ಕಲ್ಪ ಮೀಡಿಯಾ ಹೌಸ್
ಬೆಂಗಳೂರು: 2020-21ನೇ ಸಾಲಿನಲ್ಲಿ ಪಾಲಿಕೆ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್, ಬೆಲ್ಟ್, ಸ್ವೆಟರ್‌ಗಳನ್ನು ನೀಡದೇ ಬೋಗಸ್ ಬಿಲ್ ಮಾಡಿ ಬಿಬಿಎಂಪಿಗೆ ಆರ್ಥಿಕ ನಷ್ಟ ಉಂಟುಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ರಾಜ್ಯಾಧ್ಯಕ್ಷ ಡಾ ಸಿ ಎಸ್ ರಘು ಮುಖ್ಯ ಆಯುಕ್ತ ಗೌರವ್ ಗುಪ್ತ ಅವರಿಗೆ ದೂರು ನೀಡಿದ್ದಾರೆ.
ಆಯುಕ್ತರನ್ನು ಶನಿವಾರ ಭೇಟಿಯಾದ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಡಾ.ಸಿ.ಎಸ್. ರಘು, “ಈ ಅಕ್ರಮದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಪೋಲಾಗಿರುವ ಸಾರ್ವಜನಿಕರ ತೆರಿಗೆ ಹಣವನ್ನು ತಪ್ಪಿತಸ್ಥರಿಂದ ವಸೂಲಿ ಮಾಡಬೇಕು,” ಎಂದು ಆಗ್ರಹಿಸಿದರು.
“2020-21ನೇ ಸಾಲಿನ ಪಾಲಿಕೆ ಆಯವ್ಯಯದಲ್ಲಿ ಶಾಲಾ ಕಾಲೇಜುಗಳಿಗೆ ಅವಶ್ಯವಿರುವ ಮೂಲ ಸೌಕರ್ಯ ಹಾಗೂ ಇತರ ಸೌಲಭ್ಯಗಳನ್ನು ತುರ್ತಾಗಿ ಒದಗಿಸಲು ಕೆಹೆಚ್‌ಡಿಸಿ ಹಾಗೂ ಎಂಎಸ್‌ಐಎಲ್ ಸಂಸ್ಥೆ ವತಿಯಿಂದ ಅಗತ್ಯ ಸಲಕರಣೆಗಳನ್ನು ಖರೀದಿಸಿರುವುದಾಗಿ ಹೇಳಲಾಗಿದೆ. 2021ನೇ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳೀಗೆ ಶೂ, ಸಾಕ್ಸ್, ಬೆಲ್ಟ್ ವಿತರಿಸಲು ಪಾಲಿಕೆಯಿಂದ 1.72 ಕೋಟಿ ರೂ.ಪಾವತಿ ಆಗಿದೆ. ಆದರೆ, ಕೊರೋನಾ ಹಿನ್ನೆಲೆಯಲ್ಲಿ ಶಾಲೆಗಳನ್ನು ಮುಚ್ಚಿರುವುದರಿಂದ ವಿದ್ಯಾರ್ಥಿಗಳಿಗೆ ಇವುಗಳನ್ನು ವಿತರಿಸುವ ಪ್ರಮೇಯವೇ ಬರುವುದಿಲ್ಲ. ಹೀಗಾಗಿ ಇದರಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟವಾಗುತ್ತದೆ,” ಎಂದು ರಘು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
“ಅದೇ ರೀತಿ 400 ರೂಪಾಯಿ ಬೆಲೆಯ ಸ್ವೆಟರ್ ಅನ್ನು 1400 ರೂಪಾಯಿ ಎಂದು ನಮೂದಿಸಿ ಬಿಲ್ ಮಾಡಲಾಗಿದೆ. ಈ ಕುರಿತು ಆರ್‌ಟಿಐ ಮೂಲಕ ಮಾಹಿತಿ ಪಡೆದಿದ್ದೇವೆ. ಬಿಬಿಎಂಪಿಯಲ್ಲಿ ಬಿಲ್ ಕ್ಲಿಯರ್ ಆಗುವುದೇ ಕಷ್ಟ. ಆದರೆ, ಈ ಖರೀದಿ ಪ್ರಕರಣಗಳಲ್ಲಿ ದಿಢೀರ್ ಬಿಲ್ ಪಾವತಿಯಾಗಿದ್ದು, ಇದು ಕೂಡ ಅನುಮಾನಕ್ಕೆ ಕಾರಣವಾಗಿದೆ. ಆದ್ದರಿಂದ ಈ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ದಲಿತ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಸೌಲಭ್ಯಗಳನ್ನು ಒದಗಿಸಿ,” ಎಂದು ಅವರು ಮನವಿ ಮಾಡಿದರು.
ಈ ಪ್ರಕರಣದಲ್ಲಿ ಪ್ರಮುಖವಾಗಿ ಬಿಬಿಎಂಪಿ ಮುಖ್ಯ ಆಯುಕ್ತ ರಾದ ಗೌರವ್ ಗುಪ್ತಾ ಹಾಗೂ ವಿಶೇಷ ಆಯುಕ್ತೆ ಹಣಕಾಸು ತುಳುಸಿ ಮೇದಿನೇನಿ ತಪ್ಪಿತಸ್ಥರಾಗಿದ್ದಾರೆ. 6-3-21 ರಲ್ಲಿ ಕಾರ್ಯಾದೇಶ ನೀಡಿದ್ದು ನಂತರ ಶಾಲಾ ಕಾಲೇಜುಗಳು ಪ್ರಾರಂಭವೇ ಆಗಿಲ್ಲ. ಕಾರ್ಯಾದೇಶ ದಲ್ಲಿ ಒಂದು ಕಡೆ ಸ್ವೆಟರ್ ಮತ್ತಿತರ ವಸ್ತುಗಳು ಎಂದು ಉಲ್ಲೇಖ ಆಗಿದ್ದರೆ. ಡಿ ಸಿ ಬಿಲ್ ನಲ್ಲಿ ಪುಸ್ತಕ ಎಂದು ನಮುದಾಗಿದೆ. ಮಕ್ಕಳಿಗೆ ಯಾವುದೇ ವಸ್ತುಗಳನ್ನು ಕೊಟ್ಟಿರುವ ಛಾಯಾಚಿತ್ರ ವರದಿಯಲ್ಲಿ ಉಲ್ಲೇಖಿಸಲಾಗಿಲ್ಲ. ಅಲ್ಲದೆ, ಕೇವಲ ಶಾಲೆಗಳಿಗೆ ನೀಡಿದ್ದೇವೆ ಎಂದು ಮುಚ್ಚಳಿಕೆ ಮೇಲೇ ಹಣ ಪಾವತಿ ಮಾಡಲಾಗಿದೆ. ಕೆಲಸ ಮಾಡಿ ನಾಲ್ಕಾರು ವರ್ಷದ ಕಾಲ ಚಪ್ಪಲಿ ಸವೇದರು ಹಣ ನೀಡದೆ ಸತಾಯಿಸುವ ಬಿಬಿಎಂಪಿ ಅಧಿಕಾರಿಗಳು ಇಷ್ಟು ಬೇಗ ಹಣ ನೀಡಿದ್ದು ಹೇಗೆ ಎಂದು ಅವರು ಪ್ರಶ್ನಿಸಿದರು.
ತಾವು ನೀಡಿದ ದೂರಿನ ಕುರಿತಂತೆ ಆಯುಕ್ತರಾದ ಗೌರವ್ ಗುಪ್ತ ಅವರು ಪೂರಕವಾಗಿ ಸ್ಪಂದಿಸಿದ್ದು, ಪ್ರಕರಣದ ಕುರಿತು ಮಾಹಿತಿ ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುವುದಾಗಿ ಡಾ.ಸಿ.ಎಸ್. ರಘು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post