ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸ್ವಾತಂತ್ರ್ಯನಂತರದ ದಿನಗಳಲ್ಲಿ ರಾಜಕೀಯ ಬದಲಾವಣೆಯಾಗುತ್ತಿದ್ದಂತೆ ಜನರಲ್ಲಿ ನಿರೀಕ್ಷೆಯ ಮಟ್ಟ ಹೆಚ್ಚಿದೆ. ಆದರೆ ಈ ನಿರೀಕ್ಷೆಯನ್ನು ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಪೂರ್ಣ ಮಾಡಲು ಸಾಧ್ಯವಾಗಿಲ್ಲ ಎಂದು ಮಂಗಳೂರು ವಿವಿಯ ಸ್ನಾತಕೋತ್ತರ ರಾಜ್ಯಶಾಸ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಜಯರಾಮ್ ಅಮ್ಮಿನ್ ಎಂದು ಅಭಿಪ್ರಾಯಪಟ್ಟರು.
ಸಹ್ಯಾದ್ರಿ ಕಲಾ ಕಾಲೇಜಿನ Sahyadri College Shivamogga ಸ್ನಾತಕೋತ್ತರ ರಾಜ್ಯಶಾಸ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ತಥಾಕಥಿತ ರಾಜಕೀಯ ವ್ಯವಸ್ಥೆಯನ್ನು ಬುಡಮೇಲು ಮಾಡುವಂತಹ ಹೊಸ ವ್ಯವಸ್ಥೆ ಹುಟ್ಟುತ್ತಿದೆ. ಇದಕ್ಕೆ ರಾಜಕೀಯ ವ್ಯವಸ್ಥೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ಕಾದು ನೋಡಬೇಕು. ಸ್ವಾತಂತ್ರ್ಯದ ಬಳಿಕ ಉದ್ಭವಿಸಿದ ರಾಜಕೀಯ ವ್ಯವಸ್ಥೆಯಲ್ಲಿ ಮೌಲ್ಯಗಳಿದ್ದವು. ರಾಜಕೀಯದ ನಡುವೆಯೇ ರಾಜಕೀಯ ನೇತಾರರಲ್ಲಿ ಜ್ಞಾನ ಕಂಡು ಬರುತ್ತಿತ್ತು. ಸದಾ ಅಧ್ಯಯನ ಶೀಲರಾಗಿರುತ್ತಿದ್ದರು. ತಾವು ನಂಬಿದ ಸಿದ್ದಾಂತಗಳು ಏನೇ ಇರಲಿ ಮುಖಾಮುಖಿ ಚರ್ಚೆಯ ಮೂಲಕ ಇದಕ್ಕೆ ತಾರ್ಕಿಕ ಅಂತ್ಯವೊಂದನ್ನು ಕಂಡುಕೊಳ್ಳುತ್ತಿದ್ದರು. ರಾಜಕೀಯ ದ್ವೇಷ, ವೈಮನಸ್ಸು ಅಲ್ಲಿರಲಿಲ್ಲ. ಬದಲಾಗಿ ಇನ್ನೊಬ್ಬರ ಅಭಿಪ್ರಾಯವನ್ನು ಗೌರವಿಸುವ ಮನಃಸ್ಥಿತಿ ಇತ್ತು. ಆಗಿನ ರಾಜಕೀಯ ನಾಯಕರ ಮೌಲ್ಯಯುತ ದಾರಿ ಉಳಿದವರಿಗೆ ಮಾರ್ಗದರ್ಶನವಾಗುತ್ತಿತ್ತು ಎಂದು ವಿಶ್ಲೇಷಿಸಿದ ಅವರು ಈಗ ವರ್ತಮಾನದಲ್ಲಿ ರಾಜಕೀಯ ಮೌಲ್ಯಗಳು ಕುಸಿಯುತ್ತಿವೆ ಎಂದು ವಿಷಾದಿಸಿದರು.
ಸಾಲಡ್ ಮಿಶ್ರಣದಲ್ಲಿ ಎಲ್ಲ ಹಣ್ಣು, ತರಕಾರಿಗಳು ಪ್ರತ್ಯೇಕ ರುಚಿಯನ್ನು ಹಾಗೆಯೇ ಉಳಿಸಿಕೊಳ್ಳುವುದೂ ಮತ್ತು ಇವುಗಳನ್ನು ಗ್ರೈಂಡ್ ಮಾಡಿದಾಗ ಎಲ್ಲವೂ ಒಂದಾಗಿ ಒಂದೇ ರುಚಿ ಮೂಡುವ ಉದಾಹರಣೆ ನೀಡಿದ ಅವರು ಒಂದಾಗಿದ್ದೂ ಪ್ರತ್ಯೇಕ ಅಸ್ತಿತ್ವದ ಬದಲಿಗೆ ಎಲ್ಲವೂ ಒಂದಾಗಿರುವಂತೆ ಈಗಿನ ವ್ಯವಸ್ಥೆ ಭಾಸವಾಗುತ್ತಿದೆ. ಈಗ ಸಂಯೋಜಿತ ರಾಷ್ಟ್ರೀಯತೆಯ ಮನೋಭಾವ ಕಂಡು ಬರುತ್ತಿದೆ ಎಂದು ಅಭಿಪ್ರಾಯಪಟ್ಟರು.
