ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಹರಡುವಿಕೆ ನಿಯಂತ್ರಣ ತಪ್ಪಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಮೇ 23ರವರೆಗೆ ಸಂಪೂರ್ಣ ಲಾಕ್‌ಡೌನ್ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ವರದಿಯಾಗಿದೆ.
ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇಂದು ತುರ್ತು ಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ತಜ್ಞರು ಹಾಗೂ ಸಂಪುಟ ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ಸಂಪೂರ್ಣ ಲಾಕ್‌ಡೌನ್ ಮಾಡಲು ನಿರ್ಧರಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಈಗ ಜಾರಿಯಲ್ಲಿರುವ ಜನತಾ ಕರ್ಫ್ಯೂನಲ್ಲಿ ನೀಡಲಾಗಿರುವ ಎಲ್ಲಾ ವಿನಾಯಿತಿಗಳು ರದ್ದಾಗುವ ಸಾಧ್ಯತೆ ಇದ್ದು, ಕಠಿಣವಾಗಿ ಲಾಕ್‌ಡೌನ್ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಇಂದು ಮಧ್ಯಾಹ್ನದ ವೇಳೆಗೆ ಮುಖ್ಯಮಂತ್ರಿಗಳು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ.
ಬಹುತೇಕ ಸೋಮವಾರದಿಂದ ಇದು ಜಾರಿಗೆ ಬರುವ ಸಾಧ್ಯತೆ ಇದೆ. ಸಂಪೂರ್ಣ ಲಾಕ್‌ಡೌನ್ ಘೋಷಣೆಯಾದ ನಂತರ ಅಗತ್ಯವಸ್ತುಗಳ ಖರೀದಿಗೆ ಈಗ ನೀಡಲಾಗಿರುವ ಸಮಯವನ್ನು ಸಹ ಕಡಿತಗೊಳಿಸಲಾಗುತ್ತದೆ ಎಂದು ಹೇಳಲಾಗಿದ್ದು, ಎಲ್ಲಾ ರೀತಿಯ ವಾಹನ ಸಂಚಾರಕ್ಕೆ ಬ್ರೇಕ್ ಬೀಳಲಿದೆ. ಇದೇವೇಳೆ ಮೆಟ್ರೋ, ರೈಲು, ಬಸ್, ಕ್ಯಾಬ್ ಸೇರಿದಂತೆ ಎಲ್ಲಾ ರೀತಿಯ ವಾಹನ ಸಂಚಾರಕ್ಕೆ ಬ್ರೇಕ್ ಬೀಳಿಲಿದೆ. ಇನ್ನು ಅಂತರ ಜಿಲ್ಲಾ ಹಾಗೂ ಅಂತರರಾಜ್ಯ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದ್ದು, ಗಾರ್ಮೆಂಟ್ಸ್, ಕೈಗಾರಿಕೆ, ಕಟ್ಟಡ ನಿರ್ಮಾಣ ಕಾಮಗಾರಿಗಳಿಗೂ ಸಹ ಅವಕಾಶವಿರುವುದಿಲ್ಲ. ದೇಗುಲ, ಮಸೀದಿ, ಚರ್ಚ್, ಆಟದ ಮೈದಾನ, ಶಾಪಿಂಗ್ ಮಾಲ್, ಜಾತ್ರೆ, ಬೀದಿಬದಿ ವ್ಯಾಪಾರ ಎಲ್ಲವೂ ಸ್ಥಗಿತಗೊಳ್ಳಲಿದೆ. ಹೊಟೇಲ್ ಹಾಗೂ ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ ಈಗ ಪಾರ್ಸಲ್‌ಗೆ ನೀಡಿರುವ ಅವಕಾಶವೂ ಸಹ ರದ್ಧಾಗಲಿದೆ ಎಂದು ಹೇಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post