ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ: ಲೇಖನ ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ |
“ಬಣ್ಣ ಹಚ್ಚಿದವನು ಬದುಕುತ್ತಾನೋ ಇಲ್ಲವೋ ಗೊತ್ತಿಲ್ಲ, ಆದರೆ ಬಣ್ಣದ ಮೇಲಿನ ಪ್ರೀತಿ ಅವನನ್ನು ಎಂದಿಗೂ ಕೈಬಿಡುವುದಿಲ್ಲ” ಎಂಬ ಮಾತಿಗೆ ಜೀವಂತ ಉದಾಹರಣೆ ನಮ್ಮ ಹೆಮ್ಮೆಯ ನಾಗರಾಜ್ ತೆಕ್ಕಟ್ಟೆ. ಕುಂದಾಪುರದ ಆ ಸೊಗಡಿನ ಭಾಷೆ, ಆ ಮುಗ್ಧ ನಗು, ಮತ್ತು ವೇದಿಕೆಯ ಮೇಲೆ ಅವರು ತೋರುವ ಆ ಅಪ್ರತಿಮ ಚೈತನ್ಯ ಇಂದು ಅವರನ್ನು ಕೋಟಿ ಕನ್ನಡಿಗರ ಪ್ರೀತಿಯ ‘ಕಾಮಿಡಿ ಕಿಲಾಡಿ’ಯನ್ನಾಗಿ ಮಾಡಿದೆ.
ಬಾಲ್ಯದ ಹೋರಾಟ ಮತ್ತು ಬಣ್ಣದ ನಂಟು
ಬಸವರಾಜ ಮತ್ತು ಗುಲಾಬಿ ದಂಪತಿಗಳ ಪುತ್ರನಾಗಿ ತೆಕ್ಕಟ್ಟೆಯಲ್ಲಿ ಜನಿಸಿದ ನಾಗರಾಜ್ ಅವರ ಬದುಕು ಹೂವಿನ ಹಾಸಿಗೆಯಾಗಿರಲಿಲ್ಲ. ನಾಲ್ಕನೇ ತರಗತಿಯಲ್ಲೇ ‘ನಕ್ಕಳಾ ರಾಜಕುಮಾರಿ’ ನಾಟಕದ ‘ಗುಂಡ’ನಾಗಿ ರಂಗಪ್ರವೇಶ ಮಾಡಿದ ಈ ಬಾಲಕನಿಗೆ, ಅಂದೇ ಕಲೆ ಎಂಬುದು ಬದುಕಿನ ಅವಿಭಾಜ್ಯ ಅಂಗವಾಯಿತು.
ಶಾಲಾ ರಜಾದಿನಗಳಲ್ಲಿ ಆಟವಾಡುವ ವಯಸ್ಸಿನಲ್ಲಿ ಇವರು ಪೇಂಟಿಂಗ್ ಕೆಲಸ ಮಾಡಿದರು, ಬಸ್ಸಿನ ಕಂಡಕ್ಟರ್ ಆದರು, ಕಾರ್ ಸರ್ವಿಸ್ ಸ್ಟೇಷನ್‌ನಲ್ಲಿ ಬೆವರು ಸುರಿಸಿದರು, ಅಷ್ಟೇ ಏಕೆ… ಲಾಟರಿ ಟಿಕೆಟ್ ಮಾರಿ ಬದುಕಿನ ಕಟು ಸತ್ಯಗಳನ್ನು ಹತ್ತಿರದಿಂದ ಕಂಡರು. ಈ ಕಷ್ಟಗಳೇ ಅವರ ನಟನೆಗೆ ಜೀವ ತುಂಬಿದವು.
