ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕೊರೋನ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಎಲ್ಲೆಡೆ ಕೈಗೊಂಡಿರುವ ಮುಂಜಾಗೃತಾ ಕ್ರಮವಾಗಿ ತಾಲೂಕು ಆಡಳಿತ ಹಾಗೂ ನಗರಸಭೆ ಇಲ್ಲಿನ ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ಸಂತೆಯನ್ನು ಜಿಲ್ಲಾಧಿಕಾರಿಗಳ ಆದೇಶಾನುಸಾರವಾಗಿ ರದ್ಧುಪಡಿಸಿ ಆದೇಶ ಹೊರಡಿಸಿದೆ.
ಜಿಲ್ಲಾಧಿಕಾರಿಗಳ ಆದೇಶಾನುಸಾರವಾಗಿ ತಾಲೂಕಿನಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿದ್ದು ಇಂದು ತಾಲೂಕಿನ ಸಿಂಗನಮನೆಯಲ್ಲಿ ನಡೆಯಬೇಕಿದ್ದ ವಾರದ ಸಂತೆಯನ್ನು ರದ್ಧುಪಡಿಸಿತ್ತು. ಅದೇ ರೀತಿ ಭದ್ರಾವತಿ ನಗರ ಪ್ರದೇಶದಲ್ಲಿ ನಡೆಯುವ ಭಾನುವಾರದ ಸಂತೆಯನ್ನೂ ಸಹ ರದ್ದುಪಡಿಸಿದ್ದು, ಈ ಸಂಬಂಧವಾಗಿ ಶನಿವಾರದಿಂದಲೇ ರಸ್ತೆ ಬದಿಯ ವ್ಯಾಪಾರವನ್ನು, ಗಾಡಿಯಲ್ಲಿನ ವ್ಯಾಪಾರವನ್ನೂ ಸಹ ಮಾಡದಂತೆ ಸೂಚಿಸಲಾಗಿದೆ ಎಂದು ನಗರಸಭಾ ಆಯುಕ್ತ ಮನೋಹರ್ ಹಾಗೂ ತಹಶೀಲ್ದಾರ್ ಸೋಮಶೇಖರ್ ಅವರು ತಿಳಿಸಿದರು.
ಇನ್ನು, ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ಶಾಸಕ ಬಿ.ಕೆ. ಸಂಗಮೇಶ್, ಸರ್ಕಾರ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಕೊರೋನಾ ವೈರಸ್ ರೋಗ ನಿಯಂತ್ರಣಕ್ಕೆ ಕೈಗೊಂಡಿರುವ ಮುಂಜಾಗೃತಾ ಕ್ರಮಗಳಿಗೆ ನಾಗರಿಕರು ಸ್ಪಂದಿಸಿ ನಡೆದುಕೊಳ್ಳಬೇಕು ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವತ್ತ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದರು.
ಭಾನುವಾರದ ಕರ್ಪ್ಯೂಗೆ ಸ್ಪಂದನೆ
ಕೊರೋನಾ ವೈರಸ್ ರೋಗದ ತಡೆಗೆ ದೇಶದ ಜನರು ಮಾರ್ಚ್ 22ರ ಭಾನುವಾರ ಬೆಳಗಿನಿಂದ ರಾತ್ರಿಯವರೆಗೆ ಮನೆಯಿಂದ ಹೊರಗೆ ಬಾರದಂತೆ ಸ್ವಯಂಘೋಷಿತವಾಗಿ ಕರ್ಪ್ಯೂ ಆಚರಿಸಬೇಕೆಂದು ದೇಶದ ಪ್ರಧಾನ ಮಂತ್ರಿ ನರೇಂದ್ರಮೋದಿ ದೇಶದ ಜನತೆಗೆ ನೀಡಿರುವ ಕರೆಯ ಮೇರೆಗೆ ಇಲ್ಲಿನ ನಮ್ಮೂರ ಕೆಫೆ ಮತ್ತಿತರ ಹೋಟೆಲ್ ಮತ್ತು ಅಂಗಡಿಗಳವರು ತಮ್ಮ-ತಮ್ಮ, ವ್ಯಪಾರದ ಮಳಿಗೆ ಮುಂದೆ ಕರ್ಪ್ಯೂ ನಿಮಿತ್ತವಾಗಿ ಭಾನುವಾರ ವ್ಯಾಪಾರ ಬಂದ್ ಮಾಡಲಾಗಿರುತ್ತದೆ ಎಂಬ ಫಲಕವನ್ನು ಶುಕ್ರವಾರದಿಂದಲೇ ತೂಗು ಹಾಕಿದ್ದಾರೆ.
(ವರದಿ: ಕೆ.ಎಸ್. ಸುಧೀಂದ್ರ, ಭದ್ರಾವತಿ)
Get in Touch With Us info@kalpa.news Whatsapp: 9481252093
Discussion about this post