ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ-ಯು.ಜೆ. ನಿರಂಜನಮೂರ್ತಿ |
ಸೂಕ್ಷ್ಮ ಸಂವೇದನೆ, ಸಾತ್ವಿಕ ಮನಸ್ಸು, ತಿಳಿ ನೀರಿನಂತಹ ಶಾಂತ ಚಿತ್ತತೆ ಇದು ಕನ್ನಡ ಸಾಹಿತ್ಯ ಲೋಕದ ಜೀವನಾಡಿ, `ಅಕ್ಷರ ಶಕ್ತಿ’, ಹಿರಿಯ ಸಾಹಿತಿ ನಾ. ಡಿಸೋಜ ಅವರಲ್ಲಿ ನಾ ಕಂಡ ಸಂವೇದನಾ ಭಾವಗಳು… ಇಂತಹ ದಿವ್ಯ ಚೇತನ ಇನ್ನು ಮುಂದೆ ತಮ್ಮ ಅಕ್ಷರ ಹಾಗೂ ವ್ಯಕ್ತಿತ್ವದ ಮೂಲಕ ಮಾತ್ರವೇ ನಮ್ಮೊಂದಿರುತ್ತಾರೆ ಎಂಬುದು ನೆನದರೇ….
ನಾ. ಡಿಸೋಜ… ಕನ್ನಡ ಸಾಹಿತ್ಯ ಲೋಕದಲ್ಲಿ ತನ್ನದೇ ಆದ ವಿಶಿಷ್ಟ ರೀತಿಯ ಸಾಹಿತ್ಯ ಪ್ರಪಂಚವನ್ನು ಸೃಷ್ಟಿಸಿಕೊಂಡವರು. ಖ್ಯಾತನಾಮ ಸಾಹಿತಿಗಳು.
Also Read>> ಜ.19ರಂದು ಅಮ್ಮ ಎಂಬ ಅಚ್ಚರಿಗೊಂದು ಅಕ್ಕರೆಯ ನಮನ ಕಾರ್ಯಕ್ರಮ
1937ರ ಜೂನ್ 6ರಂದು ಶಿವಮೊಗ್ಗ #Shivamogga ಜಿಲ್ಲೆ ಸಾಗರದಲ್ಲಿ ಜನಿಸಿದ ಡಿಸೋಜ ಅವರು ಲೋಕೋಪಯೋಗಿ ಇಲಾಖೆಯಲ್ಲಿ ಸುಮಾರು 37 ವರ್ಷ ಸೇವೆ ಸಲ್ಲಿಸಿದ್ದಾರೆ. ಸರ್ಕಾರಿ ಉದ್ಯೋಗದೊಂದಿಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡು ಸಮಾಜಮುಖಿ ವಿಚಾರಗಳನ್ನು ತಮ್ಮ ಕಥೆ, ಕಾದಂಬರಿಗಳಲ್ಲಿ ಹೊರ ಹೊಮ್ಮುವಂತೆ ಮಾಡಿದ ಅಜಾತಶತ್ರು.
ಡಿಸೋಜರು ಸಾಹಿತ್ಯವು ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಮಾನವೀಯ ಮೌಲ್ಯಗಳನ್ನು ಪರಿಚಯಿಸುವ ಮಾಧ್ಯಮ ಎಂಬುದನ್ನು ತಮ್ಮ ಕೃತಿಗಳಿಂದ ಸಾಬೀತುಪಡಿಸಿದವರು. ಇವರ ಪ್ರಮುಖ ಕೃತಿಗಳಾದ ಕೊಳಗ, ದ್ವೀಪ, ಮುಳುಗಡೆ, ಬಳುವಳಿ, ಮುದುಕನ ಹೊಸ ಹೆಜ್ಜೆ ಇನ್ನು ಮುಂತಾದವುಗಳು ಗ್ರಾಮೀಣ ಜನ ಜೀವನದ ವಿಚಾರಧಾರೆಗಳನ್ನು ಶಕ್ತಿಯುತ ಕಥಾನಕಗಳನ್ನಾಗಿ ಓದುಗ ವರ್ಗಕ್ಕೆ ಸಮರ್ಪಿಸಿದ್ದಾರೆ.
