ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಅದು ಸುತ್ತಲೂ ಹಚ್ಚ ಹಸಿರಿನ ಬೆಟ್ಟಗುಡ್ಡಗಳ ನಡುವೆ ಸಂಪತ್ಬರಿತವಾಗಿ ಮೈದಳೆದು ನಿಂತಿರುವ ತೋಟಗಳಿಂದ ಆವೃತವಾಗಿರುವ ತಾಣ. ಮಲೆನಾಡಿನ ಸುಂದರ ಪ್ರಾಕೃತಿಕ ಸಂಪತ್ತನ್ನು ಹೊದ್ದುಕೊಂಡಿರುವ ಭೌಗೋಳಿಕ ಪ್ರದೇಶ. ಮಾತ್ರವಲ್ಲ ಆಧ್ಯಾತ್ಮಿಕತೆ ಹಾಗೂ ಧಾರ್ಮಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಪವಿತ್ರ ಕ್ಷೇತ್ರ. ಅದುವೇ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವರದಹಳ್ಳಿ.ಸಾಗರ ಸನಿಹದ ವರದಹಳ್ಳಿ ಆಧ್ಯಾತ್ಮಿಕರಿಗೆ ಮನಃಶಾಂತಿ ನೀಡುವ ಸಾತ್ವಿಕ ಕ್ಷೇತ್ರ. ಬಹಳ ಪ್ರವಾಸಿಗರು ವರದಹಳ್ಳಿಗೆ ಭೇಟಿ ನೀಡುತ್ತಾರೆ. ಆದರೆ ಶ್ರೀಧರ ಸ್ವಾಮಿಗಳ ಪೂರ್ವತಪೋಸ್ಥಾನವನ್ನು ನೋಡಲು ಮರೆಯುತ್ತಾರೆ. ವರದಹಳ್ಳಿಯಿಂದ ಒಂದು ಫರ್ಲಾಂಗು ದೂರದಲ್ಲೇ ಇದೆ. ಶ್ರೀರಾಮ ದುರ್ಗಾಂಬ ದೇವಸ್ಥಾನ.
ಸುಮಾರು 6000 ವರ್ಷಗಳ ಪೌರಾಣಿಕ ಹಿನ್ನೆಲೆಯುಳ್ಳ ಕ್ರೇತ್ರ ವರದಹಳ್ಳಿಯಲ್ಲಿರುವ ಶ್ರೀರಾಮ ದುರ್ಗಾಂಬ ದೇವಾಲಯ. ಇಲ್ಲಿ ವ್ಯಾಸರು ಪ್ರತಿಷ್ಠಾಪಿಸಿದ ಶ್ರೀದುರ್ಗಮ್ಮನವರ ದೇವಸ್ಥಾನವಿದೆ. ಅವರು ತಪಗೈದ ಗುಹೆಯೂ ಇದ್ದು, ವ್ಯಾಸಗುಹೆ ಎಂದು ಕರೆಯುವ ಜಾಗವಿದೆ ಎಂದು ಮಾತು ಆರಂಭಿಸಿದರು ದೇವಾಲಯ ಟ್ರಸ್ಟ್’ನ ಕಾರ್ಯದರ್ಶಿ ರಮಾನಂದ ಶರ್ಮಾ.ಒಂದು ಹೇಳಿಕೆ ಪ್ರಕಾರ ವ್ಯಾಸರಾಯರು ತಾವು ಸಂಚಾರದಲ್ಲಿದ್ದಾಗ ತಂಗಿರುವ ತಾಣಗಳಲ್ಲಿ ಮುಖ್ಯ್ರಪ್ರಾಣ ದೇವರನ್ನು ಪ್ರತಿಷ್ಠಾಪಿಸಿದ್ದಾರೆ ಎಂದರು.
