ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಉದ್ಯಾನ ನಗರಿಯ ಚಾಮರಾಜಪೇಟೆಯ 3ನೆಯ ಮುಖ್ಯರಸ್ತೆಯ ಸಮೀಪದ ಪ್ರಸಿದ್ಧ ಶ್ರೀರಾಮೇಶ್ವರ ದೇವಾಲಯದಲ್ಲಿ ಪಂಚೋತ್ಸವ ಸಂಪನ್ನಗೊಂಡಿತು.
ಹೋಳಿ ಹುಣ್ಣಿಮೆ ಹಬ್ಬದ ಪ್ರಯುಕ್ತ ನಗರದ ಚಾಮರಾಜಪೇಟೆಯಲ್ಲಿರುವ ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಹೊಂದಿರುವ ಶ್ರೀ ರಾಮೇಶ್ವರ ದೇವಾಲಯದ ಉತ್ಸವ ಮೂರ್ತಿಗಳನ್ನು ರಥದಲ್ಲಿ ಪ್ರತಿಷ್ಠಾಪಿಸಿ ಸನ್ನಿಧಿಯಿಂದ ಹಿಡಿದು ಚಾಮರಾಜಪೇಟೆಯ ಪ್ರಮುಖ ಬೀದಿ-ಬೀದಿಗಳಲ್ಲಿ ಮೆರವಣಿಗೆಯ ಮೂಲಕ ವಿಜೃಂಭಣೆಯಿಂದ ಬ್ರಹ್ಮರಥೋತ್ಸವ ಜರುಗಿತು.
ವೀರಗಾಸೆ – ಪೂಜಾ ಕುಣಿತ
ವೀರಗಾಸೆ, ಕುಣಿಗಲ್ ತಾಲೂಕಿನ ವಿ.ಸಿ. ಮಹದೇವಯ್ಯ, ವಡೆಯರಹಳ್ಳಿ ವೀರಗಾಸೆ ಜಾನಪದ ಕಲಾ ತಂಡ, ವೀರಭದ್ರನ ಕುಣಿತ, ಜಾತ್ರೆ, ಶುಭ ಸಮಾರಂಭದಲ್ಲಿ ಭಾಗವಹಿಸಿ ವೀರಭದ್ರನ ಕುಣಿತ ಶುಭ ಸಮಾರಂಭಕ್ಕೆ ಸೀಮಿತ ಎನ್ನುತ್ತಾರೆ ರಾಮನಗರ ತಾಲೂಕಿನ ಅಂಕನಹಳ್ಳಿ ಅಭಿಷೇಕ್.
ಡೋಲೋತ್ಸವ-ನಾದಸ್ವರ
ರಥದ ಮುಂಭಾಗದಲ್ಲಿ ಡೊಲೋತ್ಸವವನ್ನು ನಾಡಿನ ಜಾನಪದ ಕಲಾವಿದರು ನಡೆಸಿಕೊಟ್ಟರು. ದೂರದರ್ಶನ ಮತ್ತು ಆಕಾಶವಾಣಿ ಕಲಾವಿದರು ಮತ್ತು ಕಂಚಿ ಕಾಮಕೋಟಿ ಆಸ್ಥಾನ್ ವಿದ್ವಾನ್ ಶ್ರೀಕಾಂತ ನಾದಸ್ವರ ತಂಡವು ಸುಶ್ರಾವ್ಯವಾಗಿ ನಾದಸ್ವರ ನುಡಿಸಿ ಜಾತ್ರೆಗೆ ಬಂದಿದ್ದ ಭಕ್ತರನ್ನು ಮಂತ್ರ ಮುಗ್ಧರನ್ನಾಗಿಸಿತ್ತು.
ಆರ್ಶಿವಾದ-ಅಭಿನಂದನೆ
ಪಂಚೋತ್ಸವ ಧಾರ್ಮಿಕ ಆಚರಣೆಯ ಯಶಸ್ಸಿಗೆ ಕಾರಣರಾದ ಮುಜಾರಾಯಿ ಇಲಾಖೆಯ ಕಾರ್ಯ ನಿರ್ವಹಣಾ ಅಧಿಕಾರಿ ಶ್ರೀನಿವಾಸ್ ಹಾಗೂ ದೇವಾಲಯದ ಆಡಳಿತ ಮಂಡಳಿಯ ಸದಸ್ಯರನ್ನು ದೇವಾಲಯದ ಪ್ರಧಾನ ಅರ್ಚಕರಾದ ವಿಶ್ವನಾಥ ದೀಕ್ಷಿತ್ ಅವರು ಪೇಟ ತೊಡಸಿ, ಶಾಲು ಹೊದಿಸಿ ಮಂತ್ರ ಘೋಷದ ಮೂಲಕ ಆರ್ಶಿವಾದ ಮಾಡಿ ಅಭಿನಂದಿಸಿದರು.
