ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಅರಣ್ಯ ಎನ್ನುವುದು ಪ್ರಕೃತಿ ನಮಗಾಗಿ ನೀಡಿರುವ ಅತ್ಯಮೂಲ್ಯವಾದ ಸಂಪತ್ತುಗಳಲ್ಲಿ ಒಂದು ಎನ್ನುವುದನ್ನು ಚಿಕ್ಕಂದಿನಿದಲೂ ಓದಿಕೊಂಡು ಬಂದಿದ್ದೇವೆ. ಆದರೆ, ಕಳೆದ ಆರೇಳು ದಶಕದಿಂದೀಚೆ ಅರಣ್ಯ ಸಂಪತ್ತನ್ನು ತಮ್ಮ ಸ್ವಾರ್ಥಕ್ಕಾಗಿ ದೋಚುವ ಕಾಡುಗಳ್ಳರ ಸಂಖ್ಯೆ ಹೆಚ್ಚಾಗಿದೆ. ಇಂತಹ ಅರಣ್ಯ ಚೋರರನ್ನು ಸದೆಬಡಿಯುವ ಕರ್ತವ್ಯದಲ್ಲಿ ತಮ್ಮನ್ನೇ ಪ್ರಾಣವನ್ನೇ ಬಲಿಯಾಗಿ ನೀಡಿದ ಸಾವಿರಾರು ವೀರಾಗ್ರಣಿಗಳನ್ನು ಸ್ಮರಿಸುವ `ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ’ ಇಂದು.
ಚಾಮರಾಜನಗರ ಡಿಸಿಎಫ್ ಆಗಿದ್ದ ಪ್ರಾಮಾಣಿಕ ಅಧಿಕಾರಿ ಪಿ. ಶ್ರೀನಿವಾಸ್ ಅವರನ್ನು ಮೂರು ದಶಕಗಳ ಕಾಲ ಅರಣ್ಯಸಂಪತ್ತನ್ನು ಮನಸೋಇಚ್ಚೆ ದೋಚಿ, ಅರಣ್ಯ ಹಾಗೂ ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದ್ದ ಕಾಡುಗಳ್ಳ ವೀರಪ್ಪನ್ ಅತ್ಯಂತ ಕ್ರೂರವಾಗಿ ತನ್ನ ಮೋಸದ ಜಾಲದಿಂದ ಹತ್ಯೆ ಮಾಡಿದ್ದ. ಅರಣ್ಯ ಸಂಪತ್ತಿನ ರಕ್ಷಣೆ ಹಾಗೂ ಗೋಪಿನಾಥಂ ಗ್ರಾಮದ ಜನರ ಉದ್ದಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಈ ಅಧಿಕಾರಿ ಅದೇ ಅರಣ್ಯದಲ್ಲಿ ಘೋರಾತಿಘೋರವಾಗಿ ಪ್ರಾಣಬಿಟ್ಟರು.
ಈ ಭಾಗದ ಅರಣ್ಯದಂಚಿನ ಗ್ರಾಮೀಣರ ಪಾಲಿಗೆ ಇಂದಿಗೂ ದೈವವಾಗಿ ಪೂಜಿಸಲ್ಪಡುತ್ತಿರುವ ಐಎಫ್’ಎಸ್ ಅಧಿಕಾರಿ ಡಿಸಿಎಫ್ ಪಿ. ಶ್ರೀನಿವಾಸ್. ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನದಿಂದು #NationalForestMartyrsDay ಇಂತಹ ಪ್ರಾತಃಸ್ಮರಣೀಯ ಅಧಿಕಾರಿಗೆ ಈ ಅಕ್ಷರನಮನ.
