎಂಬ ಉಕ್ತಿಯ ಸಾಲುಗಳೇ ತಿಳಿಸುತ್ತದೆ ಆಕೆ ಎಷ್ಟು ಶ್ರೇಷ್ಠಳೆಂದು. ತಂದೆಗಿಂತ ತಾಯಿಗೆ ಕರುಳಕುಡಿಗಳ ಮೇಲೆ ಪ್ರೀತಿ ಜಾಸ್ತಿ. ತಾಯಿ ಜೀವಂತ ಇರುವಾಗಲೇ ಕ್ರೂರಿಗಳಂತೆ ಕ್ರೂರ ದೃಷ್ಠಿಯಿಂದ ತುಚ್ಛವಾಗಿ ಕಾಣುವ ಮಕ್ಕಳು ಇಂದಿನ ಆಧುನಿಕ ಜಗತ್ತಿನಲ್ಲಿ ಹೆಚ್ಚಾಗುತ್ತಿದ್ದಾರೆ.
ತಾಯಿ ಬದುಕಿರುವಾಗ ಸ್ವಲ್ಪವೂ ಗಮನಿಸದವರು ತಾಯಿ ಸಾವನ್ನಪ್ಪಿದಾಗ ಅದ್ದೂರಿಯಾಗಿ ಶವಸಂಸ್ಕಾರ, ತಿಥಿ ಮಾಡುವರು ಢಂಭಾಚಾರಕ್ಕೆ ಲೋಕದ ದೃಷ್ಠಿ ತಮ್ಮತ್ತ ಸೆಳೆದು ತಾಯಿಯ ಮೇಲೆ ಎಷ್ಟು ಮಮತೆ ಇದೆ ಎಂದು ಈ ರೀತಿ ತೋರ್ಪಡಿಕೆ ಜನಗಳ ಸಂಖ್ಯೆ ಹೆಚ್ಚುತ್ತಿದೆ. ನಮಗಾಗಿ ಬದುಕನ್ನು ಸವೆಸಿದ ಮಹಾ ಕರುಣಾಳುವಿಗೆ ನಾವೆಷ್ಟು ಕೃತಜ್ಞರು ಎಂಬುದನ್ನು ಒಂದೊಮ್ಮೆ ಮನಸ್ಸನ್ನು ಪ್ರಶ್ನಿಸಬೇಕಾಗುತ್ತದೆ.
ಇದ್ದಾಗ ಅವರ ಹೆಗಲಿಗೆ ಹೆಗಲಾಗದೇ, ಸುಖ ಸಂತೋಷದಿಂದ ನೋಡಿಕೊಳ್ಳದಿರುವುದು ಪ್ರಸ್ತುತ ದಿನಮಾನದಲ್ಲಿ ಕಾಣುತ್ತಿದೆ. ತಾಯಿ ಭುವಿಯ ಮೇಲಿನ ದೇವರು. ಜಗತ್ತಿನಲ್ಲಿ ಮನುಷ್ಯ ಏನನ್ನು ಬೇಕಾದರೂ ಪಡೆದುಕೊಳ್ಳಬಹುದು. ಆದರೆ, ತಾಯಿ ಮತ್ತೆ ಸಿಗದ ಮಾಣಿಕ್ಯ. ಭುವಿಯಲಿ ಜನಿಸಿದ ಪ್ರತಿ ಮಗುವಿನ ಮೊದಲ ಕೂಗೇ ಅಮ್ಮ.
ಜಗತ್ತಿನಲ್ಲಿ ಕೆಟ್ಟ ತಂದೆ ಇರಬಹುದು. ಆದರೆ, ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎಂಬ ಮಾತಿದೆ. ಮಕ್ಕಳು ಎಲ್ಲೇ ಇದ್ದರೂ ಅವರಿಗೇನಾದರೂ ಕಷ್ಟ, ನೋವುಗಳಾದರೆ ಮೊದಲು ಅರಿವಾಗುವುದು ತಾಯಿ ಕರುಳಿಗೇ ಅಲ್ಲವೇ? ಇದಕ್ಕೆ ತಾನೇ ಹೇಳುವುದು ‘ಕಣ್ಣರಿಯದಿರ್ದ್ದೊಡೆ ಕರುಕರಿಯದೇ’ ಎಂಬ ಮಾತನ್ನು ಬಲ್ಲವರು ನುಡಿದಿಹುದು.
ತಾಯಿಗಾಗಿ ರಾವಣ ಆತ್ಮಲಿಂಗವನ್ನು ತರಲು ತಪ್ಪಸ್ಸುಗೈದು ಆತ್ಮಲಿಂಗ ಪಡೆದ. ಶ್ರವಣಕುಮಾರ ತಂದೆ-ತಾಯಿಯರನ್ನು ಹೊತ್ತು ನಡೆದ, ಪುಂಡಲೀಕ ತಂದೆ ತಾಯಿಯರ ಸೇವೆಯಲ್ಲಿದ್ದಾಗ ವಿಠ್ಠಲ ಪ್ರತ್ಯಕ್ಷನಾಗಿ ವರ ಕೇಳು ಎಂದರೂ ಮೊದಲು ಪಾಲಕರ ಸೇವೆ ಆಮೇಲೆ ನಿನ್ನ ಜೊತೆ ಮಾತನಾಡುತ್ತೇನೆ ಎಂದು ದೇವರನ್ನೇ ನಿಲ್ಲಿಸಿದ.
