ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮೇಲ್ವರ್ಗದ ಪಂಕ್ತಿಗೆ ಮಾತ್ರ ಸೀಮಿತವಾದ ಭಕ್ತಿ ಪರಂಪರೆಯ ಚಕ್ರವ್ಯೂಹವನ್ನು ಭೇದಿಸಿ ಒಳ ಹೊಕ್ಕು ತಮ್ಮ ತನವನ್ನು ಮೆರೆದವರು ಕನಕದಾಸರು ಎಂದು ಕಮಲಾ ನೆಹರು ಮಹಿಳಾ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ, ಎನ್’ಎಸ್’ಎಸ್ ಕಾರ್ಯಕ್ರಮಾಧಿಕಾರಿ ಡಾ.ಬಾಲಕೃಷ್ಣ ಹೆಗಡೆ ಹೇಳಿದರು.
ಅವರು ತಮ್ಮ ಕಾಲೇಜಿನಲ್ಲಿ ಆಯೋಜಿಸಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡುತ್ತಿದ್ದರು.
ಕವಿಯೂ ಕಲಿಯೂ ಆದ ಕನಕದಾಸರು ತಮ್ಮ ವೈಚಾರಿಕತೆಯ ಪ್ರಖರತೆಯಿಂದ ದಾಸರಲ್ಲಿ ಕವಿ, ಕವಿಗಳಲ್ಲಿ ದಾಸರು ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಎಂದು ತಿಳಿಸಿದರು.
ಕೀರ್ತನೆ, ಮುಂಡಿಗೆ, ಮೋಹನತರಂಗಿಣಿ,ರಾಧಾನ್ಯ ಚರಿತೆ, ನಳಚರಿತ್ರೆ, ಹರಿಭಕ್ತಸಾರ, ಮೊದಲಾದ ಕೃತಿಗಳ ಮೂಲಕ ಜೀವಪರ ಸಂದೇಶಗಳನ್ನು ಬಿತ್ತಿದ್ದಾರೆ. ಸಮಾಜದಲ್ಲಿ ಅಂಕಾರ, ಡಾಂಬಿಕತನ, ಭಕ್ತಿ ಶೂನ್ಯತೆಯಿಂದ ಕೂಡಿದವರನ್ನು ಕಟುವಾಗಿ ಟೀಕಿಸಿದರು ಎಂದು ವಿವರಿಸಿದರು.
ಹೃದಯ ಹೊಲವನು ಮಾಡಿ, ತನುವ ನೇಗಿಲ ಮಾಡಿ ನಾಲಿಗೆಯ ಕೂರಿಗೆ ಮಾಡಿ ಬಿತ್ತಿರಯ್ಯ ಎನ್ನುವ ಚಿಂತನೆಯ ಮೂಲಕ ಸಮಾಜಕ್ಕೆ ಒಳಿತನ್ನು ಬಯಸಿದವರು ಕನಕದಾಸರು ಎಂದು ಬಣ್ಣಿಸಿದರು.
ಕುಲಕ್ಕಿಂತ ಗುಣ ಶ್ರೇಷ್ಠ ಎಂದು ಪ್ರತಿಪಾದಿಸಿದ ಅವರು ಗುಣವೇ ಮುಖ್ಯ ಹೊರತು ಕುಲವಲ್ಲ ಎಂದು ತೀವ್ರವಾಗಿ ಪ್ರತಿಪಾದಿಸಿದ್ದರು ಎಂದು ಮಾಹಿತಿ ನೀಡಿದರು.
ಕನಕದಾಸರ ಉಪದೇಶಗಳು ಸರ್ವಕಾಲಿಕ ಪ್ರಸ್ತುತತೆಯನ್ನು ಪಡೆದುಕೊಂಡಿವೆ ಎಂದು ಡಾ.ಹೆಗಡೆ ಹೇಳಿದರು.
ಉಪಪ್ರಾಂಶುಪಾಲರಾದ ಡಾ.ಆರ್.ಎಂ.ಜಗದೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನಕದಾದರು 14ನೆಯ ಶತಮಾನದಲ್ಲಿ ತಮ್ಮ ಉಪದೇಶಗಳ ಮೂಲಕ ಜಾತಿ ಪದ್ಧತಿ ನಿರ್ಮೂಲನೆಗೆ ಮುನ್ನುಡಿ ಬರೆದವರು ಕನಕದಾಸರು ಎಂದು ಗುಣಗಾನ ಮಾಡಿದರು.
ಐಕ್ಯೂಎಸಿ ಸಂಯೋಜಕ ಡಾ.ಎ.ಪಿ. ಓಂಕಾರಪ್ಪ, ದಾಸರ ಪದವನ್ನು ಹಾಡಿದರು. ಡಾ.ಬಿ.ಎಂ. ರವಿ ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕ ಎನ್.ಡಿ. ರಮೇಶ್ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post