ಅದು ಕರ್ನಾಟಕ, ತಮಿಳುನಾಡು ಹಾಗೂ ಕೇರಳ ಗಡಿ ಭಾಗದ 18 ಸಾವಿರ ಚದರ ಕಿಲೋಮೀಟರ್ ವ್ಯಾಪ್ತಿಯ ದಟ್ಟವಾದ ಅರಣ್ಯಪ್ರದೇಶ. ಪೂರ್ವ ಘಟ್ಟಗಳು ಮುಕ್ತಾಯಗೊಂಡು, ಪಾಲಾರ್ ನದಿ #PalarRiver ಪ್ರದೇಶದ, ಪಶ್ಚಿಮ ಘಟ್ಟಗಳ ಹೆಬ್ಬಾಗಿಲಾದ ಪ್ರಾಕೃತಿಕ ವೈಭವವನ್ನು ಜಗತ್ತಿಗೆ ಸಾರುವ ಹಸಿರು ಹೊದ್ದ ಕಾನನ. ಮಾತ್ರವಲ್ಲ ಆನೆ, ಹುಲಿ, ಚಿರತೆ, ಜಿಂಕೆ ಸೇರಿದಂತೆ ವಿಭಿನ್ನ ಪ್ರಬೇಧದ ಪ್ರಾಣಿ, ಪಕ್ಷಿ ಸಂಕುಲ ಹಾಗೂ ವಿವಿಧ ರೀತಿಯ ಸಸ್ಯ ಸಂಕುಲವನ್ನು ಹೊಂದಿರುವ ಪ್ರದೇಶ. ಇಂತಹ ದಟ್ಟ ಕಾನನವನ್ನು ಸುಮಾರು ನಾಲ್ಕು ದಶಕಗಳ ಕಾಲ ದೋಚಿದ ಕ್ರೂರ ಮನುಷ್ಯ, ನರಹಂತಕ, ದಂತಚೋರ ವೀರಪ್ಪನ್’ನನ್ನು ಸೆರೆಹಿಡಿಯಲು ಎರಡು ರಾಜ್ಯಗಳ ಪೊಲೀಸರು, ಅರಣ್ಯಾಧಿಕಾರಿಗಳು ಮಾತ್ರವಲ್ಲ ಇದಕ್ಕಾಗಿ ವಿಶೇಷವಾಗಿ ರಚನೆಯಾಗಿದ್ದ ಎಸ್’ಟಿಎಫ್ ಯೋಧರನ್ನೆಲ್ಲಾ ಹಗಲು ಇರುಳು ಕಾಡಿದ್ದ. ಅಂದಿನ ಕಾಲಘಟ್ಟದಲ್ಲಿ ಐ ಎಫ಼್ ಎಸ್ ಅಧಿಕಾರಿಯಾಗಿದ್ದರೂ ದಾರ್ಶನಿಕರಂತೆ ಜೀವನ ಸಾಗಿಸಿ, ತಮ್ಮ ಇಡೀ ಜೀವ ಹಾಗೂ ಜೀವನವನ್ನೇ ಕಾಡಂಚಿನ ಜನರ ಉದ್ದಾರಕ್ಕಾಗಿ ಮುಡಿಪಾಗಿಟ್ಟ ಶ್ರೇಷ್ಠ ವ್ಯಕ್ತಿ ಪಿ. ಶ್ರೀನಿವಾಸ್…
ಯಾರಿವರು ಪಿ. ಶ್ರೀನಿವಾಸ್?
ಪಂಡಿಲಪಲ್ಲಿ ಶ್ರೀನಿವಾಸ್ ಅವರು ಭಾರತೀಯ ಅರಣ್ಯ ಸೇವೆಯ ಅಧಿಕಾರಿಯಾಗಿದ್ದು, ಭಾರತೀಯ ಅರಣ್ಯ ಸಂರಕ್ಷಣೆ ಹಾಗೂ ಕಾಡಂಚಿನ ಜನರ ಜೀವನದ ಉನ್ನತಿಗಾಗಿ ಶ್ರಮಿಸಿದ ದೇಶದ ಮಹೋನ್ನತ ವ್ಯಕ್ತಿಗಳ ಸಾಲಿನಲ್ಲಿ ಅಗ್ರಗಣ್ಯರು. ಗಾಂಧಿ ತತ್ವ ಹಾಗೂ ವಿನೋಬಾಭಾವೆ ಅವರ ಅನುಯಾಯಿಯಾಗಿದ್ದರು.
