ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಹೊಳೆಹೊನ್ನೂರಿನಲ್ಲಿರುವ ಶ್ರೀ ಸತ್ಯಧರ್ಮ ತೀರ್ಥರ 190ನೆಯ ಆರಾಧನಾ ಮಹೋತ್ಸವ ನಾಳೆಯಿಂದ ಮೂರು ದಿನಗಳ ಕಾಲ ನಡೆಯಲಿದ್ದು, ಕೊರೋನಾ ವೈರಸ್ ಹಾವಳಿಯರುವ ಕಾರಣ ಭಕ್ತರಿಗೆ ಪಾಲ್ಗೊಳ್ಳಲು ಅವಕಾಶವಿರುವುದಿಲ್ಲ.
ಈ ಕುರಿತಂತೆ ಉತ್ತರಾದಿ ಮಠದ ಶ್ರೀಸತ್ಯಾತ್ಮತೀರ್ಥರ ಆದೇಶದಂತೆ ಮಾಹಿತಿ ಬಿಡುಗಡೆ ಮಾಡಿದ್ದು, ಮಧ್ವಾಚಾರ್ಯರ ಮೂಲ ಮಹಾಸಂಸ್ಥಾನ ಶ್ರೀಮದುತ್ತರಾದಿ ಮಠಾಧೀಶ ಶ್ರೀಸತ್ಯಾತ್ಮತೀರ್ಥ ಶ್ರೀಪಾದರು -ರುದ್ರಾಂಶ ಸಂಭೂತರಾದ ಶ್ರೀಶ್ರೀಸತ್ಯಧರ್ಮತೀರ್ಥರ 190 ನೆಯ ಆರಾಧನೆಯಂದು ಶ್ರೀಶ್ರೀ ಸತ್ಯಧರ್ಮತೀರ್ಥರನ್ನು ಮನೆಯಿಂದಲೇ ಸ್ಮರಿಸಿ ಆರಾಧನಾ ಮಹೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಅನುಗ್ರಹ ಮಾಡಿದ್ದಾರೆ.
ಕೊರೋನಾ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ನಿಯಮಗಳನ್ನು ಪಾಲಿಸುತ್ತಲೇ ಆರಾಧನೆಯನ್ನೂ ಆಚರಿಸುವ ಅನಿವಾರ್ಯತೆ ಎದುರಾಗಿರುವುದರಿಂದ ಇದೀಗ ಮಠದ ಆಡಳಿತವು ಶ್ರೀಮಠದೊಳಗೆ ಆರಾಧನೆಯ ಎಲ್ಲ ರೀತಿಯ ಕಾರ್ಯಕ್ರಮಗಳನ್ನು ಆಚರಿಸಲು ನಿರ್ಧರಿಸಿದೆ.
ಆರಾಧನೆಯನ್ನು ಸರಳವಾಗಿ ಆಚರಿಸುತ್ತಿರುವುದರಿಂದ ಕೊರೋನಾ ಸೋಂಕಿನ ಆತಂಕ ಕಳೆಯುವವರೆಗೆ ಎಲ್ಲ ಭಕ್ತರು ತಮ್ಮ ಮನೆಯಲ್ಲಿಯೇ ಇದ್ದುಕೊಂಡು ಆರಾಧನೆಯ ವೇಳೆ ಭಕ್ತಿ ಸಮರ್ಪಿಸುವಂತೆ ಮನವಿ ಮಾಡಿದೆ. ಅಷ್ಟೇ ಅಲ್ಲ ಆರಾಧನೆಯಲ್ಲಿ ಪಾಲ್ಗೊಳ್ಳಲು ಹೊಳೆಹೊನ್ನೂರಿಗೆ ಆಗಮಿಸದಿರುವಂತೆಯೂ ಮನವಿ ಮಾಡಿದೆ.
ಆರಾಧನಾ ಮಹೋತ್ಸವದ ಎಲ್ಲ ಪೂಜೆ, ಧಾರ್ಮಿಕ ಕಾರ್ಯಕ್ರಮಗಳನ್ನು ಎಂದಿನಂತೆಯೇ ನಡೆಸಲಾಗುವುದು. ಆದರೆ ಮಠದೊಳಗೆ ಭಕ್ತರಿಗೆ ಪ್ರವೇಶ ಅವಕಾಶವಿರುವುದಿಲ್ಲ. ಈ ಸಲದ ಆರಾಧನೆ ಸರಳವಾಗಿಯೇ ಆಚರಿಸಲಾಗುತ್ತದೆ ಎಂದು ತಿಳಿಸಲಾಗಿದೆ.
(ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ)
Get In Touch With Us info@kalpa.news Whatsapp: 9481252093
Discussion about this post