ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೃಷಿ ತಜ್ಞರೇ ಕೃಷಿ ರೈತರ ಕೃಷಿಗೆ ವೈದ್ಯರಾಗಬೇಕು. ಕೃಷಿ ವಿಜ್ಞಾನಿಗಳು ಕೃಷಿ ಫ್ರೊಫೆಸರ್’ಗಳು ವಿಶ್ವವಿದ್ಯಾಲಯದ ಕಾಂಪೌಂಡ್ ಬಿಟ್ಟು ಹೊರಬರಬೇಕು. ತಮ್ಮ ಜ್ಞಾನವನ್ನು ಸಮಗ್ರವಾಗಿ ರೈತರಿಗೆ ಸಾರಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಕರೆ ನೀಡಿದ್ದಾರೆ.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ(ಜಿಕೆವಿಕೆ) 55ನೆಯ ಸಂಸ್ಥಾಪನಾ ದಿನಾಚರಣೆ ವೇದಿಕೆ ಕಾರ್ಯಕ್ರಮಕ್ಕೆ ಉದ್ಘಾಟನೆ ನೆರವೇರಿಸಿ ಸಚಿವರು ಮಾತನಾಡಿದರು.
ಕೃಷಿ ವಿಶ್ವವಿದ್ಯಾಲಯಗಳು ಆದಷ್ಟು ಗುಣಮಟ್ಟದ ತಳಿಗಳನ್ನು ಹೊರತರಬೇಕು. ತಮ್ಮ ತಳಿಗಳನ್ನು ಪ್ರಚಾರ ಮಾಡಿ ರೈತರನ್ನು ತಲುಪಬೇಕು. ರೈತರು ಕೃಷಿ ಸಮಸ್ಯೆ ಬಂದಾಗ ಔಷಧಿ ಅಂಗಡಿ ಗೊಬ್ಬರದಂಗಡಿಗೆ ಹೋಗುವುದು ಹೆಚ್ಚಾಗಿದೆ. ಆದರೆ ಇದು ತಪ್ಪಬೇಕು. ರೈತರು ಕೃಷಿ ವಿಶ್ವವಿದ್ಯಾಲಯಗಳಿಗೆ ಪ್ರೊಫೆಸರ್‌ಗಳಿಗೆ ವಿಜ್ಞಾನಿಗಳನ್ನು ಭೇಟಿ ಮಾಡುವಂತಾಗಬೇಕು ಎಂದು ಸಚಿವರು ಸಲಹೆ ನೀಡಿದರು.
ಕೊಪ್ಪಳದ ಪೈಲಟ್ ಯೋಜನೆಯಲ್ಲಿ 20 ರೈತ ಸಂಪರ್ಕ ಕೇಂದ್ರಗಳಿಗೆ ಲ್ಯಾಬ್ ಟೂ ಲ್ಯಾಂಡ್ ಎನ್ನುವ ಮಣ್ಣಿನ ಪರೀಕ್ಷೆ ನಡೆಸುವ ಮೊಬೈಲ್ ಅಗ್ರಿ ಹೆಲ್ತ್ ವಾಹನ ಈ ತಿಂಗಳ ಕೊನೆಗೆ ಬಿಡುಗಡೆ ಮಾಡಲಾಗುವುದು. ಇದರ ಸದುಪಯೋಗವಾಗಬೇಕು. ಹೊರಗುತ್ತಿಗೆ ಸೇವೆಯಾಧಾರದಲ್ಲಿ ಈ ಮೊಬೈಲ್ ಅಗ್ರಿ ಹೆಲ್ತ್ ವಾಹನಕ್ಕೆ ಅಗ್ರಿ ಗ್ಯಾಜ್ಯುಯೇಟ್‌ಗಳನ್ನು ಸೇವೆಗೆ ಬಳಸಿಕೊಳ್ಳಲಾಗುತ್ತಿದೆ. ರೈತ ನಾನು ಈ ದೇಶದ ರೈತ ಎಂದು ಸ್ವಾಭಿಮಾನದಿಂದ ಹೇಳಿಕೊಳ್ಳುವ ರೈತನ ಸಂಪೂರ್ಣ ಕೃಷಿ ವಿವರವುಳ್ಳ ಶಾಶ್ವತ ಗುರುತಿನ ಚೀಟಿ ನೀಡಲಾಗುತ್ತಿದೆ ಎಂದು ಸಚಿವರು ವಿವರಿಸಿದರು.
