ಬಳ್ಳಾರಿಯ ಸಮರ್ಥ ಸೇನಾನಿ, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜನಸೇವಕ, ಬಿಜೆಪಿಯ ಪಕ್ಷ ನಿಷ್ಠ, ಜನಾನುರಾಗಿ ಜನಸೇವಕ ಶ್ರೀರಾಮುಲು.
ಸಾಮಾನ್ಯ ಕುಟುಂಬದಲ್ಲಿ ಜನಿಸಿ, ಕಷ್ಟದ ಹಾದಿಯಲ್ಲಿ ಬೆಳೆದುಬಂದು, ತಮ್ಮ ಶ್ರಮದಿಂದಲೇ ಉನ್ನತಿಗೇರಿ ಶಾಸಕರಾಗಿಯೇ ಜನಮಾನಸದಲ್ಲಿ ನೆಲೆಸಿರುವ ಈ ನಾಯಕನಿಗೆ ಈಗ ಮತ್ತೆ ಮಂತ್ರಿ ಪದವಿ ಒಲಿದುಬಂದಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಶ್ರೀರಾಮುಲು ಅವರ ಸಾಧನೆಯ ಹಾದಿ:
ರೈಲ್ವೆ ಉದ್ಯೋಗಿ ಬಿ. ತಿಮ್ಮಪ್ಪ ಹಾಗೂ ಗೃಹಿಣಿ ಬಿ. ಹೊನ್ನೂರಮ್ಮ ದಂಪತಿಗಳಿಗೆ 1971ರ ಆಗಸ್ಟ್ 8ರಂದು ಏಳನೆಯ ಪುತ್ರರಾಗಿ ಜನಿಸಿದ ಬಿ. ಶ್ರೀರಾಮುಲು ಅವರಿಗೆ ನಾಲ್ವರು ಸಹೋದರರು ಹಾಗೂ ನಾಲ್ವರು ಸಹೋದರಿಯರು.
ಕಷ್ಟದ ಜೀವನದ ಹಾದಿಯನ್ನೇ ಸವೆಸಿದ ಶ್ರೀರಾಮುಲು ಪದವಿ ಹಂತದಿಂದಲೇ ಜನಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು.
1999ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಸುಷ್ಮಾ ಸ್ವರಾಜ್ ಅವರ ಸ್ಪರ್ಧಿಸಿದ್ದ ಸಮಯ. ಅದು ಇಡಿಯ ದೇಶದ ಗಮನ ಸೆಳೆದ ಚುನಾವಣೆ. ಇಂತಹ ಸಂದರ್ಭದಲ್ಲಿ ಸುಷ್ಮಾ ಸ್ವರಾಜ್ ಅವರಿಗೆ ಪ್ರಮುಖ ಸಹಾಯಕರಾಗಿ ಸೇವೆ ಸಲ್ಲಿಸಿದ ಶ್ರೀರಾಮುಲು ಅಲ್ಲಿಂದ ರಾಜಕೀಯದ ಮುಖ್ಯವಾಹಿನಿಗೆ ಬಂದರು.
ತದನಂತರ ಜನತೆಯ ಒತ್ತಾಯದ ಮೇರೆಗೆ 1999ರಲ್ಲೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರೂ, ಸೋಲನ್ನಪ್ಪಬೇಕಾಯಿತು. ಹೀಗಾಗಿ, ಅ ವರ್ಷದ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಯ ಶ್ರೀರಾಮುಲು ಅವರ ರಾಜಕೀಯ ಜೀವನದ ಬಹುದೊಡ್ಡ ಪಾಠವಾಯಿತು.
ಆದರೆ ಛಲಬಿಡದ ತ್ರಿವಿಕ್ರಮನಂತೆ ಮತ್ತೆ 2004ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ರಾಮುಲು ಅವರು, ಕಾಂಗ್ರೆಸ್’ನ ಎಂ. ದಿವಾಕರ ಬಾಬು ಅವರನ್ನು ಸೋಲಿಸಿ ವಿಧಾನಸಭೆಗೆ ಆಯ್ಕೆಯಾಗಿ ಇತಿಹಾಸ ಬರೆದರು. ಅಲ್ಲಿಂದ 2008, 2011 ಹಾಗೂ 2013ರಲ್ಲಿ ನಡೆದ ಚುನಾವಣೆಯಗಳಲ್ಲಿ ಸತತವಾಗಿ ಗೆಲುವ ದಾಖಲಿಸುತ್ತಾ ಬಂದರು.
