ತೀರ್ಥಹಳ್ಳಿ: ಹಿಂದೊಂದು ಕಾಲ ಇತ್ತು. ಹಳ್ಳಿಗಳಿಗೆ ಡಾಕ್ಟರ್ ಅನ್ನೋರು ಬರ್ತಿರಲಿಲ್ಲ. ಆದ್ರೆ ಈಗ ಹೊಸ ಕಾಲ ಬಂದಿದೆ. ಶಿಕ್ಷಕರೇ ಹಳ್ಳಿಗಳಿಗೆ ಬರ್ತಾ ಇಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ವಿಷಾದ ವ್ಯಕ್ತಪಡಿಸಿದರು.
ಶಿಲ್ಪಾ ಫೌಂಡೇಷನ್ ಹಾಗೂ ಇಂಡಿಯಾ ಲಿಟರಿಸಿ ಪ್ರಾಜೆಕ್ಟ್ ಇಲ್ಲಿನ ಡಾ.ಯು.ಆರ್.ಅನಂತಮೂರ್ತಿ ಪ್ರೌಢಶಾಲೆಯಲ್ಲಿ ಬಹು ಆಯಾಮ ಕಲಿಕೆ ಕಾರ್ಯಕ್ರಮದಲ್ಲಿ ಇಂದಿನ ಶಿಕ್ಷಕರ ಜವಾಬ್ದಾರಿಯನ್ನು ನೆನೆದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಒಳ್ಳೆಯ ಸಾಹಿತಿ, ಕಲಾವಿದರನ್ನು ಕೊಟ್ಟ ಮಲೆನಾಡಿಗೆ ಈ ರೀತಿ ಆಗಿರುವುದು ನಿಜಕ್ಕೂ ವಿಷಾದ. ಅದೆಷ್ಟೋ ಶಿಕ್ಷಕರು ವರ್ಗಾವಣೆಯಾಗಿದ್ದು, ಅವರು ಎ ವಲಯದಿಂದ ಸಿ ವಲಯಕ್ಕೆ ಬರಲ್ಲ. ಬಿ ವಲಯದಿಂದ ಸಿ ವಲಯಕ್ಕೂ ಬರಲ್ಲ. ಎಲ್ಲರೂ ನಗರ ಬೇಕು ಅಂದ್ರೆ ಹಳ್ಳಿಗಳಲ್ಲಿ ಪಾಠ ಮಾಡೋರು ಯಾರು..? ಹಳ್ಳಿ ಮಕ್ಕಳು ಯಾವಾಗ ಕಲಿಯೋದು..? ಎಲ್ಲ ಮಕ್ಕಳನ್ನು ಸಿಟಿಗೆ ಕಳಿಸೋಕೆ ಆಗುತ್ತಾ..? ಶಿಕ್ಷಕರು ಸಂಬಳ ತೆಗೆದುಕೊಂಡ್ರು ಯಾಕಿಷ್ಟು ಸಮಸ್ಯೆ ಆಗ್ತಿದೆ..? ಅದೆಷ್ಟೋ ಮಕ್ಕಳು ಗುಡ್ಡಗಾಡು ಪ್ರದೇಶಗಳಿಂದ ಬರ್ತಾರೆ. ಹೀಗಾಗಿ ತೀರ್ಥಹಳ್ಳಿಯನ್ನು ಶಿಕ್ಷಕರು ಗಣನೆಗೆ ತೆಗೆದುಕೊಳ್ಳಬೇಕು. ಅಚ್ಚುತ್ ಗೌಡರಂತವರು ಹಳ್ಳಿಯಲ್ಲೇ ಹುಟ್ಟಿ, ಬೆಳೆದು ಇಲ್ಲೇ ಶಿಕ್ಷಣ ಪಡೆದು, 500ಕ್ಕೂ ಹೆಚ್ಚು ಮಂದಿಗೆ ಕೆಲಸ ಕೊಟ್ಟಿದ್ದಾರೆ. ಫಿಡಿಲಿಟಸ್ ಕಾರ್ಪ್, ಶಿಲ್ಪಾ ಫೌಂಡೇಷನ್ ವತಿಯಿಂದ ಅವರು ಓದಿದ ಶಾಲೆಯಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಹೆಮ್ಮೆಯ ಸಂಗತಿ. ಇದು ಖುಷಿ ತಂದಿದೆ. ನಾವು ಕೂಡ ಸಹಕರಿಸುತ್ತೇವೆ. ಅವರು ಕೊಟ್ಟ ಪೀಠೊಪಕರಣಗಳನ್ನು ಕಾಪಾಡಿಕೊಳ್ಳಿ ಎಂದು ಹೇಳಿ ಶಾಸಕರು ಶಾಲೆಗಳಿಗೆ ಪೀಠೋಪಕರಣಗಳನ್ನು ವಿತರಿಸಿದರು.
