ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವೈದ್ಯಕೀಯ ಕ್ಷೇತ್ರ ತುಂಬಾ ಮಹತ್ವದ ಹಾಗೂ ಜವಾಬ್ಧಾರಿಯುತ ವೃತ್ತಿಯಾಗಿದ್ದು, ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ಜೊತೆಗೆ ಕೆಲವು ಸಂದರ್ಭದಲ್ಲಿ ಚಿಕಿತ್ಸೆ ನೀಡುವ ಮುನ್ನ ಕಾನೂನು ನಿಯಮಗಳನ್ನು ಪಾಲಿಸುವುದು ಸೂಕ್ತ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನ್ಯಾಯಾಧೀಶರಾದ ರಾಜಣ್ಣ ಸಂಕಣ್ಣವರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತು, ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿವಮೊಗ್ಗ ಇವರುಗಳ ಸಂಯುಕ್ತಾಶ್ಯದಲ್ಲಿ ಅಂತರರಾಷ್ಟ್ರೀಯ ದತ್ತು ಮಾಸಾಚರಣೆ ನವೆಂಬರ್ 2022ರ ಅಂಗವಾಗಿ ಆಯೋಜಿಸಲಾಗಿದ್ದ ಬಾಲ ನ್ಯಾಯ ಕಾಯ್ದೆಯಡಿಯಲ್ಲಿ ಬರುವ ಕಾನೂನು ಬದ್ಧ ದತ್ತು ಪ್ರಕ್ರಿಯೆ ಹಾಗೂ ಕಾರಾ ಮಾರ್ಗಸೂಚಿಯ ಕುರಿತು ವೈದ್ಯಕೀಯ ವಿದ್ಯಾರ್ಥಿಗಳು ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ ಇವರಿಗೆ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಮಾತನಾಡಿ, ದತ್ತು ಪ್ರಕ್ರಿಯೆ ಕಾನೂನು ಬದ್ಧವಾಗಿರುವುದು ಸುರಕ್ಷಿತ. ಕೆಲವು ಸಂದರ್ಭಗಳಲ್ಲಿ ಆಸ್ಪತ್ರೆಯಲ್ಲಿ ಮಗು ಹುಟ್ಟಿದ ತಕ್ಷಣ ನವಜಾತ ಶಿಶುವನ್ನು ಬೇರೆಯವರಿಗೆ ಹಸ್ತಾಂತರಿಸುವ ಪ್ರಕ್ರಿಯೆ ದಿನನಿತ್ಯ ಕೇಳಿಬರುತ್ತಿವೆ. ಆದರೆ ಇದು ಕಾನುನಾತ್ಮಕ ಪ್ರಕ್ರಿಯೆಯಾಗಿರುವುದಿಲ್ಲ. ಅಲ್ಲದೆ ಮಕ್ಕಳನ್ನು ಮಾರಾಟ ಮಾಡಿದಂತಾಗುತ್ತದೆ. ಇದರಿಂದ ಸಮಸ್ಯೆಗಳು ಉಲ್ಬಣಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಇಂತಹ ಪ್ರಕರಣಗಳಲ್ಲಿ ಭಾಗಿಯಾಗುವ ಎಲ್ಲರಿಗೂ ಶಿಕ್ಷೆ ಖಚಿತ. ವೈದ್ಯರು ಇಂತಹ ಚಟುವಟಿಕೆಗಳಿಗೆ ಪುಷ್ಟಿ ನೀಡಬಾರದು ಎಂದು ಹೇಳಿದರು.

ಪೋಷಕರಿಲ್ಲದ ಮಕ್ಕಳನ್ನು ವಾಪಸ್ ಕುಟುಂಬಕ್ಕೆ ಸೇರ್ಪಡೆಗೊಳಿಸಲು ಎಲ್ಲಾ ರೀತಿಯ ಕಾನೂನಾತ್ಮಕ ಪ್ರಯತ್ನ ಮಾಡಲಾಗುವುದು. ಮೊದಲನೆಯದಾಗಿ ಸ್ಪೆಷಲ್ ಅಡಾಪ್ಷನ್ ಏಜೆನ್ಸಿ ಮುಖಾಂತರ ಮಕ್ಕಳ ವಿವರಣೆ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಲಾಗುವುದು ಹಾಗೂ ಸಂಬಂಧಪಟ್ಟವರು ಸಂಪರ್ಕಿಸಲು 60 ದಿನಗಳ ಕಾಲಾವಕಾಶ ನೀಡಲಾಗುವುದು. ಈ ಸಮಯದಲ್ಲಿ ಮಗುವಿಗೆ ಸಂಬಂಧಪಟ್ಟವರಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದಲ್ಲಿ, ಸಿಡಬ್ಲ್ಯೂಸಿಯಲ್ಲಿ ದತ್ತು ಸ್ವೀಕಾರ ಪ್ರಕ್ರಿಯೆಗೆ ಕಾನೂನಾತ್ಮಕ ನೋಂದಣಿ ಮಾಡಿಸಿ, ಮಕ್ಕಳನ್ನು ಪೋಷಿಸುವ ಇಚ್ಚೆಯುಳ್ಳುವರಿಗೆ ಕಾನೂನು ಬದ್ಧವಾಗಿ ದತ್ತು ನೀಡಲಾಗುವುದು ಎಂದರು.












Discussion about this post