ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ದೇಶದಲ್ಲಿ ಕೊರೋನಾ ಆಬ್ಬರ ದಿನಕಳೆದಂತೆ ಹೆಚ್ಚಾಗುತ್ತಲೇ ಇದ್ದು, ಈ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ತರಲು ಕೇಂದ್ರ ಆರೋಗ್ಯ ಸಚಿವಾಲಯ ಕ್ರಮಕ್ಕೆ ಮುಂದಾಗಿದೆ.
ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮನೋಹರ್ ಅಜ್ಞಾನಿಯವರು ಮಹಾರಾಷ್ಟ್ರ, ಮಧ್ಯಪ್ರದೇಶ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ ಹಾಗೂ ಛತ್ತೀಸ್ಗಢ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದ್ದು, ಲಸಿಕೆ ನೀಡಿಕೆ ಕಾರ್ಯಕ್ರಮ ತ್ವರಿತಗೊಳಿಸುವಂತೆ ಸೂಚನೆ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು, ರಾಜ್ಯದ 6 ಜಿಲ್ಲೆಗಳಾದ ಪುಣೆ, ನಾಗ್ಪುರ, ಮುಂಬೈ, ಸುಬುರ್ಬನ್, ಅಮರಾವತಿ, ಥಾಣೆ ಹಾಗೂ ಅಕೋಲಾದಲ್ಲಿ, ಮಧ್ಯಪ್ರದೇಶದ ಇಂದೋರ್, ಭೋಪಾಲ್ ಹಾಗೂ ಬೇತೂಲ್ ನಲ್ಲಿ, ಪಂಜಾಬ್ ರಾಜ್ಯದ ಎಸ್‌ಬಿಎಸ್ ನಗರ, ಕಾಪುರ್ತಲಾ ಮತ್ತು ಮುಕ್ಸಾರ್ ಸಾಬಿಬ್, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಹಾಗೂ ಛತ್ತೀಸ್ಗಢದ ರಾಜನಂದ್ ಗಾಂವ್ ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ದಿನಕಳೆದಂತೆ ಹೆಚ್ಚಾಗುತ್ತಿದೆ. ಹೀಗಾಗಿ ಈ 5 ರಾಜ್ಯಗಳು ಲಸಿಕೆ ನೀಡಿಕೆ ಕಾರ್ಯಕ್ರಮವನ್ನು ತ್ವರಿತಗೊಳಿಸಬೇಕಿದೆ ಎಂದು ಹೇಳಲಾಗಿದೆ.
ಕೊರೋನಾ ಸೋಂಕು ನಿಯಂತ್ರಣಕ್ಕೆ ತರಲು ಕೂಡಲೇ ಆಯಾ ಜಿಲ್ಲೆಗಳ ಸಂಬಂಧಪಟ್ಟಂತಹ ಅಧಿಕಾರಿಗಳಿಗೆ ಕೊರೋನಾ ಲಸಿಕೆ ನೀಡಿಕೆ ಕಾರ್ಯಕ್ರಮವನ್ನು ತ್ವರಿತಗೊಳಿಸುವಂತೆ ನಿರ್ದೇಶಿಸುವಂತೆ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.
ಇಷ್ಟು ದಿನ ಪ್ರತಿನಿತ್ಯ 5,000ಕ್ಕಿಂತ ಕಡಿಮೆ ಹೊಸ ಸೋಂಕಿತ ಪ್ರಕರಣಗಳು ದಾಖಲಾಗುತ್ತಿದ್ದ ಮಹಾರಾಷ್ಟ್ರದಲ್ಲಿ ಮಂಗಳವಾರ ಇದ್ದಕ್ಕಿದ್ದಂತೆ ಸೋಂಕಿತ ಪ್ರಕರಣಗಳ ಸಂಖ್ಯೆ 6,000ಕ್ಕೆ ತಲುಪಿದೆ. ಅಲ್ಲದೆ, ಮಹಾಮಾರಿ ವೈಸರ್ ಒಂದೇ ದಿನ 51 ಮಂದಿಯನ್ನು ಬಲಿಪಡೆದುಕೊಂಡಿದ್ದು, ಇದು ಆತಂಕ ಹೆಚ್ಚಾಗುವಂತೆ ಮಾಡಿದೆ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post