ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಇಂದಿನ ಆಧುನಿಕ ಯುಗದಲ್ಲಿಯೂ ಕೂಡ ಗುರು ಕಲ್ಪತರು ಎಂಬ ಶ್ರದ್ದೆ ಹರಿದು ಬರುತ್ತಿದೆ. ಎಲ್ಲಿ ಗುರುವಾದವರು ಶ್ರದ್ಧೆಯಿಂದ-ಕರುಣೆಯಿಂದ ಶಿಷ್ಯರಿಗೆ ಕಲಿಸಿಕೊಂಡು ಬಂದಿದ್ದಾರೋ ಆ ಕ್ಷೇತ್ರಗಳಲ್ಲಿ ಗುರು-ಶಿಷ್ಯ ಪರಂಪರೆ ಮುಂದುವರೆದಿದೆ. ಜ್ಞಾನವೆಂಬುದು ಗುರುವಿನಿಂದ ಶಿಷ್ಯನಿಗೆ ಪ್ರೀತಿ-ತ್ಯಾಗಗಳಿಂದ ದೊರೆಯುತ್ತದೆ.
ಭರತ ಖಂಡವು ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ವೈಜ್ಞಾನಿಕವಾಗಿ ವಿಶ್ವಕ್ಕೆ ಮಾದರಿಯ ಪುಣ್ಯಭೂಮಿ, ಭಾರತೀಯ ಸಂಸ್ಕೃತಿಯ ಹಿರಿಮೆ ಜಗತ್ತಿನೆಲ್ಲೆಡೆ ಪಸರಿಸಿದ್ದು ಎಲ್ಲರ ಪ್ರೀತಿ-ಗೌರವಗಳಿಗೆ ಪಾತ್ರವಾಗಿದೆ.
ನಮ್ಮ ಭವ್ಯ ಸಂಸ್ಕೃತಿ ಹಾಗೂ ಪರಂಪರೆಯ ವಿಧಿವಿಧಾನಗಳು, ವೈಜ್ಞಾನಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಔಚಿತ್ಯಗಳನ್ನೇ ಹೊಂದಿದ್ದು ಅವೆಲ್ಲವೂ ದಿನಗಳೆದಂತೆ ಮನದಟ್ಟಾಗುತ್ತಿವೆ. ಇಂತಹ ಭವ್ಯ ಸಂಸ್ಕೃತಿಯನ್ನು ಕಟ್ಟಿ ಬೆಳಸಿ, ಲೋಕ ವಿಖ್ಯಾತಗೊಳಿಸುವಲ್ಲಿ ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದರ ಪಾತ್ರವು ಮಹತ್ವ ಪೂರ್ಣವಾದುದಾಗಿದೆ. ಇಂತಹ ಗುರುಗಳ ಪ್ರಥಮ ಮಹಾಸಮಾರಾಧನೆ ಡಿ.17ರಂದು ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನಡೆಯಲಿದ್ದು, ಇದಕ್ಕೆ ಸಕಲ ಸಿದ್ದತೆಗಳು ನಡೆದಿವೆ.
ಕಳೆದ ವರ್ಷ ಹರಿಪಾದ ಸೇರಿದ ಶ್ರೀಪಾದರ ಇಚ್ಛೆಯಂತೆ ಬೆಂಗಳೂರಿನಲ್ಲಿರುವ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಮೂಲ ಬೃಂದಾವನ ವಿಧಿವತ್ತಾಗಿ ನಿರ್ಮಾಣವಾಗಿದೆ. ಇಂತಹ ಯತಿಶ್ರೇಷ್ಠರ ಪ್ರಥಮ ಮಹಾಸಮಾರಾಧನೆಗೆ ಸಿದ್ದತೆ ಬಹುತೇಕ ಪೂರ್ಣಗೊಂಡಿದೆ.ವಿಶ್ವೇಶತೀರ್ಥ ಶ್ರೀಪಾದರ ವಿದ್ಯಾಗುರು, ಫಲಿಮಾರು/ಭಂಡಾರಕೇರಿ ಉಭಯ ಮಠಾಧೀಶರಾಗಿದ್ದ ವಿದ್ಯಾಮಾನ್ಯ ತೀರ್ಥ ಶ್ರೀಪಾದರ ಮೃತ್ತಿಕಾ ಬೃಂದಾವನ ಮತ್ತು ವಿಶ್ವೇಶ ತೀರ್ಥ ಶ್ರೀಪಾದರ ಮೂಲ ಬೃಂದಾವನವನ್ನು ಒಂದೇ ಸಂಕೀರ್ಣದೊಳಗೆ ನಿರ್ಮಿಸಲಾಗಿದ್ದು, ಇದೇ ಗುರುವಾರದಿಂದ ಭಕ್ತರಿಗೆ ದರ್ಶನಕ್ಕೆ ಲಭ್ಯವಾಗಲಿದೆ.