ಜಾತಿ ಆಧಾರಿತ ರಾಜಕಾರಣದಿಂದ ಜಾತಿಯತೆಯ ವಿಜೃಂಭಣೆ, ಭಿನ್ನ ಚಿಂತನೆ- ವೈಚಾರಿಕ ಅಭಿಪ್ರಾಯವನ್ನು ಮುಖಾಮುಖಿಯಾಗಿಸುವಲ್ಲಿನ ವಿಫಲತೆ ಕಾಣುತ್ತಿದ್ದೇವೆ ಎಂದು ಹೇಳಿದರು.
ವೈಪಲ್ಯಗಳ ನಡುವೆಯೂ ಪತ್ರಕರ್ತರ ಕೆಲಸ ದೊಡ್ಡದು:
ಹಿರಿಯ ಪತ್ರಕರ್ತ ಗೋಪಾಲ್ ಯಡಗೆರೆ ಮಾತನಾಡಿ, ಕಾರ್ಯಾಂಗ, ಶಾಸಕಾಂಗದಂತೆ ಮಾಧ್ಯಮ ರಂಗವೂ ಹೂಡಿಕೆಯ ವ್ಯವಸ್ಥೆಯಾಗುತ್ತಿರುವಾಗ ಪ್ರಜಾಪ್ರಭುತ್ವ ಉಳಿವಿಕೆ ಮಾಧ್ಯಮಗಳಿಂದ ಮಾತ್ರ ಬಹಳಷ್ಟು ನಿರೀಕ್ಷೆ ಹೇಗೆ ಸಾಧ್ಯ? ಕಾರ್ಪೋರೇಟ್ ಜಗತ್ತು ಮಾಧ್ಯಮ ರಂಗವನ್ನು ಆಳುತ್ತಿರುವುದರಿಂದ ಸಹಜವಾಗಿಯೇ ಮಾಧ್ಯಮಗಳು ಧ್ವನಿ ಇಲ್ಲದವರಿಗೆ ಧ್ವನಿಯಾಗುವುದಕ್ಕಿಂತ ಹೆಚ್ಚು ಉಳ್ಳವರ ಧ್ವನಿಯಾಗುತ್ತಿದೆ ಎಂದು ಹೇಳಿದರು.
ಅನೇಕ ವೈಪಲ್ಯಗಳ ನಡುವೆಯೂ ಪತ್ರಕರ್ತರು ಇಂದು ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಸಮಸ್ಯೆಯನ್ನು ಹೊರ ಜಗತ್ತಿಗೆ ತಲುಪಿಸುವಲ್ಲಿ ಯಶಸ್ಸಿನ ಹಾದಿಗೆ ಹೊರಳುತ್ತಿದ್ದಾರೆ. ಆದರೆ ಈ ಚಿಂತನೆಯ ಪತ್ರಕರ್ತರಿಗೆ ಸೂಕ್ತ ರಕ್ಷಣೆಯ ವ್ಯವಸ್ಥೆ, ಮೂಲಭೂತ ವ್ಯವಸ್ಥೆಯ ಬಗ್ಗೆ ಮಾತ್ರ ಸರ್ಕಾರ ಜಾಣ ಮೌನ ತಾಳುತ್ತಿವೆ ಎಂದು ಹೇಳಿದರು.
ಸ್ವಾತಂತ್ರ್ಯಾ ನಂತರದ ರಾಜಕೀಯ ವ್ಯವಸ್ಥೆ ಅನೇಕ ಹೊರಳುವಿಕೆಯಲ್ಲಿ ಇಲ್ಲಿಯವರೆಗೆ ಸಾಗಿ ಬಂದಿದೆ. ವ್ಯಕ್ತಿ ಆಧಾರಿತ ಪಕ್ಷಗಳು, ವ್ಯವಸ್ಥೆಯನ್ನು ಧಿಕ್ಕರಿಸುವ ರಾಜಕೀಯ ವ್ಯವಸ್ಥೆ, ಪುನಃ ವ್ಯಕ್ತಿ ಆಧಾರಿತ ಪಕ್ಷಗಳು, ರಾಷ್ಟ್ರೀಯತೆ ಚಿಂತನೆಯ ರಾಜಕೀಯ ವ್ಯವಸ್ಥೆಗಳು ನಮ್ಮ ಮುಂದಿವೆ. ಇದೀಗ ಕೊನೆಯ ಹೊರಳು ಹಾದಿಯಲ್ಲಿ ಅಭಿವೃದ್ಧಿಯ ಚಿಂತನೆಯ ರಾಜಕೀಯ ವ್ಯವಸ್ಥೆ ಕಂಡು ಬರುತ್ತಿದೆ. ಆದರೆ ಸ್ವಾತಂತ್ರ್ಯದ ಬಳಿಕ ಇದುವರೆಗಿನ ಕಾಲದಲ್ಲಿ ಜನರಿಗೆ ತಮಗೆ ಯಾವ ರೀತಿಯ ರಾಜಕೀಯ ವ್ಯವಸ್ಥೆ ಬೇಕು, ಯಾವ ಪರಿಕಲ್ಪನೆಯ ರಾಜಕೀಯ ಪಕ್ಷಗಳು ಬೇಕು ಎಂಬುದರ ಬಗ್ಗೆ ಇನ್ನೂ ಗೊಂದಲ ಇರುವಂತೆ ಕಂಡು ಬರುತ್ತಿದೆ ಎಂದು ಅಭಿಪ್ರಾಯಪಟ್ಟರು.