ಒಮ್ಮೆ ಶಂಕರಾಚಾರ್ಯರು ತಾಯಿಗಾಗಿ ನದಿಯನ್ನೇ ಮನೆ ಮುಂದೆ ತರಿಸಿದರಂತೆ. ಈ ಎಲ್ಲರನ್ನೂ ನಾವೆಲ್ಲರೂ ಆದರ್ಶವಾಗಿಟ್ಟುಕೊಳ್ಳಬೇಕಲ್ಲವೇ? ಪ್ರತಿ ಹೆಜ್ಜೆಗೂ ತಾಯಿ ಕಾರಣಳಾಗಿರುವಾಗ ಈ ಮಹಾತಾಯಿಗೆ ನಾವೇನು ಕೊಡುಗೆ ನೀಡಿದ್ದೇವೆ?
ತಾಯಿ ಸದಾ ನೋವನುಂಡು ಮಕ್ಕಳ ಹಿತ ಬಯಸುವಳು. ಹೀಗಾಗಿ, ಮಮತಾಮಹಿ ಜನನಿ ಪೂಜನೀಯಳು. ಮನೆಯೇ ದೇವಾಲಯ, ತಾಯಿಯೇ ದೇವರಂತೆ ಕಾಣಬೇಕು. ಮುಪ್ಪಿನಲ್ಲಿದ್ದಾಗ ಅವಳ ಸೇವೆ ದೇವರ ಸೇವೆ ಎಂದು ಭಾವಿಸಿ ಸೇವೆ ಮಾಡುತ್ತಾ ಅವಳ ಋಣ ತೀರಿಸಬೇಕು. ನಮ್ಮ ಬೇಕು ಬೇಡಿಕೆಗಳಿಗೆ ಸ್ಪಂಧಿಸಿ ನಮ್ಮ ಬೆಳವಣಿಗೆಯ ವಿವಿಧ ಹಂತಗಳಲ್ಲಿ ದಾರಿ ತೋರುವಲ್ಲಿ ತನ್ನನ್ನೇ ಮರೆತಿರುತ್ತಾಳೆ.
ತಾಯಿಗಿಂತ ಬಂಧುವಿಲ್ಲ. ಕಷ್ಟಕಾಲದಲ್ಲಿ ಅಸಹಾಯಕ ಸ್ಥಿತಿಯಲ್ಲಿ ನೋವು, ನಿರಾಸೆ ಸಂದರ್ಭದಲ್ಲಿ ತಾಯಿ ಹೇಳುವಷ್ಟು ಸಾಂತ್ವಾನದ ಮಾತುಗಳು ಮತ್ತಾರೂ ಹೇಳುವುದಿಲ್ಲ. ಚಿಕ್ಕಂದಿನಲ್ಲಿ ತಾಯಿ ಮೊದಲ ಗುರುವಾಗಿ ನಮಗೆ ಅಕ್ಷರಾಭ್ಯಾಸ, ನುಡಿ, ಮನೆ ಸದಸ್ಯರ, ಸಂಬಂಧಿಕರ, ನೆರೆಹೊರೆಯವರ ಸಂಬಂಧದ ಬಗ್ಗೆ ಒಳ್ಳೆಯದರ-ಕೆಟ್ಟದರ ಬಗ್ಗೆ ತಿಳಿಸುವ ತಾಯಿ ಮೊದಲ ಗುರುವಾಗಿ ನಿಲ್ಲುತ್ತಾಳೆ.
ದೈನಂದಿನ ದಿನದ ಎಡರುತೊಡರುಗಳಿಗೆ ಸಮಸ್ಯೆಗಳನ್ನು ಮೆಟ್ಟಿನಿಲ್ಲುವ ಸಾಮರ್ಥ್ಯ ನೀಡುತ್ತಾಳೆ. ದೈಹಿಕ-ಬೌದ್ಧಿಕ ಬೆಳವಣಿಗೆ ವಿಕಾಸಕ್ಕೆ ಹಗಲಿರುಳು ಶ್ರಮಿಸುವಳು. ಭವಿಷ್ಯದ ರೂವಾರಿ ತಾಯಿಯೇ ಆಗಿರುತ್ತಾಳೆ. ಜಗತ್ತಿನಲ್ಲಿ ನಾವು ಬೇಕಾದ ವಸ್ತು ಪಡೆಯಬಹುದು. ಆದರೆ, ತಾಯಿಯನ್ನು ಪಡೆಯಲು ಎಂದಿಗೂ ಸಾಧ್ಯವಿಲ್ಲ ಮತ್ತು ತಾಯಿಯ ಸ್ಥಾನವನ್ನು ಯಾರೂ ತುಂಬಿಕೊಡಲಾರರು.
