ಕಲ್ಪ ಮೀಡಿಯಾ ಹೌಸ್
ಸರ್.ಎಂ. ವಿಶ್ವೇಶ್ವರಯ್ಯ ಎಂದೇ ಪ್ರಖ್ಯಾತರಾದ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರು, ದೇಶ ಕಂಡ ಇಂಜಿನಿಯರುಗಳಲ್ಲಿ ಎಂದಿಗೂ ಧುೃವತಾರೆಯಾಗಿ ಅಗಣಿತ ತಾರೆಗಳ ನಡುವೆ ಎಂದೆಂದೂ ಮಿನುಗುವ ಚಂದಿರರಾಗಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ 1860ರ ಸೆಪ್ಟೆಂಬರ್ 15ರಂದು ವಿಶ್ವೇಶ್ವರಯ್ಯ ಜನಿಸಿದರು. ಇವರ ತಂದೆ ಶ್ರೀನಿವಾಸ ಶಾಸ್ತ್ರಿ, ತಾಯಿ ವೆಂಕಟಲಕ್ಷ್ಮಮ್ಮ. ಇವರ ತಂದೆ ಸಂಸ್ಕೃತ ವಿದ್ವಾಂಸರೂ, ಧರ್ಮಶಾಸ್ತ್ರ ಪಾರಂಗತರೂ ಹಾಗೂ ಆಯುರ್ವೇದ ತಜ್ಞರೂ ಆಗಿದ್ದರು.ತಮ್ಮ ಅಸಾಧಾರಣ ಬುದ್ಧಿಮತ್ತೆಯಿಂದಲೇ ಜಗದ್ವಿಖ್ಯಾತರಾಗಿದ್ದ ವಿಶ್ವೇಶ್ವರಯ್ಯನವರು ಅತ್ಯಾಧುನಿಕ ತಂತ್ರಜ್ಞಾನ ಭಾರತಕ್ಕೆ ಬರುವ ಮೊದಲೇ ಜಗತ್ತು ಇತ್ತ ತಿರುಗಿ ನೋಡುವಂತೆ ಮಾಡಿದ್ದ ಮಹಾನ್ ವ್ಯಕ್ತಿಯಾಗಿದ್ದವರು. ಸಾಧಾರಣ ಕುಟುಂಬದಲ್ಲಿ ಜನಿಸಿ ಅಸಾಧಾರಣ ಸಾಧನೆ ಮಾಡಿದ್ದ ಸರ್‌ಎಂವಿ ಅವರ ವ್ಯಕ್ತಿತ್ವ ಇಡೀ ಪ್ರಪಂಚಕ್ಕೇ ಅನುಕರಣೀಯ ಎಂದರೆ ಅತಿಶಯೋಕ್ತಿಯಲ್ಲ. ಅತೀವ ಬುದ್ಧಿಶಕ್ತಿಯನ್ನು ಹೊಂದಿದ್ದ ಇವರ ಜ್ಞಾನಚಕ್ಷುವಿಗೆ ಇಡೀ ದೇಶದ ಸಮಸ್ತ ಸಮಸ್ಯೆಗಳೂ ಘೋಚರಿಸುತ್ತಿದ್ದವು. ಇದರಿಂದಾಗಿಯೇ ದೇಶದ ಸಮಗ್ರ ಅಭಿವೃದ್ಧಿಗಾಗಿ ಚಿಂತಿಸುತ್ತಾ, ವಿವಿಧ ಯೋಜನೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಲೇ ಇದ್ದರು.
ಕಾರ್ಯಕ್ಷಮತೆ, ಕರ್ತವ್ಯ ಬದ್ಧತೆ ಮತ್ತು ಜೀವನಮಟ್ಟ ಮುಂತಾದ ವಿಚಾರಗಳಲ್ಲಿ ಪ್ರಸ್ತುತ ಭಾರತ ದೇಶದಲ್ಲಿ ಅನುಸರಿಸಲಾಗುತ್ತಿರುವ ಆಚರಣೆಗಳಿಗೂ ಇತರ ಪ್ರಗತಿಪರ ದೇಶಗಳಿಗೂ ನಡುವೆ ಎದ್ದುಕಾಣುವ ಅಸಮತೋಲನವಿದೆ ಎಂದು ನೂರು ವರ್ಷದ ಹಿಂದೆಯೇ ಹೇಳಿದ್ದ ವಿಶ್ವೇಶ್ವರಯ್ಯ, ದೇಶದ ಸಮಗ್ರ ಅಭಿವೃದ್ಧಿ ಶ್ರಮದಿಂದ ಮಾತ್ರ ಸಾಧ್ಯ ಎಂದಿದ್ದವರು.ಇವರು ಸ್ವತಃ ಬರೆದಿರುವ ಮೆಮೊರೀಸ್ ಆಫ್ ಮೈ ವರ್ಕಿಂಗ್ ಲೈಫ್ ಪುಸ್ತಕದಲ್ಲಿ ಉಲ್ಲೇಖಿಸಿರುವಂತೆ ಯೋಜನಾ ರಹಿತ ಜಡ ದೇಶವಾಗಿ ಭಾರತವು ಬಹುಕಾಲ ಮುಂದುವರೆಯುವುದು ಅಸಾಧ್ಯ. ಅದರ ಬಹುತೇಕ ಜನ ಸಮುದಾಯವು ಆಧುನಿಕ ಜಗತ್ತಿನ ಆಗುಹೋಗುಳ ಅರಿವು, ಪ್ರಗತಿಪರ ವ್ಯವಹಾರ, ಜಗತ್ತಿನ ಆದರ್ಶ, ರಚನಾತ್ಮಕ ದೃಷ್ಟಿಕೋನ ಮತ್ತು ಸೃಜನಶೀಲತೆಗಳಿಂದ ಪ್ರೇರಣ ಪಡೆದು ಆಚರಣೆಗಿಳಸದೇ ಇದ್ದರೆ, ಭವಿಷ್ಯದಲ್ಲಿ ದೇಶದ ಭದ್ರತೆಯೇ ಗಂಡಾಂತರಕ್ಕೀಡಾಗಲಿದೆ ಎಂಬ ಮಾತನ್ನು ಅಂದೇ ಹೇಳಿದ್ದ ವ್ಯಕ್ತಿಯಾಗಿದ್ದಾರೆ.
ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದರೂ ದೇಶದ ಎಲ್ಲ ಜನರಿಗೆ ಅನ್ನ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದ ಇವರ ಮಾತು ಇಂದಿಗೂ ಪ್ರಸ್ತುತವಾಗಿರುವುದು ಒಂದು ರೀತಿಯಲ್ಲಿ ದುರಂತವೇ ಸರಿ. ಇದನ್ನು ಸರಿಪಡಿಸಿ ದೇಶ ಸ್ವಾವಲಂಭಿಯಾಗಬೇಕಾದಲ್ಲಿ ರೂಢಿಗತ ವಾಡಿಕೆಯಲ್ಲಿ, ವಿದ್ಯಾಭ್ಯಾಸದಲ್ಲಿ, ಜಗತ್ತಿನ ಸಂಗತಿಗಳ ಜ್ಞಾನ ಸಂಪಾದನೆಯಲ್ಲಿ ಹಾಗೂ ದುಡಿಮೆಯ ಸಾಮರ್ಥ್ಯದಲ್ಲಿ ಪರಿವರ್ತನೆಯಾಗಬೇಕು ಎಂದು ಹೇಳಿದ್ದ ಇವರು, ಸ್ವತಃ ದೇಶದ ಉದ್ಧಗಲಕ್ಕೂ ತಮ್ಮ ಜ್ಞಾನದ ಮೂಲಕ ಪರಿವರ್ತನಾ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ದುೃವತಾರೆಯಾಗಿದ್ದಾರೆ.
ಸರ್‌ಎಂವಿ ಜೀವನದ ಪ್ರಮುಖ ಕಾಲಘಟ್ಟಗಳು:
- ಸೆ.15, 1860ರಂದು ಜನನ
- ಮೈಸೂರು ರಾಜ್ಯದ ಮೆಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಪದವಿ(1881). ಮುಂಬೈ ವಿವಿ ಇಂಜಿನಿಯರಿಂಗ್ ಡಿಗ್ರಿ(1883), ಎಲ್‌ಸಿಇ ಹಾಗೂ ಎಫ್‌ಸಿಇ ಪರೀಕ್ಷೆಗಳಲ್ಲಿ ರ್ಯಾಂಕ್
- 1884ರ ಫೆಬ್ರವರಿಯಲ್ಲಿ ಮುಂಬೈ ಸರ್ಕಾರದಲ್ಲ ಅಸಿಸ್ಟೆಂಟ್ ಇಂಜಿನಿಯರ್ ಆಗಿ ನೇಮಕ
- 1898 ಜಪಾನ್ ಪ್ರವಾಸ
- ಪ್ರವಾಹ ತಡೆಗಾಗಿ ಹೈದರಾಬಾದ್ ಬಳಿ ಮೋಸಿ, ಇಯಾಸಿ ನದಿಗಳಿಗೆ ಅಣೆಕಟ್ಟೆ ನಿರ್ಮಾಣ
- 1899ರಲ್ಲಿ ನೀರನ್ನು ಪೋಲು ಮಾಡದೇ ಬಳಸುವ ವ್ಯವಸಾಯ ಕ್ರಮದ ವಿಶಿಷ್ಟ ಯೋಜನೆ ನಿರ್ಮಾಣ ನಂತರ ಬ್ಲಾಕ್ ಸಿಸ್ಟಂ ಹೆಸರಿನಿಂದ ಪ್ರಖ್ಯಾತವಾಯಿತು
- ಆಟೋಮ್ಯಾಟಿಕ್ ಸ್ಲೂಸ್ ಗೇಟ್ಸ್ ನಿರ್ಮಾಣ ಮಾಡಿ ನಂತರ ಇದಕ್ಕೆ ಪೇಟೆಂಟ್
- 1906ರಲ್ಲಿ ಏಡನ್ ಪಟ್ಟಣದ ಜಲನಿರ್ಗಮನ ಯೋಜನೆ, ಕುಡಿಯುವ ನೀರಿನ ಯೋಜನೆಗಳನ್ನು ಮಾಡಿಕೊಡಲು ನೇಮಕ