1979 ರಲ್ಲಿ ಭಾರತೀಯ ಅರಣ್ಯ ಸೇವೆಗೆ ನೇಮಕಗೊಂಡು ಕರ್ನಾಟಕ ಕೇಡರ್ ಅಧಿಕಾರಿಯಾಗಿದ್ದರು. 1982 ರಲ್ಲಿ ಮೈಸೂರು ಜಿಲ್ಲೆಗೆ ಸೇರಿದ್ದ ಚಾಮರಾಜನಗರದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದರು. 1983 ರಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಚಾಮರಾಜನಗರ ಹುದ್ದೆಗೆ ಏರಿದರು ಮತ್ತು 1987 ರವರೆಗೆ ಅಲ್ಲಿಯೇ ಕಾರ್ಯ ನಿರ್ವಹಿಸಿದರು. ಅಲ್ಲದೇ ವಿಶೇಷ ಕಾರ್ಯಪಡೆಯ (ಎಸ್’ಟಿಎಫ್) ಸಹಾಯಕ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದಾರೆ.
1986ರಲ್ಲಿ ಬೆಂಗಳೂರಿನಲ್ಲಿ ಸಾರ್ಕ್ ಶೃಂಗಸಭೆ ನಡೆಯುತ್ತಿದ್ದ ವೇಳೆ ಸಣ್ಣಮಟ್ಟದ ಕಾಡುಗಳ್ಳನಾಗಿದ್ದ ವೀರಪ್ಪನ್’ನನ್ನು ಬೆಂಗಳೂರಿನಲ್ಲಿ #Bengaluru ಬಂಧಿಸಿ, ಬೂದಿಪಡಕ ಅರಣ್ಯ ತಂಗುದಾಣಕ್ಕೆ ತರಲಾಗಿತ್ತು. ಆದರೆ, ತನ್ನ ಕುತಂತ್ರದಿಂದ ಬಂಧನದಿಂದ ತಪ್ಪಿಸಿಕೊಂಡಿದ್ದ ವೀರಪ್ಪನ್ ಮತ್ತೆಂದೂ ಅರಣ್ಯ ಹಾಗೂ ಪೊಲೀಸರ ಕೈಗೆ ಜೀವಂತ ಸಿಗಲೇ ಇಲ್ಲ.
ಬೂದಿಪಡಕ ಅರಣ್ಯ ತಂಗುದಾಣದಿಂದ ವೀರಪ್ಪನ್ #Veerappan ತಪ್ಪಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯಿತು. ಇದರಲ್ಲಿ ಶ್ರೀನಿವಾಸ್ ಅವರ ತಪ್ಪು ಇಲ್ಲದೇ ಇದ್ದರೂ ಅವರ ವಿರುದ್ಧ ಆರೋಪ ಜವಾಬ್ದಾರಿ ಹೊರಿಸಲಾಗಿತ್ತು.
ಕಾಡಂಚಿನ ಜನರ ಪ್ರತ್ಯಕ್ಷ ದೇವರು
ಬಹುತೇಕ ಈ ಭಾಗದಲ್ಲೇ ಹೆಚ್ಚು ಸೇವೆ ಸಲ್ಲಿಸಿದ ಶ್ರೀನಿವಾಸ್ ಅವರನ್ನು ಅವರ ಸ್ವಗ್ರಾಮ ಗೋಪಿನಾಥಂ #Gopinatham ಸೇರಿದಂತೆ ಕರ್ನಾಟಕ ಹಾಗೂ ತಮಿಳುನಾಡು ಗಡಿ ಭಾಗದ ಬಹಳಷ್ಟು ಕಡೆಗಳಲ್ಲಿ ದೇವರಂತೆ ಪೂಜಿಸುತ್ತಾರೆ.