ಸೋಲದ ಹಠ, ಬೆನ್ನೇರಿದ ಯಶಸ್ಸು
1999ರಲ್ಲಿ ರಾಜ್ಯಮಟ್ಟದ ಮಕ್ಕಳ ನಾಟಕ ಸ್ಪರ್ಧೆಯಲ್ಲಿ ವೈಯಕ್ತಿಕ ನಟನೆಗೆ ಪ್ರಥಮ ಸ್ಥಾನ ಪಡೆದಾಗ, ಅದು ಮುಂದೆ ಸೃಷ್ಟಿಯಾಗಲಿರುವ ಇತಿಹಾಸಕ್ಕೆ ಮುನ್ನುಡಿಯಾಗಿತ್ತು. ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಎಂಟು ವರ್ಷ ಕೆಲಸ ಮಾಡಿದರೂ, ಅವರ ಒಳಗಿದ್ದ ಕಲಾವಿದ ಮಾತ್ರ ವಿಶ್ರಮಿಸಲಿಲ್ಲ. ‘ಸ್ಮೈಲ್ ಟಿವಿ’ಯ ಮೂಲಕ ಆರಂಭವಾದ ಅವರ ಕಿರುತೆರೆಯ ಪಯಣ, ‘ಕಾಮಿಡಿ ಉಸ್ತಾದ್’, ‘ನಗೆ ನೂರು ಬಗೆ’ಯನ್ನು ದಾಟಿ ‘ಮುಕ್ತ ಟಿವಿ’ಯ “ನ್ಯೆಗಿ ನಾಗಣ್ಣ”ನಾಗಿ ಜನಮಾನಸದಲ್ಲಿ ಅಚ್ಚಳಿಯದ ಮುದ್ರೆ ಒತ್ತಿತು. ಆಕಾಶವಾಣಿ ಮಂಗಳೂರು ರೇಡಿಯೋ ಕಾರ್ಯಕ್ರಮಗಳ ಮೂಲಕ ಕುಂದಾಪುರ ಕನ್ನಡದ ಪಸರನ್ನು ರಾಜ್ಯಾದ್ಯಂತ ಹರಡಿದ ಹೆಗ್ಗಳಿಕೆ ಇವರದ್ದು.
ರಂಗಭೂಮಿಯ ಕಲಿ ಮತ್ತು ಬೆಳ್ಳಿಪರದೆಯ ನಟ
ಸ್ವಂತವಾಗಿ ‘ಶಿವಶಕ್ತಿ ಕಲಾತಂಡ’ವನ್ನು ಕಟ್ಟಿ, ‘ಗಮ್ಮತಿನ ಮದಿ’ಯಂತಹ ಹಿಟ್ ನಾಟಕಗಳನ್ನು ನೀಡಿ, ಇಂದು ‘ಕಲಾ ಶಕ್ತಿ ಕಲಾತಂಡ’ದ ಮೂಲಕ ‘ಆಟಗಾರ’ ನಾಟಕವನ್ನು 500ಕ್ಕೂ ಹೆಚ್ಚು ಪ್ರದರ್ಶನ ಕಂಡಂತೆ ಮುನ್ನಡೆಸುತ್ತಿರುವ ಇವರ ಶ್ರಮ ಅಮೋಘ. ಕೇವಲ ರಂಗಭೂಮಿಯಷ್ಟೇ ಅಲ್ಲದೆ, ‘ಕ್ರಿಟಿಕಲ್ ಕೀರ್ತನೆಗಳು’, ‘ಪೆಪ್ಪರ್ ಆಂಡ್ ಸಾಲ್ಟ್’ನಂತಹ ಸಿನಿಮಾಗಳ ಮೂಲಕ ಬೆಳ್ಳಿಪರದೆಯ ಮೇಲೂ ಮಿಂಚುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ‘ಟೀಂ ನಾಗರಾಜ್ ತೆಕ್ಕಟ್ಟೆ’ ಹೆಸರಿನಲ್ಲಿ ಇವರು ಬಿಡುಗಡೆ ಮಾಡುವ ಹಾಸ್ಯ ವೀಡಿಯೋಗಳು ಲಕ್ಷಾಂತರ ಜನರನ್ನು ರಂಜಿಸುತ್ತಿವೆ.
