ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಮ್ಮ ಹಕ್ಕುಗಳನ್ನು ನಾವು ಗೌರವಿಸುವಂತೆ ಪರರ ಹಕ್ಕುಗಳನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸರಸ್ವತಿ ಕೆ.ಎನ್. ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಕುವೆಂಪು ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಾದ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜು, ಶಿವಮೊಗ್ಗ ಇವರ ಸಹಯೋಗದೊಂದಿಗೆ ಸಹ್ಯಾದ್ರಿ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ‘ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
1948 ರ ಯುನೈಟೆಡ್ ನೇಷನ್ಸ್ ಮಾನವ ಹಕ್ಕುಗಳ ಘೋಷಣೆ ಅಡಿಯಲ್ಲಿ ಮೂಲಭೂತ ಮಾನವ ಹಕ್ಕುಗಳನ್ನು ಪ್ರತಿಪಾದಿಸಲಾಯಿತು. ಎಲ್ಲರಿಗೂ ಜೀವಿಸುವ ಹಕ್ಕು ಇದ್ದು, ಈ ಹಕ್ಕು ಇತರೆ ಎಲ್ಲ ಹಕ್ಕುಗಳನ್ನು ಒಳಗೊಂಡಿದೆ. ನಮ್ಮ ದೇಶದಲ್ಲಿ 1993 ರಲ್ಲಿ ಮಾನವ ಹಕ್ಕುಗಳ ರಕ್ಷಣೆ ಅಧಿನಿಯಮ ಜಾರಿಗೆ ಬಂದು ಮಾನವ ಹಕ್ಕುಗಳನ್ನು ಸಂರಕ್ಷಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸಿದೆ.
ಕಾನೂನಿನ ಮುಂದೆ ಎಲ್ಲರೂ ಸಮಾನರು. ನಮ್ಮ ನೆಲದ ಮೂಲ ಕಾನೂನಾದ ಸಂವಿಧಾನವು ಎಲ್ಲರಿಗೂ ಸಮಾನವಾದ ಹಕ್ಕುಗಳನ್ನು ನೀಡಿದೆ. ಸಂವಿಧಾನಾತ್ಮಕವಾದ ಎಲ್ಲ ಹಕ್ಕುಗಳಿಗೆ ಕಾನೂನಾತ್ಮಕ ರಕ್ಷಣೆ ಇದೆ. ಸಂವಿಧಾನ ಹಕ್ಕುಗಳ ಜೊತೆಗೆ ಮೂಲಭೂತ ಕರ್ತವ್ಯಗಳನ್ನೂ ನೀಡಿದ್ದು ಎಲ್ಲರೂ ಕಾನೂನಿನ ಪ್ರಕಾರ ನಡೆದುಕೊಳ್ಳಬೇಕು ಎಂದರು.
ಮಗು ತಾಯಿ ಗರ್ಭದಲ್ಲಿ ಇರುವಲ್ಲಿಂದ ಮಾನವ ಸತ್ತ ನಂತರವೂ ಆತನ ಹಕ್ಕುಗಳಿಗೆ ರಕ್ಷಣೆ ಇದೆ. ಹುಟ್ಟಿನಿಂದ ಸಾವಿನವರೆಗೆ ನಾವೆಲ್ಲ ಕಾನೂನಿನ ಚೌಕಟ್ಟಿನಲ್ಲೇ ಬದುಕುತ್ತೇವೆ. ಆದ್ದರಿಂದ ಎಲ್ಲರೂ ಮೂಲಭೂತವಾದ ಹಾಗೂ ಪ್ರತಿನಿತ್ಯ ಅವಶ್ಯಕವಾದ ಕಾನೂನಿನ ಜ್ಞಾನ ಹೊಂದಬೇಕು.
ಎಲ್ಲರಿಗೂ ಉಚಿತ ಕಾನೂನು ಅರಿವು ಮತ್ತು ನೆರವು ನೀಡುವ ಉದ್ದೇಶದಿಂದ ಕಾನೂನು ಸೇವೆಗಳ ಪ್ರಾಧಿಕಾರದ ಅಧಿನಿಯಮ ಜಾರಿಗೆ ಬಂದಿದ್ದು ರಾಷ್ಟ್ರ, ರಾಜ್ಯ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲೂ ಕಾನೂನು ಸೇವೆಗಳ ಪ್ರಾಧಿಕಾರಗಳ ಮೂಲಕ ಜನತೆಗೆ ಉಚಿತ ಕಾನೂನು ಅರಿವು ಮತ್ತು ನೆರವು ಸೌಲಭ್ಯ ಲಭಿಸಲಿದೆ. ಮಹಿಳೆಯರು, ಮಕ್ಕಳು, ಎಸ್‍ಸಿ/ಎಸ್‍ಟಿ, ಬಂಧಿಗಳು, ಆರ್ಥಿಕವಾಗಿ ಹಿಂದುಳಿದವರು ಸಂಪೂರ್ಣವಾಗಿ ಉಚಿತವಾಗಿ ಕಾನೂನಿನ ನೆರವನ್ನು ಪಡೆಯಬಹುದು. ಹಾಗೂ ನಿಯಮಿತವಾಗಿ ನಡೆಯುವ ಲೋಕ ಅದಾಲತ್‍ನಲ್ಲಿ ರಾಜೀ ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಸುಲಭವಾಗಿ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದ ಅವರು ವಿದ್ಯಾರ್ಥಿಗಳಿಗೆ ದಿನನಿತ್ಯ ಅವಶ್ಯವಿರುವ ಕಾನೂನಿನ ಬಗ್ಗೆ ತಿಳಿಸಿಕೊಟ್ಟರು.
