ಭದ್ರಾವತಿ: ಜಗತ್ತಿನಲ್ಲಿ ಮಾಡಿರುವ ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ರವರ ಅಭಿವೃದ್ದಿ ಕಾರ್ಯಗಳು ಇಂದಿಗೂ ಕಂಗೊಳಿಸುತ್ತಿರುವುದರಿಂದ ಸೂರ‌್ಯ ಚಂದ್ರರು ಇರುವವರೆಗೆ ಅವರ ಹೆಸರು ಶಾಶ್ವತವಾಗಿರುತ್ತದೆ ಎಂದು ತಹಸೀಲ್ದಾರ್ ಎಂ.ಆರ್. ನಾಗರಾಜ್ ಹೇಳಿದರು.
ಅವರು ಶನಿವಾರ ನಗರದ ರೈಲ್ವೇ ನಿಲ್ದಾಣ ಮುಂಭಾಗ ಎನ್.ಕೃಷ್ಣಮೂರ್ತಿ ನೇತೃತ್ವದ ಗೆಳೆಯರ ಬಳಗ ಏರ್ಪಡಿಸಿದ್ದ ಸರ್‌ಎಂವಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸರ್‌ಎಂವಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸೂಚಿಸಿ ಮಾತನಾಡಿ, ಸರ್‌ಎಂವಿ ಕೋಟ್ಯಾಂತರ ಜನರ ಜೀವನಾಡಿಯಾಗಿ ಮಾಡಿರುವ ಕಾರ್ಯಗಳಿಂದ ಬದುಕು ಹಸನಾಗಿದೆ. ಅಭಿವೃದ್ದಿ ಕಾರ್ಯಗಳು ಸದಾಕಾಲ ಮೇಳೈಸುತ್ತಿದೆ. ಅವರಲ್ಲಿನ ನಡೆ-ನುಡಿ ಶಿಸ್ತು, ಸಂಯಮವನ್ನು ಇಂದಿನ ಇಂಜಿನಿಯರ್‌ಗಳು ಅವರ ಹಾದಿಯಲ್ಲಿ ನಡೆದು ದೇಶವನ್ನು ಅಭಿವೃದ್ದಿ ಪತದತ್ತ ಸಾಗಿಸಬೇಕಿದೆ ಎಂದರು.
ಉಪ ಸಂರಕ್ಷಣಾಧಿಕಾರಿ ಚೆಲುವರಾಜ್ ಮಾತನಾಡಿ ಸರ್‌ಎಂವಿ ಮಾಡಿರುವ ಅಪಾರ ಸಾಧನೆಗಳಲ್ಲಿ ವಿಐಎಸ್‌ಎಲ್ ಕಾರ್ಖಾನೆಯು ಸಹ ಒಂದಾಗಿದೆ. ಯುವ ಪೀಳಿಗೆಗೆ ಸರ್‌ಎಂವಿ ರವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಶ್ರದ್ದೆಯಿಂದ ಬದುಕು ಸಾಗಿಸುವಂತೆ ಅರಿವು ಮೂಡಿಸಬೇಕಿದೆ. ಲೋಕೋಪಯೋಗಿ ಕಾರ್ಯಪಾಲಕ ಇಂಜಿನಿಯರ್ ವಾಗೀಶ್ ಸರ್‌ಎಂವಿ ದಿನಾಚರಣೆ ಹೆಸರಲ್ಲಿ ವಿವಿದ ಇಲಾಖೆಗಳ ಇಂಜಿನಿಯರ್‌ಗಳನ್ನು ಸನ್ಮಾನಿಸಿ ಸಮಾಜದ ಜವಾಬ್ದಾರಿ ಹೆಚ್ಚಿಸಿದಂತಾಗಿದೆ. ಸರ್‌ಎಂವಿ ಸ್ಥಾಪಿಸಿದ ವಿಐಎಸ್‌ಎಲ್ ಕಾರ್ಖಾನೆಗೆ ನೂರು ವರ್ಷ ತುಂಬಿರುವುದು ಅವಿಸ್ಮರಣೀಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಗೆಳೆಯರ ಬಳಗದ ಅಧ್ಯಕ್ಷ ಎನ್.ಕೃಷ್ಣಮೂರ್ತಿ ನೇತೃತ್ವದಲ್ಲಿ ನಗರ ಸರ್ಕಲ್ ಇನ್‌ಸ್ಪೆಕ್ಟರ್ ಚಂದ್ರಶೇಖರ್, ರೈಲ್ವೇ ಸಲಹಾ ಸಮಿತಿ ಸದಸ್ಯ ಎನ್.ವಿಶ್ವನಾಥರಾವ್ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್.ಶ್ರೀ ಹರ್ಷ, ಇಂಜಿನಿಯರ್‌ಗಳಾದ ವಾಗೀಶ್, ಮಂಜುನಾಥ್, ಸುರೇಶ್, ಆಲ್ವಿನ್ ಡಿಕಾಸ್ಟ, ಶಿವಲಿಂಗಸ್ವಾಮಿ ಮತ್ತಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.
ವರದಿ: ಆರ್.ವಿ. ಕೃಷ್ಣ, ಭದ್ರಾವತಿ
Discussion about this post