ನಾ.ಡಿಸೋಜ ಅವರ ವ್ಯಕ್ತಿತ್ವ ಎಂತಹುದ್ದು ಎನ್ನುವುದು ಅವರೊಟ್ಟಿಗೆ ಕಾಲ ಕಳೆದಿರುವವರಿಗೆ ಮಾತ್ರ ಗೊತ್ತಿರುತ್ತದೆ. ನಾನು ಅವರನ್ನು ಭೇಟಿಯಾದ ಮೊದಲ ದಿನದಿಂದ ಇಂದಿನವರೆಗೂ ಅವರ ಭೇಟಿಯ ಕ್ಷಣಗಳು ಹಚ್ಚಹಸಿರಾಗಿದೆ ನನ್ನ ಮನದಲ್ಲಿ.
ಅವರ ಸೂಕ್ಷ್ಮ ಸಂವೇದನೆ, ನಿರ್ಲಿಪ್ತ ಭಾವ, ಸಾತ್ವಿಕ ಮನಸ್ಸು, ತಿಳಿ ನೀರಿನಂತಹ ಶಾಂತ ಚಿತ್ತತೆ, ಮೌನವು ಮಾತಾಗಬಲ್ಲ ಹಾವಭಾವ, ಮನುಷ್ಯ ಮನುಷ್ಯನಿಗೆ ನೀಡಬೇಕಾದ ಕನಿಷ್ಠ ಬೆಲೆ, ಸ್ಪಂದನೆ ಇವೇ ಮೊದಲಾದ ಗುಣವಿಶೇಷತೆಗಳು ಒಡನಾಡಿಗಳಿಗೂ ಪ್ರಭಾವ ಬೀರದೇ ಇರಲಾರವು.

ನೆಹರು ನಗರದ 2ನೇ ತಿರುವಿನಲ್ಲಿದ್ದ ಎಲ್ಲಾ ಮನೆಗಳು ಕಾಂಕ್ರಿಟಿನ ಬಹು ಮಹಡಿ ಮನೆಗಳು. ನಾ.ಡಿಸೋಜ ಅವರ ಮನೆಯೊಂದನ್ನು ಬಿಟ್ಟು. ತುಂಬ ಚಿಕ್ಕದು ಅಲ್ಲ ದೊಡ್ಡದು ಅಲ್ಲ ಎನ್ನಬಹುದು ಅವರ ಮಂಗಳೂರು ಅಂಚಿನ ಮನೆ. ಅವರ ಮನಸ್ಸಿನಷ್ಟೇ ಶುದ್ಧವಾಗಿದ್ದ ಮನೆ. ನಾ.ಡಿಸೋಜರ ಪತ್ನಿಯಾದ ಫಿಲೋಮಿನಾ ಡಿಸೋಜ ಅವರು ನಾವು ಅವರ ಮನೆಯಲ್ಲಿ ಪುಸ್ತಕಗಳ ಸಂಗ್ರಹಣೆಯ ವೀಕ್ಷಣೆ ಮಾಡುವಷ್ಟರಲ್ಲಿ ಸ್ವಾದಿಷ್ಟ ಕಾಫಿಯನ್ನು ತಂದು ಕೊಟ್ಟರು.

