ಶಿವಮೊಗ್ಗ: ಮೂಲ ಬಳ್ಳಾರಿ. ಆದರೆ, ಈಗ ಮಲೆನಾಡಿಗರೇ ಆಗಿಹೋಗಿದ್ದರೂ, ರಾಜ್ಯ ನಾಯಕರಾಗಿ ಬೆಳೆದು, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡು, ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಶಂಸೆ ಪಡೆದ ನಾಯಕ ಶ್ರೀ ಕೆ.ಎಸ್. ಈಶ್ವರಪ್ಪ.
ಹೌದು… ದಣಿವರಿಯದ ಈ ಜನಾನುರಾಗಿ ನಾಯಕನಗೀಗ ಮತ್ತೆ ಮಂತ್ರಿಗಿರಿ ಒಳಿದುಬಂದಿದೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪಥನಗೊಂಡ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಸಚಿವ ಸಂಪುಟ ಇಂದು ವಿಸ್ತರಣೆಯಾಗಿದ್ದು, ಕೆ.ಎಸ್. ಈಶ್ವರಪ್ಪ ಸಂಪುಟ ಸಚಿವರಾಗಿ ಪದಗ್ರಹಣ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಜನಮಾನಸದಲ್ಲಿ ನಿಂತಿರುವ ಈ ನಾಯಕನ ಕುರಿತಾಗಿ ಒಂದಷ್ಟು ಮಾಹಿತಿ ನಿಮ್ಮೊಂದಿಗೆ.
1948ರ ಜುಲೈ 10ರಂದು ಬಳ್ಳಾರಿಯಲ್ಲಿ ಜನಿಸಿದ ಈಶ್ವರಪ್ಪ, ಮಹಾದಾರ್ಶನಿಕ ಕನಕದಾಸರನ್ನು ಜಗತ್ತಿಗೆ ಕೊಟ್ಟ, ಕ್ಷಾತ್ರಧರ್ಮದ ಅಧ್ವರ್ಯು ಸಂಗೊಳ್ಳಿ ರಾಯಣ್ಣನ ನೀಡಿದ ಕುರುಬ ಸಮುದಾಯಕ್ಕೆ ಸೇರಿದವರು.
ಈಶ್ವರಪ್ಪ ತಂದೆ ಶರಣಪ್ಪ ಶಿವಮೊಗ್ಗಕ್ಕೆ ಉದ್ಯೋಗ ಅರಸಿ, ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗಕ್ಕೆ ಬಂದರು. ಆಗ ಇವರ ಮನೆಯಲ್ಲಿದ್ದ ಕಷ್ಟದ ದಿನಗಳು ಈಶ್ವರಪ್ಪ ಅವರನ್ನು ವಿದ್ಯಾಭ್ಯಾಸ ತ್ಯಜಿಸಿ, ಕೆಲಸಕ್ಕೆ ಹೋಗಲು ಪ್ರೇರೇಪಿಸಿತು. ಆದರೆ, ಇದನ್ನು ವಿರೋಧಿಸಿದ್ದ ಅವರ ತಾಯಿ, ವಿದ್ಯಾರ್ಜನೆಯತ್ತ ಅವರನ್ನು ಕೇಂದ್ರೀಕರಿಸುತ್ತಾರೆ.
ಆನಂತರ, ಇವರ ಸಹಪಾಠಿ ಡಿ.ಎಂ. ರವೀಂದ್ರ – ಆನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ್ಯ ಪ್ರಚಾರಕ್ ಆದರು- ನರಸಿಂಹಮೂರ್ತಿ ಅಯ್ಯಂಗಾರ್ – ಶಿವಮೊಗ್ಗದ ವಿಶ್ವಹಿಂದೂ ಪರಿಷತ್‌ನಲ್ಲಿ ಖ್ಯಾತನಾಮರು- ಇವರ ಸಕ್ತಿಯಿಂದ ಈಶ್ವರಪ್ಪ ಆರ್’ಎಸ್,ಎಸ್ ಕಡೆಗೆ ನಡೆದು ಬಂದರು. ಇದು ಅವರ ಸಾರ್ವಜನಿಕ ಜೀವನಕ್ಕೆ ದೊಡ್ಡ ನಾಂದಿ ಒದಗಿಸಿತು.
