ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಕೋವಿಡ್ -19 ನ ಎರಡನೇ ಅಲೆ ಹಿನ್ನೆಲೆಯಲ್ಲಿ ಜಾರಿಯಾಗಿದ್ದ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಚಲನಚಿತ್ರ ಮತ್ತು ಕಿರುತೆರೆ ಕಲಾವಿದರು ಮತ್ತು ತಂತ್ರಜ್ಞರು ಹಾಗೂ ಚಲನಚಿತ್ರ ಮಂದಿರದ ಕಾರ್ಮಿಕರಿಗೆ ಮುಖ್ಯಮಂತ್ರಿಯವರು ಘೋಷಿಸಿದ್ದ ಮೂರು ಸಾವಿರ ರೂ. ಮೊತ್ತದ ವಿಶೇಷ ಆರ್ಥಿಕ ಪ್ಯಾಕೇಜ್‌ನ ನೆರವಿಗಾಗಿ ಸೇವಾಸಿಂಧು ಪೋರ್ಟಲ್ ಮೂಲಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಜುಲೈ 31ರವರೆಗೆ ವಿಸ್ತರಿಸಿದೆ.
ಚಲನಚಿತ್ರ ರಂಗದವರು ಮತ್ತು ಕಿರುತೆರೆ ರಂಗದವರಿಗೆ ಆರ್ಥಿಕ ನೆರವನ್ನು ಆಧಾರ್ ಕಾರ್ಡ್ ಸಂಖ್ಯೆಯನ್ನು ಆಧರಿಸಿ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲು ಅನುವಾಗುವಂತೆ ಸೇವಾಸಿಂಧು ವೆಬ್‌ಪೋರ್ಟಲ್‌ನಲ್ಲಿ ಜುಲೈ 9ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು. ಈ ಅವಧಿಯನ್ನು ವಿಸ್ತರಿಸುವಂತೆ ವಿವಿಧ ಸಂಘಗಳು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಕೆ ಅವಧಿಯನ್ನು ಜುಲೈ 31ರವರೆಗೆ ವಿಸ್ತರಿಸಲಾಗಿದೆ.
ರಾಜ್ಯದಲ್ಲಿ ಎರಡನೇ ಅಲೆಯ ವೇಳೆ ಸರ್ಕಾರ ವಿಧಿಸಿದ್ದ ನಿರ್ಬಂಧದಿಂದಾಗಿ ಬಾಧಿತರಾಗಿದ್ದ ಸಮಾಜ ವಿವಿಧ ವರ್ಗದವರಿಗೆ ಮುಖ್ಯಮಂತ್ರಿ ಯವರು 2021ರ ಜೂನ್ 3 ರಂದು ವಿಶೇಷ ಪರಿಹಾರದ ಎರಡನೇ ಪ್ಯಾಕೇಜ್ ಅನ್ನು ಘೋಷಣೆ ಮಾಡಿದ್ದರು. ಇದರಲ್ಲಿ ಚಲನಚಿತ್ರೋದ್ಯಮ ಹಾಗೂ ಕಿರುತೆರೆ ಮಾಧ್ಯರಮದಲ್ಲಿ ತೊಡಗಿಕೊಂಡಿರುವ ನೋಂದಾಯಿತ ಅಸಂಘಟಿತ ಕಾರ್ಮಿಕರಿಗೆ ತಲಾ ಮೂರು ಸಾವಿರ ರೂ. ಪರಿಹಾರವನ್ನು ನೀಡಲಾಗುತ್ತಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ. ಪಿ.ಎಸ್. ಹರ್ಷ ಅವರು ತಿಳಿಸಿದ್ದಾರೆ.
ಅವಧಿ ವಿಸ್ತರಣೆ ಬಳಿಕವೂ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಸೇವಾಸಿಂಧು ಪೋರ್ಟಲ್‌ನಲ್ಲಿ ಸಲ್ಲಿಸಬೇಕು. ಅರ್ಜಿ ಇಲ್ಲವೇ ಶಿಫಾರಸ್ಸು ಪತ್ರಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಯಾವುದೇ ಕಚೇರಿಗಳಲ್ಲಿ ಸ್ವೀಕರಿಸಲಾಗುವುದಿಲ್ಲ. ಅರ್ಜಿ ನಮೂನೆ ಮತ್ತು ಇನ್ನಿತರ ಷರತ್ತುಗಳಿಗಾಗಿ www.sevasindhu.karnataka.gov.in ಗೆ ಭೇಟಿ ನೀಡಿ ಪಡೆದುಕೊಳ್ಳಬಹುದು.
ಆರ್ಥಿಕ ನೆರವಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಮತ್ತು ಆನ್‌ಲೈನ್‌ನಲ್ಲಿ ಅರ್ಜಿಯನ್ನು ಭರ್ತಿ ಮಾಡಲು, ತಾಂತ್ರಿಕ ಮಾರ್ಗದರ್ಶನದ ಅಗತ್ಯವಿದ್ದಲ್ಲಿ ಕರ್ನಾಟಕ ಟೆಲಿವಿಷನ್ಅಸೋಸಿಯೇಷನ್ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.
ವಿಳಾಸ: ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ , ನಂ. 406A, 24ನೇ ಅಡ್ಡರಸ್ತೆ, ಬನಶಂಕರಿ 2ನೇ ಹಂತ, ಬಾಟ ಶೋ ರೂಮ್ ಹತ್ತಿರ. ಬೆಂಗಳೂರು-560070, ಮೊ – 7795185608ಗೆ ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post