ಇನ್ನು ಇಲ್ಲಿಯ ನಂಬಿಕೆ ಪ್ರಕಾರ ದುರ್ಗಾಂಬ ಸ್ಥಾಪನೆ ಒಂದು ವಿಶೇಷವೆಂದೇ ಹೇಳಬೇಕು. ಅವರು ತಪಗೈದ ಸ್ಥಳವೇ ವ್ಯಾಸಗುಹೆ ಎಂದು ಪ್ರಸಿದ್ಧಿ ಹೊಂದಿದೆ. ಗುಹೆಯನ್ನ ಈಗಲೂ ವೀಕ್ಷಿಸಬಹುದು.
ಮಹಿಷಾಸುರನನ್ನು ವಧೆಗೈದ ಸ್ಥಳವೆಂದು ಪ್ರತೀತಿ. ಆರಂಭದಲ್ಲಿ ವಧಹಳ್ಳಿ.. ವಧಹಳ್ಳಿ.. ಎಂದು ಹೆಸರಿತ್ತು. ನಂತರ ಶ್ರೀಧರ ಸ್ವಾಮಿಗಳು ಇಲ್ಲಿ ಸುಮಾರು ಹತ್ತು ವರ್ಷ ನೆಲಸಿದರಂತೆ. ಆಗ ಪಾಳು ಬಿದ್ದ ಸಣ್ಣ ಕಲ್ಲಿನ ಕುಟೀರವಾಗಿತ್ತು ಗರ್ಭಗುಡಿ.
ಶ್ರೀದುರ್ಗೆಯನ್ನು ಅರ್ಚಿಸಿ ತಮ್ಮ ತಪೋಬಲದಿಂದ ಅಲ್ಲಿ ದೈವಸಾನ್ನಿಧ್ಯವನ್ನು ಸದಾ ಇರುವಂತೆ ಮಾಡಿದರಂತೆ. ನಂತರ ಅವರ ಕೊನೆಯ ಕಾಲಕ್ಕೆ ಹತ್ತಿರದ ಗುಡ್ಡದಲ್ಲಿ ನೆಲಸಿದರಂತೆ. ಅಲ್ಲಿಯೇ ಸಮಾಧಿಯೂ ಆದರಂತೆ. ಆಮೇಲೆ ಆಶ್ರಮ ಸ್ವರೂಪ ಪಡೆಯಿತು. ನಂತರ ವರದಹಳ್ಳಿ ಆಯಿತು ಎಂದು ಭಕ್ತರಾದ ಮಂಕಾಳೆ ಶ್ರೀಧರ ಹೆಗ್ಡೆ ಅವರು ಮಾಹಿತಿ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾಗೆ ಮಾಹಿತಿ ನೀಡಿದರು.
ಶ್ರೀದುರ್ಗೆಯು ಮಹಿಷಾಸುರನನ್ನು ವಧಿಸುವಾಗ ಬಾಗಿದಳು. ಹೀಗಾಗಿ ಭಾಗಿದ ಭಂಗಿಯಲ್ಲಿದೆ ಈ ವಿಗ್ರಹ.ಇನ್ನು ವ್ಯಾಸರು ತಪಸ್ಸು ಮಾಡಿದರೆಂಬ ಪ್ರತೀತಿಯಿರುವ ವ್ಯಾಸಗುಹೆಯೂ ಸಹ ಇಲ್ಲಿದ್ದು, ಸನಿಹದಲ್ಲೇ ಶ್ರೀರಾಮ ದೇವಸ್ಥಾನವಿದೆ. ಅಲ್ಲಿ ಶ್ರೀಧರ ಸ್ವಾಮಿಗಳು ಪೂಜೆ ಮಾಡಿದರೆಂದು ಹೇಳುತ್ತಾರೆ.