ಗೌರವ ಮತ್ತು ಪ್ರಶಸ್ತಿಗಳ ಸುರಿಮಳೆ
ನಾಗರಾಜ್ ಅವರ ಕಲಾ ಸೇವೆಯನ್ನು ಗುರುತಿಸಿ ನಾಡಿನ ಹಲವಾರು ಸಂಸ್ಥೆಗಳು ಗೌರವಿಸಿವೆ. ಅವರ ಮುಕುಟಕ್ಕೇರಿದ ಪ್ರಮುಖ ಪ್ರಶಸ್ತಿಗಳು ಇಲ್ಲಿವೆ:
- ಡಾ. ಶಿವರಾಮ ಕಾರಂತ ಪ್ರತಿಷ್ಠಾನ(ರಿ.)ಕೋಟ
- ಇವರು ಕೂಡ ಮಾಡುವ ದಿವಂಗತ! ಮಂಜುನಾಥ ಕೋಟ “ರಂಗಭೂಮಿ ಪುರಸ್ಕಾರ”
- ಮ್ಯಾಕ್ಸ್ ಇನ್ಸೂರೆನ್ಸ್ ಆಕ್ಸಿಸ್ ಬ್ಯಾಂಕ್ ನೀಡಿದ “ಕಲಾ ರತ್ನ” ಪ್ರಶಸ್ತಿ
- ಜನತಾ ಶಿಕ್ಷಣ ಸಂಸ್ಥೆ ಹೇಮ್ಮಾಡಿ ನೀಡಿದ “ಕಲಾ ಸಾಮ್ರಾಟ್” ಪ್ರಶಸ್ತಿ
- The ರಾಕ್ಸ್ ನೀಡಿದ “ಕಲಾ ಕುಸುಮ” ಪ್ರಶಸ್ತಿ
- ಶ್ರೀ ಶೃಂಗೇರಿ ಶಂಕರ ಮಠ ನೀಡಿದ “ಸ್ಥಳೀಯ ಪ್ರತಿಭೆ” ಪ್ರಶಸ್ತಿ
- ಇವುಗಳಲ್ಲದೆ 800ಕ್ಕೂ ಹೆಚ್ಚು ಸನ್ಮಾನಗಳು ಇವರ ಪ್ರತಿಭೆಗೆ ಸಾಕ್ಷಿಯಾಗಿವೆ. ಜೀ ಕನ್ನಡದ ‘ಕಾಮಿಡಿ ಕಿಲಾಡಿಗಳು ಸೀಸನ್ 5’ರ ವೇದಿಕೆಯಲ್ಲೂ ತಮ್ಮ ಅಪ್ಪಟ ‘ಕುಂದಾಪ್ರ ಕನ್ನಡ’ವನ್ನು ಬಿಟ್ಟುಕೊಡದೆ ಭಾಷಾ ರಾಯಭಾರಿಯಾಗಿ ಮಿಂಚಿದ್ದಾರೆ.
ಸುಂದರ ಜೀವನದ ಪಯಣ
ಪತ್ನಿ ಜ್ಯೋತಿ ಮತ್ತು ಮಗಳು ಜ್ಞಾನಳ ಪ್ರೀತಿಯ ಸಂಸಾರದ ನಡುವೆ, ಇಂದು ಅವರು ಸ್ವಂತ ಉದ್ಯೋಗಿಯಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ಆಶುಭಾಷಣದಿಂದ ಕ್ಲೇ ಮಾಡಲಿಂಗ್‌ವರೆಗೆ ಬಹುಮುಖ ಪ್ರತಿಭೆ ಹೊಂದಿರುವ ಇವರು, ಪ್ರಸ್ತುತ ಶಾಲಾ ಮಕ್ಕಳಿಗೆ ನಾಟಕಗಳನ್ನು ಹೇಳಿಕೊಡುತ್ತಾ, ಬ್ರ್ಯಾಂಡ್ ಪ್ರಮೋಷನ್ ವೀಡಿಯೋಗಳು ಹಾಗೂ ಲೈವ್ ಇವೆಂಟ್‌ಗಳ ಮೂಲಕ ಬ್ಯುಸಿಯಾಗಿದ್ದಾರೆ.
“ಕಷ್ಟಗಳ ಕುಲುಮೆಯಲ್ಲಿ ಬೆಂದು, ನಗುವಿನ ಹೂವನ್ನು ಅರಳಿಸಿದ ಈ ಕಲಾವಿದನ ರಂಗಪಯಣ ನೂರ್ಕಾಲ ಹೀಗೆಯೇ ಸಾಗಲಿ. ನಿಮ್ಮ ನಗು ಸಾವಿರಾರು ಹೃದಯಗಳಿಗೆ ಮದ್ದಾಗಲಿ.”
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