- ಕಾಡಂಚಿನ ಗ್ರಾಮಗಳಿಗೆ ರಸ್ತೆ ಸಂಪರ್ಕ, ವಸಹಾತುಶಾಹಿ ಸಂಪರ್ಕ
- ಬುಡಕಟ್ಟು ಪ್ರದೇಶಗಳಿಗೆ ಕುಡಿಯುವ ನೀರಿನ ಸಂಪರ್ಕ
- ಬಡಜನರಿಗೆ ಸ್ಥಳೀಯ ಮಟ್ಟದಲ್ಲಿ ವೈದ್ಯಕೀಯ ಸೇವೆ
- ವೈದ್ಯಕೀಯ ಸೇವೆಗಳಿಗೆ ಮೊಬೈಲ್ ಡೆಸ್ಪೆನ್ಸರಿ ಆರಂಭ
- ಸ್ವಂತ ವೇತನದಲ್ಲಿ ನಿರಾಶ್ರಿತರಿಗಾಗಿ 40ಕ್ಕೂ ಹೆಚ್ಚು ಮನೆ ನಿರ್ಮಾಣ
- ಅರಣ್ಯ ಸಂರಕ್ಷಣೆಗೆ ಅರಣ್ಯೀಕರಣ ಅಭಿಯಾನ
- ವನ್ಯಜೀವಿ ಹಾಗೂ ಪರಿಸರ ರಕ್ಷಣೆಗೆ ಕಾಡಂಚಿನ ಜನರಲ್ಲಿ ಅರಿವು ಅಭಿಯಾನ
- 120 ಬಂಡುಕೋರರಿಗೆ ಪುನರ್ವಸತಿ ಹಾಗೂ ಸುಧಾರಣೆ
- 3 ಲಕ್ಷ ರೂ. ದೇಣಿಗೆ ಸಂಗ್ರಹಿಸಿ ಗೋಪಿನಾಥಂನಲ್ಲಿ ಮಾರಿಯಮ್ಮ ದೇವಾಲಯ ನಿರ್ಮಾಣ
- ದೇವಾಲಯದ ನಿರ್ವಹಣೆಗಾಗಿ ಫಿಕ್ಸೆಡ್ ಡೆಪಾಸಿಟ್
- ಚಿಕ್ಕಮಗಳೂರಿನಲ್ಲಿ ಸ್ವಯಂ ಹಣಕಾಸು ಯೋಜನೆಯಡಿ 50 ಎಕರೆ ವಿಸ್ತೀರ್ಣದ ಆಧುನಿಕ ಅರಣ್ಯ ಸಂಕೀರ್ಣ ಯೋಜನೆ, ನಿರ್ಮಾಣ
- ಗ್ರಾಮಸ್ಥರು ಸಂಗ್ರಹಿಸಿದ ಕಿರು ಅರಣ್ಯ ಉತ್ಪನ್ನಗಳ ಮಾರಾಟಕ್ಕೆ ಸಹಕಾರಿ ಸಂಘ ಸ್ಥಾಪನೆ
- ಅರಣ್ಯ ಸಂಪತ್ತು, ವನ್ಯಜೀವಿ ನಾಶ ತಡೆಯಲು ಅರಣ್ಯ ನರ್ಸರಿ ಸ್ಥಾಪಿಸಿ, ಸ್ಥಳೀಯ ಗ್ರಾಮಸ್ಥರಿಗೆ ಜೀವನೋಪಾಯಕ್ಕೆ ಆಧಾರ
- ಅರ್ಹ ಗ್ರಾಮಸ್ಥರಿಗೆ ಅರಣ್ಯ ವಾಚರ್, ಗಾರ್ಡ್ ಕೆಲಸ
- ವೀರಪ್ಪನ್ ಸಹಚರರ ಮನಃಪರಿವರ್ತಿಸಿ ಅವರಿಗೆ ಉದ್ಯೋಗಾವಕಾಶ
ವೀರಪ್ಪನ್ ಮೋಸಕ್ಕೆ ಹುತಾತ್ಮರಾದ ಶ್ರೀನಿವಾಸ್
ಶ್ರೀನಿವಾಸ್ ಅವರ ಸಾಮಾಜಿಕ ಕಾರ್ಯಗಳು, ತನ್ನ ಗ್ಯಾಂಗ್ ಸದಸ್ಯರನ್ನು ಮನವೊಲಿಸಿ ಬದಲಿಸಿದ್ದು ಹಾಗೂ ತನ್ನ ತಂಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ವಿಚಾರದಲ್ಲಿ ಸುಳ್ಳು ಹೇಳಿಕೆ ಮಾತುಗಳನ್ನು ಕೇಳಿ ನಂಬಿದ್ದ ವೀರಪ್ಪನ್ ಅವರ ವಿರುದ್ದ ಕೆಂಡಾಮಂಡಲಗೊಂಡಿದ್ದ. ಹೇಗಾದರೂ ಮಾಡಿ ಇವರ ಅಂತ್ಯ ಕಾಣಿಸಬೇಕು ಎಂದು ಅವಕಾಶಕ್ಕಾಗಿ ಕಾಯುತ್ತಿದ್ದ. ಆದರೆ, ಇದಕ್ಕೆ ತದ್ವಿರುದ್ದವಾಗಿ ವೀರಪ್ಪನ್ ಮನವೊಲಿಸಿ, ಅವನ ಶರಣಾಗತಿ ಮಾಡಿಸಬೇಕು ಎಂದು ಶ್ರೀನಿವಾಸ್ ಕಾಯುತ್ತಿದ್ದರು.