ದೇವಾಲಯದ ಬಗ್ಗೆ
ಮುಜರಾಯಿ ಇಲಾಖೆಗೆ ಒಳಪಡುವ ಶ್ರೀ ರಾಮೇಶ್ವರ ದೇವಾಲಯ ಚಾಮರಾಜ ಪೇಟೆಯ 3 ನೆಯ ಮುಖ್ಯ ರಸ್ತೆಯ ಕನ್ನಡ ಸಾಹಿತ್ಯ ಪರಿಷತ್ ಸಮೀಪದಲ್ಲಿ ಇದ್ದು, ಈ ದೇವಾಲಯವು ಶತಮಾನಕ್ಕೂ ಹಿಂದಿನದು.
ರಾಮೇಶ್ವರ ಸ್ವಾಮಿ ದೇವಾಲಯದಲ್ಲಿ ಈಶ್ವರ ಲಿಂಗ ಮತ್ತು ಶ್ರೀರಾಮ ಸೀತಾ ಸಮೇತ ಲಕ್ಷ್ಮಣರ ಸನ್ನಿಧಾನವಿದೆ. ಈಶ್ವರ ಲಿಂಗ ಉತ್ತರ ಮುಖಿ ಯಾಗಿದ್ದಾರೆ, ಶ್ರೀರಾಮ ದೇವರ ವಿಗ್ರಹ ಪೂರ್ವಾಭಿಮುಖವಾಗಿದೆ.
ದೇವಾಲಯಕ್ಕೆ ಉತ್ತರ ಮತ್ತು ಪೂರ್ವ ಭಾಗದಲ್ಲಿ ದ್ವಾರಗಳಿದ್ದು ಎರಡು ದೇವರಿಗೂ ಪ್ರತ್ಯೇಕ ಗರುಡ ಗಂಬ ಇರುವುದು ಈ ದೇವಾಲಯದ ವಿಶೇಷ. ಈ ಸನ್ನಿಧಾನದಲ್ಲಿ ಅದ್ವೈತ ಸಂಪ್ರದಾಯದಲ್ಲೇ ಪ್ರತಿನಿತ್ಯ ಪೂಜೆ ನಡೆಯುತ್ತದೆ.
1905 ರಲ್ಲಿ ದೇಗುಲ ನಿರ್ಮಾಣ
ಹಳೇ ಬೆಂಗಳೂರು ಕೋಟೆ ಹೊರವಲಯದಲ್ಲಿ ಇರುವ ಈ ದೇಗುಲಕ್ಕೆ ದಿವಾನ್ ವಿಶ್ವೇಶ್ವರಯ್ಯ ನವರ ಸೋದರ ಮಾವನ ಸುಪರ್ದಿಯಲ್ಲಿದ್ದ ಈ ಸ್ಥಳವನ್ನು ದೇವಾಲಯಕ್ಕೆ ದಾನ ನೀಡಲಾಗಿದೆ. ಮೈಸೂರಿನ ಮಹಾರಾಜ ಚಾಮರಾಜ ಒಡೆಯರ್ ತಮ್ಮ 21 ನೆಯ ವರ್ಧಂತಿ ಸಮಯದಲ್ಲಿ ಈ ದೇವಾಲಯ ನಿರ್ಮಿಸಿ ಧಾರ್ಮಿಕ ಕ್ಷೇತ್ರಕ್ಕೆ ಅರ್ಪಿಸಿದರು. ಚಾಮರಾಜ ಪೇಟೆಯ ಹೊರವಲಯದ ಗೋರಿ ಪಾಳ್ಯದಲ್ಲಿ ದೊರೆತ ಪುರಾತನ ಶಿವಲಿಂಗವನ್ನು ಮೈಸೂರು ಮಹಾರಾಜರು ಸಂರಕ್ಷಿಸಿ ಚಾಮರಾಜಪೇಟೆಯಲ್ಲಿ ನಿರ್ಮಿಸಿದ ದೇವಾಲಯದಲ್ಲಿ 1905 ನೆಯ ಜೂನ್ 26 ರಂದು ಪ್ರತಿಷ್ಠೆ ಮಾಡಲಾಗಿದೆ. ದೇವಾಲಯದ ರಾಜಗೋಪರದ ಅಡಿ ಇರುವ ಶಿಲಾಶಾಸನ ಇತಿಹಾಸ ಸಾರುತ್ತದೆ.
ಸನ್ನಿಧಾನ
ಒಂದೂವರೆ ಎಕರೆ ವಿಶಾಲ ಆವರಣದಲ್ಲಿರುವ ಶ್ರೀ ರಾಮೇಶ್ವರ ಸ್ವಾಮಿ ದೇವಾಲಯದಲ್ಲಿ ಶ್ರೀಸತ್ಯನಾರಾಯಣ, ಸುಬ್ರಹ್ಮಣ್ಯ, ಶ್ರೀ ಆಂಜನೇಯ, ನವಗ್ರಹ ಮತ್ತು ಆದಿಗುರು ಶಂಕರಾಚಾರ್ಯರ ವಿಗ್ರಹ ಹಾಗೂ ದೇವಾಲಯದ ಪ್ರಕಾರದಲ್ಲಿ ನವಗ್ರಹ ವನ, ಅಶ್ವತ್ಥ ವೃಕ್ಷ, ನಾಗರಕಲ್ಲುಗಳು ಇರುವ ವಿಶೇಷ ಸನ್ನಿಧಿ!
(ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post