ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೋವಿಡ್19 ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳಿನಿಂದ ಸ್ಥಗಿತಗೊಂಡಿದ್ದ ರಂಗ ಚಟುವಟಿಕೆಗಳಿಗೆ ಮತ್ತೆ ಚಾಲನೆ ದೊರಕಿದ್ದು, ಶಿವಮೊಗ್ಗ ರೆಪರ್ಟರಿ ಕಲಾವಿದರು ಅಭಿನಯಿಸಿರುವ ಚಾಣಕ್ಯ ಪ್ರಪಂಚ ನಾಟಕ ಪ್ರದರ್ಶನ ನವೆಂಬರ್ 29 ಮತ್ತು 30ರಂದು ನಡೆಯಲಿದೆ ಎಂದು ಶಿವಮೊಗ್ಗ ರಂಗಾಯಣ ನಿರ್ದೇಶಕ ಸಂದೇಶ ಜವಳಿ ಅವರು ತಿಳಿಸಿದರು.
ಗುರುವಾರ ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಶಿವಮೊಗ್ಗ ರಂಗಾಯಣದ ಎರಡನೇ ರೆಪರ್ಟರಿಯ ಪ್ರಥಮ ನಾಟಕ ಇದಾಗಿದೆ. ಪ್ರಥಮ ಪ್ರಯೋಗವಾಗಿ ಕೆ.ವಿ.ಸುಬ್ಬಣ್ಣ ರಚನೆಯ, ಬಿ.ಆರ್.ವೆಂಕಟರಮಣ ಐತಾಳ ಅವರ ನಿರ್ದೇಶನದ ‘ಚಾಣಕ್ಯ ಪ್ರಪಂಚ ನಾಟಕ ಪ್ರದರ್ಶನಕ್ಕೆ ಸಿದ್ಧವಾಗಿದೆ. ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಸಂಜೆ 6.15ಕ್ಕೆ ನಾಟಕ ಪ್ರದರ್ಶನ ಆರಂಭವಾಗಲಿದೆ ಎಂದರು.
ರಾಘು ಪುರಪ್ಪೇಮನೆ ಮತ್ತು ಶ್ವೇತಾ ರಾಣಿ ಎಚ್.ಕೆ ಅವರು ಸಹ ನಿರ್ದೇಶನ ಮಾಡಿದ್ದು, ಕೆ.ಎನ್. ಭಾರ್ಗವ ಮತ್ತು ಶ್ರೀಪಾದ ತೀರ್ಥಹಳ್ಳಿ ಅವರ ಸಂಗೀತವಿದೆ. ರಂಗವಿನ್ಯಾಸವನ್ನು ವಿನೀತ್ ಕುಮಾರ್ ಅವರು ನಿರ್ವಹಿಸಿದ್ದಾರೆ. ಹಿರಿಯ ರಂಗಕರ್ಮಿ ಪುರುಷೋತ್ತಮ ತಲವಾಟ ಪ್ರಸಾಧನ ಹಾಗೂ ಬೆಳಕಿನ ವಿನ್ಯಾಸವನ್ನು ಶಂಕರ್ ಬೆಳಕಟ್ಟೆ ಅವರು ನಿರ್ವಹಿಸಿದ್ದಾರೆ ಎಂದರು.
