ಬೆಂಗಳೂರು: ಎಪ್ರಿಲ್ 29ರ ನಾಳೆ ವಿಶ್ವ ನೃತ್ಯ ದಿನಾಚರಣೆಯ ಅಂಗವಾಗಿ ಅಡ್ವೈಸರ್ ನೃತ್ಯ ವಿಶೇಷಾಂಕ ಬಿಡುಗಡೆ ಸಮಾರಂಭವನ್ನು ಬಸವೇಶ್ವರನಗರದ ಮ್ಯಾಕ್ಸ್ ಮುಲ್ಲರ್ ಶಾಲೆ ಸಮೀಪವಿರುವ ಕೆಇಎ ಪ್ರಭಾತ್ ರಂಗಮಂದಿರದಲ್ಲಿ ಸಂಜೆ 5 ಗಂಟೆಯಿಂದ ಆಯೋಜಿಸಲಾಗಿದೆ.

ಆಧುನಿಕ ಯುಗದಲ್ಲಿ ಶಾಸ್ತ್ರೀಯ ನೃತ್ಯಗಳನ್ನು ಉಳಿಸಿ ಬೆಳೆಸುವುದು’ ವಿಚಾರದ ಕುರಿತು ಸಂವಾದಕ್ಕೆ ಜಿಆರ್ ಶಿಕ್ಷಣ ಸಮೂಹ ಸಂಸ್ಥಾಪಕಿ, ಖ್ಯಾತ ಶಿಕ್ಷಣ ತಜ್ಞೆ ಡಾ. ಗೀತಾ ರಾಮಾನುಜಂ ಚಾಲನೆ ನೀಡಲಿದ್ದು, ಹಿರಿಯ ನಾಟ್ಯ ಕಲಾವಿದೆ ಗುರು ರೇವತಿ ನರಸಿಂಹನ್ , ಕಲಾ ವಿಮರ್ಶಕ ಎಸ್. ನಂಜುಂಡ ರಾವ್ ಭಾಗವಹಿಸಲಿದ್ದಾರೆ.

ಖ್ಯಾತ ನೃತ್ಯ ಗುರು ವಿದುಷಿ ಪದ್ಮಾ ಹೇಮಂತ್ ಅವರ ಅತಿಥಿ ಸಂಪಾದಕತ್ವದಲ್ಲಿ ರೂಪುಗೊಂಡಿರುವ ಅಡ್ವೈಸರ್ ಮಾಸಪತ್ರಿಕೆಯ ನೃತ್ಯ ವಿಶೇಷಾಂಕವನ್ನು ಅನನ್ಯ ಸಾಂಸ್ಕೃತಿಕ ಅಕಾಡೆಮಿಯ ಡಾ. ಆರ್.ವಿ ರಾಘವೇಂದ್ರ ಬಿಡುಗಡೆಗೊಳಿಸುವರು. ಕರ್ನಾಟಕ ಇಂಜನೀಯರ್ಸ್ ಅಕಾಡೆಮಿಯ ಪದಾಧಿಕಾರಿಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ವಿಶೇಷ ನೃತ್ಯ ಕಾರ್ಯಕ್ರಮ ನೃತ್ಯ ಸಂಭ್ರಮ ಅನನ್ಯ ಕಲಾ ನಿಕೇತನ – ಸಮೂಹ ನೃತ್ಯ (ಗುರು ಬೃಂದಾ)ಢ ಕು॥ ಶೀತಲ್ ಹೇಮಂತ್ – ಭರತನಾಟ್ಯ, ಚಿ॥ ನಿಧಾಘ್ ಕರುನಾಡ್ : ಕಥಕ್ , ಕು॥ ಅನನ್ಯ ಎಂ. – ಭರತನಾಟ್ಯ , ಕು॥ ಪ್ರೀತಿ ಮಂಜುನಾಥ್ , ಸಂಗೀತ್ ನೃತ್ಯ ಭಾರತಿ ಅಕಾಡೆಮಿ – ಸಮೂಹ ನೃತ್ಯ (ಗುರು ಪದ್ಮಾ ಹೇಮಂತ್) ನಡೆಯಲಿದೆ.

