ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರೋತ್ಥಾನ ಯೋಜನೆಯಡಿ ಶಿವಮೊಗ್ಗ ಮಹಾನಗರ ಪಾಲಿಕೆಗೆ ಬಿಡುಗಡೆ ಮಾಡಲಾಗಿರುವ 125 ಕೋಟಿ ರೂ. ಯಾವುದೇ ಕಾರಣಕ್ಕೂ ಸರ್ಕಾರ ಹಿಂದಕ್ಕೆ ಪಡೆದುಕೊಳ್ಳುವುದಿಲ್ಲ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಅವರು ಸ್ಪಷ್ಪಪಡಿಸಿದರು.
ಅವರು ಸೋಮವಾರ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್‍ಸಿಟಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಕುಡಿಯುವ ನೀರು ಯೋಜನೆ ಪೂರ್ಣಗೊಳಿಸಿ: ಶಿವಮೊಗ್ಗ ನಗರದಲ್ಲಿ 24×7 ಕುಡಿಯುವ ನೀರಿನ ಯೋಜನೆ ತ್ವರಿತವಾಗಿ ಅನುಷ್ಟಾನಗೊಳಿಸಬೇಕು. ಆಗಸ್ಟ್ ವೇಳೆಗೆ ಟೆಂಡರ್ ಅವಧಿ ಮುಗಿಯುತ್ತಿದ್ದರೂ, ಇನ್ನೂ ಸಮರ್ಪಕವಾಗಿ ಯೋಜನೆ ಅನುಷ್ಟಾನಗೊಂಡಿಲ್ಲ. ನಿಗದಿತ ಅವಧಿಯ ಒಳಗಾಗಿ ಯೋಜನೆ ಪೂರ್ಣಗೊಂಡು ನೀರು ಪೂರೈಕೆ ಆರಂಭವಾಗದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಇದೇ ರೀತಿ ಒಳಚರಂಡಿ ಕಾಮಗಾರಿ ಅರ್ಧದಲ್ಲಿದ್ದು, ಮುಂದಿನ ಮಳೆಗಾಲದ ಅವಧಿಯಲ್ಲಿ ಅನಾಹುತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಂಡಿರುವ ಎಲ್ಲಾ ಕಾಮಗಾರಿಗಳು ಮುಂದಿನ ಎರಡು ವರ್ಷಗಳ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಸಚಿವರು ತಿಳಿಸಿದರು.
ಬೆಂಗಳೂರಿನಲ್ಲಿ ಸಭೆ
ಶಿವಮೊಗ್ಗ ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ಎಲ್ಲಾ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಬೆಂಗಳೂರಿನಲ್ಲಿ ಜನಪ್ರತಿನಿಧಿಗಳ ಹಾಗೂ ಹಿರಿಯ ಅಧಿಕಾರಿಗಳ ಸಭೆಯನ್ನು ಸಧ್ಯದಲ್ಲಿಯೇ ಕರೆಯಲಾಗುವುದು. ಮುಂದಿನ ಜೂನ್ ಪ್ರಥಮ ವಾರದಲ್ಲಿ ತಾವು ಶಿವಮೊಗ್ಗಕ್ಕೆ ಎರಡು ದಿನಗಳ ಭೇಟಿಗಾಗಿ ಆಗಮಿಸಲಿದ್ದು, ಆ ಸಂದರ್ಭದಲ್ಲಿ ಎಲ್ಲಾ ಕಾಮಗಾರಿಗಳನ್ನು ಖುದ್ದಾಗಿ ಪರಿಶೀಲಿಸುವುದಾಗಿ ಸಚಿವರು ತಿಳಿಸಿದರು.
ಅಭಿವೃದ್ಧಿ ಮಾಹಿತಿ: ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಅವರು ಅಭಿವೃದ್ಧಿ ಕಾರ್ಯಗಳ ಮಾಹಿತಿ ಒದಗಿಸಿದರು. ಕರೋನಾ ನಿಯಂತ್ರಣಕ್ಕೆ ಪಾಲಿಕೆ ವತಿಯಿಂದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಒಟ್ಟು 13 ಸಾವಿರ ಆಹಾರ ಪ್ಯಾಕೇಟ್ ಪೂರೈಸಲಾಗಿದೆ. ದಾನಿಗಳ ನೆರವಿನಿಂದ 2880 ಪಡಿತರ ಕಿಟ್ ವಿತರಿಸಲಾಗಿದೆ. ಪ್ರತಿ ದಿನ 8ಸಾವಿರ ಲೀಟರ್‍ನಂತೆ 2.13 ಲಕ್ಷ ಲೀಟರ್ ಹಾಲು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಸ್ತಾವನೆ ಸಲ್ಲಿಕೆ
ಮಹಾತ್ಮಾ ಗಾಂಧಿ ನಗರ ವಿಕಾಸ್ ಯೋಜನೆಯ 125 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಬೇಕು. ಕಳೆದ ಎರಡು ವರ್ಷಗಳ ಎಸ್‍ಎಫ್‍ಸಿ ವಿಶೇಷ ಅನುದಾನ 20ಕೋಟಿ ರೂ. ಬಿಡುಗಡೆ ಮಾಡಬೇಕು. ಕೈಗಾರಿಕಾ ಅಭಿವೃದ್ಧಿ ವಸಾಹತು ಬಡಾವಣೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ 10ಕೋಟಿ ರೂ, ಎಸ್‍ಎಫ್‍ಸಿ ಮುಕ್ತನಿಧಿಯಲ್ಲಿ ಪಾಲಿಕೆಗೆ 4ನೇ ಕಂತು ಬಿಡುಗಡೆ ಮಾಡಬೇಕು. ಸ್ವಚ್ಛ ಭಾರತ ಮಿಷನ್ ಅಡಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ 2.38ಕೋಟಿ ರೂ ಬಿಡುಗಡೆ ಮಾಡಬೇಕು. ಅನಧಿಕೃತವಾಗಿ ನಿವೇಶನರಹಿತರು ಮನೆಗಳನ್ನು ನಿರ್ಮಿಸಿರುವ 975 ಪ್ರಕರಣಗಳನ್ನು ಸಕ್ರಮಗೊಳಿಸಬೇಕು ಎಂದು ಅವರು ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಮೇಯರ್ ಸುವರ್ಣ ಶಂಕರ್, ಶಾಸಕರಾದ ಪ್ರಸನ್ನ ಕುಮಾರ್, ಆಯನೂರು ಮಂಜುನಾಥ, ಹರತಾಳು ಹಾಲಪ್ಪ, ಅರಗ ಜ್ಞಾನೇಂದ್ರ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Get in Touch With Us info@kalpa.news Whatsapp: 9481252093
Discussion about this post