ಸಾಧನೆ ಯಾರ ಮನೆಯ ಸ್ವತ್ತೂ ಅಲ್ಲ. ಮನಸ್ಸು ಮಾಡಿದರೆ ಯಾರು ಬೇಕಾದರೂ ಸಾಧನೆ ಮಾಡಬಹುದು. ಇದಕ್ಕೆ ಯಾವುದೇ ಅಂಶ ತೊಡಕಾಗುವುದಿಲ್ಲ. ತೊಡಕಾಗಿ ಬಂದರೂ ಸಾಧಿಸಿ ತೋರಿಸಬೇಕೆಂಬ ಅದಮ್ಯ ಕನಸಿನ ಮುಂದೆ ಎಲ್ಲವೂ ನಗಣ್ಯವಾಗಿ ಕಾಣುತ್ತದೆ. ಮನೋಬಲದ ಮುಂದೆ ಎಲ್ಲಾ ಕೊಚ್ಚಿಕೊಂಡು ಹೋಗುತ್ತದೆ. ಏಕೆ ಈ ಮಾತು ಹೇಳುತ್ತಿದ್ದೇನೆ ಎಂದರೆ ಈ ಮಾತಿಗೆ ಸಾಕ್ಷಿಯಾಗಿ ನಿಂತಿರುವುದು ಕರುನಾಡಿನ 10 ವರ್ಷದ ಪುಟಾಣಿ ಸಾಧಕಿ ತನ್ವಿತಾ ಕುಂದಾಪುರ.
ಇವಳು ವಸಂತ ಹಾಗೂ ಪುಷ್ಪಲತಾ ಅವರ ಮುದ್ದಿನ ಮಗಳು. ಭರತನಾಟ್ಯ, ನೃತ್ಯ, ನಟನೆ, ಯೋಗದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲೇ ಅಪ್ರತಿಮ ಸಾಧನೆ ಮಾಡುತ್ತಿರುವ ಬಹುಮುಖ ಬಾಲಪ್ರತಿಭೆ. ಒಂದನೇ ತರಗತಿಯಿಂದ ತನ್ನ ಪ್ರತಿಭೆಯನ್ನು ಜನರ ಮುಂದೆ ಪ್ರದರ್ಶನ ನೀಡಿ ಭೇಷ್ ಎನಿಸಿಕೊಂಡಿದ್ದಾಳೆ.
ತನ್ನ ಒಂದನೇ ತರಗತಿಯಲ್ಲಿಯೇ ರಾಜ್ಯಮಟ್ಟದ ಸೈನ್ಸ್ ಇಂಟರ್ ನ್ಯಾಷನಲ್ ಏಕ್ಸಾಂನಲ್ಲಿ ಬಂಗಾರದ ಪದಕ ಪಡೆದಿದ್ದಾಳೆ ಈ ಪುಟಾಣಿ. ಅನ್ನುವಾಗಲೆ ಗೆಲುವಿನ ಹಾದಿಯೂ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಪ್ರಾರಂಭ ಮಾಡಿರುವುದು ತಿಳಿಯುತ್ತದೆ.
2017-18ನಲ್ಲಿ ಯೋಗದಲ್ಲಿ ಅಂತಾರಾಷ್ಟೀಯ ಮಟ್ಟದಲ್ಲಿ ಚಿನ್ನದ ಪದಕ ಪಡೆದ ಕೀರ್ತಿ ಈ ಪುಟಾಣಿಯ ಮುಡಿ ಸೇರಿದೆ. ಅಷ್ಟೇ ಅಲ್ಲದೆ ರಾಜ್ಯಮಟ್ಟ, ರಾಷ್ಟಮಟ್ಟ ಹಾಗೂ ಅಂತಾರಾಷ್ಟೀಯ ಮಟ್ಟದಲ್ಲಿ 8 ಬಂಗಾರದ ಪದಕ, 2 ಬೆಳ್ಳಿ ಪದಕ ಹಾಗೂ 2 ಕಂಚಿನ ಪದಕ ಪಡೆದಿರುವುದು ಇವಳ ಹೆಮ್ಮೆಯ ಸಾಧನೆಯ ಗರಿ ಸೇರುತ್ತದೆ.
ಯೋಗದಲ್ಲಿ ಥೈಲಾಂಡ್ ದೇಶಕ್ಕೆ ಹೋಗುವ ಅವಕಾಶವೂ ಒದಗಿ ಬಂದಿತ್ತು. ಕಿರಿಯ ವಯಸ್ಸಿನ ಕಾರಣ ಹೋಗಲು ಸಾಧ್ಯವಾಗಿಲ್ಲ.
ಡ್ರಾಮಾ ಜ್ಯೂನಿಯರ್ಸ್ ಒಂದು ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದಳು. ಕನ್ನಡ ಕಣ್ಮಣಿ ಶೋಗೆ ಎರಡು ಸುತ್ತು ಆಯ್ಕೆ ಆಗಿದ್ದಳು. ಈ ಸಾಧಕಿಗೆ ರಾಜ್ಯ ಮಟ್ಟದ ಅತ್ಯುನ್ನತ ಕಲಾಶ್ರೀ ಪ್ರಶಸ್ತಿ, ಸಾಗರ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಅಪ್ರತಿಮ ಪ್ರತಿಭಾ ಪುರಸ್ಕಾರ ಇವಳ ಸಾಧನೆಯ ಹಾದಿಯ ಹೆಜ್ಜೆ ಗುರುತುಗಳಂತಿವೆ.
ಪ್ರಸ್ತುತ ಐದನೆ ತರಗತಿಯಲ್ಲಿ ಕಲಿಯುತ್ತಿರುವ ಪುಟಾಣಿ ಕಲಿಕೆಯಲ್ಲೂ ಮೊದಲವನೆಯವಳಾಗಿ ಸರಸ್ವತಿಯ ಮಗಳು ಅಂದರೂ ತಪ್ಪಲ್ಲ, ಅತೀ ಸಣ್ಣ ವಯಸ್ಸಿನಲ್ಲಿಯೇ ಸಾಧಿಸುತ್ತಿರುವ ಈ ಪುಟಾಣಿಗೆ ಎಲ್ಲರ ಪ್ರೋತ್ಸಾಹ ಇರಲಿ ಹಾಗೂ ಇನ್ನಷ್ಟು ಸಾಧನೆಯನ್ನು ಮಾಡಿ ನಮ್ಮ ದೇಶಕ್ಕೆ ಕೀರ್ತಿ ತರಲಿ. ದೇವರ ಅನುಗ್ರಹ ಸದಾ ಈ ಪುಟಾಣಿ ಮೇಲಿರಲಿ ಈಕೆಯ ಭವಿಷ್ಯ ಇನ್ನಷ್ಟು ಉಜ್ವಲವಾಗಿರಲಿ ಎಂಬ ಆಶಯ ನಮ್ಮೆಲ್ಲರದು.
ಲೇಖನ: ರೋಹನ್ ಪಿಂಟೋ ಗೇರುಸೊಪ್ಪ
ಸಹಕಾರ: ಸ್ವರ್ಣ ಧಮನಿ(ಕಿಶೋರ್ ಕುಮಾರ್)
ಚಿತ್ರಕೃಪೆ/ವೀಡಿಯೋ: ದೀಕ್ಷಿತ್ ಶೆಟ್ಟಿ ಕೊಡ್ಲಾಡಿ
ಸಲಹೆ ಸೂಚನೆ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
Discussion about this post