ಆರಂಭದಿಂದಲೂ ಆರ್’ಎಸ್’ಎಸ್ ಕಾರ್ಯಕರ್ತರಾಗಿದ್ದರು. ಛತ್ರಪತಿ ಶಾಖೆಯಲ್ಲಿ ನಿತ್ಯ ಅಭ್ಯಾಸಿಗರಾಗಿದ್ದರು. ಇದಕ್ಕೆ ಆರಂಭದಲ್ಲಿ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಇವರ ತಂದೆ ಆಗ ಪ್ರಾಬಲ್ಯವಿದ್ದ ಕಾಂಗ್ರೆಸ್ ಕಡೆ ಒಲವಿದ್ದವರಾಗಿದ್ದರು, ಆದರೆ, ಈಶ್ವರಪ್ಪ ಅವರ ಸಹೋದರ ಚಂದ್ರಪ್ಪ ಒತ್ತಾಸೆ ಮೇರೆಗೆ ಆರ್‌ಎಸ್‌ಎಸ್‌ನಲ್ಲಿ ಮುಂದುವರೆದರು. ಒಂದು ಹಂತದಲ್ಲಿ ರಾಷ್ಟ್ರೀಯ ಚಿಂತನೆಗೆ ಮನಸೋತು ಮನೆತೊರೆದು ಬಂದು, ಶಿವಮೊಗ್ಗ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಅಂದಿನ ಅರ್ಚಕರ ಆರೈಕೆಯಲ್ಲಿದ್ದರು. ಆನಂತರ ಆರ್’ಎಸ್’ಎಸ್’ನಲ್ಲಿದ್ದ ಜಾತ್ಯತೀತತೆ, ರಾಷ್ಟ್ರೀಯ ಚಿಂತನೆಯನ್ನು ಈಶ್ವರಪ್ಪ ಅವರ ತಂದೆ ಒಪ್ಪಿಕೊಂಡು ಅವರಿಗೆ ಆರ್’ಎಸ್’ಎಸ್’ಗೆ ಹೋಗಲು ಅನುಮತಿ ನೀಡಿದರು.
ಈಶ್ವರಪ್ಪ ಶಿವಮೊಗ್ಗದ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ಯ ಸಕ್ರಿಯ ಸದಸ್ಯರಾಗಿದ್ದರು. ಆನಂತರ, ವಿದ್ಯಾಭ್ಯಾಸ ಪೂರ್ಣಗೊಳಿಸಿ, ಸ್ವಂತ ಉದ್ಯಮಕ್ಕೆ ಕೈಹಾಕಿದರು. ಅದೇ ವೇಳೆಗೆ ರಾಜಕೀಯ ಪಕ್ಷವಾಗಿ ಅತ್ಯಂತ ಸಕ್ರಿಯವಾಗಿದ್ದ ಭಾರತೀಯ ಜನಸಂಘದಲ್ಲಿ ತೊಡಗಿಸಿಕೊಂಡರು.
ಅದು 1975- 77. ಆಗ ದೇಶದಲ್ಲಿ ಇಂದಿರಾಗಾಂಧಿ ತುರ್ತುಪರಿಸ್ಥಿತಿ ಹೇರಿದ್ದರು. ಇದರ ವಿರುದ್ಧ ಧ್ವನಿ ಎತ್ತಿದ ಪ್ರಮುಖ ಶಿವಮೊಗ್ಗದ ಜನಸಂಘದ ಪ್ರಮುಖರಲ್ಲಿ ಈಶ್ವರಪ್ಪ ಸಹಾ ಒಬ್ಬರು. ಆಗ ಇವರನ್ನು ಬಂಧಿಸಿದ ಸರ್ಕಾರ, ಬಳ್ಳಾರಿ ಜೈಲಿಗೆ ಹೋಗಿ ಬಂದರು. ತುರಂಗವಾಸದ ನಂತರ ತುರ್ತುಪರಿಸ್ಥಿತಿ ಹಿಂಪಡೆದ ನಂತರ ರಾಜಕೀಯ ಇನ್ನಷ್ಟು ಸಕ್ರಿಯವಾದರು.