ನಂತರದಲ್ಲಿ ಸ್ನೇಹಿತರ ಪುಸ್ತಕ ಬಿಡುಗಡೆಗಳಿಗೆ, ಮುನ್ನುಡಿ ಬರೆಯಲಿಕ್ಕೆ, ಚರಕ ಪತ್ರಿಕೆಯ ಬಿಡುಗಡೆ ಸಮಾರಂಭಕ್ಕೆ ಹೀಗೆ ಅನೇಕ ಕಾರ್ಯಕ್ರಮಗಳಿಗೆ ಆಹ್ವಾನಿಸುವಾಗ ಖುದ್ದು ಬಂದು ಕರೆಯುವುದು ಬೇಡ ಮತ್ಯಾಕೆ ಒಂದು ದಿನ ಕೆಲಸ ಬಿಟ್ಟು ಬರುವಿರಿ. ಬಿಡುಗಡೆಯ ಪುಸ್ತಕ ಪೋಸ್ಟ್ ಮಾಡಿ ಸಾಕು ಎಂದು ಹೇಳುತ್ತಿದ್ದರು. ಸಮಾರಂಭದಲ್ಲಿ ಭಾಷಣ ಕೇಳಿದಾಗ ತಿಳಿಯುತ್ತಿತ್ತು ಅದೆಷ್ಟು ಅಳವಾಗಿ ಅ ವಿಷಯ/ಪುಸ್ತಕದ ಕುರಿತು ಅಧ್ಯಯನ ಮಾಡಿಕೊಂಡು ಬಂದಿದ್ದಾರೆಂದು.
ಆಡಂಬರದ ಬಿಸಿಲು ಕುದುರೆ ಏರಿದ ಇಂದಿನ ಸಮಾಜದಲ್ಲಿ ನಾ. ಡಿಸೋಜರಂತಹ ಸರಳ ಸಜ್ಜನಿಕೆಯ ವ್ಯಕ್ತಿತ್ವಗಳು ಮಾದರಿಯಾಗಿರುತ್ತವೆ. ಸಂಬಳ ಬರುವವರು ಕಾರು, ಮನೆ, ಪೀಠೋಪಕರಣ, ಫ್ರಿಜ್ಡ್, ವಾಷಿಂಗ್ ಮಷಿನ್ ಇನ್ನು ಅನೇಕ ಕೈ ಮೀರಿದ ಇಎಂಐಗಳನ್ನು ಚಕ್ರವ್ಯೂಹದಲ್ಲಿ ಸಿಲುಕಿ ನಿಜವಾಗ ಸುಖ ಆನಂದಗಳು ಮರೆತು ಹೋಗುವಂತೆ ಮಾಡಿಕೊಂಡಿರುತ್ತಾರೆ. ಆದರೆ, ಇವೆಲ್ಲಕ್ಕೂ ತದ್ವಿರುದ್ದವಾಗಿ ಸರಳ, ಮಾದರಿ ಜೀವನ ನಡೆಸಿ ಡಿಸೋಜರ ಜೀವನವೇ ನಮಗೊಂದು ಗ್ರಂಥ ಭಂಡಾರ.
ಕನ್ನಡ ನಾಡು ನುಡಿ, ಪ್ರಾದೇಶಿಕ ಜೀವನ ಶೈಲಿ, ಸಂಸ್ಕೃತಿ, ಸಂಸ್ಕಾರಗಳ ಪ್ರಾಮುಖ್ಯತೆಯನ್ನು ಸಾಹಿತ್ಯಿಕವಾಗಿ ಮನವರಿಕೆ ಮಾಡಿಸುವ ಅದ್ಬುತ ಸಂಘ ಜೀವಿ ಮರೆಯಾಗಿರುವುದು ಇಡೀ ಮನುಕುಲಕ್ಕೆ ನಷ್ಟದ ಸಂಗತಿ. ಆದರೆ ಅವರ ಸಾಹಿತ್ಯ, ವ್ಯಕ್ತಿತ್ವ, ಆದರ್ಶ ಎಂದೂ ನಮ್ಮಿಂದ ಮುಳುಗಡೆಯಾಗಲ್ಲ. ವಿಶೇಷವಾಗಿ ಮಲೆನಾಡು ಭಾಗದ ಜನರಿಗೆ ಅವರು ಪ್ರತಿದಿನದ ಬದುಕಿಗೆ ಪ್ರೇರಣೆ ನೀಡುತ್ತಲೇ ಇರುತ್ತಾರೆ.
ಹೋಗಿ ಬನ್ನಿ…









Discussion about this post