ಅಂದು ಬೆಳಗ್ಗೆ 6 ರಿಂದ 9.30 ತನಕ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ, ಆನ್ ಲೈನ್’ನಲ್ಲಿ ಈ ಎಲ್ಲಾ ಕಾರ್ಯಕ್ರಮಗಳ ಪ್ರಸಾರದ ವ್ಯವಸ್ಥೆ ಮಾಡಲಾಗಿದೆ.
ಶ್ರೀಪಾದರ ಪ್ರಥಮ ಮಹಾರಾಧನೆ ಹಿನ್ನೆಲೆಯಲ್ಲಿ ಆರಾಧನಾ ಕಾರ್ಯಕ್ರಮ ಮತ್ತು ಬೃಂದಾವನದ ಬಗ್ಗೆ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಯು. ಕೇಶವಾಚಾರ್ಯ ಅವರೊಂದಿಗೆ ಕಲ್ಪ ಮೀಡಿಯಾ ಹೌಸ್ ಮಾತನಾಡಿದ್ದು, ಅದರ ಸಾರಾಂಶ ಹೀಗಿದೆ.
ಕಲ್ಪ: ಮೊದಲ ಮಹಾಸಮಾರಾಧನೆ ದಿನದಂದು ಮಠದಲ್ಲಿ ಭಕ್ತರಿಗೆ ದರ್ಶನ ಭಾಗ್ಯ ಲಭ್ಯವಿದೆಯೇ?
ಕೇಶವಾಚಾರ್ಯ: ಕೊರೋನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ನಿಯಮಗಳನ್ನು ರೂಪಿಸಲಾಗಿದೆ. ಭಕ್ತರ ಆರೋಗ್ಯ ಮತ್ತು ದೇವಾಲಯದ ಹಿತದೃಷ್ಟಿಯಿಂದ ಡಿ.17 ರ ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಬೃಂದಾವನ ದರ್ಶನಕ್ಕೆ ಅವಕಾಶವಿದ್ದು ಭಕ್ತರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಯಾವುದೇ ಆತಂಕವಿಲ್ಲದೆ ದರ್ಶನ ಪಡೆದು ಅನುಗ್ರಹಕ್ಕೆ ಪಾತ್ರರಾಗಬಹುದು.
ಕಲ್ಪ: ಏಕ ಪೀಠದಲ್ಲಿ ಗುರು-ಶಿಷ್ಯರ ಬೃಂದಾವನ ಪ್ರತಿಷ್ಠಾಪನೆ ಬಗ್ಗೆ?
ಕೇಶವಾಚಾರ್ಯ: ವಿಶ್ವೇಶ ತೀರ್ಥರ ಇಚ್ಛೆಯಂತೆ ಶ್ರೀಪಾದರ ವಿದ್ಯಾಗುರು-ಫಲಿಮಾರು/ಭಂಡಾರಕೇರಿ ಉಭಯ ಮಠಾಧೀಶರಾಗಿದ್ದ ವಿದ್ಯಾಮಾನ್ಯ ತೀರ್ಥ ಶ್ರೀಪಾದರ ಮೃತ್ತಿಕಾ ಬೃಂದಾವನವನ್ನು ಮತ್ತು ಪೇಜಾವರ ವಿಶ್ವೇಶ ತೀರ್ಥ ಶ್ರೀಪಾದರ ಮೂಲ ಬೃಂದಾವನವನ್ನು ಏಕ ಪಾಣಿ ಪೀಠದಲ್ಲಿ ಒಂದೇ ಸಂಕೀರ್ಣದೊಳಗೆ ನಿರ್ಮಾಣ ಮಾಡಲಾಗಿದೆ.
ಕಲ್ಪ: ಬೃಂದಾವನದ ಬಗ್ಗೆ ತಿಳಿಸಿ?
ಕೇಶವಾಚಾರ್ಯ: ಶ್ರೀವಿದ್ಯಾಮಾನ್ಯ ತೀರ್ಥರ ಮೃತ್ತಿಕಾ ಬೃಂದಾವನವು ಪೇಜಾವರ ಶ್ರೀಗಳ ಬೃಂದಾವನಕ್ಕಿಂತ ಒಂದು ಇಂಚು ಎತ್ತರವಿದೆ. ಕಳೆದ ಮೂರು ತಿಂಗಳನಿಂದ ಸುಮಾರು 20 ಕುಶಲಕರ್ಮಿಗಳು ನಾಲ್ಕೈದು ತಂಡಗಳಲ್ಲಿ ಕಾರ್ಯನಿರ್ವಹಿಸಿ ಬೃಂದಾವನ ನಿರ್ಮಾಣ ಮಾಡಿದ್ದಾರೆ. ಬೃಂದಾವನದಲ್ಲಿ ಮೂಡಿರುವ ಭಗವದ್ರೂಪಗಳನ್ನು ಬೆಂಗಳೂರಿನ ವಾಸ್ತು ತಜ್ಞ ಶೇಷಗಿರಿರಾವ್ ವಿನ್ಯಾಸ ಮಾಡಿದ್ದಾರೆ.