ಭಾರತೀಯ ಜನಸಂಘ ಆನಂತರ ಭಾರತೀಯ ಜನತಾ ಪಕ್ಷವಾಗಿ ಬದಲಾಯಿತು. ಇದರಲ್ಲಿ ಬೇರೇ ಬೇರೆ ಜವಾಬ್ದಾರಿಗಳನ್ನು ನಿರ್ವಹಿಸಿದರು. 1982ರಲ್ಲಿ ಶಿವಮೊಗ್ಗ ಬಿಜೆಪಿಯ ಜಿಲ್ಲಾಧ್ಯಕ್ಷರಾದರು.
ಶಿವಮೊಗ್ಗ ನಗರದಿಂದ ಬಿಜೆಪಿಯ ಪ್ರಥಮ ಶಾಸಕರಾಗಿ ಆಯ್ಕೆಯಾದವರು ಎಂ. ಆನಂದರಾವ್. ಇವರ ಈ ಮಹತ್ವದ ಗೆಲವಿನ ಹಿಂದೆ ಈಶ್ವರಪ್ಪನವರ ಅಪಾರ ಪರಿಶ್ರಮವಿತ್ತು ಎಂದು ಇಂದಿಗೂ ಬಿಜೆಪಿಯ ಹಿರಿಯ ಕಾರ್ಯಕರ್ತರು ನೆನಪುಮಾಡಿಕೊಳ್ಳುತ್ತಾರೆ.
1989ರ ಹೊತ್ತಿಗೆ ಶಿವಮೊಗ್ಗ ನಗರದಾದ್ಯಂತ ಈಶ್ವರಪ್ಪ ಅವರ ಅಲೆ ಆವರಿಸಿಕೊಂಡಿತ್ತು. ಆಗ ನಡೆದ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಕಣಕ್ಕಿಳಿದಿದ್ದ ಈಶ್ವರಪ್ಪ ಅಮೋಘ ಗೆಲವು ಸಂಪಾದಿಸಿದರು. ಆ ಕಾಲದಲ್ಲಿ ಕಾಂಗ್ರೆಸ್‌ನಿಂದ ನಿಂತಿದ್ದ ಬೃಹತ್ ಕಟ್ಟಾಳು ಕೆ.ಎಚ್. ಶ್ರೀನಿವಾಸ್‌ರನ್ನು 1304 ಮತಗಳ ಅಂತರದಿಂದ ಸೋಲಿಸಿದ್ದರು. ಅಲ್ಲಿಂದ ಹಿಂದಿರುಗಿ ನೋಡದ ಈಶ್ವರಪ್ಪ ಸತತ ನಾಲ್ಕು ಚುನಾವಣೆಗಳಲ್ಲಿ ಗೆಲುವಿನ ನಗೆ ಬೀರಿದರು. ಆ ಮಟ್ಟಿಗೆ ನಗರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಿ ಜನಮಾನಸದಲ್ಲಿ ನೆಲೆಸಿದರು.
1992ರಲ್ಲಿ ಭಾರತೀಯ ಜನತಾಪಕ್ಷದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದರು. ಇವರ ಅವಧಿಯಲ್ಲಿ ಅಂದರೆ, 1994ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸಿದರು. ಹೀಗಾಗಿ ಪಕ್ಷ ಗೌರವಯುತ ಸ್ಥಾನಗಳನ್ನು ಗಳಿಸಿ, ವಿರೋಚಿತವಾಗಿ ಪ್ರತಿಪಕ್ಷಗಳ ಸಾಲಿನಲ್ಲಿ ಕುಳಿತು ಆಡಳಿತವನ್ನು ಕಿವಿಹಿಂಡಿ ಸರಿದಾರಿಗೆ ತಂದಿತು.
2000ನೆಯ ಇಸವಿಯಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಯಾಯಿತು. ಆಗ ಇವರು ಕೇಂದ್ರೀಯ ರೇಷ್ಮೆ ಮಂಡಳಿ ಅಧ್ಯಕ್ಷರಾಗಿ ನೇಮಕವಾದರು.
2006-07ರಲ್ಲಿ ಕರ್ನಾಟಕದಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಯಿತು. ಆಗ ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಆಗ ಈಶ್ವರಪ್ಪ ದೂರದೃಷ್ಟಿ ಹಾಗೂ ಚಿಂತನೆಗೆ ಅನುಗುಣವಾಗಿ ಜಲಸಂಪನ್ಮೂಲ ಸಚಿವ ಸ್ಥಾನ ಅರಸಿಬಂತು.