ಬಹುತೇಕ ಯುವಕರು ಕೃಷಿಯಿಂದ ದೂರ ಹೋಗುತ್ತಿದ್ದಾರೆ. ಕೃಷಿ ಕೀಳರಿಮೆಯ ಕೆಲಸವಲ್ಲ ಹಿರಿಮೆಯ ಸ್ವಾಭಿಮಾನಿ ಕೆಲಸವೆನ್ನುವುದನ್ನು ಎಲ್ಲರೂ ಅರಿಯಬೇಕು. ಪ್ರೊಫೆಸರ್‌ಗಳನ್ನು ತಾಲೂಕಿನ ಸೇವೆಗೆ ನಿಯೋಜಿಸಿದ್ದು, ಪ್ರೊಫೆಸರ್‌ಗಳು ಗ್ರಾಮಗಳಿಗೆ ಭೇಟಿ ನೀಡುವ ಮುನ್ನ ರೈತ ಸಂಪರ್ಕ ಕೇಂದ್ರಗಳಿಗೆ ಮೊದಲು ಮಾಹಿತಿ ನೀಡಬೇಕು. ರೈತರಿಗೆ ಕೃಷಿ ವಿಜ್ಞಾನಿಗಳು ಪ್ರೊಫೆಸರ್‌ಗಳು ಬರುವ ಮುನ್ನ ಮಾಹಿತಿ ಹೋದಲ್ಲಿ ರೈತರು ವಿಜ್ಞಾನಿಗಳನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಹೇಳಬಹುದು ಪರಿಹಾರ ಪಡೆಯಬಹುದಾಗಿದೆ ಎಂದು ಅವರು ಸೂಚನೆ ನೀಡಿದರು.
ಕೃಷಿ ಅಧ್ಯಾಪಕರು ಸಿಬ್ಬಂದಿಗಳು ಕೋವಿಡ್ ಸಂತ್ರಸ್ತ ನಿಧಿಗೆ ಪರಿಹಾರ ನೀಡುವ ಜೊತೆಗೆ ಕೋವಿಡ್ ಸಂದರ್ಭದಲ್ಲಿ ಸೈನಿಕನಂತೆ ಇಲಾಖೆ ಅಧಿಕಾರಿಗಳು ದುಡಿದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರಾರಂಭದಲ್ಲಿ ಈ ವಿಶ್ವವಿದ್ಯಾಲಯ ಮೊದಲಿಗಿತ್ತು. ಈಗ ರಾಜ್ಯದಲ್ಲಿ ಆರು ಕೃಷಿ ವಿಶ್ವವಿದ್ಯಾಲಯಗಳಾಗಿದ್ದು, ಜಿಕೆವಿಕೆ ಈ ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳಿಗೆ ಮಾತೃ ಆಗಿದೆ. ಪ್ರಸ್ತುತ ಅವಧಿಯಲ್ಲಿ ರಾಜೇಂದ್ರಪ್ರಸಾದ್ ನೇತೃತ್ವದಲ್ಲಿ ರಾಷ್ಟ್ರಮಟ್ಟದ ಸಮ್ಮೇಳನ ನಡೆಸಿ ಕಾರ್ಯಕ್ರಮದಲ್ಲಿ ಪ್ರಧಾನಿಗಳು ಹಾಗೂ ಉಪರಾಷ್ಟ್ರಪತಿಗಳು ಭಾಗವಹಿಸಿದ್ದು ಹೆಮ್ಮೆಯ ವಿಚಾರ. ದೇಶದಲ್ಲಿ ಜಿಕೆವಿಕೆ ಎರಡನೆಯ ಪ್ರಮುಖ ಕೃಷಿ ವಿಶ್ವವಿದ್ಯಾಲಯವಾಗಿದೆ. ಈ ಜಿಕೆವಿಕೆ ಇಲ್ಲಿಯವರೆಗೆ ಸುಮಾರು 200 ತಳಿಗಳನ್ನು ಕಂಡುಹಿಡಿದಿದ್ದು ರಾಜ್ಯದಲ್ಲಿ ಕೃಷಿ ಉತ್ಪಾದನೆ ಹೆಚ್ಚಲು ಕಾರಣವಾಗಿದೆ. ಆದರೆ ಇತ್ತೀಚೆಗೆ ತಳಿಗಳು ಕಡಿಮೆಯಾಗುತ್ತಿವೆ. ಇನ್ನಷ್ಟು ಅಭಿವೃದ್ಧಿ ಸಂಶೋಧನೆ ಹೆಚ್ಚಬೇಕು ಎಂದರು.
ವೇದಿಕೆಯಲ್ಲಿ ವಿವಿಧ ಪ್ರಶಸ್ತಿಗಳನ್ನು ವಿತರಿಸಲಾಯಿತು. ಚೇರ್ಮೆನ್ ವಾಸುದೇವನ್ ಸಿಂಗಾಪುರದಿಂದ ಆನ್ಲೈನ್ ಮೂಲಕ ಮಾತನಾಡಿದರು.
ವಿಶ್ವವಿದ್ಯಾಲಯ ಕುಲಪತಿ ರಾಜೇಂದ್ರ ಪ್ರಸಾದ್, ಕುಲಸಚಿವ ಜಿ.ಎನ್. ಧನ್‌ಪಾಲ್ ಸ್ವಾಗತಿಸಿದರು. ರಾಜಕುಮಾರ್ ಕತ್ರಿ, ಕಟಾರಿಯ ಆನ್ಲೈನ್ ಮೂಲಕ ಪಾಲ್ಗೊಂಡಿದ್ದರು.
ವಿಶ್ವವಿದ್ಯಾಲಯ ಮಂಡಳಿ ನಿರ್ದೇಶಕರಾದ ದಯಾನಂದ್, ಸುರೇಶ್ ಮಾಗದ್, ಅರವಿಂದ, ರಾಮನುಜಮ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post