ಈ ನಡುವೆ ಶ್ರೀರಾಮುಲು ಅವರ ಆಪ್ತಮಿತ್ರ ಗಾಲಿ ಜನಾರ್ಧನ ರೆಡ್ಡಿ ಅವರ ವಿರುದ್ಧ ಗಣಿ ಆರೋಪ ಕೇಳಿಬಂದು, ಬಂಧನವಾದ ವೇಳೆ, ಶಾಸಕ ಸ್ಥಾನ ಹಾಗೂ ಬಿಜೆಪಿಗೆ ರಾಜೀನಾಮೆ ನೀಡುವ ಮೂಲಕ ಸ್ನೇಹಿತನ ಬೆಂಬಲಕ್ಕೆ ನಿಂತರು. ಆನಂತರ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಬಳ್ಳಾರಿಯಿಂದ ಜಯ ದಾಖಲಿಸಿದರು.
2018ರ ವಿಧಾನಸಭಾ ಚುನಾವಣೆಯಲ್ಲಿ ಮೊಳಕಾಲ್ಮೂರು ಹಾಗೂ ಬದಾಮಿಯಿಂದ ಸ್ಪರ್ಧಿಸಿ ಮೊಳಕಾಲ್ಮೂರು ಕ್ಷೇತ್ರದಿಂದ ಭರ್ಜರಿ ಜಯ ದಾಖಲಿಸಿದರು.
ಹಿಂದೆ, ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಅವರ ಸಂಪುಟ ಸಚಿವರಾಗಿದ್ದ ಶ್ರೀರಾಮುಲು ಆರೋಗ್ಯ ಹಾಗೂ ಪ್ರವಾಸೋದ್ಯಮ ಖಾತೆಯನ್ನು ಸಮರ್ಥವಾಗಿ ನಿರ್ವಹಿಸಿ, ಜನರಿಗೆ ಮತ್ತಷ್ಟು ಹತ್ತಿರವಾದರು.
ಪಕ್ಷದ ವಿಚಾರದಲ್ಲಿ ನೋಡುವುದಾದರೆ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಇವರ ಜನಪ್ರಿಯತೆ ಕೇವಲ ಬಳ್ಳಾರಿ ಭಾಗದಲ್ಲಿ ಮಾತ್ರವಲ್ಲ, ಇಡಿಯ ರಾಜ್ಯಕ್ಕೇ ಹಬ್ಬಿದೆ.
ಶ್ರೀರಾಮುಲು ರಾಜಕೀಯದಲ್ಲಿ ಅಧಿಕಾರಕ್ಕೇರಿದ ನಂತರ ಬಳ್ಳಾರಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಗಲಿರುಳು ಶ್ರಮಿಸಿದ ಕಾರಣ, ಇವರ ಅವಧಿ ಒಂದು ರೀತಿಯ ಸುವರ್ಣಯುಗದಂತಾಗಿದೆ. ಅತ್ಯಂತ ಪ್ರಮುಖವಾಗಿ, ಅಧಿಕಾರದಲ್ಲಿ ಇರಲಿ ಅಥವಾ ಇಲ್ಲದೇ ಇರಲಿ ನೊಂದು ಬಂದವರ, ದೀನ ದಲಿತರಿಗೆ ಸದಾ ಆಸರೆಯಾಗಿರುವ ಇವರು, ತಮ್ಮ ಮೃದುಹೃದಯದ, ಜನಪರ ಮನಃಸ್ಥಿತಿಯಿಂದಲೇ ಜನಮಾನಸದಲ್ಲಿ ನೆಲೆಯೂರಿದ್ದಾರೆ.
ಇಂತಹ ನಾಯಕನಿಗೆ ಈಗ ಬಿ.ಎಸ್. ಯಡಿಯೂರಪ್ಪ ಸಂಪುಟದಲ್ಲಿ ಮತ್ತೆ ಸಚಿವರಾಗಿ ಸೇವೆ ಸಲ್ಲಿಸುವ ಅವಕಾಶ ಒದಗಿಬಂದಿದೆ.
Discussion about this post