1991ರ ಜುಲೈನಲ್ಲಿ ಶ್ರೀನಿವಾಸ್ ಅವರ ಎಸ್’ಟಿಎಫ್ #STF ಅವಧಿ ಮುಕ್ತಾಯಗೊಂಡ ನಂತರ ಇವರಿಗಿದ್ದ ಹೆಚ್ಚಿನ ಭದ್ರತೆ ಕಡಿಮೆಯಾಗಿತ್ತು.
ಅಂದು ನವೆಂಬರ್ 9. ಶ್ರೀನಿವಾಸ್ ಅವರು ನಿರಾಯುಧರಾಗಿ ಒಬ್ಬರೇ ಕಾಡಿಗೆ ಬಂದರೆ ನಾನು ಅವರಿಗೆ ಶರಣಾಗುತ್ತೇನೆ. ನನ್ನನ್ನು ಬೆಂಗಳೂರಿಗೆ #Bengaluru ಕರೆದುಕೊಂಡು ಹೋಗಿ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಮುಂದೆ ಶರಣಾಗತಿ ಮಾಡಿಸಬೇಕು ಎಂಬ ಸಂದೇಶ ವೀರಪ್ಪನ್’ನಿಂದ ಬರುತ್ತದೆ. ಇದನ್ನು ನಂಬಿದ ಶ್ರೀನಿವಾಸ್ ವೀರಪ್ಪನ್ ಭೇಟಿಗೆ ಒಪ್ಪಿಕೊಳ್ಳುತ್ತಾರೆ.
ಕಾಡಿಗೆ #Forest ತೆರಳಲು ವೀರಪ್ಪನ್ ತಮ್ಮ ಅರ್ಜುನನನ್ನು ಆತನ ಚಿಕ್ಕಪ್ಪ ಪೊನ್ನುಸ್ವಾಮಿ ಮನೆಯಲ್ಲಿ ಭೇಟಿಯಾಗಿ ಮಾತನಾಡುತ್ತಾರೆ. ಒಂದು ವೇಳೆ ತಮಗೆ ಏನಾದರೂ ಆದರೆ ಗ್ರಾಮಸ್ಥರಿಗೆ ತೊಂದರೆಯಾಗಬಾರದು ಎಂದು ಚಿಂತಿಸಿದ ಶ್ರೀನಿವಾಸ್, ಹೊರಡುವ ಮುನ್ನ ತಮ್ಮ ಸ್ವಯಿಚ್ಚೆಯಿಂದ ವೀರಪ್ಪನ್ ಭೇಟಿಯಾಗಲು ಕಾಡಿಗೆ ಹೋಗುತ್ತಿದ್ದೇನೆ. ನನ್ನ ಜೀವಕ್ಕೆ ಏನಾದರೂ ತೊಂದರೆಯಾದರೆ ಗ್ರಾಮಸ್ಥರು ಕಾರಣರಲ್ಲ ಎಂಬ ಸಂದೇಶವನ್ನು ಡೈರಿಯಲ್ಲಿ ಬರೆದಿಟ್ಟು ಹೊರಡುತ್ತಾರೆ.
