ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿದ್ಯಾರ್ಥಿಗಳು ವಿದ್ಯೆಗೆ ನೀಡುವಷ್ಟೇ ಮಹತ್ವವನ್ನು ಕ್ರೀಡೆಗೂ ಸಹ ನೀಡಬೇಕು ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಕಿವಿ ಮಾತು ಹೇಳಿದರು.
ಸಹ್ಯಾದ್ರಿ ಸಹೋದಯ ಶಾಲಾ ಸಂಕೀರ್ಣದ ಅಡಿಯಲ್ಲಿ ಶಿವಮೊಗ್ಗ-ಚಿಕ್ಕಮಗಳೂರು ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಜೈನ್ ಪಬ್ಲಿಕ್ ಶಾಲೆಯಲ್ಲಿ ನಡೆದ ವಾಲಿಬಾಲ್ ಪಂದ್ಯಾವಳಿ ಹಾಗೂ ಕನಕದಾಸ ಜಯಂತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳು ಕೇವಲ ಶಿಕ್ಷಣಕ್ಕೆ ಮಾತ್ರ ಆದ್ಯತೆ ನೀಡಬಾರದು. ಇದರೊಂದಿಗೆ ಕ್ರೀಡೆಗೂ ಸಹ ಆಸಕ್ತಿ ತೋರಬೇಕು. ಹಾಗೆಂದು ಶಿಕ್ಷಣವನ್ನು ನಿರ್ಲಕ್ಷಿಸಿ ಕೇವಲ ಕ್ರೀಡೆಯಲ್ಲಿ ಮಾತ್ರ ಆಸಕ್ತಿ ಹೊಂದಿದರೂ ಸಹ ಪ್ರಯೋಜನವಿಲ್ಲ. ಬದಲಾಗಿ ಎರಡರಲ್ಲೂ ಸಮಾನ ಆಸಕ್ತಿ ಹೊಂದಿ ಶ್ರಮವಹಿಸಿದಾಗ ಮಾತ್ರ ಯಶಸ್ಸು ಸಾಧ್ಯ ಎಂದರು.
ವಿದ್ಯೆ ಹಾಗೂ ಕ್ರೀಡೆ ಎರಡರಲ್ಲೂ ಯಶಸ್ವಿಯಾಗುವುದು ಕಷ್ಟ ಸಾಧ್ಯ. ಆದರೆ, ಶ್ರಮವಹಿಸಿದರೆ ಯಾವುದೂ ಕಷ್ಟವಲ್ಲ. ಕಷ್ಟಪಟ್ಟು ಯಶಸ್ವಿಯಾದರೆ ನಿಮ್ಮ ಶಾಲೆ, ಪೋಷಕರು ಹಾಗೂ ದೇಶಕ್ಕೆ ಒಳ್ಳೆಯ ಹೆಸರು ತರುತ್ತೀರಿ ಎಂದರು.
ಈಶ್ವರಪ್ಪನವರು ತಮ್ಮ ಕಾಲೇಜು ದಿನಗಳಲ್ಲಿ ವಿದ್ಯೆಯೊಂದಿಗೆ ಕ್ರೀಡೆಯಲ್ಲೂ ಆಸಕ್ತಿ ಹೊಂದಿದ್ದು, ತಮ್ಮ ಪ್ರಾಂಶುಪಾಲರು ನೀಡಿದ್ದ ಸ್ಪೂರ್ತಿ ಹಾಗೂ ಬೆಂಬಲವನ್ನು ನೆನೆದು, ಅದರಿಂದಲೇ ತಾವು ಇಂದು ಈ ಹಂತಕ್ಕೆ ಬೆಳೆದಿದ್ದೇನೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ, ಕ್ರೀಡೆಗೆ ಚಾಲನೆ ನೀಡಿದ ಅವರು, ಸ್ವತಃ ಆಟವಾಡಿ ಮಕ್ಕಳನ್ನು ಹುರಿದುಂಬಿಸಿದರು. ಒಟ್ಟು 20 ಶಾಲೆಗಳ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
ಜಿಲ್ಲಾ ವಾಲಿಬಾಲ್ ಸಂಘದ ಅಧ್ಯಕ್ಷ ಶಶಿಧರ್, ಜೆಜಿಐ ಕ್ಲಷ್ಟರ್ ಹೆಡ್ ಶರತ್ ಕುಮಾರ್, ಪ್ರಾಂಶುಪಾಲರಾದ ಪ್ರಿಯದರ್ಶಿನಿ, ಶಾಲಾ ಸಂಯೋಜಕರಾದ ದಿವ್ಯಾ ಶೆಟ್ಟಿ, ಸಿಇಒ ಸುಮಂತ್, ಸೌಲಭ್ಯ ವ್ಯವಸ್ಥಾಪಕ ವಿಜಯ್ ಕುಮಾರ್, ಶಾಲೆಯ ಆಡಳಿತ ಮಂಡಳಿಯವರು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















