ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಆಲಮಟ್ಟಿ ಬಲದಂಡೆ ಕಾಲುವೆಯನ್ನು ಸಂಪೂರ್ಣ ಆಧುನೀಕರಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನಿರ್ಣಯಿಸಲಾಗಿದ್ದು 270.40 ಕೋಟಿ ಅಂದಾಜು ಮೊತ್ತ ಒಳಗೊಂಡ ಪೂರ್ವ ಕಾರ್ಯ ಸಾಧ್ಯತಾ ವರದಿಯನ್ನು ಕೇಂದ್ರ ಸರ್ಕಾರದ ಕೇಂದ್ರ ಜಲ ಆಯೋಗ ಯೋಜನಾ ಅನುಮೋದನಾ ಸಂಸ್ಥೆಗೆ ಸಲ್ಲಿಸಲಾಗಿದ್ದು ಪರಿಶೀಲನೆಯ ಹಂತದಲ್ಲಿ ಇದೆಯೆಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ Minister Govinda Karajola ಇಂದು ವಿಧಾನ ಸಭೆಯಲ್ಲಿ ತಿಳಿಸಿದರು.
ತ್ವರಿತ ಗತಿಯ ಫಲದಾಯಕ ನೀರಾವರಿ ಯೋಜನೆಯನ್ವಯ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರದಿಂದ ಶೇ.60:40 ಅನುಪಾತದಲ್ಲಿ ಅನುದಾನ ಲಭ್ಯವಾಗುತ್ತದೆ. ನವೀಕರಣ ಕಾಮಗಾರಿಯನ್ನು ಆದಷ್ಟು ಬೇಗ ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಪ್ರಶ್ನೋತ್ತರ ವೇಳೆಯಲ್ಲಿ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆಲಮಟ್ಟಿ ಬಲದಂಡೆ ಕಾಲುವೆ ಆಧುನೀಕರಣವನ್ನು Pradhan Mantri Krishi Sinchayee Yojana (PMKSY)-Accelerated Irrigation Benefits Programme (AIBP) ಕೇಂದ್ರ ಸರ್ಕಾರದ ಅನುದಾನದಲ್ಲಿ ಕೈಗೆತ್ತಿಕೊಳ್ಳುವ ಕುರಿತು ಕೇಂದ್ರ ಜಲ ಆಯೋಗ, ಬೆಂಗಳೂರು ತಂಡವು ಸದರಿ ಕಾಲುವೆ ಜಾಲವನ್ನು ಆಗಸ್ಟ್ 2021ರಲ್ಲಿ ಪರಿವೀಕ್ಷಣೆ ಮಾಡಿರುತ್ತದೆ.
ಸದರಿ ಕಾಲುವೆ ಜಾಲದ ಕಿಮೀ. 0.00 ದಿಂದ 58.00ರ ವರೆಗಿನ ಮುಖ್ಯ ಕಾಲುವೆ ಹಾಗೂ ವಿತರಣಾ ಕಾಲುವೆ ಸಂ.1 ರಿಂದ 21ರ ವರೆಗಿನ ಕಾಲುವೆ ಜಾಲದ ಕೊನೆಯ ಅಂಚಿನವರೆಗೆ ಯಾವುದೇ ಅಡೆತಡೆ ಇಲ್ಲದೇ ಸಮರ್ಪಕವಾಗಿ ನೀರು ಪೂರೈಸಲಾಗುತ್ತಿದೆ. ಕಿಮೀ.59.00 ರಿಂದ 67.00 ರವರೆಗೆ ಕೆಲವು ತಾಂತ್ರಿಕ ಸಮಸ್ಯೆಯಿಂದ ನೀರು ಪೂರೈಕೆಯಾಗಿರುವುದಿಲ್ಲ. ಸದರಿ ಕಾಲುವೆ ರೀಚ್ ನಲ್ಲಿ ವಾರಬಂದಿ ಪದ್ಧತಿಯನ್ನು ಅಳವಡಿಸಿ ಕಾಲುವೆ ಕೊನೆಯ ಅಂಚಿನ ಭಾಗದವರೆಗೆ ಸಮರ್ಪಕವಾಗಿ ನೀರು ಪೂರೈಸಲು ಸೂಕ್ತಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ವಿಧಾನಸಭೆಯಲ್ಲಿ ವಿವರಿಸಿದರು.
