ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗ್ರಾಮೀಣ ಮಟ್ಟದಿಂದ ಸಹಕಾರ ಕ್ಷೇತ್ರ ಬೆಳೆದರೆ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಮೆಡಿಕಲ್ ಸೂಪರ್ ಇನ್‌ಟೆಂಡೆಂಟ್ ಡಾ.ಎಚ್.ಎಂ. ಶಿವಮೂರ್ತಿ ಅಭಿಪ್ರಾಯಪಟ್ಟರು.
ಆಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ಎನ್’ಸಿಯುಐ ಮಹಿಳಾ ಸಹಕಾರ ಶಿಕ್ಷಣ ಅಭಿವೃದ್ಧಿ ಯೋಜನೆ, ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ, ಸ್ನೇಹಾಶ್ರಯ ಅರ್ಬನ್ ಹಾಗೂ ರೋರಲ್ ಡೆವಲಪ್ಮೆಂಟ್ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಗೋಂದಿಚಟ್ನಹಳ್ಳಿಯ ಗ್ರಾಮಸ್ಥರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.

ಭಾರತದಲ್ಲಿ ಸಹಕಾರಿ ಚಳವಳಿಯು ವಿಶ್ವದಲ್ಲೇ ಅತಿ ದೊಡ್ಡದಾಗಿದೆ. ಪ್ರಸ್ತುತ, 8.5 ಲಕ್ಷಕ್ಕೂ ಹೆಚ್ಚು ಸಹಕಾರಿ ಜಾಲವನ್ನು ಹೊಂದಿರುವ ಭಾರತದಲ್ಲಿ ಸಹಕಾರಿ ಸಂಸ್ಥೆಗಳು ಶೇಕಡಾ 90 ರಷ್ಟು ಗ್ರಾಮಗಳನ್ನು ವ್ಯಾಪಿಸಿವೆ. ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲೂ ಸಮಗ್ರ ಬೆಳವಣಿಗೆಗಾಗಿ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ತರಲು ಪ್ರಮುಖ ಸಂಸ್ಥೆಗಳಾಗಿವೆ ಎಂದರು.

ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ, ಸಹಕಾರ ಕ್ಷೇತ್ರ ಕಾರ್ಯನಿರ್ವಹಿಸದ ರಂಗ ಇಲ್ಲ. ಇಲ್ಲಿ ಎಲ್ಲರೂ ಪ್ರತಿಯೊಬ್ಬರಿಗಾಗಿ, ಪ್ರತಿಯೊಬ್ಬರೂ ಎಲ್ಲರಿಗಾಗಿ ಎಂಬುದೇ ಇಲ್ಲಿ ಮುಖ್ಯವಾದುದು. ಗ್ರಾಮೀಣ ಪ್ರದೇಶದ ಮಹಿಳೆಯರಲ್ಲಿ ಉಳಿತಾಯ ಮನೋಭಾವನೆ, ಶಿಕ್ಷಣ, ಸಹಕಾರ ಸಂಘ ಹುಟ್ಟು ಹಾಕಿ ಪ್ರಜ್ಞೆ ಮೂಡಿಸಬೇಕು ಎಂದರು.

Also read: ಊಹಾಪೋಹಕ್ಕೆ ತೆರೆ: ರಾಜಕೀಯ ಪ್ರವೇಶವನ್ನು ಅಧಿಕೃತಗೊಳಿಸಿದ ಡಾ. ಧನಂಜಯ ಸರ್ಜಿ
ಡಿಸಿಸಿ ಬ್ಯಾಂಕ್ ಜಂಟಿ ನಿಬಂಧಕ ನಾಗೇಶ್ ಎಸ್. ಡೋಂಗ್ರೆ ಮಾತನಾಡಿ, ಎಲ್ಲರೂ ಕೈಜೋಡಿಸಿದಾಗ ಮಾತ್ರ ಸಹಕಾರ ಸಾಧ್ಯ. ಗ್ರಾಮೀಣ ಪ್ರದೇಶದಲ್ಲಿ ಸ್ತ್ರೀಶಕ್ತಿ ಸಂಘದ ಕಲ್ಪನೆ ಭಾರತೀಯ ಪರಂಪರೆಯಲ್ಲೇ ಇದೆ. ಹಿಂದಿನ ಕಾಲದಿಂದ ಒಬ್ಬರಿಗೆ ಒಬ್ಬರು ಸಹಕಾರ ನೀಡುತ್ತಾ ಇದಕ್ಕೆ ಬುನಾದಿ ಹಾಕಲಾಗಿದೆ ಎಂದರು.

ಮೇಲಿನ ಹನಸವಾಡಿ ಗ್ರಾಪಂ ಅಧ್ಯಕ್ಷೆ ಪ್ರೇಮ ವಿಜಯಕುಮಾರ್, ಉಪಾಧ್ಯಕ್ಷೆ ಬಿ.ಆರ್. ಸುಧಾ, ಪಿಡಿಒ ಶಂಕರಮೂರ್ತಿ, ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘದ ನಿರ್ದೇಶಕ ಜಿ.ಇ. ವಿರೂಪಾಕ್ಷಪ್ಪ, ಶಿವಮೊಗ್ಗ ತಾಲೂಕು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವಿನಾಶ್, ಎನ್’ಸಿಯುಐ ಯೋಜನಾಧಿಕಾರಿ ಎ.ಜಿ. ಅನಿತಾ, ಸ್ನೇಹಾಶ್ರಯ ಅರ್ಬನ್ ಹಾಗೂ ರೋರಲ್ ಡೆವಲಪ್ಮೆಂಟ್ ಸೊಸೈಟಿ ಕಾರ್ಯ ನಿರ್ವಹಣಾಧಿಕಾರಿ ಟಿ. ಮಾಲತಿ ಇದ್ದರು.











Discussion about this post