ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾಂಸ್ಕೃತಿಕತೆಯ ಪ್ರತಿಬಿಂಬವಾಗಿರುವ ಕರುನಾಡಿನಲ್ಲಿ ಭಾರತದ ಅನನ್ಯ ನೃತ್ಯ ಪ್ರಾಕಾರಗಳನ್ನು ಶಿವಮೊಗ್ಗೆಯ ಜನತೆಗೆ ಪರಿಚಯಿಸುವ ನಿಟ್ಟಿನಲ್ಲಿ ನಗರದ ಸಹಚೇತನ ನಾಟ್ಯಾಲಯದ ಕಾರ್ಯ ವಿಭಿನ್ನವಾದದ್ದು. ಕಳೆದ ಹಲವಾರು ವರ್ಷಗಳಿಂದ ಶಿವಮೊಗ್ಗೆಯ ಕಲಾರಸಿಕರಿಗೆ ದೇಶವಿದೇಶದ ಕಲಾಪ್ರಾಕಾರಗಳನ್ನು ಪರಿಚಯಿಸಿರುವ ನೃತ್ಯ ಸಂಸ್ಥೆ ತಮ್ಮ ಮತ್ತೊಂದು ರಾಷ್ಟ್ರೀಯ ನೃತ್ಯ ಮಹೋತ್ಸವ ನಾಟ್ಯಾರಾಧನಾ-11ನ್ನು ಶಿವಮೊಗ್ಗೆಯ ಜನತೆಗೆ ಪರಿಚಯಿಸುತ್ತಿದೆ ಎಂದು ಸಂಸ್ಥೆಯ ನೃತ್ಯಗುರುಗಳಾದ ಸಹನಾ ಚೇತನ್ ಹೇಳಿದರು.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಬರುವ 26, 27 ಹಾಗೂ 28 ರಂದು ಮೂರು ದಿನಗಳ ಕಾಲ ಪ್ರತೀ ದಿನ ಸಂಜೆ 6.30ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಈ ನೃತ್ಯ ಮಹೋತ್ಸವ ಜರುಗಲಿದೆ. 26 ರ ಶುಕ್ರವಾರ ನಾಟ್ಯಾಲಯದ ಸಮಸ್ತ ವಿದ್ಯಾರ್ಥಿಗಳಿಂದ ಜಯ ಜಗನ್ಮಾತೃಕೆ ಎಂಬ ನೃತ್ಯ ರೂಪಕ ನಾಟ್ಯಾಲಯದ ನೃತ್ಯಗುರು ಸಹನಾ ಚೇತನ್‌ರವರ ಪರಿಕಲ್ಪನೆ ಹಾಗೂ ನಿರ್ದೇಶನದಲ್ಲಿ ನಡೆಯಲಿದೆ. ಇದರ ಉದ್ಘಾಟನೆಯನ್ನು ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ನಗರದ ಶಾಸಕರಾದ ಸನ್ಮಾನ್ಯ ಕೆ.ಎಸ್. ಈಶ್ವರಪ್ಪನವರು ನಡೆಸಿಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎಚ್. ಉಮೇಶ್ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಸುಮಾರು 131 ಶಿಷ್ಯಂದಿರು ಈ ವೇದಿಕೆಯಲ್ಲಿ ಹೆಜ್ಜೆ ಹಾಕಲಿದ್ದಾರೆ ಎಂದರು.
ಆ.27ರ ಶನಿವಾರ ಭರತನಾಟ್ಯ ಕ್ಷೇತ್ರದ ಖ್ಯಾತನಾಮರಾದ ಪಾರ್ಶ್ವನಾಥ್ ಎಸ್. ಉಪಾಧ್ಯೆ ತಮ್ಮ ಅತ್ಯಂತ ವೈಶಿಷ್ಠ್ಯಪೂರ್ಣ ರಾಮಾಯಣದ ಮರುಚಿತ್ರಣದ ಅಡಿಯಲ್ಲಿ ರೂಪುಗೊಂಡ ನೃತ್ಯ ರೂಪಕವಾದ ಆಭಾ(ಸೀತೆ)ಯನ್ನು ತಮ್ಮ ಸಹಕಲಾವಿದರಾದ ಶ್ರೀಮತಿ ಶೃತಿ ಗೋಪಾಲ್ ಹಾಗೂ ಆದಿತ್ಯ ಪಿ.ವಿ.ಯವರ ಜೊತೆಗೂಡಿ ಪ್ರಸ್ತುತ ಪಡಿಸಲಿದ್ದಾರೆ. ದೇಶ ವಿದೇಶಗಳೆಲ್ಲೆಡೆಯಲ್ಲೂ ಇದರ ಟಿಕೆಟ್ ಶೋಗಳಾಗಿ ಪ್ರತಿ ಶೋ ಹೌಸ್‌ಫುಲ್ ಆಗಿ ಹೊರಹೊಮ್ಮಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಆದರೆ ಶಿವಮೊಗ್ಗೆಯ ಕಲಾಸ್ವಾದಕರಿಗಾಗಿ ಉಚಿತ ಪ್ರದರ್ಶನವನ್ನು ಸಹಚೇತನ ಏರ್ಪಡಿಸಿದೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಂಸದರಾದ ಬಿ.ವೈ. ರಾಘವೇಂದ್ರರವರು ಆಗಮಿಸಿ ಕಲಾವಿದರನ್ನು ಸನ್ಮಾನಿಸಲಿದ್ದಾರೆ. ಜೊತೆಗೆ ಛೇಂಬರ್ ಆಫ್ ಕಾಮರ್ಸ್’ನ ಅಧ್ಯಕ್ಷರಾದ ಎನ್. ಗೋಪಿನಾಥ್ ಕೂಡ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಿದ್ದಾರೆ ಎಂದು ಹೇಳಿದರು.
