ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರದಲ್ಲಿ ಘೋಷಿತ ಸರ್ಕಾರಿ ಹಾಗೂ ಸ್ಥಳೀಯ ಸಂಸ್ಥೆ ಮಾಲೀಕತ್ವದಲ್ಲಿರುವ 35ಕೊಳಚೆ ಪ್ರದೇಶಗಳಲ್ಲಿ ವಾಸವಿರುವ ಕೊಳಚೆ ನಿವಾಸಿಗಳಿಗೆ ಸ್ವತ್ತಿನ ಹಕ್ಕುಪತ್ರ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಅರ್ಹ ಫಲಾನುಭವಿಗಳಿಗೆ ಸರ್ಕಾರದ ಮಾರ್ಗಸೂಚಿಯನ್ವಯ ಹಕ್ಕುಪತ್ರ ವಿತರಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ಇಂದು ಶಿವಮೊಗ್ಗ ನಗರದ ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವ ಸಮೀಕ್ಷೆ ಕೈಗೊಳ್ಳುವ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಮೀಕ್ಷೆಯ ನಂತರ ಹಕ್ಕುಪತ್ರ ವಿತರಿಸಲಾಗುವ ಮನೆಯ ಚಕ್ಕುಬಂದಿ ಮತ್ತಿತರ ವಿವರಗಳನ್ನು ಹಕ್ಕುಪತ್ರದಲ್ಲಿ ನಮೂದಿಸಲಾಗುವುದು ಎಂದರು.
ಪ್ರಸ್ತುತ ಮನೆಗಳಿಗೆ ನಂಬರ್ ಹಾಕುವ ಕಾರ್ಯ ಪ್ರಗತಿಯಲ್ಲಿದೆ. ಹಕ್ಕುಪತ್ರಗಳನ್ನು ಪಡೆದುಕೊಂಡ ಫಲಾನುಭವಿಯು ಪರಿಶಿಷ್ಟ ಜಾತಿ/ಪಂಗಡಗಳಿಗೆ ಸೇರಿದ್ದಲ್ಲಿ 5,000 ರೂ. ಹಾಗೂ ಇತರೆ ಸಮುದಾಯವರಾಗಿದ್ದಲ್ಲಿ 10,000 ರೂ.ಗಳನ್ನು ನೋಂದಣಿ ಶುಲ್ಕ ಪಾವತಿಸಬೇಕಾಗುವುದು. ಫಲಾನುಭವಿಗಳು ಮನೆಯನ್ನು ತಮ್ಮಿಷ್ಟದಂತೆ ನಿರ್ಮಿಸಿಕೊಳ್ಳಲು ಬ್ಯಾಂಕುಗಳಿಂದ ಸಾಲಸೌಲಭ್ಯವನ್ನೂ ಪಡೆದುಕೊಳ್ಳಲು ಸಹಕಾರಿಯಾಗಲಿದೆ ಎಂದ ಅವರು ಜಿಲ್ಲೆಯಲ್ಲಿನ 19,000ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗುತ್ತಿದ್ದು, ಆ ಎಲ್ಲಾ ಕುಟುಂಬಗಳ ಪ್ರತಿನಿಧಿಗಳು ಮನೆ ಕಟ್ಟಿಕೊಳ್ಳಲು ಬ್ಯಾಂಕ್ ಸಾಲ ಸೌಲಭ್ಯಕ್ಕಾಗಿ ಶಿಫಾರಸ್ಸು ಮಾಡಲಾಗುವುದು ಎಂದರು.
ಈ ಮಹತ್ವದ ಸಮೀಕ್ಷಾ ಕಾರ್ಯದಲ್ಲಿ ಕೊಳಚೆ ಅಭಿವೃದ್ಧಿ ಮಂಡಳಿ, ಮಹಾನಗರಪಾಲಿಕೆ, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ಅನುಭವಿ ಸಿಬ್ಬಂಧಿಗಳ ನೆರವನ್ನು ಪಡೆದುಕೊಳ್ಳಲಾಗುವುದು. ಈ ಕಾರ್ಯಕ್ಕೆ ತೊಡಗಿಸಿಕೊಳ್ಳುವ ನೌಕರರು ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸುವಂತೆ ಹಾಗೂ ನಡೆಸುವ ಸಮೀಕ್ಷಾ ಕಾರ್ಯ ಸಮರ್ಪಕವಾಗಿರುವಂತೆ ನೋಡಿಕೊಳ್ಳಬೇಕೆಂದ ಅವರು, ಸಮೀಕ್ಷಾ ಸಂದರ್ಭದಲ್ಲಿ ಇತ್ಯರ್ಥಪಡಿಸಲಾಗದ ಸಮಸ್ಯೆಗಳಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 5,700 ಕುಟುಂಬಗಳ 15000 ಸದಸ್ಯರು ಈ ಯೋಜನೆಯ ಪೂರ್ಣ ಲಾಭ ಪಡೆದುಕೊಳ್ಳಲಿದ್ದಾರೆ. ಸಮೀಕ್ಷೆಗೆ ನಿಯೋಜಿತರಾದ ಅಧಿಕಾರಿಗಳು ಪ್ರಾಮಾಣಿಕವಾಗಿ, ಅಲ್ಲಿನ ನಿವಾಸಿಗಳಿಗೆ ಮುಂದಿನ ದಿನಗಳಲ್ಲಿ ರಸ್ತೆ, ಚರಂಡಿ, ನೀರು, ಬೆಳಕು, ಗಾಳಿ ಸೇರಿದಂತೆ ಯಾವುದೇ ಸಮಸ್ಯೆಗಳುಂಟಾಗದಂತೆ ಸಮೀಕ್ಷೆ ನಡೆಸಿ, ಫಲಾನುಭವಿಗಳಿಗೆ ಹಕ್ಕುಪತ್ರ ಕೊಡಿಸುವಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಪ್ರಸ್ತುತ ಸಮೀಕ್ಷೆಗೆ ಒಳಪಡಿಸುತ್ತಿರುವ ಯಾವುದೇ ಸ್ಥಳ ಸಮೀಕ್ಷೆಗೆ ಪೂರಕವಾಗಿರುವುದಿಲ್ಲ ಎಂಬ ಅರಿವು ಹೊಂದಿದ್ದು, ಮುಂದಿನ ದಿನಗಳಲ್ಲಿ ಇಲ್ಲಿನ ನಿವಾಸಿಗಳಿಗೆ ಎದುರಾಗಬಹುದಾದ ಹಾಗೂ ಸಮಸ್ಯೆ-ಸವಾಲುಗಳನ್ನು ಅರಿತು ಕೈಗೊಂಡ ಕಾರ್ಯ ಪೂರ್ಣಗೊಳಿಸುವಂತೆ ಸೂಚಿಸಿದರು.
ತರಬೇತಿ ಕಾರ್ಯಾಗಾರದಲ್ಲಿ ಮಹಾನಗರ ಪಾಲಿಕೆ ಮೇಯರ್ ಸುವರ್ಣಶಂಕರ್, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ಎಸ್. ವಟಾರೆ, ಆಶ್ರಯ ಸಮಿತಿ ಅಧ್ಯಕ್ಷ ಶಶಿಧರ್, ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಾರ್ಯಪಾಲಕ ಅಭಿಯಂತರ ಮಂಜುನಾಥ ಗೌಡ ಮುಂತಾದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post