ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಪ್ರತಿಷ್ಠಿತ ವಿನೂ ಮಾಂಕಡ್ ಟ್ರೋಫಿ ಒಂದು ದಿನದ ಪಂದ್ಯಾವಳಿಯ 19 ವರ್ಷದೊಳಗಿನ (ಯು-19) ರಾಜ್ಯ ಕ್ರಿಕೆಟ್ ತಂಡಕ್ಕೆ ಕೆಎಸ್‌ಸಿಎನ ಶಿವಮೊಗ್ಗ ಜೋನಲ್ ಆಟಗಾರ ಶ್ರೇಯಸ್ ಸಾಗರ್ ಆಯ್ಕೆಯಾಗಿದ್ದಾರೆ.
ಪ್ರಸ್ತುತ ಶ್ರೇಯಸ್ ಸಾಗರ್ ಅವರು ಜಿಲ್ಲೆಯ ಸಾಗರ ತಾಲೂಕಿನ ಯುವರಂಗ ಕ್ರಿಕೆಟ್ ಕ್ಲಬ್ ಪ್ರತಿನಿಧಿಸುತ್ತಿದ್ದಾರೆ. ೧೦ನೇ ವಯಸ್ಸಿನಿಂದಲೇ ಕ್ರಿಕೆಟ್ ಅಭ್ಯಾಸ ಆರಂಭಿಸಿದ ಶ್ರೇಯಸ್ ಸಾಗರ್ ಅವರು ಕ್ರಿಕೆಟ್‌ನಲ್ಲಿ ಹಂತ ಹಂತಕ್ಕೆ ಏರುವ ಮೂಲಕ ಉತ್ತಮ ಸಾಧನೆ ಮಾಡುತ್ತಿದ್ದಾರೆ.
ಆರಂಭಿಕ ಬ್ಯಾಟ್ಸ್ಮನ್ ಆಗಿರುವ ಶ್ರೇಯಸ್ ಮೂರು ವರ್ಷಗಳಿಂದ ಶಿವಮೊಗ್ಗ ಇಂಟರ್‌ಜೋನ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಯು-14 ಹಾಗೂ ಯು-16 ಕ್ರಿಕೆಟ್ ತಂಡಗಳಿಗೂ ಶ್ರೇಯಸ್ ಶಿವಮೊಗ್ಗ ಜೋನ್‌ನಿಂದ ಆಯ್ಕೆಯಾಗಿದ್ದರು. ಇದೀಗ ರಾಜ್ಯದ 19 ವರ್ಷದೊಳಗಿನ ತಂಡಕ್ಕೆ ಮೊದಲ ಬಾರಿ ಆಯ್ಕೆಯಾಗಿದ್ದಾರೆ.
ಇಂಟರ್‌ಜೋನ್ ಪಂದ್ಯಾವಳಿಗಳಲ್ಲಿ ಹಲವು ಶತಕಗಳನ್ನು ಬಾರಿಸಿರುವ ಶ್ರೇಯಸ್ ಸಾಗರ್ ಅವರು ಇತ್ತೀಚೆಗೆ ನಡೆದ 19 ವರ್ಷದೊಳಗಿನ ರಾಜ್ಯ ಕ್ರಿಕೆಟ್ ತಂಡದ ಆಯ್ಕೆ ಪ್ರಕ್ರಿಯೆ ಪಂದ್ಯಾವಳಿಗಳಲ್ಲಿಯೂ ಶತಕಗಳನ್ನು ಸಿಡಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯ ಕ್ರಿಕೆಟ್ ತಂಡದಲ್ಲಿಯೂ ಉತ್ತಮ ಸಾಧನೆ ಮಾಡುವ ಭರವಸೆಯ ಆಟಗಾರ ಶ್ರೇಯಸ್ ಸಾಗರ ಆಗಿದ್ದಾರೆ.
ಪ್ರತಿಷ್ಠಿತ ವಿನೂ ಮಾಂಕಡ್ ಟ್ರೋಫಿಯನ್ನು ಬಿಸಿಸಿಐ ( ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ) ವತಿಯಿಂದ ಪ್ರತಿ ವರ್ಷ ಆಯೋಜಿಸಲಾಗುತ್ತದೆ. ರಾಷ್ಟ್ರೀಯ ಮಟ್ಟದ 19 ವರ್ಷದೊಳಗಿನ ಯುವಕರಿಗೆ ಆಯೋಜಿಸುವ 50 ಓವರ್‌ಗಳ ಪಂದ್ಯಾವಳಿ ಆಗಿದೆ ಎಂದು ಕೆಎಸ್‌ಸಿಎ ಶಿವಮೊಗ್ಗ ಜೋನ್ ಸಂಚಾಲಕ ಡಿ.ಎಸ್.ಅರುಣ್ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post