ಕಲ್ಪ: ಬೃಂದಾವನಕ್ಕೆ ಬಳಸಿರುವ ಶಿಲೆ ಯಾವುದು ಹಾಗೂ ಎಲ್ಲಿಂದ ತರಿಸಿದ್ದು?
ಕೇಶವಾಚಾರ್ಯ: ಇಳಕಲ್’ನಿಂದ ಕೆಂಪು ಕಲ್ಲು, ನೆಲ್ಲಿಕಾರುವಿನಿಂದ ಕಪ್ಪು ಕಲ್ಲು, ಕಾರ್ಕಳದಿಂದ ಕಂದು ಕಲ್ಲು, ಶಿರಾದಿಂದ ಶಿರಾ ಕಲ್ಲು ತಂದು ನಿರ್ಮಾಣ ಮಾಡಲಾಗಿದೆ.
ಕಲ್ಪ: ಗುರು-ಶಿಷ್ಯರ ಬೃಂದಾವನದಲ್ಲಿ ಇರುವ ಭಗವದ್ರೂಪಗಳ ಬಗ್ಗೆ ತಿಳಿಸಿ?
ಕೇಶವಾಚಾರ್ಯ: ಶ್ರೀಗಳ ಬೃಂದಾವನದಲ್ಲಿ ಒಂಬತ್ತು ಭಗವದ್ರೂಪ ಹನುಮ, ಭೀಮ, ಮಧ್ವ, ವಾಯು, ವಾಸುದೇವ ಹೀಗೆ ಒಟ್ಟು 14 ರೂಪಗಳು, ಪೀಠ ಪೂಜಾ ಕ್ರಮದಂತೆ ಕೂರ್ಮಾದಿ ಮೂರು ರೂಪಗಳು ಕಣ್ಣಿಗೆ ಕಾಣುವಷ್ಟು ದೊಡ್ಡದಿದ್ದು, ಪುಷ್ಪಾಕೃತಿಗಳಲ್ಲಿ ಸುಮಾರು 75 ರೂಪಗಳಿವೆ.
ಕಲ್ಪ: ಬೃಂದಾವನದ ವಿಸ್ತೀರ್ಣ ಹಾಗೂ ನಿರ್ಮಾಣಕ್ಕೆ ತಗುಲಿದ ವೆಚ್ಚ?
ಕೇಶವಾಚಾರ್ಯ: ಬೃಂದಾವನ 234 ಚದರಡಿ ವಿಸ್ತೀರ್ಣದಲ್ಲಿದ್ದು, 13 ಅಡಿ ಎತ್ತರ ಹೊಂದಿದೆ. 40 ಲಕ್ಷ ರೂಪಾಯಿ ವೆಚ್ಚದಲ್ಲಿ ಬೃಂದಾವನ ನಿರ್ಮಾಣವಾಗಿದೆ.
ಮಾಸ್ಕ್ ಧಾರಣೆ ಕಡ್ಡಾಯ
ಕೊರೋನಾ ವೈರಸ್ ಕಾರಣ ಭಕ್ತರ ಆರೋಗ್ಯ ಮತ್ತು ದೇವಾಲಯದ ಹಿತದೃಷ್ಟಿಯಿಂದ ಭಕ್ತರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಯಾವುದೇ ಆತಂಕವಿಲ್ಲದೆ ಗುರುಗಳ ಅನುಗ್ರಹಕ್ಕೆ ಪಾತ್ರರಾಗಿ ಎಂದು ಕೇಶವಾಚಾರ್ಯರು ವಿನಂತಿಸಿಕೊಂಡಿದ್ದಾರೆ.
(ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರ ಅನುಮತಿಯೊಂದಿಗೆ ಅವರ -ವಂದೇ ಗುರು ಪರಂಪರಮ್ ಪುಸ್ತಕದಿಂದ ಗುರು-ಶಿಷ್ಯರ ಬಾಂಧವ್ಯದ ಬಗ್ಗೆ ನಾಲ್ಕು ಸಾಲುಗಳನ್ನು ಬಳಸಿಕೊಳ್ಳಲಾಗಿದೆ)
(ಛಾಯಾಚಿತ್ರ ಕೃಪೆ: ಸೋಮಶೇಖರ್ ರಾವ್, ಬೆಂಗಳೂರು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post