ಸಾಫ್ಟೆಕ್ ಇಂಡಿಯಾ ನಿರ್ದೇಶಕ ರಾಘವ್ ಸುವರ್ಣ ಅವರು ಮಾತನಾಡಿ, ಗ್ರಾಮೀಣ ಭಾಗಗಳಿಗೆ ಕೊಡುಗೆ ನೀಡುತ್ತಿರುವ ಶಿಲ್ಪಾ ಫೌಂಡೇಷನ್ ಕಾರ್ಯ ನಿಜಕ್ಕೂ ಖುಷಿ ತಂದಿದೆ. ಅಗತ್ಯವಿರುವ ಶಾಲೆಗಳಿಗೆ ನಮ್ಮ ಕೊಡುಗೆಗಳು ತಲುಪಬೇಕಾಗಿದೆ. ಮಕ್ಕಳಿಗೆ ಶಿಕ್ಷಣದ ಜತೆಗೆ ಮಾರ್ಗದರ್ಶನವು ಬೇಕು. ಆ ಕೆಲಸವನ್ನು ಶಿಲ್ಪಾ ಫೌಂಡೇಷನ್ ಮಾಡುತ್ತಿದೆ. ಅಚ್ಚುತ್ ಹಾಗೂ ಪ್ರಮೋದ್ ಅವರಿಂದ ಈ ಕಾರ್ಯಕ್ರಮ ಯಶಸ್ವಿಯಾಗಿದ್ದು, ಇದು ಸಂತೋಷದ ವಿಚಾರ ಎಂದರು.
ಫಿಡಿಲಿಟಸ್ ಕಾರ್ಪ್ ಸಂಸ್ಥಾಪಕ ಅಚ್ಚುತ್ ಗೌಡ ಮಾತನಾಡಿ, ಇದು ನನಗೆ ಹೆಮ್ಮೆಯ ವಿಷಯ. ನಾನು ಓದಿದ ಶಾಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಿರುವುದು ಒಂದು ಉತ್ತಮ ಸಂದೇಶವಾಗಿದೆ. ಮಕ್ಕಳಿಗೆ ತಂತ್ರಜ್ಞಾನದ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ. ಇನ್ನು ಶಿಲ್ಪಾ ಫೌಂಡೇಷನ್ ಹಿಂದೆಯಂತೆ ಪ್ರತಿ ವರ್ಷ ಈ ಕಲಿಕೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ನಮ್ಮ ರಾಜ್ಯದ ಮಕ್ಕಳು ಶಿಕ್ಷಣದಿಂದ ಯಾರು ಕೂಡ ಅವಕಾಶ ವಂಚಿತರಾಗಬಾರದು. ಜ್ನಾನೇಂದ್ರ ಅಂತಹ ಶಾಸಕರಿಗೆ ಹಲವಾರು ಸಂಸ್ಥೆಗಳು ಈ ರೀತಿಯಲ್ಲಿ ಬೆಂಬಲ ನೀಡಬೇಕಾಗಿದೆ ಎಂದರು.
ತೀರ್ಥಹಳ್ಳಿಯ ಶಿಕ್ಷಣಾಧಿಕಾರಿ ಆನಂದ್ ಕುಮಾರ್ ಮಾತನಾಡಿ, ಇದೊಂದು ಪುಣ್ಯದ ಕೆಲಸ. ಹಲವಾರು ಶಿಕ್ಷಕರು ನಮ್ಮ ಬಳಿ ಬಂದು ಮಕ್ಕಳಿಗೆ ಅನುಕೂಲವಾಗುವಂತೆ ಆಯಾಮ ಕಲಿಕೆ ಬೇಡಿಕೆಯ ಮನವಿಯನ್ನು ಸಲ್ಲಿಸಲಾಗಿತ್ತು. ಆದ್ರೆ ಈಗ ನಮ್ಮ ಕನಸು ಈಡೇರಿದೆಯಂದು ತಿಳಿಯಬಹುದಾಗಿದೆ. ಈ ಬಹು ಆಯಾಮ ಕಲಿಕೆ ಪೀಠೋಪಕರಣಗಳನ್ನು ಎಲ್ಲ ಶಿಕ್ಷಕರು ಜಾಗೃತವಾಗಿ ಕಾಪಾಡಿಕೊಳ್ಳಬೇಕಾಗಿದೆ ಎಂದು ಶಿಕ್ಷಕರಿಗೆ ವಿಶೇಷವಾಗಿ ಸೂಚನೆ ನೀಡಿದರು.
