ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಜ.2-3ರಂದು ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಜ.3ರಂದು ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದಾರೆ.
ಈ ಕುರಿತಂತೆ ಉನ್ನತ ಮೂಲಗಳಿಂದ ಮಾಹಿತಿ ತಿಳಿದುಬಂದಿದ್ದು, ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯ ಕಾರ್ಯಕಾರಿಣಿಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಜ.3ರಂದು ಬೆಳಿಗ್ಗೆ 09.00 ಕ್ಕೆ ಜನಸಂಘದ ಕಾರ್ಯಕರ್ತರ ಸಮ್ಮುಖದಲ್ಲಿ, ವಿಶೇಷ ಸಭೆ ಪ್ರೇರಣಾ ಸಭಾಂಗಣದ ಮುಂಭಾಗದಲ್ಲಿ ನಡೆಯಲಿದ್ದು, ಇದರಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಧ್ವಜಾರೋಹಣ ಮತ್ತು ಗೋಪೂಜೆ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಉಪಸ್ಥಿತರಿರುತ್ತಾರೆ.
ಈ ಬಾರಿ ಶಿವಮೊಗ್ಗ ನಗರದಲ್ಲಿ ಜ.2 ಮತ್ತು 3 ರಂದು ನಡೆಯಲಿರುವ ರಾಜ್ಯ ಬಿಜೆಪಿ ವಿಶೇಷ ಸಭೆಯು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಸಿಎಂ ಬಿ.ಎಸ್. ಯಡಿಯೂರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸೇರಿದಂತೆ ರಾಷ್ಟ್ರೀಯ ನಾಯಕರು ಪಾಲ್ಗೊಳ್ಳಲಿದ್ದಾರೆ.
ಅಲ್ಲದೇ ಮಂತ್ರಿ ಮಂಡಲದ ಹಲವು ಸಚಿವರು, ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ರಾಜ್ಯ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ವಿಭಾಗ ಪ್ರಭಾರಿ, ಸಹ-ಪ್ರಭಾರಿ, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ, ಸಹ-ಸಂಘಟನಾ ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾಧ್ಯಕ್ಷರುಗಳು, ವಿವಿಧ ಪ್ರಕೋಷ್ಟಗಳ ರಾಜ್ಯ ಸಂಚಾಲಕರು, ಸಹ-ಸಂಚಾಲಕರುಗಳು ರೀತಿಯ ಅತೀ ಗಣ್ಯರು ಆಗಮಿಸುತ್ತಿದ್ದಾರೆ. ಒಟ್ಟು 185 ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಈ ವಿಶೇಷ ಸಭೆಯಲ್ಲಿ ನಮ್ಮ ಸಂಸ್ಕೃತಿಗೆ, ಸಾರ್ವಜನಿಕರಿಗೆ, ಸಂಘಟನೆಗೆ ಪೂರಕವಾದ ನಿರ್ಣಯಗಳು ಮಂಡನೆಯಾಗಲಿವೆ ಎಂದು ಪಕ್ಷದ ಪ್ರಮುಖರು ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post