ಮಾನವನ ನಿತ್ಯ ಬದುಕಿನ ಪ್ರತಿಬಿಂಬದ ಚಿತ್ರಣವೇ ನಾಟ್ಯ. ಮಾನವನಿಗೂ ನಾಟ್ಯಕ್ಕೂ ಒಂದು ರೀತಿಯ ಬೆಸುಗೆ ಇದೆ. ಭಾರತ ದೇಶವು ಕಲೆ ಸಂಸ್ಕೃತಿಗೆ ಹೆಸರಾದ ದೇಶ. ಇಲ್ಲಿ ಕಾಣುವಷ್ಟು ಸಂಸ್ಕೃತಿಗಳಲ್ಲಿ, ಭಾಷೆಗಳಲ್ಲಿ, ಕಲೆಗಳಲ್ಲಿ ವೈವಿಧ್ಯತೆ ಬಹುಶಃ ಪ್ರಪಂಚದ ಬೇರಾವುದೇ ದೇಶದಲ್ಲಿ ಕಾಣ ಸಿಗುವುದಿಲ್ಲ. ಈ ಲಲಿತಕಲೆಗಳನ್ನು, ದೈವಿಕ ಕಲೆಗಳನ್ನು ಉಳಿಸಿ, ಬೆಳೆಸುವ ಗುರುತರವಾದ ಜವಾಬ್ದಾರಿ ಭಾರತೀಯರಾಗಿ ನಮ್ಮೆಲ್ಲರ ಮೇಲಿದೆ. ಒಂದು ಮಗುವಿನ ಸರ್ವತೋಮುಖ ಬೆಳವಣಿಗೆಯನ್ನು ಪರಿಗಣಿಸುವಾಗ ಶಿಕ್ಷಣದ ಜೊತೆಜೊತೆಗೇ ಪಠ್ಯೇತರ ಚಟುವಟಿಕೆ ಅಂದರೆ ಆಟ, ಹಾಡು, ಹಸೆ, ನೃತ್ಯ, ನಾಟಕ, ಮತ್ತಿತರ ಲಲಿತ ಕಲೆಗಳಲ್ಲಿ ಕೂಡ ಆಸಕ್ತಿ ಬೆಳೆಸಿಕೊಂಡು ಅದರಲ್ಲೂ ತೊಡಗಿಕೊಂಡು ಮುಂದುವರೆಯುವುದು ಬಹಳ ಮುಖ್ಯವಾಗುತ್ತದೆ.

ಎಪ್ರಿಲ್ 29ರ ನಾಳೆ ವಿಶ್ವ ನೃತ್ಯ ದಿನ’. ನೃತ್ಯವೆನ್ನುವುದು ನಮ್ಮ ಜೀವನದ ಪ್ರತಿಬಿಂಬ ಎಂದಾದರೆ ಇಂಥ ಕಲೆಯ ಬಗ್ಗೆ ವಿಶೇಷ ಒಲವಿನಿಂದ, ತಮ್ಮ ಓದುಗರಿಗೆ ಈ ಸುಂದರ ಕಲಾಪ್ರಾಕಾರದ ಸಮಗ್ರ ಪರಿಚಯ ಮಾಡಿಕೊಡಬೇಕೆಂಬ ಕಳಕಳಿಯಿಂದ ಈ ವರ್ಷದ ವಿಶ್ವ ನೃತ್ಯ ದಿನಾಚರಣೆಯ ಅಂಗವಾಗಿ ನೃತ್ಯಕ್ಕೆ ಸೀಮಿತವಾದ ಒಂದು ವಿಶೇಷ ಸಂಚಿಕೆಯನ್ನು ಹೊರತರಲಾಗುತ್ತಿದೆ.

’ದೃಷ್ಟಿಯೇ ಸೃಷ್ಟಿ’ ಅಂದರೆ ಈ ಸೃಷ್ಟಿಯು ನಾವು ನೋಡುವ ದೃಷ್ಟಿಯಲ್ಲಿ ಇದೆ ಎಂದರ್ಥ. ಹಾಗಾಗಿ ನಮ್ಮ ಓದುಗರಿಗೆ ಅದರಲ್ಲೂ ಇಂದಿನ ಯುವ ಪೀಳಿಗೆಗೆ ದೈವಿಕ ಕಲೆಗಳಲ್ಲಿ ಒಂದಾದ ನೃತ್ಯ ಕಲೆಯ ಬಗ್ಗೆ ತಿಳಿಸಿ ಅದನ್ನು ವೈವಿಧ್ಯಮಯ ದೃಷ್ಟಿಕೋನಗಳಿಂದ ವೀಕ್ಷಿಸಲು, ಅರ್ಥೈಸಿಕೊಳ್ಳಲು ಅನುವಾಗುವಂತೆ ಒಂದು ಕಿರು ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ನೃತ್ಯ ಉಪಾಸಕರಿಗೆ ಅಷ್ಟೇ ಅಲ್ಲ, ಸಾಮಾನ್ಯ ಜನರಿಗೂ ಈ ಕಲೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡುವ ಪ್ರಾಮಾಣಿಕ ಪ್ರಯತ್ನವಿದಷ್ಟೇ ಎಂದು ಅತಿಥಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ ಪದ್ಮ ಹೇಮಂತ್ ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ.
ಅಡ್ವೈಸರ್ ಕನ್ನಡ ಮಾಸಪತ್ರಿಕೆ , ಸಂಗೀತ್ ನೃತ್ಯ ಭಾರತಿ ಅಕಾಡೆಮಿ ಮತ್ತು ಕರ್ನಾಟಕ ಇಂಜನೀಯರ್ಸ್ ಅಕಾಡೆಮಿ ಇವರುಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ.