ಇಂಡಿಯಾ ಲಿಟರಿಸಿ ಪ್ರಾಜೆಕ್ಟ್ ಪ್ರಾಯೋಜಕತ್ವ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ತೀರ್ಥಹಳ್ಳಿ ಸಹಯೋಗದಲ್ಲಿ ಶಿಲ್ಪಾ ಫೌಂಡೇಷನ್, ಸಾಫ್ಟೇಕ್ ಇಂಡಿಯಾ ಮತ್ತು ಫಿಡಿಲಿಟಸ್ ಕಾರ್ಪ್ ಸಹಕಾರದಿಂದ ಇಂದು ಆಯೋಜಿಸಲಾಗಿದ್ದ ಬಹು ಆಯಾಮ ಕಲಿಕಾ ಕೇಂದ್ರದ ಉದ್ಘಾಟನೆ ಯಶಸ್ವಿಗೊಂಡಿದೆ. ಬಡಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸುತ್ತಿರುವ ಲಾಭರಹಿತ ಸಂಸ್ಥೆ ಶಿಲ್ಪಾ ಫೌಂಡೇಷನ್ ವತಿಯಿಂದ, ಸರ್ಕಾರಿ ಶಾಲಾ ಮಕ್ಕಳಿಗೆ ಕಂಪ್ಯೂಟರ್, ತಾಂತ್ರಿಕ ಉಪಕರಣಗಳನ್ನು ವಿತರಿಸಲಾಯಿತು. 22 ಶಾಲೆಗಳ ಪೈಕಿ 7 ಪ್ರೌಢಶಾಲೆ, 15 ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ 16 ಲ್ಯಾಪ್‌ಟಾಪ್, 11 ಪ್ರೊಜೆಕ್ಟರ್, 11 ಸ್ರ್ಕೀನ್’ಗಳು, 21 ಡಿಜಿಟಲ್ ಉಪಕರಣ, 45 ಸೈನ್ಸ್ ಕಿಟ್, 22 ಲೈಬ್ರರಿ ಕಿಟ್, 7 ವೃತ್ತಿ ಮಾರ್ಗದರ್ಶಿ ಕಿಟ್’ಗಳನ್ನು ಕೊಡಲಾಯಿತು. ಶಾಲಾ ರಜೆ ದಿನದ ನಡುವೆಯೂ ಮಕ್ಕಳು ಕಾರ್ಯಕ್ರಮಕ್ಕೆ ಹಾಜರಾಗಿದ್ದು ವಿಶೇಷವಾಗಿತ್ತು. ಕಂಪನಿ ಗಳಿಕೆಯ 2ರಷ್ಟುನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವ ಕಾನೂನಿದೆ. ಅದನ್ನು ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಎನ್ನಲಾಗುತ್ತದೆ. ಇಂತಹ ಸಾಮಾಜಿಕ ಕಳಕಳಿ ಹೊಂದಿರುವ ಶಿಲ್ಪಾ ಫೌಂಡೇಷನ್ ಕಾರ್ಯಕ್ಕೆ ಶಿವಮೊಗ್ಗ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯ್ತಿ ಸದಸ್ಯ ಪ್ರಶಾಂತ್ ಕುಕ್ಕೆ, ಐಎಲ್‌ಪಿ ನಿರ್ದೇಶಕ ಪ್ರಮೋದ್, ಸಾಫ್ಟೆಕ್ ಇಂಡಿಯಾ ನಿರ್ದೇಶಕ ರಾಘವ ಸುವರ್ಣ, ಪ್ರಭಾರ ಉಪಪ್ರಾಂಶುಪಾಲ ಎಚ್.ಕೆ. ಚಿಕ್ಕಪ್ಪ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಮಾಹಿತಿ: ಅನಿರೀತ್
Discussion about this post