ಶಿವಮೊಗ್ಗ: ರಾಜ್ಯ ಸರ್ಕಾರ ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಪಶುಗಳ ಸಂರಕ್ಷಣೆ ಮಸೂದೆ 2020ಗೆ ವಿಧಾನಸಭೆಯಲ್ಲಿ ಅಂಗೀಕಾರ ಪಡೆದಿರುವುದು ರಾಜ್ಯ ಅಖಂಡ ಗೌರವವನ್ನು ಹೆಚ್ಚಿಸಿದೆ ಎಂದು ರಾಜ್ಯ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್ ಸಂತಸ ವ್ಯಕ್ತಪಡಿಸಿದರು.
ಈ ಕುರಿತಂತೆ ಕಲ್ಪ ಮೀಡಿಯಾ ಹೌಸ್ ಜೊತೆಯಲ್ಲಿ ಮಾತನಾಡಿದ ಅವರು, ಈ ಕಾನೂನು ಜಾರಿಗೆ 2016ರಲ್ಲಿ ಪ್ರಯತ್ನವಾಗಿದ್ದರೂ, ಹಿನ್ನಡೆಯುಂಟಾಗಿತ್ತು. ಆದರೆ ಈಗ 2020ರಲ್ಲಿ ಈ ಮಸೂದೆ ಅನುಮೋದನೆಗೊಂಡಿರುವುದು ನಮ್ಮೆಲ್ಲರಿಗೂ ಸಂತೋಷ ಮಾತ್ರವಲ್ಲ ರೋಮಾಂಚನವನ್ನುಂಟು ಮಾಡಿದೆ. ಈ ಒಂದು ಐತಿಹಾಸಿಕ ನಿರ್ಧಾರದಿಂದ ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಗೌರವ ಹೆಚ್ಚಾಗಿದೆ ಎಂದರು.
ಹಿಂದೂ ಸಮಾಜವನ್ನು ಕಟ್ಟಲು ಗೋಹತ್ಯೆ ನಿಷೇಧವಾಗಬೇಕು ಎಂಬುದು ಗಾಂಧಿವಾದದ ಕಾಲದಿಂದಲೂ ಇತ್ತು. ಈಗ ಅದು ರಾಜ್ಯದಲ್ಲಿ ಜಾರಿಯಾಗಿರುವುದು ಕೋಟ್ಯಂತರ ಗೋಪ್ರೇಮಿಗಳಿಗೆ ಹಾಗೂ ಸಮಸ್ತ ಹಿಂದೂಗಳಿಗೆ ಅತೀವ ಸಂತೋಷವನ್ನು ತಂದಿದೆ. ಇಂತಹ ಐತಿಹಾಸಿಕ ಕ್ಷಣಕ್ಕೆ ಕಾರಣಕರ್ತರಾದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವ ಪ್ರಭು ಚೌಹಾಣ್ ಸೇರಿದಂತೆ ಸಚಿವ ಸಂಪುಟದ ಎಲ್ಲ ಸದಸ್ಯರಿಗೆ ಹಾಗೂ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಮಸೂದೆ ಅಂಗೀಕಾರವಾದ ಹಿನ್ನೆಲೆಯಲ್ಲಿ ಶ್ರೀ ಜ್ಞಾನೇಶ್ವರಿ ಗೋಶಾಲೆಗೆ ಪತ್ನಿ ಸಹಿತ ಭೇಟಿ ನೀಡಿದ ಅರುಣ್ ಅವರು, ಗೋಮಾತೆಗೆ ಪೂಜೆ ಸಲ್ಲಿಸಿದರು.
Discussion about this post