ಸಹ್ಯಾದ್ರಿ ಕಲಾ ಕಾಲೇಜಿನ ಪ್ರಭಾರ ಪ್ರಾಚಾರ್ಯ ಡಾ. ಅವಿನಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಾನವ ಹಕ್ಕುಗಳಿಗೆ ಸಮಕಾಲೀನ ಪ್ರಾಮುಖ್ಯತೆ ಇದ್ದು ಸಂವಿಧಾನಾತ್ಮಕ ರಕ್ಷಣೆ ಇದೆ. ಇದು ಎಲ್ಲರ ಜೀವನದ ಅವಿಭಾಜ್ಯ ಅಂಗವಾಗಿದೆ. ಇದರ ಅರಿವು ಕೂಡ ಅಷ್ಟೇ ಮುಖ್ಯವಾಗಿರುವ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಆಚರಿಸುತ್ತಾ ಬಂದಿದೆ ಎಂದರು.
ದಿ ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್ ವಿಶೇಷ ವರದಿಗಾರ ರಾಮಚಂದ್ರ ವಿ ಗುಣಾರಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾತನಾಡಿ, ಜೀವನದ ಪ್ರತಿ ಹಂತದಲ್ಲಿ ಹೋರಾಟ ನಡೆಸಿಯೇ ನಮ್ಮ ಹಕ್ಕುಗಳನ್ನು ಪಡೆಯುವ ಪರಿಸ್ಥಿತಿ ಇದೆ. ಆದ ಕಾರಣ ಹಕ್ಕುಗಳ ಬಗ್ಗೆ ಅರಿವು ಹೆಚ್ಚಬೇಕು. ಹಕ್ಕುಗಳ, ಜವಾಬ್ದಾರಿಗಳ ಅರಿವು ಬಹು ಮುಖ್ಯವಾಗಿದ್ದು ಹೀಗೆ ಹೋರಾಡಿ ಪಡೆದ ಹಕ್ಕುಗಳನ್ನು ನಾವು ಸದುಪಯೋಗ ಪಡೆಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿದೆ ಎಂದರು.
ತಮ್ಮ ಸ್ವಾನುಭವದ ಘಟನೆಗಳ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಮಾನವ ಹಕ್ಕುಗಳ ಬಗ್ಗೆ ತಿಳಿಸಿದ ಅವರು ಮಹಿಳೆಯರು, ಮಕ್ಕಳು, ದುರ್ಬಲರು, ಮಾನಸಿಕ ಮತ್ತು ದೈಹಿಕ ವಿಕಲಚೇತನರ, ಇತರೆ ಸಂತ್ರಸ್ತರ ಹಕ್ಕುಗಳನ್ನು ರಕ್ಷಿಸುವುದು ತುಂಬಾ ಮುಖ್ಯವಾಗಿದೆ ಎಂದರು.
ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ದೇವೇಂದ್ರಪ್ಪ ಮಾತನಾಡಿ, ಕಾನೂನಿನ ಅರಿವು ಇಲ್ಲವಾದಾಗ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚು ಆಗುತ್ತದೆ. ಆದ್ದರಿಂದ ಎಲ್ಲರೂ ಕಾನೂನಿನ ಅರಿವು ಪಡೆಯಬೇಕೆಂದರು.
ವಿದ್ಯಾರ್ಥಿನಿ ಸುಷ್ಮಿತಾ ಪ್ರಾರ್ಥಿಸಿದರು. ಪ್ರೊ.ಪ್ರಕಾಶ್ ಸ್ವಾಗತಿಸಿದರು. ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಪ್ರಾಚಾರ್ಯರಾದ ಡಾ.ಎಂ.ಕೆ.ವೀಣಾ ಮಾನವ ಹಕ್ಕುಗಳ ದಿನಾಚರಣೆ ಪ್ರತಿಜ್ಞಾ ವಿಧಿ ಬೋಧಿಸಿದರು. ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ಡಾ.ಹೆಚ್.ಎಂ.ವಾಗ್ದೇವಿ, ವಕೀಲರಾದ ರಾಮಚಂದ್ರ, ಉಪನ್ಯಾಸಕ ಶಿವಮೂರ್ತಿ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post