ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ರಾಜ್ಯಪಾಲರ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ರಾಜ್ಯ ಸರ್ಕಾರವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜ್ಯಪಾಲರ ನೇತೃತ್ವದಲ್ಲಿ ಈ ಸಭೆ ನಡೆಯುತ್ತಿರುವುದೇ ಅಸಾಂವಿಧಾನಿಕ ಎಂದು ಮಾತು ಆರಂಭಿಸಿದ ಸಿದ್ದರಾಮಯ್ಯ, ರಾಜ್ಯಪಾಲರಿಗೆ ಗೌರವ ನೀಡುವ ಸಲುವಾಗಿ ಇಲ್ಲಿಗೆ ಆಗಮಿಸಿದ್ದೇನೆ ಎಂದು ಸರ್ಕಾರಕ್ಕೆ ಚಾಟಿ ಬೀಸಿದರು.
ಕೊರೋನಾ ಪ್ರಕರಣಗಳು ಹೆಚ್ಚಾಗುತ್ತದೆ ಎಂದು ತಜ್ಞರ ಸಮಿತಿ ಬಹಳಷ್ಟು ತಿಂಗಳ ಹಿಂದೆಯೇ ವರದಿ ನೀಡಿತ್ತು. ಆದರೆ, ಅದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸದೇ ಇದ್ದುದೇ ಇಂತಹ ಪರಿಸ್ಥಿತಿಗೆ ಕಾರಣ ಎಂದು ದೂರಿದರು.
ರಾಜ್ಯದಲ್ಲಿ ಇಂತಹ ಪರಿಸ್ಥಿತಿಯಿರುವ ಸಂದರ್ಭದಲ್ಲಿ ಚುನಾವಣೆಗಳನ್ನು ನಡೆಸುವ ಅಗತ್ಯವೇನಿತ್ತು? ಸಾಂವಿಧಾನಿಕ ಬಿಕ್ಕಟ್ಟು ಎದುರಾಗುವ ಕ್ಲಿಷ್ಟ ಪರಿಸ್ಥಿತಿ ರಾಜ್ಯದಲ್ಲಿ ಇರಲಿಲ್ಲ. ಚುನಾವಣೆ ಮುಂದೂಡಿದ್ದರೆ ನಾವುಗಳೆಲ್ಲರೂ ಸೇರಿದಂತೆ ಎಲ್ಲರೂ ರ್ಯಾಲಿಗಳಲ್ಲಿ ಪಾಲ್ಗೊಳ್ಳುವುದು ತಪ್ಪುತ್ತಿತ್ತು ಎಂದರು.
ನಿಮ್ಮ ಸಚಿವರ ಆಪ್ತರೊಬ್ಬರು ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪುತ್ತಾರೆ ಎಂದರೆ ರಾಜ್ಯದಲ್ಲಿ ಎಂತಹ ಭೀಕರ ಪರಿಸ್ಥಿತಿಯಿದೆ ಎಂದು ತಿಳಿಯುತ್ತದೆ. ನೀವು ಏನೇ ಹೇಳಿದರೂ ರಾಜ್ಯದಲ್ಲಿ ಆಕ್ಸಿಜನ್ ಕೊರೆತೆಯಿದೆ ಎಂಬುದು ಬಿಚ್ಚಿಟ್ಟ ಸತ್ಯ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಇನ್ನು, ನೈಟ್ ಕರ್ಫ್ಯೂ ಜಾರಿ ಮಾಡುವುದರಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ ಎಂದಿರುವ ಸಿದ್ದರಾಮಯ್ಯ, ರಾಜ್ಯದಾದ್ಯಂತ 144 ಸೆಕ್ಷನ್ ಜಾರಿಗೊಳಿಸಿ, ಕಠಿಣ ಕ್ರಮ ಕೈಗೊಳ್ಳಿ. ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆಯನ್ನು ಕಡ್ಡಾಯಗೊಳಿಸಿ, ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಹೆಲ್ತ್ ಎಮರ್ಜೆನ್ಸಿ ಘೋಷಣೆ ಮಾಡಿ ಎಂದಿರುವ ಸಿದ್ದರಾಮಯ್ಯ, ಇತರೆ ರಾಜ್ಯಗಳಿಂದ ವಲಸೆ ತಡೆಯುವ ಜೊತೆಯಲ್ಲಿ ಬೇರೆ ರಾಜ್ಯಗಳಿಗೆ ವಿಮಾನ ಸಂಚಾರವನ್ನೂ ಸಹ ನಿಲ್ಲಿಸಿ. ಲಾಕ್ ಡೌನ್ ಮಾಡಿ ಎಂಬುದು ನನ್ನ ಅಭಿಪ್ರಾಯವಲ್ಲ. ಆದರೆ, ತಜ್ಞರು ಲಾಕ್ ಡೌನ್ ಮಾಡಲೇಬೇಕು ಎಂದು ಸಲಹೆ ನೀಡಿದರು ಲಾಕ್ ಡೌನ್ ಮಾಡಿ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post