ತಾಯಿ ಬಾಲ್ಯದಿಂದ ಮಕ್ಕಳು ದೊಡ್ಡವರಾಗುವವರೆಗೂ ತನಗೆ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಮಗುವನ್ನು ಮಾತ್ರ ಜೋಪಾನ ಮಾಡುವಳು. ಓರ್ವ ಭಿಕ್ಷುಕಿ ಕೂಡಾ ತನ್ನ ಜೀವನದ ಹಂಗು ತೊರೆದು ತನ್ನ ಮಗುವನ್ನು ರಕ್ಷಿಸುವವಳೇ. ಮಕ್ಕಳು ಬೆಳೆದು ದೊಡ್ಡವರಾಗಿ ಎಷ್ಟೇ ಗೌರವ ಪದವಿ ಪ್ರತಿಷ್ಠಿತ ಸ್ಥಾನ ಪಡೆದಾಗ ಮೊದಲು ಹರ್ಷವಾಗುವುದು ತಾಯಿಗೆ. ಮಕ್ಕಳು ಎಷ್ಟೇ ಕಟುಕ, ತಿರಸ್ಕಾರದಿಂದ ನೋಡಿದರೂ ತಾಯಿ ಕರುಳು ಸದಾ ಮಕ್ಕಳ ಶ್ರೇಯಸ್ಸನ್ನೇ ಬಯಸುವುದು.
ನಾವು ಎಷ್ಟೇ ಹಣವಂತರಿರಲಿ, ಗಣ್ಯವ್ಯಕ್ತಿಗಳೇ ಆಗಿರಲಿ, ಮೊದಲು ಸಂಸ್ಕಾರ ಮುಖ್ಯ. ಸಂಸ್ಕಾರದ ತುತ್ತನ್ನು ನಮ್ಮ ಕಿರಿಯ ಪೀಳಿಗೆಗೆ ನೀಡಬೇಕಿದೆ ಹಾಗೂ ಗುರು ಹಿರಿಯರ ಬಗ್ಗೆ ಸಂಸ್ಕಾರದ ಪಾಠ ಹೇಳಬೇಕಿದೆ. ಏಕೆಂದರೆ ಪ್ರಸ್ತುತ ಆಧುನಿಕ ಸೋಗಿನಲ್ಲಿ ಮಕ್ಕಳು ಸ್ವಾರ್ಥಿಗಳಾಗಿ ತಮ್ಮ ತಂದೆ-ತಾಯಿ ಹೊರೆ ಎಂಬಂತೆ ಭಾವಿಸುತ್ತಿದ್ದಾರೆ. ನಮಗಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟ ಮಹಾಕರುಣಾಳುಗೆ ಅವಳ ಋಣ ಎಷ್ಟು ಸೇವೆ ಮಾಡಿದರೂ ತೀರಿಸಲಾಗದು. ವೃದ್ಧಾಶ್ರಮಗಳು ಇಂದು ನಾಯಿ ಕೊಡೆಗಳಂತೆ ಏಳುತ್ತಿರುವುದು ವಿಪರ್ಯಾಸವೆಂದೇ ಹೇಳಬಹುದು. ವೃದ್ಧಾಶ್ರಮಗಳಿಗೆ ಇವರನ್ನು ತಳ್ಳುತ್ತಿರುವವರ ಸಂಖ್ಯೆ ಇಂದು ನಗರ ಪ್ರದೇಶಗಳಲ್ಲಿ ಹೆಚ್ಚಾಗುತ್ತಿದೆ.
ಸಮಾಜದಲ್ಲಿ ಮಕ್ಕಳು ತಂದೆ-ತಾಯಿಯನ್ನು ಪ್ರೀತಿಯಿಂದ ಕಂಡಿದ್ದರೆ ವೃದ್ಧಾಶ್ರಮಗಳ ಅಗತ್ಯವೇ ಇರುತ್ತಿರಲಿಲ್ಲ. ಪಾಶ್ಚಾತ್ಯೀಕರಣದ ಅನುಕರಣೆಯಿಂದಾಗಿ ಇಂದು ಮನುಷ್ಯತ್ವ ಕಳೆದುಕೊಳ್ಳುತ್ತಿದ್ದಾನೆ. ತಾಯಿ ಎಂಬ ಎರಡಕ್ಷರದಲ್ಲಿ ಅಪಾರ ಶಕ್ತಿಯಿದೆ. ತಾಯಿ ಎದೆ ಹಾಲು ಕುಡಿದು ಬೆಳೆದ ಮಕ್ಕಳು ಅವಳಿಗೇ ವಿಷ ಉಣಿಸುತ್ತಿರುವುದು ಹೇಯವೆನಿಸುತ್ತಿದೆ. ಈ ರೀತಿಯ ಭಾವನೆ ತಪ್ಪಿ ನಮ್ಮೆಲ್ಲರ ತಾಯಂದಿರು ನಮಗಾಗಿ ಜೀವನ ಮುಡುಪಿಟ್ಟ ಅವರಿಗೆ ಅವರ ಸೇವೆ ಮಾಡುವುದು ಸೂಕ್ತವಲ್ಲವೇ?


