ಅಂದು ನವೆಂಬರ್ 10, 1991… ವೀರಪ್ಪನ್ ಸಂದೇಶವನ್ನು ನಂಬಿದ್ದ ಶ್ರೀನಿವಾಸ್ ಅವರು ಗೋಪಿನಾಥಂನಿಂದ ಕಾಡಿಗೆ ಹೊರಡುತ್ತಾರೆ. ಆದರೆ, 6 ಕಿಲೋ ಮೀಟರ್ ದೂರದಲ್ಲಿ ಯರ್ಕೆಯಂ ಹಳ್ಳ ಎಂಬಲ್ಲಿ ತೊರೆಯೊಂದನ್ನು ದಾಟುವಾಗ ತಮ್ಮ ಚಪ್ಪಲಿಗೆ ಅಂಟಿದ್ದ ಕೆಸರನ್ನು ಅಲ್ಲಿದ್ದ ಹುಣಸೆ ಮರಕ್ಕೆ ಒರೆಸುತ್ತಿದ್ದರು. ಆಗಲೇ, ಸನಿಹದಲ್ಲೇ ಇದ್ದ ವೀರಪ್ಪನ್ ಬಂದೂಕಿನಿಂದ ಹಾರಿದ್ದ ಗುಂಡು ಶ್ರೀನಿವಾಸ್ ಅವರ ಎದೆಯನ್ನು ಹೊಕ್ಕಿತ್ತು. ತತಕ್ಷಣವೇ ಅವರ ಪ್ರಾಣಪಕ್ಷಿ ಹಾರಿ, ಹುತಾತ್ಮರಾಗಿದ್ದರು.
ಶ್ರೀನಿವಾಸ್ ಅವರ ಜೀವ ಹೋದರೂ ಸಮ್ಮನಾಗದ ವೀರಪ್ಪನ್ ಅವರ ತಲೆಯನ್ನು ಕತ್ತರಿಸಿ, ಫುಟ್ಬಾಲ್ ರೀತಿಯಲ್ಲಿ ಆಟವಾಡಿದ್ದರು. ತಲೆಯಿಲ್ಲದ ಶ್ರೀನಿವಾಸ್ ಅವರ ದೇಹಕ್ಕೆ ಪೆಟ್ರೋಲ್ ಸುರಿದು ಸುಟ್ಟಿದ್ದ ಆ ಮನುಷ್ಯ ರೂಪದ ರಾಕ್ಷಸ. ಅಂದಿಗೆ ಡಿಸಿಎಫ್ ಶ್ರೀನಿವಾಸ್ ಎಂಬ ಅಲ್ಲಿನ ಜನರ ಪ್ರತ್ಯಕ್ಷ ದೇವರು ಕಣ್ಮರೆಯಾಗಿದ್ದರು.
ಅವರು ಹುತಾತ್ಮರಾದ #martyr ಎರಡು ವರ್ಷಗಳ ನಂತರ ಅಂದರೆ 1994ರಲ್ಲಿ ನಡೆದ ಮಹತ್ವದ ಕಾರ್ಯಾಚರಣೆಯ ವೇಳೆ ವೀರಪ್ಪನ್ ಸಹಚರರ ಮಾಹಿತಿಯ ಆಧಾರದಲ್ಲಿ ಪರಿಶೀಲನೆ ನಡೆಸಿದ ವೇಳೆ ಕರ್ನಾಟಕ ಪೊಲೀಸರಿಗೆ #KarnatakaPolice ಶ್ರೀನಿವಾಸ್ ಅವರ ತಲೆಬುರುಡೆ ದೊರೆತಿತ್ತು. ಎಫ್’ಎಸ್’ಎಲ್ #FSL ಪರೀಕ್ಷೆಯಲ್ಲಿ ಆ ತಲೆಬುರುಡೆ ಶ್ರೀನಿವಾಸ್ ಅವರದ್ದೇ ಎಂದು ದೃಢಪಟ್ಟಿತ್ತು.
ಶ್ರೀನಿವಾಸ್ ಹುತಾತ್ಮರಾದ ನಂತರ ರಾಜ್ಯ ಸರ್ಕಾರದಿಂದ ಅವರ ಕುಟುಂಬಕ್ಕೆ 10 ಲಕ್ಷ ರೂ. ಸಹಾಯಧನ ನೀಡಿ, ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.
