ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಿಜಬ್ ಹಾಗೂ ಕೇಸರಿ ಶಾಲಿನ ನಡುವೆ ನಡೆಯುತ್ತಿದ್ದ ವಾಗ್ವಾದ ಶಿವಮೊಗ್ಗದ ಬಾಪೂಜಿ ನಗರ ಸರ್ಕಾರಿ ಕಾಲೇಜಿನಲ್ಲಿ ಸಂಘರ್ಷಕ್ಕೆ ತಿರುಗಿದ್ದು, ಸದ್ಯ ಪರಿಸ್ಥಿತಿ ಪೊಲೀಸರ ನಿಯಂತ್ರಣದಲ್ಲಿದ್ದರೂ ಬಿಗುವಿನ ವಾತಾವರಣವಿದೆ.
ಕೇಸರಿ ಧ್ವಜವನ್ನು ಕಾಲೇಜು ಆವರಣದಲ್ಲಿರುವ ಧ್ವಜ ಸ್ತಂಭಕ್ಕೆ ವಿದ್ಯಾರ್ಥಿಗಳು ಕಟ್ಟುತ್ತಿದ್ದ ವೇಳೆ ಕಾಲೇಜು ಕಟ್ಟಡದ ಮೇಲ್ಭಾಗದಿಂದ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಕಲ್ಲು ತೂರಾಟದಲ್ಲಿ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಪರಿಸ್ಥಿತಿಯ ವಿಷಯ ತಿಳಿದ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ಅವರು ಹೆಚ್ಚಿನ ಪೊಲೀಸ್ ಸಿಬ್ಬಂದಿಗಳೊಂದಿಗೆ ಸ್ಥಳಕ್ಕಾಗಮಿಸಿದರು.
ಕಲ್ಲು ತೂರಾಟದಿಂದಾಗಿ ತತಕ್ಷಣವೇ ಎಚ್ಚೆತ್ತ ಪೊಲೀಸರು ವಿದ್ಯಾರ್ಥಿಗಳನ್ನು ಚದುರಿಸಲು ಮುಂದಾದರು. ಆದರೆ ಪರಿಸ್ಥಿತಿ ಮತ್ತಷ್ಟು ಹದಗೆಡುವ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ಖುದ್ದು ಅಕಾಡಕ್ಕಿಳಿದು ವಿದ್ಯಾರ್ಥಿಗಳನ್ನು ಹಾಗೂ ಸ್ಥಳದಲ್ಲಿ ನೆರೆದಿದ್ದ ನಾಗರಿಕರನ್ನು ಚದುರಿಸಬೇಕಾಯಿತು. ಈ ಹಂತದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಲಘು ಲಾಠಿ ಪ್ರಹಾರವನ್ನು ನಡೆಸಬೇಕಾಯಿತು.
ಕಲ್ಲು ತೂರಾಟದ ಹಿನ್ನೆಲೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳ ತಂಡ ಉದ್ರಿಕ್ತಗೊಂಡು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ವಿದ್ಯಾರ್ಥಿಗಳ ಮನವೊಲಿಸಿ ಶಾಂತಿ ಕಾಪಾಡುವಂತೆ ಹಾಗೂ ಮನೆಗಳಿಗೆ ತೆರಳುವಂತೆ ಖುದ್ದು ಎಸ್‌ಪಿ ಅವರೇ ಮನವಿ ಮಾಡುತ್ತಿದ್ದರು.
ಜಿಲ್ಲಾಧಿಕಾರಿ ಭೇಟಿ:
ಇನ್ನು ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಸೆಲ್ವಮಣಿ, ಕಾಲೇಜಿನ ಪ್ರಾಂಶುಪಾಲರು ಹಾಗೂ ಜಿಲ್ಲಾರಕ್ಷಣಾಧಿಕಾರಿಗಳಿಂದ ಮಾಹಿತಿ ಪಡೆದು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಕಾಲೇಜು ಕಟ್ಟಡದ ಮೇಲ್ಭಾಗಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಬಜರಂಗದಳ ಜಿಲ್ಲಾ ಸಂಚಾಲಕ ದೀನದಯಾಳು, ಪಾಲಿಕೆ ಸದಸ್ಯ ಸುರೇಖಾ ಮುರಳೀಧರ್ ಸೇರಿದಂತೆ ಹಲವರು ಸ್ಥಳದಲ್ಲಿದ್ದು, ವಿದ್ಯಾರ್ಥಿಗಳ ಮನವೊಲಿಸುವ ಕಾರ್ಯ ಮಾಡುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post