ಇಂಡಿ ತಾಲ್ಲೂಕಿನ ಕೆರೆ ತುಂಬುವ ಯೋಜನೆ ಅನುಷ್ಟಾನಕ್ಕೆ ಬದ್ಧ:
ಇಂಡಿ ತಾಲ್ಲೂಕಿನ 16 ಸಣ್ಣ ನೀರಾವರಿ ಕೆರೆಗಳನ್ನು ತುಂಬುವ ಯೋಜನಾ ಕಾಮಗಾರಿಯ ಅಂದಾಜು ಪ್ರಸ್ತಾವನೆಯು ಕೃಷ್ಣಾ ಭಾಗ್ಯ ಜಲ ನಿಗಮದ ತಾಂತ್ರಿಕ ಪರಿಶೀಲನೆ ಹಂತದಲ್ಲಿದ್ದು, ನಿಗಮದ ಅಂದಾಜು ಪರಿಶೀಲನಾ ಸಮಿತಿಯಲ್ಲಿ ಮಂಡಿಸಿ, ಸಕ್ಷಮ ಪ್ರಾಧಿಕಾರದಿಂದ ಅಗತ್ಯ ತೀರುವಳಿ ಪಡೆದು ಟೆಂಡರ್ ಕರೆಯಲು ಕ್ರಮ ಜರುಗಿಸಲಾಗುವುದು ಎಂದು ಪ್ರಶ್ನೋತ್ತರ ವೇಳಯಲ್ಲಿ ಇಂಡಿ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
Also read: ಮಾ.9ರಂದು ಕುವೆಂಪು ವಿವಿಯಲ್ಲಿ ಡಾ. ಬಾಬು ಜಗಜೀವನ್ ರಾಮ್ ಕುರಿತು ವಿಚಾರ ಸಂಕಿರಣ
ಮುಳವಾಡ ಏತ ನೀರಾವರಿ ಹಂತ-3 ರಡಿಯ ತಿಡಗುಂದಿ ಶಾಖಾ ಕಾಲುವೆ ಕಿ.ಮೀ.50.88 ರಲ್ಲಿ ಆಫ್ ಟೇಕ್ ನಲ್ಲಿ 1.40 ಕ್ಯೂಸೆಕ್ಸ್ ನೀರನ್ನು ಉಪಯೋಗಿಸಿಕೊಂಡು ಗುರುತ್ವ ಮೂಲಕ ಇಂಡಿ ತಾಲ್ಲೂಕಿನ 16 ಕೆರೆ ತುಂಬಿಸಲು ಯೋಜನೆ ರೂಪಿಸಲಾಗಿದೆ ಎಂದು ಸಚಿವರು ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಉತ್ತರಿಸಿದರು.
ಎತ್ತಿನಹೊಳೆ ಕಾಮಗಾರಿಗಳು ಸೆಪ್ಟಂಬರ್ ಅಂತ್ಯದೊಳಗೆ ಪೂರ್ಣ:
ಎತ್ತಿನಹೊಳೆ ಯೋಜನೆಯ ಡಿ.ಜೆ.ಹಳ್ಳಿ ಮತ್ತು ರಾಮನಗರ ಫೀಡರ್ ಮತ್ತು ಗೌರಿಬಿದನೂರು ಫೀಡರ್ ಕಾಲುವೆ ಕಾಮಗಾರಿಗಳಿಗಾಗಿ ಇಲಾಖಾ ನಿಯಮಾನುಸಾರ/ಟೆಂಡರ್ ಷರತ್ತುಗಳನ್ವಯ ಕ್ರಮ ಜರುಗಿಸಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 2013ರ ಭೂಸ್ವಾಧೀನ ಕಾಯಿದೆಯಂತೆ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಹಾಗೂ ಅಡೆತಡೆಗಳನ್ನು ನಿವಾರಿಸಿಕೊಂಡು ಸೆಪ್ಟಂಬರ್-2022ರ ಅಂತ್ಯದೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಯೋಜಿಸಲಾಗಿದೆ ಎಂದರು.
