ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಪುಟಾಣಿಗಳ ಪುಟ್ಟ ಪುಟ್ಟ ಹೆಜ್ಜೆಗಳನ್ನು ಸಂಗೀತದ ಲಯಕ್ಕೆ ಅನುಸಾರವಾಗಿ ಒಗ್ಗಿಸಿ, ಬಗ್ಗಿಸಿ ಶಾಲಾ ಪಠ್ಯದ ಹಾಡುಗಳನ್ನು, ಜಾನಪದ ಹಾಡುಗಳನ್ನು, ದೇಶಭಕ್ತಿ ಗೀತೆಗಳನ್ನು ಕಲಿಸುವ ಪರಿ ಅನನ್ಯ, ಅಪೂರ್ವ. ಇವರೇ ನಮ್ಮ ಅಪರೂಪದ ಅದ್ವಿತೀಯ ಸಾಧಕಿ, ಶಿಕ್ಷಕಿ, ನೃತ್ಯಗುರು ವಂದನಾ ರೈ, ಕಾರ್ಕಳ. #VandanaRai
ಕೊರೋನ ಮಹಾಮಾರಿ ಸಮಸ್ತ ಜಗತ್ತನ್ನೇ ತಲ್ಲಣಗೊಳಿಸಿದ ಕಾಲ. ಅಗಣಿತ ಜನರ ಪ್ರಾಣಗಳನ್ನು ನುಂಗಿ ನೊಣೆದ ಕಾಲ. ಭೂದೇವಿ ದಿನದ ಪ್ರದಕ್ಷಿಣೆಯನ್ನೇ ನಿಲ್ಲಿಸಿದಳೋ ಎಂದು ಭಾಸವಾದ ಕಾಲ. ಮನುಷ್ಯ ಜಂಗಮರು ಪ್ರಾಪಂಚಿಕ ಚಲನ ವಲನಗಳನ್ನೆಲ್ಲ ಸ್ಥಾವರಗೊಳಿಸಿದ ಕಾಲ. ಶ್ವಾಸದ ಮೇಲೆ ವಿಶ್ವಾಸ ಗತಿಸಿದ ಕಾಲ. ಮನುಜನ ಬಾಳ ಬಟ್ಟೆ ನಿಂತ ನೀರಾಗಿ ನಾರತೊಡಗಿದ ಕಾಲ. ಸಂ-ಬಂಧಿತರು ಬಂಧನಗಳ ಕಳಚಿ ನೀವೊಂದು ತೀರ; ನಾವೊಂದು ತೀರ ಎಂದು ಗುನುಗತೊಡಗಿದ ಕಾಲ. ಆಗ ದಟ್ಟ ಕರಿಮೋಡಗಳ ಎಡೆಯಿಂದ ಸೂರ್ಯ ರಶ್ಮಿಯಂತೆ ಆನ್-ಲೈನ್ ಎಂಬ ಭವ್ಯ, ದಿವ್ಯ, ನವ್ಯ, ವಿನೂತನ ಅಸ್ತ್ರ ಧರೆಗಿಳಿದ ಕಾಲ. ಜಂಗಮವಾಣಿಯು ಕಬಂಧ ಕರಗ್ರಸ್ತ ಕರಗತ ಶಸ್ತ್ರವಾದ ಕಾಲ. ಕೆಲವೊಂದು ಒಡೆದ ಒಡಲುಗಳು ತಮ್ಮ ಕ್ರೀಯಾಶೀಲತೆಯನ್ನು ಒರೆಗೆ ಒರಸಿ ನೋಡುವ ಪ್ರಯತ್ನ ಮಾಡಿದವು. ಮುದುಡಿ ಕರಟಿದ ಮನಸುಗಳು ಕೊನರಿ ಬಿರಿದು ಅರಳ ತೊಡಗಿದವು. ಅಂತರಂಗದಲ್ಲಿ ಅಡಗಿ ಸಂಕೋಚನ ಗೊಂಡಿದ್ದ ಪ್ರತಿಭೆಗಳು ತೆರೆಮರೆಯಲ್ಲಿ ವಿಕಸನಗೊಂಡು ಹಿನ್ನೆಲೆಯಿಂದ ಮುನ್ನಲೆಗೆ ಬಂದು ಯುಟ್ಯೂಬ್ ಎಂಬ ರಂಗವೇರಿದವು.