ಕೀರ್ತಿಚಕ್ರ ಪ್ರಶಸ್ತಿ
ಶ್ರೀನಿವಾಸ್ ಅವರ ತ್ಯಾಗ ಹಾಗೂ ಬಲಿದಾನವನ್ನು ಪರಿಗಣಿಸಿ, 26 ಜನವರಿ 1992 ರಂದು, ಮರಣೋತ್ತರವಾಗಿ ಎರಡನೆಯ ಅತ್ಯುನ್ನತ ಶಾಂತಿ ಶೌರ್ಯ ಪ್ರಶಸ್ತಿ `ಕೀರ್ತಿ ಚಕ್ರ’ #KeerthiChakra ನೀಡಲಾಯಿತು.
ಶ್ರೀನಿವಾಸ್ ದೇವಾಲಯ ನಿರ್ಮಾಣ
ತಮ್ಮ ಪಾಲಿಗೆ ಪ್ರತ್ಯಕ್ಷ ದೇವರ ಸ್ವರೂಪವಾಗಿದ್ದ ಶ್ರೀನಿವಾಸ್ ಅವರನ್ನು ಗೋಪಿನಾಥಂ ಹಾಗೂ ಸುತ್ತಲ ಪ್ರದೇಶದ ಜನರು ತಮ್ಮ ಮನೆಗಳಲ್ಲಿ ಇಂದಿಗೂ ಪೂಜಿಸುತ್ತಾರೆ. ಈ ಭಾಗದಲ್ಲಿ ಶ್ರೀನಿವಾಸ್ ಅವರ ದೇವಾಲಯವನ್ನು #Temple ಜನರೇ ನಿರ್ಮಿಸಿ ನಿತ್ಯ ಪೂಜಿಸುತ್ತಾರೆ.
ಹುತಾತ್ಮರಾದ ಸ್ಥಳ ಸಂರಕ್ಷಣೆ
ವೀರಪ್ಪನ್ ಸಂಚಿಗೆ ಶ್ರೀನಿವಾಸ್ ಅವರು ಬಲಿಯಾದ ಮಲೈ ಮಹದೇಶ್ವರ ಬೆಟ್ಟ #MMHillsWildlife ಪ್ರದೇಶದಲ್ಲಿರುವ ಯರ್ಕೆಯಂ ಹಳ್ಳದ ಸ್ಥಳವನ್ನು ಸ್ಮಾರಕವನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ. ಶ್ರೀನಿವಾಸ್ ಅವರನ್ನು ವೀರಪ್ಪನ್ ಗುಂಡು ಹಾರಿಸಿದ ನೀರು ಹರಿಯುವ ಹಳ್ಳದ ಸ್ಥಳ ಹಾಗೂ ಅದರ ಮೇಲ್ಬಾಗದಲ್ಲಿ ಹುತಾತ್ಮ ಸ್ಮಾರಕ ನಿರ್ಮಿಸಲಾಗಿದೆ. ಶ್ರೀನಿವಾಸ್ ಅವರು ಬಲಿಯಾದ ದಿನ ಪ್ರತಿವರ್ಷ ಅವರಿಗೆ ಅಲ್ಲಿ ನಮನ ಸಲ್ಲಿಸಲಾಗುತ್ತದೆ.
ಭಾರತೀಯ ಅರಣ್ಯ ಸೇವೆಯ #IndianForestService ಮಹೋನ್ನತ ಅಧಿಕಾರಿಯಾಗಿ ಅರಣ್ಯ #Forest ಹಾಗೂ ವನ್ಯ ಸಂಕುಲ ರಕ್ಷಣೆ, ಕಾಡಂಚಿನ ಜನರ ಅಭ್ಯುದಯಕ್ಕೆ ಜೀವನವನ್ನೇ ಮುಡಿಪಾಗಿಟ್ಟು, ಹುತಾತ್ಮರಾದ ಶ್ರೀನಿವಾಸ್ ಅವರು ಎಂದೆಂದಿಗೂ ಆದರ್ಶಪ್ರಾಯರು. ಇಂತಹ ಹುತಾತ್ಮ ಸೇನಾನಿಗೆ ಕಲ್ಪ ಮೀಡಿಯಾ ಹೌಸ್ ನಮನ ಸಲ್ಲಿಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post