ಬೆಂಗಳೂರು: ಜಿಮ್ ತರಬೇತುದಾರ ಪಾನಿಪುರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಅವರ ಅಪರಹಣ ಹಾಗೂ ಹಲ್ಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ವಿಜಯ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯ ಆದೇಶವನ್ನು ಕಾಯ್ದಿರಿಸಲಾಗಿದ್ದು, ಅವರಿಗೆ ಇನ್ನೆರಡು ದಿನ ಜೈಲುವಾಸವೇ ಗತಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ವಿಜಿ ಹಾಗೂ ಸಹಚರರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರು 8ನೆಯ ಎಸಿಎಂಎಂ ನ್ಯಾಯಾಲಯ ಇಂದು ಜಾಮೀನು ಆದೇಶವನ್ನು ಸೆ.26ಕ್ಕೆ ಕಾಯ್ದಿರಿಸಿದೆ.
ಅಪಹರಣ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ನೀಡಬೇಕೆಂದು ಕೋರಿ ವಿಜಯ್ ಹಾಗೂ ಆಪ್ತರು ಜಾಮೀನು ಅರ್ಜಿ ಸಲ್ಲಿಸಿದ್ದರು. ಘಟನೆಯಲ್ಲಿ ಮಾರಕಾಸ್ತ್ರಗಳ ಬಳಕೆಯಾಗಿಲ್ಲ. ಹೀಗಾಗಿ ಜಾಮೀನು ನೀಡಬಹುದು ಎಂದು ವಿಜಯ್ ಪರ ವಕೀಲರು ವಾದಿಸಿದ್ದರು.
ಆದರೆ, ಜಾಮೀನು ನೀಡದಂತೆ ಪಬ್ಲಿಕ್ ಪ್ರಾಸಿಕ್ಯೂಟರ್, ಇದು ಗಂಭೀರ ಪ್ರಕರಣವಗಿದ್ದು ಜಾಮೀನು ನೀಡಿದರೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದೆ. ಆದ್ದರಿಂದ ಜಾಮೀನು ನೀಡಬಾರದು ಎಂದು ವಾದ ಮಂಡಿಸಿದ್ದರು. ವಾದ ವಿವಾದ ಆಲಿಸಿದ ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿದೆ.
ಕಳೆದ ಶನಿವಾರ ಅಂಬೇಡ್ಕರ್ ಭವನದಲ್ಲಿ ನಡೆದ ಬಾಡಿ ಬಿಲ್ಡಿಂಗ್ ಸ್ಪರ್ಧೆ ವೇಳೆ ಕ್ಷುಲ್ಲಕ ಕಾರಣಕ್ಕೆ ಮಾರುತಿ ಗೌಡನ ಜತೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿತ್ತು. ಈ ವೇಳೆ ನಟ ವಿಜಯ್, ಅವರ ಸ್ನೇಹಿತರಾದ ಪ್ರಸಾದ್, ಮಣಿ ಎಂಬವರು ಸೇರಿ ಮಾರುತಿ ಗೌಡನನ್ನು ಅಪಹರಿಸಿ ಕಾರಿನಲ್ಲಿ ಕರೆದೊಯ್ದು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಜಯ್ ಸೇರಿದಂತೆ ಹಲವರನ್ನು ಬಂಧಿಸಿ, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.
Discussion about this post