ಹೀಗೆ ಪ್ರಕಾಶಮಾನಕ್ಕೆ ಬಂದ ಅದ್ವಿತೀಯ ಪ್ರತಿಭೆಯ ಖನಿ, ಚಿಕ್ಕ ಮಕ್ಕಳ ಅಕ್ಕರೆಯ ಶಿಕ್ಷಕಿ, ವಂದನೀಯ ಗುರು, ನಲ್ಮೆಯ ಮಾರ್ಗದರ್ಶಕಿ ಶ್ರೀಮತಿ ವಂದನಾ ರೈ ಕಾರ್ಕಳ. #Karkala ಮೈಮನ ನವಿರೇಳಿಸುವ ತೆರದಲಿ ಸಾಹಿತ್ಯ, ಸಂಗೀತ, ನೃತ್ಯವನ್ನು ಸಮಪಾಕದಲ್ಲಿ ಸಂಯೋಜಿಸಿ ಪ್ರಸ್ತುತ ಪಡಿಸುವ ಕಲೆಯನ್ನು ಸತತ ಅಭ್ಯಾಸದ ಮೂಲಕ ಕರಗತ ಮಾಡಿಕೊಂಡಿದ್ದಾರೆ. ಹಾಗೆ ಸಿದ್ಧಗೊಂಡ ರಸದೌತಣವನ್ನು ಮಕ್ಕಳೊಂದಿಗೆ ತಾನೂ ಸವಿಯುತ್ತಾರೆ. ನೋಡುಗರಿಗೂ ಉಣ ಬಡಿಸುತ್ತಾರೆ. ಮಕ್ಕಳೋ ಮನಸ್ಸು ಬಿಚ್ಚಿ, ಗರಿಗೆದರಿ, ಎಲ್ಲೆ ಮೀರಿ, ಒಲವಗೂಡಿ, ಗಡಿದಾಟಿದ ಬಾನಾಡಿಗಳಂತೆ ಹಾಡುವುದನ್ನು, ಆಡುವುದನ್ನು, ಅಭಿನಯಿಸುವುದನ್ನು ನಾವು ಅವರ ಯುಟ್ಯೂಬ್ ವಾಹಿನಿಯಲ್ಲಿ ಕಾಣುತ್ತೇವೆ. “ವಿದ್ಯಾರ್ಥಿಗಳನ್ನು ಕನಿಷ್ಠ ಎಂದರೆ ನಮ್ಮ ಸ್ವಂತ ಮಕ್ಕಳಿಗಿಂತ ಸ್ವಲ್ಪ ಹೆಚ್ಚು ಪ್ರೀತಿಸಬೇಕು” ಎನ್ನವುದು ವಂದನಾ ಅವರ ನಿಲುವು, ನಿಲುಮೆ ಮತ್ತು ನಿರ್ಧಾರ. “ನಮ್ಮ ಸಾಧನೆ ಜನರ ಮಾತಾಗಬೇಕೇ ಹೊರತು ನಮ್ಮ ಮಾತಿನ ಚಟವಾಗಬಾರದು” ಎನ್ನುವ ವಿನಮ್ರತೆ ಅವರದು. ಬಾಲ್ಯದಿಂದಲೂ ನಟಿ ಮಾಲಾಶ್ರೀಯವರನ್ನು ಅನುಸರಣೆ ಮಾಡುತ್ತ ಬಂದವರು.