ಆಗ ದೊರಕಿದ ಸದಾವಕಾಶ ಬಳಸಿಕೊಂಡ ಈಶ್ವರಪ್ಪ ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆ ತಂದರು. ಜಲಸಂಪನ್ಮೂಲವನ್ನು ನಿಜವಾಗಿಯೂ ರಾಜ್ಯದ ಸಂಪನ್ಮೂಲವಾಗಿಸಲು ಅವಿರತ ಶ್ರಮಿಸಿದರು. ಪ್ರಮುಖ ನೀರಾವರಿ ಯೋಜನೆಗಳಿಗೆ ಕಾಯಕಲ್ಪ ನೀಡಿದರು.
2008ರಲ್ಲಿ ಮೈತ್ರಿ ಸರ್ಕಾರ ವಿಸರ್ಜನೆಯಾಯಿತು.
ಆನಂತರ ಬಿಜೆಪಿ ಪ್ರಚಂಡ ಐತಿಹಾಸಿಕ ವಿಜಯ ಸಾಧಿಸಿ, ಸರ್ಕಾರ ರಚಿಸಿತು. ಇದರಲ್ಲಿಯೂ ಈಶ್ವರಪ್ಪ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಹಗಲು ರಾತ್ರಿ ಶ್ರಮಿಸಿದರು. ಕಾಲಿಗೆ ಚಕ್ರಕಟ್ಟಿಕೊಂಡವರಂತೆ ರಾಜ್ಯದಾದ್ಯಂತ ತಿರುಗಿದರು. ಆಗ ಇವರು ಇಂಧನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಅಲ್ಲೂ ಸಹಾ ಇಲಾಖೆ ಕಾರ್ಯಗಳಿಗೆ ಚುರುಕುಮುಟ್ಟಿಸಿದರು. ಅಲ್ಲೂ ಸಹಾ ತಮ್ಮ ಕ್ರಿಯಾಶೀಲ ಚಟುವಟಿಕೆಗಳಿಂದ ಈಶ್ವರಪ್ಪ ಛಾಪು ಒತ್ತಿದರು. ಈಗಲೂ ಇಂಧನ ಇಲಾಖೆ ಸಿಬ್ಬಂದಿ ಅವರನ್ನು ಅತ್ಯಂತ ಪ್ರೀತಿ ಹಾಗೂ ಗೌರವದಿಂದ ಕಾಣುತ್ತಾರೆ.
2010ರಲ್ಲಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ ಇವರು, ಮತ್ತೆ ಪಕ್ಷ ಸಂಘಟನೆಯಲ್ಲಿ ತೊಡಗಿಸಕೊಂಡರು. ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಆನಂತರ 2012ರಲ್ಲಿ ಡಿ.ವಿ. ಸದಾನಂದಗೌಡ ಮುಖ್ಯಮಂತ್ರಿಯಾದರು. ಆಗ ಈಶ್ವರಪ್ಪ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಅದರ ಜೊತೆಯಲ್ಲಿಯೇ ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾಗಿ ದೊಡ್ಡ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು.
2014ರಲ್ಲಿ ರಾಜ್ಯ ವಿಧಾನಪರಿಷತ್ ನಾಮನಿರ್ದೇಶಿತ ಸದಸ್ಯರಾಗಿ, ಪ್ರತಿಪಕ್ಷ ನಾಯಕರಾಗಿ ಸರ್ಕಾರದ ಅಂಕಡೊಂಕುಗಳನ್ನು ಯಶಸ್ವಿಯಾಗಿದ್ದರು.
ಆನಂತರ 2018ರ ಚುನಾವಣೆಯಲ್ಲಿ ಭಾರೀ ಬಹುಮತದಿಂದ ಮತ್ತೆ ವಿಧಾನಸಭೆ ಪ್ರವೇಶಿಸಿದರು.
ಈಗ, ಸಮ್ಮಿಶ್ರ ಸರ್ಕಾರ ಪಥನಗೊಂಡು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರದಲ್ಲಿ ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
Discussion about this post