ಅತ್ಯಂತ ಸುಂದರ ಅಂಬಾ ತೀರ್ಥವು ದುರ್ಗಾಂಬ ದೇವಾಲಯದ ಪಕ್ಕದಲ್ಲೇ ಇದ್ದು, ಅದನ್ನು ಜೀರ್ಣೋದ್ಧಾರಗೊಳಿಸಿ ತಿಳಿ ನೀರಿನ ಸರೋವರವನ್ನಾಗಿ ಮಾಡಲಾಗಿದೆ.ಇನ್ನು ಪೂಜೆಯ ವಿಚಾರದಲ್ಲಿ ನೋಡುವುದಾದರೆ, ದೇವಿಗೆ ನವರಾತ್ರಿಯಲ್ಲಿ ಒಂಭತ್ತೂ ದಿವಸ ವಿಶೇಷ ಪೂಜೆ ಅಲಂಕಾರ ಮಾಡಲಾಗುತ್ತದೆ. ಫಾಲ್ಗುಣ ಮಾಸದಲ್ಲಿ ವಾರ್ಷಿಕೋತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದೇವಾಲಯದ ಆವರಣದಲ್ಲೇ ತುಳಸಿಕಟ್ಟೆಯಿದ್ದು, ಅದರ ಜೊತೆಗೆ ಅಸ್ತ್ರರಾಜ ಎಂದು ಕರೆಯುವ ಶಿಲೆಯಿದೆ. ಸಾಮಾನ್ಯವಾಗಿ ಆವರಣದಲ್ಲಿ ಕ್ಷೇತ್ರಪಾಲನ ವಿಗ್ರಹವಿರುತ್ತದೆ. ಇಲ್ಲಿ ದಕ್ಷಿಣ ದಿಕ್ಕಿಗೆ ಇರಲು ಕ್ಷೇತ್ರಪಾಲ ಒಪ್ಪಲಿಲ್ಲವಂತೆ. ಹಾಗಂತ ಬೇರೆಯೇ ಶಿಲೆಯನ್ನು ಅಸ್ತ್ರರಾಜನೆಂದು ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡುತ್ತಾರೆ ರಮಾನಂದ ಶರ್ಮಾ ಅವರು.
ಇನ್ನು, ಇಲ್ಲಿ ನೆಲೆಸಿರುವ ದೇವಿಯ ಶಕ್ತಿ ಅಪಾರವಾಗಿದ್ದು, ಬೇಡಿದ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ತಾಯಿ ಕಳೆದ ಸಾವಿರಾರು ಉದಾಹರಣೆಗಳಿವೆ. ಅಲ್ಲದೇ, ಶ್ರೀಕ್ಷೇತ್ರದಲ್ಲಿ ವಿಶೇಷ ಪೂಜೆ ಹಾಗೂ ಹೋಮಗಳನ್ನು ಅತ್ಯಂತ ಶಾಸ್ತ್ರೋಕ್ತವಾಗಿ ನಡೆಸುವ ಪದ್ದತಿ ಇಲ್ಲಿದ್ದು, ದೇವಾಲಯದ ಟ್ರಸ್ಟ್ ಸದಸ್ಯರು, ಪುರೋಹಿತರ ಸೌಜನ್ಯದ ರೀತಿ ಮಾದರಿಯಾಗಿದೆ.
ಶ್ರೀರಾಮ ದುರ್ಗಾಂಬ ದೇವಾಲಯ ಎಲ್ಲಿದೆ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವರದಹಳ್ಳಿಯ ಸನಿಹದಲ್ಲಿದೆ.
ತಲುಪುವುದು ಹೇಗೆ: ಸಾಗರದಿಂದ 10 ಕಿಮೀ ದೂರದಲ್ಲಿದೆ. ಸಾಗರದಿಂದ ಸರ್ಕಾರಿ ಹಾಗೂ ಖಾಸಗಿ ಬಸ್’ಗಳು ನಿಗದಿತ ಸಮಯಕ್ಕೆ ಇಲ್ಲಿಗೆ ಸಂಚರಿಸುತ್ತವೆ. ಸಾಗರ ಬಸ್ ನಿಲ್ದಾಣದಿಂದ ಆಟೋಗಳ ಮೂಲಕವೂ ಸಹ ತೆರಳಬಹುದು.
ದೇವಾಲಯ ಸಂಪರ್ಕ ಸಂಖ್ಯೆ: 08183-236145
ಗೂಗಲ್ ಮ್ಯಾಪ್: https://goo.gl/maps/9tP9Mpa8bng27fog6
Get in Touch With Us info@kalpa.news Whatsapp: 9481252093
Discussion about this post