ಎಸ್..ಸಿ.ಪಿ./ಟಿ.ಎಸ್.ಪಿ. ಅಡಿಯಲ್ಲಿ ಕೈಗೆತ್ತಿಕೊಂಡಿರುವ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿಕೆ ಕಾಮಗಾರಿಗಳನ್ನು ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸಲು ಯೋಜಿಸಲಾಗಿದೆ ಎಂದು ಸಚಿವರು ವಿಧಾನ ಸಭೆಯಲ್ಲಿ ನೆಲಮಂಗಲ ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ ಅವರ ಪ್ರಶ್ನೆಗೆ ಉತ್ತರಿಸುತ್ತಿದ್ದರು.
2018-19ನೇ ಸಾಲಿನ ಎಸ್.ಸಿ.ಪಿ. ಯೋಜನೆಯಡಿ 86 ಕಾಮಗಾರಿಗಳಿಗೆ 2320 ಮತ್ತು ಟಿ.ಎಸ್.ಪಿ ಯೋಜನೆಯಡಿ 43 ಕಾಮಗಾರಿಗಳಿಗೆ 720 ಕೋಟಿ 2019-20ರಲ್ಲಿ ಎಸ್.ಸಿ.ಪಿ. ಯೋಜನೆಯಡಿ 59 ಕಾಮಗಾರಿಗಳಿಗೆ 1870 ಮತ್ತು ಟಿ.ಎಸ್.ಪಿ. ಯೋಜನೆಯಡಿ 34 ಕಾಮಗಾರಿಗಳಿಗೆ 780 ಕೋಟಿ ಅನುದಾನ ನೀಡಲಾಗಿರುತ್ತದೆ ಎಂದು ಸಚಿವರು ತಿಳಿಸಿದರು.
ಕಿತ್ತೂರು ಹರಿನಾಲಾ ಅಚ್ಚುಕಟ್ಟು ಪ್ರದೇಶದ ರಸ್ತೆಗಳ ಅಭಿವೃದ್ಧಿಗೆ ಕ್ರಮ:
ಕಿತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮಲಪ್ರಭಾ ಮತ್ತು ತಿಗಡಿ ಹರಿನಾಲಾ ಅಚ್ಚುಕಟ್ಟು ಪ್ರದೇಶದ ಒಟ್ಟು 06 ರಸ್ತೆಗಳ ಅಭಿವೃದ್ಧಿಗಾಗಿ ಲೆಕ್ಕಶೀರ್ಷಿಕೆ 4701 ಅಡಿಯಲ್ಲಿ ರೂ.1750 ಲಕ್ಷಗಳ ಅನುದಾನ ಒದಗಿಸಲು ಕೋರಿಕೆ ಇದ್ದು, ಕರ್ನಾಟಕ ನೀರಾವರಿ ನಿಗಮದ ಹಂತದಲ್ಲಿ ಪರಿಶೀಲನೆಯಲ್ಲಿದ್ದು, ಅನುದಾನದ ಲಭ್ಯತೆಗೆ ಅನುಗುಣವಾಗಿ ಕೈಗೊಳ್ಳಲು ಪರಿಶೀಲಿಸಲಾಗುವುದು ಎಂದು ವಿಧಾನನಭೆಯಲ್ಲಿ ತಿಳಿಸಿದರು.
ಕರ್ನಾಟಕ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ಬರುವ 2021-22ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯ ವ್ಯಾಪ್ತಿಯಲ್ಲಿ ರಸ್ತೆಗಳ ನಿರ್ಮಾಣಕ್ಕೆ ಲೆಕ್ಕ ಶೀರ್ಷಿಕೆ 4701ರಡಿ ಬಿಡುಗಡೆ ಮಾಡಿರುವ ಅನುದಾನದ ವಿವರಗಳನ್ನು ಅನುಬಂಧದಲ್ಲಿ ಒದಗಿಸಲಾಗುವುದು ಎಂದು ಕಿತ್ತೂರು ಶಾಸಕ ದೊಡ್ಡಗೌಡರ ಮಹಾಂತೇಶ ಬಸವಂತರಾಯ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post