ಸಂಸ್ಥೆಯ ಗೌರವಾಧ್ಯಕ್ಷರಾದ ಎಸ್. ಎನ್. ಚನ್ನಬಸಪ್ಪ (ಚನ್ನಿ) ಮಾತನಾಡಿ 28 ರ ಭಾನುವಾರ ನಾಟ್ಯಾಲಯದ ನೃತ್ಯಗುರು ಸಹನಾ ಚೇತನ್‌ರವರ ಏಕವ್ಯಕ್ತಿ ನೃತ್ಯ ರೂಪಕ ಬ್ರಹ್ಮಜ್ಞಾನ ಜಿಜ್ಞಾಸು ಮೈತ್ರೇಯಿ ಪ್ರಸ್ತುತಗೊಳ್ಳಲಿದೆ. ತದನಂತರ ನಾಟ್ಯಾಲಯದ ಹಿರಿಯ ವಿದ್ಯಾರ್ಥಿಗಳೊಡಗೂಡಿ ಓಂ ನಮಃ ಶಿವಾಯ ಎಂಬ ನೃತ್ಯರೂಪಕವನ್ನು ಸಾದರಪಡಿಸಲಿದ್ದಾರೆ. ಈ ಕಾರ್ಯಕ್ರಮದ ಸಮಾರೋಪಕ್ಕೆ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕರಾದ ಡಿ.ಎಸ್. ಅರುಣ್ ಹಾಗೂ ಮಹಾನಗರ ಪಾಲಿಕೆಯ ಸದಸ್ಯರಾದ ಪ್ರಭಾಕರ ಪಿ. (ಪ್ರಭು) ಭಾಗವಹಿಸಲಿದ್ದಾರೆ ಎಂದರು.
Also read: ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ!
ವಿಶೇಷವೆಂಬಂತೆ ಮಹಿಳೆಯರ ಸ್ವಾವಲಂಬಿ ಜೀವನವನ್ನು ಉತ್ತೇಜಿಸುವ ದೃಷ್ಟಿಯಿಂದ ಸ್ವೇದ ಸಂಸ್ಥೆಯ ವತಿಯಿಂದ ಹೊಯ್ಸಳ ಕರ್ನಾಟಕ ಸೌಹಾರ್ದ ಸಹಕಾರಿ ಸಂಸ್ಥೆ ಹಾಗೂ ಶುಭಂ ಸೌಹಾರ್ದ ಸಹಕಾರಿ ಸಂಸೆಗಳ ಸಹಯೋಗದಲ್ಲಿ ಮಾರಾಟ ಮಳಿಗೆಗಳನ್ನು ತೆರೆಯಲಾಗುವುದು. ಈ ಎಲ್ಲಾ ಕಾರ್ಯಕ್ರಮಕ್ಕೆ. ಸಂಸ್ಥೆಯ ಅಧ್ಯಕ್ಷರಾದ ಎನ್.ಆರ್. ಪ್ರಕಾಶ್(ಆಚಿ) ಉಪಸ್ಥಿತರಿರಲಿದ್ದಾರೆ ಎಂದರು.
ಭಾರತೀಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪಸರಿಸುವ ನಿಟ್ಟಿನಲ್ಲಿ ಸಹಚೇತನ ಹಮ್ಮಿಕೊಂಡಿರುವ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾರಸಿಕರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಎಸ್.ಎನ್. ಚನ್ನಬಸಪ್ಪ (ಚನ್ನಿ)ಕೋರಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಸಹನಾ ಚೇತನ್, ಚೇತನ್, ಹರೀಶ್ ಕಾರ್ಣಿಕ್, ಮಾಲತೇಶ್, ಆನಂದ್ ರಾಮ್, ದಿನೇಶ್ ಆಚಾರ್ಯ, ಸಿಂಧು, ಸ್ನೇಹ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post