“ಗಾಯಕ ಸೋನು ನಿಗಮ್ #SonuNigum ಅವರನ್ನು ಯಾರೋ ಒಮ್ಮೆ ವೇದಿಕೆಯಲ್ಲಿ ಕೇಳಿದ್ರಂತೆ. ‘ನೀವ್ಯಾಕೆ ಹಾಡುತ್ತೀರಿ’ ಎಂದು. ಹಾಡುವುದು ನನಗೆ ಚಟ ಎಂದ್ರಂತೆ.” ಹಾಗೆ ಮಕ್ಕಳ ಹಾಡು, ದೇಶಭಕ್ತಿ ಹಾಡುಗಳಿಗೆ ಸಂಗೀತ ಸಂಯೋಜಿಸಿ ಹೆಜ್ಜೆ ಹಾಕಿ, ಮಕ್ಕಳಿಗೆ ಕಲಿಸುವುದು ವಂದನಾ ಅವರ ಪ್ರವೃತ್ತಿಯೇ ಆಗಿದೆ. “ಸಂಗೀತ ಆಲಿಸುವಾಗಲೇ ಮೈ ಮನಸ್ಸು ನೃತ್ಯ ಮಾಡಲಾರಂಭಿಸುತ್ತವೆ” ಎನ್ನುತ್ತಾರೆ.
ಅಂತರಂಗದಲ್ಲಿ ಅಡಗಿರುವ ಪ್ರತಿಭೆಯನ್ನು ವಿಕಸನಗೊಳಿಸಲು ವಂದನಾ ರೈ ಅವರಂಥ ಕೆಲವೇ ಕೆಲವು ಮಂದಿಗೆ ಮಾತ್ರ ಸಾಧ್ಯ. ನಮ್ಮಲ್ಲಿರುವ ಜ್ಞಾನದ ಅಥವಾ ಪ್ರತಿಭೆಯ ದೀಪ ಬೆಳಗಬೇಕಾದರೆ ಸಾಧನೆ ಬೇಕು. ಯೋಚನೆ, ಯೋಜನೆಗಳು ಬೇಕು. ಇವು ಸತತವಾದ ಅಧ್ಯಯನ, ಅಭ್ಯಾಸ, ಚಿಂತನ, ಮನನ, ಮಂಥನ, ಅಧ್ಯಾಪನ ಮತ್ತು ಜಿಜ್ಞಾಸೆ ಮುಂತಾದವುಗಳಿಂದ ಪರಿಪಕ್ವಗೊಳ್ಳುತ್ತವೆ. ಎಲ್ಲದಕ್ಕೂ ಮೂಲದಲ್ಲಿ ಎಂದೂ ಬತ್ತದ ಲವಲವಿಕೆಯ, ಉಲ್ಲಾಸದ, ಉತ್ಸಾಹ ಉತ್ತುಂಗದ ಸೆಲೆಬೇಕು. ಇಲ್ಲದಿದ್ದರೆ ಇಂಥ ಸಾಧನೆಗಳು ಹೊರಹೊಮ್ಮವುದಿಲ್ಲ.
ವಂದನಾ ಅವರು ಕಾರ್ಕಳ, ಬಜೆಗೋಳಿಯ ಹತ್ತಿರದ ನಲ್ಲೂರಿನ ಹಮಣಿ ಬೆಟ್ಟಿನವರು. ತಂದೆ ದಿವಂಗತ ಸುಂದರ ಶೆಟ್ಟಿ, ತಾಯಿ ಶ್ರೀಮತಿ ವನಜಾಕ್ಷಿ ಶೆಟ್ಟಿ. ಪದವಿ ಪರ್ಯಂತದ ವಿದ್ಯಾಭ್ಯಾಸವನ್ನು ನಲ್ಲೂರು, ಬಜೆಗೋಳಿ, ಕಾರ್ಕಳದಲ್ಲಿ ಮುಗಿಸಿದ್ದಾರೆ. ಪತಿ ಶ್ರೀಗೋಪಾಲ್ ರೈ. ಮಕ್ಕಳು ಸುಜಲ್ ಮತ್ತು ಸುಹಾಲ್. ಕರಿ ಕಲ್ಲುಗಳ ಪ್ರದೇಶ ಕಾರ್ಕಳ ಮಲೆನಾಡಿನ ಸೆರಗು ಇದ್ದಂತೆ. ವಂದನಾ ರೈ ಅವರ ಅಚ್ಚುಮೆಚ್ಚಿನ ತೊಡುಗೆ ಸೀರೆ. ಸೀರೆಯ ವಿಚಾರವಾಗಿಯೂ ಅವರು ಬಹಳ ಪ್ರಸಿದ್ಧರು. ತಾಯಿಯಿಂದ ತುಳು ಜಾನಪದದ ಸೊಗಡನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ. ನಾಲ್ಕು ಗೋಡೆಯೊಳಗಿನ ಮುಚ್ಚಿದ ತರಗತಿಯಲ್ಲಿ ಕಲಿಸುವುದಕ್ಕಿಂತ ಪ್ರಕೃತಿಯ ಒಡಲಲ್ಲಿ ಕಲಿಸಿದರೆ ಮಕ್ಕಳಿಗೆ ಬಹಳವಾಗಿ ಸೊಗಸುತ್ತದೆ ಎಂಬುದು ಅವರ ಅಭಿಮತ. ಪ್ರಸ್ತುತ ಕಾರ್ಕಳದ ಜೇಸೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಈಟಿವಿಯ ಸೂಪರ್ ಶ್ರೀಮತಿ, ಕಸ್ತೂರಿ ವಾಹಿನಿಯ ರಾಣಿ, ಮಹಾರಾಣಿ, ಚಿನ್ನದ ಬೇಟೆ, ನಾನೇ ರಾಜಕುಮಾರಿ ಮುಂತಾದ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ. ಬಂಟ ಕಲೋತ್ಸವದಲ್ಲಿ ಅಭಿನಯಕ್ಕೆ ಪ್ರಶಸ್ತಿ ಪಡೆದಿದ್ದಾರೆ. ರಿಯಾಲಿಟೀ ಶೋ “ಯಾರಿಗುಂಟು ಯಾರಿಗಿಲ್ಲ” ಇದರಲ್ಲಿ ವಿಜೇತರು.
ಜೇಸೀ, ರಿಲಯನ್ಸ್, ರೋಟರಿ ಮೊದಲಾದ ಸಂಸ್ಥೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ವಂದನಾ ರೈ ಅವರನ್ನು ಹಲವು ಪ್ರಶಸ್ತಿಗಳು ಅರಸಿಕೊಂಡು ಬಂದಿವೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉತ್ತಮ ಶಿಕ್ಷಕಿ ಪ್ರಶಸ್ತಿ, ಕರ್ನಾಟಕ ಯುವರತ್ನ ಪ್ರಶಸ್ತಿ, “ತುಳುನಾಡ ಪ್ರತಿಭೆ” ಪ್ರಶಸ್ತಿ, 2021ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಪ್ರಜಾವಾಣಿ ವರ್ಷದ ಸಾಧಕಿ ಪ್ರಶಸ್ತಿ, ಕಲಾ ಸಂಕುಲ ರಾಜ್ಯ ಮಟ್ಟದ ಶಿಕ್ಷಣ ರತ್ನ ಪ್ರಶಸ್ತಿ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮಟ್ಟದ ಕ್ರಿಯಾಶೀಲ ಶಿಕ್ಷಕಿ ಪ್ರಶಸ್ತಿ -2023, ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರಮಟ್ಟದ ವೇದಿಕೆಯಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿ ಹಾಗೂ ಕರ್ನಾಟಕ ಮಹಿಳಾ ರತ್ನ ಪ್ರಶಸ್ತಿ ಇತ್ಯಾದಿಗಳು.
ಕಾರ್ಕಳ, ಉಡುಪಿಯ ಎಲ್ಲೆ ದಾಟಿ ಕರ್ನಾಟಕದಾದ್ಯಂತದ ಜನರ ಮನವನ್ನು ಮೀಟಿದ್ದಾರೆ ವಂದನಾ. ಕಾರ್ಕಳದಲ್ಲಿ ಮೂರು ಕಡೆ ‘ಮಯೂರಿ’ ಎಂಬ ನೃತ್ಯ ಶಾಲೆಯನ್ನು ಆರಂಭಿಸಿ ಸುತ್ತಮುತ್ತಣದ ಆಸಕ್ತ ಮಕ್ಕಳಿಗೆ ತನ್ನ ಪ್ರತಿಭೆಯನ್ನು, ವಿದ್ಯೆಯನ್ನು ಧಾರೆಯೆರೆಯುತ್ತಿದ್ದಾರೆ. ಅವರಿಗೂ ಅವರ ನೃತ್ಯ ಸಂಸ್ಥೆಗಳಿಗೂ ಶುಭವಾಗಲಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post