ಕಲ್ಪ ಮೀಡಿಯಾ ಹೌಸ್
ಮಂಗಳೂರು: ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ.
ಮನೆಯಲ್ಲಿ ವ್ಯಾಯಾಮ ಮಾಡುತಿದ್ದ ವೇಳೆ ಆಯತಪ್ಪಿ ಬಿದ್ದು ತೀವ್ರವಾದ ಆಂತರಿಕ ಗಾಯಗಳಾಗಿದ್ದ ಪರಿಣಾಮ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಮಾರ್ಚ್ 27, 1941ರಲ್ಲಿ ಉಡುಪಿಯಲ್ಲಿ ಜನಿಸಿದ್ದ ಫರ್ನಾಂಡಿಸ್ ಅವರು 1980 ರಲ್ಲಿ ಉಡುಪಿ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಆ ಬಳಿಕ 1984, 1989, 1991, ಹಾಗೂ 1996 ರಲ್ಲಿ ಉಡುಪಿಯಿಂದ ಲೋಕಸಭೆ ಸದಸ್ಯರಾರಿ ಸತತವಾಗಿ ಆಯ್ಕೆಯಾಗಿದ್ದರು.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿದ್ದ ಆಸ್ಕರ್ ಫರ್ನಾಂಡಿಸ್, ಐಎನ್‌ಸಿಯಲ್ಲಿ ಉನ್ನತ ಹುದ್ದೆಗಳನ್ನು ನಿಭಾಯಿಸಿ ಅನುಭವವುಳ್ಳ ನಾಯಕರಾಗಿದ್ದರು. ಹಾಗೂ ರಾಹುಲ್ ಗಾಂಧಿ ಅವರಿಗೂ ಆಸ್ಕರ್ ಆಪ್ತರಾಗಿದ್ದರು.
ಡಾ. ಮನಮೋಹನ್ ಸಿಂಗ್ ಅವರ ಯುಪಿಎ ಮೊದಲ ಸರ್ಕಾರದಲ್ಲಿ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯದ ರಾಜ್ಯ ಖಾತೆ ಸಚಿವ (ಸ್ವತಂತ್ರ ನಿರ್ವಹಣೆ)ರಾಗಿದ್ದ ಆಸ್ಕರ್ ಫರ್ನಾಂಡಿಸ್ ಯುಪಿಎ-2 ನಲ್ಲಿ ಸಾರಿಗೆ, ರಸ್ತೆ ಹಾಗೂ ಹೆದ್ದಾರಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.
2004-2009ರಲ್ಲಿ ಕೇಂದ್ರ ಸಚಿವರಾಗಿ ಸಾಂಖ್ಯಿಕ ಹಾಗೂ ಯೋಜನಾ ಜಾರಿ ಸಚಿವಾಲಯ, ಎನ್‌ಆರ್ ಐ ವ್ಯವಹಾರಗಳ ಖಾತೆ, ಯುವಜನ ಕ್ರೀಡಾ ಖಾತೆ, ಕಾರ್ಮಿಕ ಹಾಗೂ ಉದ್ಯೋಗ ಖಾತೆಗಳಂತಹ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದರು.
ಗಣ್ಯರ ಸಂತಾಪ:
ಗಾಂಧಿ ತತ್ವ, ಸರಳತೆಗೆ ಹೆಸರಾಗಿದ್ದ ಧೀಮಂತ ನಾಯಕ ಆಸ್ಕರ್ ಫರ್ನಾಂಢಿಸ್ ನಿಧನದಿಂದ ರಾಜಕೀಯ ಕ್ಷೇತ್ರಕ್ಕೆ ಅತೀವ ನಷ್ಟವುಂಟಾಗಿದೆ ಎಂದು ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ನಾಯಕರು ಸಂತಾಪ ಸೂಚಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post