ಭಾರತೀಯ ಇತಿಹಾಸದಲ್ಲಿ ಕ್ರಿಸ್ತಪೂರ್ವ 4ನೆಯ ಶತಮಾಣದ ಉತ್ತರಾರ್ಧವು ಸಣ್ಣ ಪುಟ್ಟ ತುಂಡು ರಾಜ್ಯಗಳು ಒಂದಾಗಿ ಬಲಿಷ್ಠ ಕೇಂದ್ರದ ಸಾಮ್ರಾಜ್ಯವೊಂದು ನಿರ್ಮಾಣವಾದ ಮಹತ್ವದ ಸಂಧಿಕಾಲದಲ್ಲಿ ಮೌರ್ಯ ಸಾಮ್ರಾಜ್ಯವನ್ನು ಕಟ್ಟಿ ನಿಲ್ಲಿಸಿದ ಅದರ ರೂವಾರಿ ಆಚಾರ್ಯ ಚಾಣಕ್ಯನೆಂದು ಇತಿಹಾಸ ಗುರುತಿಸಿದೆ. ಅರ್ಥಶಾಸ್ತ್ರಕಾರನಾದ ಚಾಣಕ್ಯ ವಿಷ್ಣುಶರ್ಮನು ನಂದರನ್ನು ನಿವಾರಿಸಿ ಚಂದ್ರಗುಪ್ತನನ್ನು ಪಟ್ಟಕ್ಕೆ ತಂದು, ರಾಜ್ಯತಂತ್ರದಲ್ಲಿ ಅವನನ್ನು ಪಳಗಿಸಿ, ಅವನ ಸಾಮ್ರಾಜ್ಯ ವ್ಯವಸ್ಥಿತವಾಗಲು ನಂದನಿಷ್ಠೆಯ ಅಮಾತ್ಯರಾಕ್ಷಸನನ್ನು ಪಲ್ಲಟಗೊಳಿಸಿ ಚಂದ್ರನಿಷ್ಠನನ್ನಾಗಿ ಪರಿವರ್ತಿಸುವ ಕಥಾವಸ್ತುವುಳ್ಳ ಈ ನಾಟಕವನ್ನು ವಿಶಾಖದತ್ತನು ಬರೆದ ಮುದ್ರಾರಾಕ್ಷಸ ಎಂಬ ಸಂಸ್ಕೃತ ನಾಟಕದಿಂದ ಆಧರಿಸಿ ಕೆ.ವಿ.ಸುಬ್ಬಣ್ಣನವರು ಮರು ರೂಪಿಸಿದ್ದಾರೆ ಎಂದರು.
ರಂಗಾಯಣ, ಶಿವಮೊಗ್ಗ ರೆಪರ್ಟರಿಯ ನೂತನ ಕಲಾವಿದರಾದ ಆರ್. ಪ್ರಸನ್ನ ಕುಮಾರ್, ಡಿ.ಆರ್. ನಿತಿನ್, ಎಸ್.ಎಂ. ರವಿಕುಮಾರ್, ಸುಜಿತ್ ಕಾರ್ಕಳ, ಎನ್. ಚಂದನ್, ಎಂ.ಎಲ್. ಶರತ್ ಬಾಬು, ಬಿ.ಕೆ. ಮಹಾಬಲೇಶ್ವರ್, ಸವಿತಾ ಆರ್. ಕಾಳಿ, ಆರ್. ರಮ್ಯ, ಆರ್. ರಂಜಿತ, ಎಂ.ಎಚ್. ದೀಪ್ತಿ, ಕಾರ್ತಿಕ ಕಲ್ಲುಕುಟಿಕರ್, ಕೆ. ಶಂಕರ್, ಪ್ರಶಾಂತ್ ಕುಮಾರ್, ಎಂ.ಯು. ರಾಘವೇಂದ್ರ ಪ್ರಭು ಇವರುಗಳು ನಾಟಕದಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ ಎಂದವರು ತಿಳಿಸಿದರು.
ಸರ್ಕಾರಿ ನಿಯಮದಂತೆ ಕೋವಿಡ್-19ರ ನಿಯಮಗಳನ್ನು ಪಾಲಿಸುವುದು. ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿದೆ. 250 ಜನಕ್ಕೆ ಮಾತ್ರ ಪ್ರವೇಶವಿದ್ದು, ರೂ.20/- ಪ್ರವೇಶ ಶುಲ್ಕವಿದೆ ಎಂದು ಅವರು ತಿಳಿಸಿದರು. ಮೊದಲು ಬಂದವರಿಗೆ ಮೊದಲ ಆದ್ಯತೆಯಿದ್ದು, ಟಿಕೆಟ್‌ಗಳು ಮುಂಗಡವಾಗಿ ರಂಗಾಯಣ ಕಛೇರಿ, ಸುವರ್ಣ ಸಾಂಸ್ಕೃತಿಕ ಭವನ, ಹೆಲಿಪ್ಯಾಡ್ ಹತ್ತಿರ, ಅಶೋಕನಗರ, ಶಿವಮೊಗ್ಗ ದೂರವಾಣಿ: 08182-256353 ಇಲ್ಲಿ ದೊರೆಯಲಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ರಂಗಾಯಣದ ಆಡಳಿತಾಧಿಕಾರಿ ಶಫಿ ಸಾದುದ್ದೀನ್, ರಂಗ ಸಮಾಜದ ಸದಸ್ಯ ಹಾಲಸ್ವಾಮಿ ಅವರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post