ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೋವಿಡ್ ಮೂರನೇ ಅಲೆಯಲ್ಲಿ ವೈರಸ್ ದುರ್ಬಲವಾಗಿದ್ದು, ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರದೇ ಇರುವುದರಿಂದ ಪೋಷಕರು ಆತಂಕಪಡುವ ಅಗತ್ಯವಿಲ್ಲ ಎಂದು ಮಕ್ಕಳ ತಜ್ಞ ಡಾ.ಧನಂಜಯ ಸರ್ಜಿ ಅವರು ಹೇಳಿದರು.
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್ ಕುರಿತು ಜಿಲ್ಲಾಮಟ್ಟದ ಕೋವಿಡ್ ತಜ್ಞರ ಸಮಿತಿ ಸದಸ್ಯರು ಹಾಗೂ ತಜ್ಞ ವೈದ್ಯರು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಈಗಾಗಲೇ ಬಹುತೇಕ ಮಕ್ಕಳಲ್ಲಿ ಕೋವಿಡ್ ಪ್ರತಿಕಾಯ ಸೃಷ್ಟಿಯಾಗಿದ್ದು, ಮಕ್ಕಳಲ್ಲಿ ತೀವ್ರ ಸೋಂಕು ಇರುವುದಿಲ್ಲ. ಮಕ್ಕಳಲ್ಲಿ ಕೋವಿಡ್ ವೈರಸ್ ಸೋಂಕು ಉಲ್ಬಣಗೊಳ್ಳುವ ಸಾಧ್ಯತೆಯಿಲ್ಲದೇ ಇರುವುದರಿಂದ ಅವರ ಮೂಲಕ ಹರಡುವ ದುರ್ಬಲ ಕೋವಿಡ್ ವೈರಸ್‍ನಿಂದ ಸಾಮುದಾಯಿಕ ಪ್ರತಿರೋಧಶಕ್ತಿ (ಹರ್ಡ್ ಇಮ್ಯೂನಿಟಿ) ಉಂಟಾಗಲು ಸಾಧ್ಯವಿದೆ.
ಕೋವಿಡ್ ಪಾಸಿಟಿವ್ ಮಕ್ಕಳಲ್ಲೂ ಸಾಮಾನ್ಯವಾದ ಜ್ವರ, ನೆಗಡಿ, ಕೆಮ್ಮು ಕಾಣಿಸಿಕೊಳ್ಳುತ್ತಿದ್ದು, ಎರಡು ಮೂರು ದಿನಗಳ ಬಳಿಕ ಆರೋಗ್ಯ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ವೈರಲ್ ಜ್ವರ ಮೊದಲೆರಡು ದಿನ ಜಾಸ್ತಿಯಾಗಿರುತ್ತದೆ. ನಂತರದ ದಿನಗಳಲ್ಲಿ ಕಡಿಮೆಯಾಗುತ್ತದೆ. ಮಗುವಿನ ದೈನಂದಿನ ಚಟುವಟಿಕೆಗಳಲ್ಲಿ ಏನಾದರೂ ತುಂಬಾ ವ್ಯತ್ಯಾಸ ಕಂಡು ಬಂದ ಸಂದರ್ಭದಲ್ಲಿ ಮಾತ್ರ ವೈದ್ಯರನ್ನು ಭೇಟಿ ಮಾಡಬೇಕು. ಸಾಮಾನ್ಯ ಜ್ವರಕ್ಕೆ ನೀಡುವ ಔಷಧಿಯನ್ನೇ ಅಂತಹ ಮಕ್ಕಳಿಗೂ ನೀಡಲಾಗುತ್ತದೆ. ಅನಾರೋಗ್ಯಕ್ಕೆ ಒಳಗಾಗುವ ಎಲ್ಲಾ ಮಕ್ಕಳಿಗೆ ಕೋವಿಡ್ ಪರೀಕ್ಷೆ ನಡೆಸುವ ಅಗತ್ಯವಿಲ್ಲ. ಹೃದಯ ಕಾಯಿಲೆ, ಕ್ಯಾನ್ಸರ್, ಮಧುಮೇಹಗಳಂತಹ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳ ಬಗ್ಗೆ ಮಾತ್ರ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಕೋವಿಡ್ ತಜ್ಞರ ಸಮಿತಿ ಸದಸ್ಯ ಡಾ.ಶ್ರೀಕಾಂತ್ ಹೆಗ್ಡೆ ಅವರು ಮಾತನಾಡಿ, ಮೂರನೇ ಅಲೆಯಲ್ಲಿ ದೊಡ್ಡವರಲ್ಲಿಯೂ ಸೋಂಕಿನ ಪ್ರಮಾಣ ಕಡಿಮೆಯಾಗಿದ್ದು, ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಬಹಳ ಕಡಿಮೆಯಿದೆ. ಈಗಾಗಲೇ ಇನ್ನಿತರ ರೋಗಗಳಿಂದ ಬಳಲುತ್ತಿರುವವರು ಮಾತ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಇದುವರೆಗೆ ಒಂದು ಲಸಿಕೆ ಹಾಕಿಸಿಕೊಳ್ಳದವರಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿ ಕಂಡು ಬರುತ್ತಿದೆ. ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೋವಿಡ್ ಹಿಮ್ಮೆಟ್ಟಿಸಬಹುದಾಗಿದೆ ಎಂದರು.
ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚದೇ ನಿರಂತರವಾಗಿ ನಡೆಸಬೇಕು. ಪೋಷಕರು ಯಾವುದೇ ಆತಂಕಕ್ಕೆ ಒಳಗಾಗದೆ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಈಗಾಗಲೇ ಕೋವಿಡ್‍ನಿಂದಾಗಿ ಶಾಲೆಗಳನ್ನು ಸ್ಥಗಿತಗೊಳಿಸಿರುವುದರಿಂದ ಮಕ್ಕಳ ಮಾನಸಿಕ ಬೆಳವಣಿಗೆ ಕುಂಠಿತವಾಗಿದ್ದು, ಹಲವಾರು ಸಾಮಾಜಿಕ ಸಮಸ್ಯೆಗಳು ಸಹ ಎದುರಾಗುತ್ತಿದೆ. ಅಗತ್ಯ ಬಿದ್ದರೆ, ಕೋವಿಡ್ ಸೋಂಕು ಹೆಚ್ಚು ಕಾಣಿಸಿಕೊಳ್ಳುವ ತರಗತಿಗಳಿಗೆ ರಜೆ ನೀಡಬಹುದಾಗಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಭಾರತೀಯ ವೈದ್ಯಕೀಯ ಸಂಘ ಹಾಗೂ ಭಾರತೀಯ ಶಿಶು ವೈದ್ಯಕೀಯ ಸಂಘದ ಡಾ. ಮಂಜುನಾಥ ಸ್ವಾಮಿ, ಡಾ. ಪ್ರಿಯಂವಧ, ಡಾ. ಶಂಭುಲಿಂಗ ಡಾ. ಪಾಟೀಲ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post