- 1907: ಧಾರವಾಡ ಹಾಗೂ ಬಿಜಾಪುರಗಳಿಗೆ ಕುಡಿಯುವ ನೀರಿನ ಯೋಜನೆಗಳ ಜಾರಿ. ಮುಂಬೈ ನಗರದ ಆರೋಗ್ಯ ಸಮಿತಿಯ ಸದಸ್ಯತ್ವ, ಕಾಲೇಜ್ ಆಫ್ ಸೈನ್ಸ್ ಸುಧಾರಣಾ ಸಮಿತಿಯ ಸದಸ್ಯತ್ವ, ಮುಂಬೈ ಸರ್ಕಾರದ ಸೇವೆಯಿಂದ ಸ್ವಯಂ ನಿವೃತ್ತಿ. ಇಟಲಿ, ಇಂಗ್ಲೆಂಡ್ ಅಮೆರಿಕಾ, ಕೆನಡಾ, ಸ್ವೀಡನ್, ರಷ್ಯಾ ದೇಶಗಳ ಪ್ರವಾಸ
- 1909: ಮೈಸೂರು ಸಂಸ್ಥಾನದ ಚೀಫ್ ಇಂಜಿನಿಯರ್ ಆಗಿ ನೇಮಕ
- 1923: ಭಾರತೀಯ ಸೈನ್ಸ್ ಕಾಂಗ್ರೆಸ್‌ನ ಅಧ್ಯಕ್ಷರು
- ಭಾರತೀಯ ಆರ್ಥಿಕ ಸಮ್ಮೇಳನದ ಅಧ್ಯಕ್ಷ ಸ್ಥಾನ, ಕರಾಚಿ ಮತ್ತು ಮುಂಬೈಗಳಲ್ಲಿ ಪೌರವೆಚ್ಚ ಕಡಿಮೆ ಮಾಡುವ ಸಮಿತಿಗಳ ಕಾರ್ಯ
- 1935: ಭಾರತದಲ್ಲಿ ಮೋಟಾರು ಕಾರುಗಳನ್ನು ನಿರ್ಮಿಸುವ ಯೋಜನೆ
- 1939: ವಿಮಾನ ನಿರ್ಮಾಣದ ಕಾರ್ಖಾನೆಗೆ ಯೋಜನೆ
- 1948: ಮೈಸೂರು ವಿವಿಯಲ್ಲಿ ಗೌರವ ಪಟ್ಟ
- 1955 ಭಾರತರತ್ನ ಪ್ರಶಸ್ತಿ ಪ್ರದಾನ
- 1961 ಸೆ.15ರಂದ 100ನೇ ವರ್ಧಂತಿ
- 1962ರ ಏಪ್ರಿಲ್ 14ರಂದು ನಿಧನ
ಮೈಸೂರು ರಾಜ್ಯದಲ್ಲಿ ಸರ್‌ಎಂವಿ ಮೆರುಗು
- 1912ರಲ್ಲಿ ಮೈಸೂರಿನ ದಿವಾನರಾಗಿ ನೇಮಕ
- 1911-31: ಕೃಷ್ಣರಾಜ ಸಾಗರ ಅಣೆಕಟ್ಟೆ ನಿರ್ಮಾಣ
- 1913: ಸ್ಟೇಟ್ ಬ್ಯಾಂಕ್ ಸ್ಥಾಪನೆ
- 1915: ಮೈಸೂರು ವಿವಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ
- 1916: ಛೇಂಬರ್ ಆಫ್ ಕಾಮರ್ಸ್, ಸೆಂಚುರಿ ಕ್ಲಬ್, ರೇಷ್ಮೆ, ಸೋಪ್, ಗಂಧದ ಎಣ್ಣೆ, ಲೋಹ, ಚರ್ಮದ ಹದ ಉದ್ಯೋಗಳಿಗೆ ಚಾಲನೆ
- ಬೆಂಗಳೂರು-ಮೈಸೂರು ರೈಲುಮಾರ್ಗ
- 1917: ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ
- 1923: ಭದ್ರಾವತಿಯಲ್ಲಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಸ್ಥಾಪನೆ
- ಭಟ್ಕಳ ಬಂದರು ಸ್ಥಾಪನೆ
- ಆಟೋಮೆಟೆಡ್ ಕ್ಟಸ್ಟ್ ಗೇಟ್‌ಗಳ ಸ್ಥಾಪನೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post