ಸರ್ಕಾರಗಳು ಜವಾಬ್ದಾರಿಯುತ್ತ ಮಾಧ್ಯಮಗಳನ್ನು ಬಯಸುತ್ತದೆ. ಎಂದರೆ ಸರ್ಕಾರಕ್ಕೆ ಬದ್ದರಾಗಿರುವ ಮಾಧ್ಯಮಗಳು ಬೇಕು ಎನ್ನುತ್ತವೆ. ಇದು ಸಧ್ಯದ ಸಮಸ್ಯೆ. 2000 ವರ್ಷದವರೆಗೂ ಮಾಧ್ಯಮಗಳ ವರದಿಗೆ ಸ್ಪಂದಿಸುತ್ತಿದ್ದ ಸರ್ಕಾರಗಳು, ರಾಜಕೀಯ ವ್ಯವಸ್ಥೆ ಆ ಬಳಿಕ ಸ್ಪಂದನೆ ಎಂಬುದನ್ನೇ ಮರೆತಿರುವುದು ಕೂಡ ವ್ಯವಸ್ಥೆ ಸೋಲಲು ಕಾರಣವಾಗುತ್ತಿದೆ ಎಂದು ವಿಶ್ಲೇಷಿಸಿದರು.
Also read: ಸಮುದಾಯದಲ್ಲಿ ಜನೋಪಯೋಗಿ ಕಾರ್ಯಗಳಲ್ಲಿ ತೊಡಗಿದಾಗ ಮಾತ್ರ ಸಾರ್ಥಕತೆ ಸಾಧ್ಯ…
ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಹೆಚ್. ರಾಮಲಿಂಗಪ್ಪ ಮಾತನಾಡಿ, ರಾಜಕೀಯ ಶಾಸದ ವಿದ್ಯಾರ್ಥಿಗಳು ಸಮಾನತೆ, ಸಾಮಾಜಿಕ ನ್ಯಾಯದ ಬಗ್ಗೆ ಇನ್ನಷ್ಟು ಅರಿವು ಮೂಡಿಸಿಕೊಳ್ಳಬೇಕು. ಇಂತಹ ವಿಚಾರ ಸಂಕಿರಣದಲ್ಲಿ ಮೂಡಿ ಬರುವ ಹೊಸ ವಿಷಯಗಳನ್ನು ಗ್ರಹಿಸುವ ಮೂಲಕ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಬಿ. ಧನಂಜಯ ಅವರು ಮಾತನಾಡಿ ಮುಂದಿನ ದಿನಗಳು ಇನ್ನಷ್ಟು ಸಂಕಷ್ಟ ತರುವ ದಿನಗಳಾಗಿದ್ದು, ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕೆಂದರು.
ಜಗತ್ತಿನ ಎಲ್ಲೆಡೆ ನಡೆಯುವ ಘಟನೆಗಳನ್ನು ಅವಲೋಕಿಸಬೇಕಿದೆ. ಇದರ ಪರಿಣಾಮಗಳು ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಬೀರುವ ಪರಿಣಾಮದ ಕುರಿತು ಎಚ್ಚರಿಕೆಯಿಂದ ನೋಡಬೇಕಿದೆ. ಯುವಜನರು ಎಲ್ಲರನ್ನು ಒಳಗೊಂಡ ಸಮಾಜ ನಿರ್ಮಾಣದ ಕನಸನ್ನು ನನಸು ಮಾಡುವತ್ತ ಹೆಜ್ಜೆ ಇಡಬೇಕಿದೆ. ಸುಂದರ ಸಮಾಜ ನಿರ್ಮಾಣದತ್ತ ಸಾಗಬೇಕಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಗ್ರಾಮೀಣ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಕಳ್ಳಿಮಠ್ ಶಂಕರಯ್ಯ, ಪ್ರೊ. ಅಶೋಕ್ ಇದ್ದರು. ಸಹ್ಯಾದ್ರಿ ಕಲಾ ಕಾಲೇಜಿನ ಸ್ನಾತಕೋತ್ತರ ರಾಜ್ಯಶಾಸ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಂಘಟನಾ ನಿರ್ದೇಶಕರೂ ಆದ ಪ್ರಾಧ್ಯಾಪಕ ಪ್ರೊ. ಎಂ. ಹೆಚ್. ಪ್ರಹ್ಲಾದಪ್ಪ ಅವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಬಿ. ಹೆಚ್. ಸತ್ಯನಾರಾಯಣ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post