ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ವಾಜಪೇಯಿ ಬಡಾವಣೆ ವಿಷಯದ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ಸಮಗ್ರ ವರದಿ ಸಲ್ಲಿಸಲು ಸೂಚಿಸಲಾಗಿದ್ದು, ಆ ಬಳಿಕ ಕಾನೂನು ಸಚಿವರೊಂದಿಗೆ ಮಾತನಾಡಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಅವರು ತಿಳಿಸಿದರು.
ಅವರು ಸೋಮವಾರ ಸೂಡಾ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ವಾಜಪೇಯಿ ಬಡಾವಣೆ ನಿವೇಶನ ಹಂಚಿಕೆ ಸಂಬಂಧಿಸಿದಂತೆ ಪ್ರಕರಣ ಲೋಕಾಯುಕ್ತದ ಮುಂದಿದೆ. ಬಡಾವಣೆ ಹಂಚಿಕೆಯ ಸಂಪೂರ್ಣ ವಿವರಗಳನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಸೂಚಿಸಲಾಗಿದೆ. ಆ ಬಳಿಕ ಕಾನೂನು ಸಚಿವರು ಹಾಗೂ ಅಡ್ವಕೇಟ್ ಜನರಲ್ ಅವರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಿ ಆದಷ್ಟು ಬೇಗನೆ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಸಚಿವರು ತಿಳಿಸಿದರು.
ಕಂದಾಯ ಭೂಮಿಯಲ್ಲಿ ಅಕ್ರಮವಾಗಿ ಮನೆ ಕಟ್ಟಿರುವುದು ಸೇರಿದಂತೆ ಅನಧಿಕೃತವಾಗಿ ನಿರ್ಮಾಣ ಮಾಡಲಾಗಿರುವ ಮನೆಗಳನ್ನು ಸಕ್ರಮಗೊಳಿಸುವ ಸಂಬಂಧ ಚರ್ಚೆ ನಡೆಯುತ್ತಿದೆ. ಈ ಕುರಿತು ಮುಖ್ಯಮಂತ್ರಿ ಅವರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ಸೂಡಾದಲ್ಲಿ ಖಾಲಿಯಿರುವ ಹುದ್ದೆಗಳನ್ನು ತುಂಬಲು ಪ್ರಯತ್ನಿಸಲಾಗುವುದು ಎಂದರು.
ಕಾರ್ಯಕ್ರಮಗಳ ಮಾಹಿತಿ: ಸೂಡಾ ಆಯುಕ್ತ ಕರಿಭೀಮಣ್ಣನವರ್ ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ಪ್ರಾಧಿಕಾರದ ವತಿಯಿಂದ 16 ಬಡಾವಣೆಗಳನ್ನು ರಚಿಸಲಾಗಿದೆ. ಇವುಗಳಲ್ಲಿ 7796 ನಿವೇಶನಗಳಿದ್ದು, 7721 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಮೂಲೆ ನಿವೇಶನಗಳ ಪೈಕಿ 808 ಹರಾಜು ಮಾಡಲಾಗಿದ್ದು, ಇನ್ನು 489 ಹರಾಜಿಗೆ ಬಾಕಿಯಿದೆ. ಒಟ್ಟು 377 ಸಿ.ಎ. ನಿವೇಶನಗಳ ಪೈಕಿ 59 ನಿವೇಶನಗಳು ಬಾಕಿಯಿವೆ. ಇವುಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದರು.
ಹೊರ ವರ್ತುಲ ರಸ್ತೆ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. 60ಮೀಟರ್ ಅಗಲ ಹಾಗೂ 32ಕಿಮಿ ಉದ್ದದ ಹೊರ ವರ್ತುಲ ರಸ್ತೆ ಎಂ.ಆರ್.ಎಸ್ ವೃತ್ತ, ಹರಕೆರೆ, ಎನ್‍ಟಿ ರಸ್ತೆ, ಅನುಪಿನಕಟ್ಟೆ, ಶ್ರೀರಾಂಪುರ, ಸಾಗರ ರಸ್ತೆ, ಕೋಟೆಗಂಗೂರು, ವಿರುಪಿನಕೊಪ್ಪ, ಬಸವನಗಂಗೂರು, ಗೋಂದಿ ಚಟ್ನಹಳ್ಳಿ, ಸುಬ್ಬಯ್ಯ ಮೆಡಿಕಲ್ ಕಾಲೇಜು ಹಿಂಭಾಗ ಮೂಲಕ ಎಂ.ಆರ್.ಎಸ್ ವೃತ್ತ ಸೇರಲಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕರಾದ ಪ್ರಸನ್ನ ಕುಮಾರ್, ಆಯನೂರು ಮಂಜುನಾಥ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Get in Touch With Us info@kalpa.news Whatsapp: 9481252093
Discussion about this post